ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಾರ್ಪಣೆ ಮಾಡಲಿರುವ ಮೊಯಿಸೆಸ್

ಎರಡು ದಿನ ಮೊದಲೇ 11ರ ಬಳಗ ಪ್ರಕಟಿಸಿದ ಆಸ್ಟ್ರೇಲಿಯಾ...!
Last Updated 20 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಚೆನ್ನೈ: ತಂತ್ರ ಹಾಗೂ ಯೋಜನೆಗಳ ವಿಚಾರದಲ್ಲಿ ಕ್ರಿಕೆಟ್‌ನಲ್ಲಿ ತೆರೆದಿಡುವುದಕ್ಕಿಂತ ಮುಚ್ಚಿಡುವುದೇ ಹೆಚ್ಚು. ಅದು ಕುತೂಹಲ ಹಾಗೂ ಕಾತರ ಹೆಚ್ಚಿಸುತ್ತಾ ಹೋಗುತ್ತದೆ. ಅದರಲ್ಲೂ ಹನ್ನೊಂದರ ಬಳಗದಲ್ಲಿ ಯಾರು ಆಡುತ್ತಾರೆ ಎಂಬ ವಿಷಯವನ್ನು ಟಾಸ್ ಹಾಕುವವರೆಗೆ ಬಹಿರಂಗಪಡಿಸುವುದಿಲ್ಲ.

ಆದರೆ ಆಸ್ಟ್ರೇಲಿಯಾ ತಂಡ ಅದಕ್ಕೆ ತದ್ವಿರುದ್ಧ. ಶುಕ್ರವಾರ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲಿರುವ 11 ಆಟಗಾರರ ಪಟ್ಟಿಯನ್ನು ಕಾಂಗರೂ ಬಳಗ ಬುಧವಾರವೇ ಪ್ರಕಟಿಸಿ ಅಚ್ಚರಿಗೆ ಕಾರಣವಾಗಿದೆ.

ಈ ಪಂದ್ಯದಲ್ಲಿ ಮೈಕಲ್ ಕ್ಲಾರ್ಕ್ ಬಳಗ ಒಬ್ಬರು ಸ್ಪಿನ್ನರ್ ಹಾಗೂ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯಲಿದೆ. ಗಾಯದಿಂದ ಚೇತರಿಸಿಕೊಂಡಿರುವ ವಾರ್ನರ್ ಆಡುವುದು ಖಚಿತ. ವಾಟ್ಸನ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಆಲ್‌ರೌಂಡರ್ ಮೊಯಿಸೆಸ್ ಹೆನ್ರಿಕ್ಸ್ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಆಸ್ಟ್ರೇಲಿಯಾ ಪರ ಟೆಸ್ಟ್ ಆಡಲಿರುವ 432ನೇ ಆಟಗಾರ ಎನಿಸಲಿದ್ದಾರೆ.

`ಪದಾರ್ಪಣೆ ಪಂದ್ಯವನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ. ಇದೊಂದು ವಿಶೇಷ ಅನುಭವ. ನಾನು ಆಡುವ ವಿಷಯವನ್ನು ಮಂಗಳವಾರ ರಾತ್ರಿಯೇ ಕೋಚ್ ಮಿಕಿ ಆರ್ಥರ್ ತಿಳಿಸಿದರು. ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದು ನನ್ನ ನೆರವಿಗೆ ಬಂದಿದೆ' ಎಂದು ಮೊಯಿಸೆಸ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಚೆನ್ನೈ ಪಿಚ್‌ನಲ್ಲಿ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯುವುದು ಸೂಕ್ತ ನಿರ್ಧಾರವೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, `ಏಕೆ ಎಂಬುದು ನನಗೆ ಗೊತ್ತಿಲ್ಲ. ನಾನು ಇಲ್ಲಿ ಐದು ದಿನಗಳ ಪಂದ್ಯದಲ್ಲಿ ಆಡ್ಲ್ಲಿಲ. ಇದು ತಂಡದ ಉತ್ತಮ ನಿರ್ಧಾರ ಎಂದು ನಾನು ಭಾವಿಸಿದ್ದೇನೆ. ಬೌಲ್ ಮಾಡಲು ಉತ್ಸುಕನಾಗ್ದ್ದಿದೇನೆ' ಎಂದಿದ್ದಾರೆ. `ಈಗ ಭಾರತ ತಂಡದಲ್ಲಿ ದ್ರಾವಿಡ್, ಲಕ್ಷ್ಮಣ್ ಅವರಂಥ ಆಟಗಾರರಿಲ್ಲ. ಆದರೆ ವಿರಾಟ್ ಕೊಹ್ಲಿ ಹಾಗೂ ಪೂಜಾರ ಪ್ರತಿಭಾವಂತ ಆಟಗಾರರು. ಹಾಗಾಗಿ ಭಾರತ ಬಲಿಷ್ಠ ತಂಡ' ಎಂದು ಹೆನ್ರಿಕ್ಸ್ ನುಡಿದಿದ್ದಾರೆ.

ಮೊದಲ ಟೆಸ್ಟ್ ಆಡಲಿರುವ ಆಸ್ಟ್ರೇಲಿಯಾ ತಂಡ: ಮೈಕಲ್ ಕ್ಲಾರ್ಕ್ (ನಾಯಕ), ಡೇವಿಡ್ ವಾರ್ನರ್, ಎಡ್ ಕೊವನ್, ಫಿಲ್ ಹ್ಯೂಸ್, ಶೇನ್ ವಾಟ್ಸನ್, ಮ್ಯಾಥ್ಯು ವೇಡ್ (ವಿಕೆಟ್ ಕೀಪರ್), ಮೊಯಿಸೆಸ್ ಹೆನ್ರಿಕ್ಸ್, ಪೀಟರ್ ಸಿಡ್ಲ್, ಮಿಷೆಲ್ ಸ್ಟಾರ್ಕ್,    ಜೇಮ್ಸ ಪ್ಯಾಟಿನ್ಸನ್ ಹಾಗೂ ನೇಥನ್ ಲಿಯೋನ್.

`ಆಸ್ಟ್ರೇಲಿಯಾ ತಂಡದ ಈ ನಡೆ ನನ್ನಲ್ಲೂ ಅಚ್ಚರಿ ಉಂಟು ಮಾಡಿದೆ. ಎರಡು ದಿನಗಳ ಮೊದಲೇ ಅವರು ತಂಡ ಪ್ರಕಟಿಸಿದ್ದಾರೆ. ನಾನು ಕೂಡ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ತಂಡಗಳ ನಾಯಕರು ಟಾಸ್ ಹಾಕಿದ ಮೇಲಷ್ಟೆ ಅಂತಿಮ ಆಟಗಾರರ ಪಟ್ಟಿಯನ್ನು ಬಹಿರಂಗಗೊಳಿಸುತ್ತಾರೆ. ಸಹ ಆಟಗಾರರಿಗೂ ಗೊತ್ತಾಗುವುದಿಲ್ಲ'
-ಭಾರತ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ (ಟ್ವಿಟರ್‌ನಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT