ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪದ್ಮಭೂಷಣ' ಸಂಭ್ರಮಕ್ಕೆ ಮೂವತ್ತು!

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಏಪ್ರಿಲ್ 24, 1983. ಅಂದು ಬೆಂಗಳೂರಿಗೆ ಹೊಸಬಣ್ಣ. ಹಾದಿ ಬೀದಿಗಳಲ್ಲಿ ಜನವೋ ಜನ. ಚಿಣ್ಣರು ತಾಯಂದಿರ ಕಂಕುಳಲ್ಲಿದ್ದರೆ ಯುವಕರು ಗೋಡೆ, ಮರಗಳನ್ನು ಏರಿ ಕುಳಿತಿದ್ದರು. ಕೊಡೆ ಇಲ್ಲದವರು ಮರದ ಸೊಪ್ಪನ್ನೇ ಬಿಸಿಲಿಗೆ ಅಡ್ಡವಾಗಿ ಹಿಡಿದಿದ್ದರು. ಎಲ್ಲರ ಮಾತೂ ರಾಜ್‌ಕುಮಾರ್ ಕುರಿತಂತೆಯೇ. ಅದರ ಬೆನ್ನಿಗೆ `ನಟಸಾರ್ವಭೌಮನಿಗೆ ಜಯವಾಗಲಿ...' ಎಂಬ ಘೋಷಣೆ.

ಒಂದೆಡೆ `ಮೇಯರ್ ಮುತ್ತಣ್ಣ'ನಿಗೆ ಹುಟ್ಟುಹಬ್ಬದ ಸಂಭ್ರಮ. ಮತ್ತೊಂದೆಡೆ ಪದ್ಮಭೂಷಣ ಪ್ರಶಸ್ತಿಯ ಗೌರವ. ಅಭಿಮಾನಿಗಳಿಗೆ ಎರಡೆರಡು ಸಿಹಿ ಒಟ್ಟಿಗೆ ಸಿಕ್ಕ ಖುಷಿ. ಅಂದು ಬೆಳಿಗ್ಗೆ ಮಲ್ಲೇಶ್ವರದ ಗಣೇಶನ ಗುಡಿಗೆ ಕುಟುಂಬ ಸಮೇತ ಬಂದ ರಾಜ್ ಪೂಜೆ ಸಲ್ಲಿಸಿದರು. ನಂತರ ಮಲ್ಲೇಶ್ವರ ಮೈದಾನಕ್ಕೆ ಆಗಮನ. ಸಾಗರದಂತೆ ಸೇರಿತ್ತು ಜನ. ಆಗಸದಲ್ಲಿ ಗುಡುಗುತ್ತ ಬಂದ ಹೆಲಿಕಾಪ್ಟರ್ ಹೂಮಳೆ ಸುರಿಸಿತು. ಬಿಳಿರಥವಾಗಿ ಮಾರ್ಪಟ್ಟಿದ್ದ ವಾಹನದ ಮೇಲೆ `ಮಯೂರ'ನ ಮೆರವಣಿಗೆ ಹೊರಟಿತ್ತು. ಕನ್ನಡ ಚಿತ್ರರಂಗಕ್ಕೆ ಹೊಸದೊಂದು ಕೋಡು ಮೂಡಿಸಿದ ರಾಜ್‌ರನ್ನು ಅಭಿನಂದಿಸಲು ದೂರದ ಕಂಠೀರವ ಕ್ರೀಡಾಂಗಣ ಕಾದು ಕುಳಿತಿತ್ತು.

ದಾರಿಯುದ್ದಕ್ಕೂ ಜನಪದ ಕಲಾವಿದರಿಂದ ಹಾಡು ಕುಣಿತ. ಕಣ್ಣು ಹಾಯಿಸಿದೆಡೆಯೆಲ್ಲಾ ರಾಜ್‌ರನ್ನು ಹರಸುವ ಹಾರೈಸುವ ಭಿತ್ತಿಪತ್ರಗಳು. ಸಂಪಿಗೆ ರಸ್ತೆಯಲ್ಲಿ ಮೆರವಣಿಗೆ ಹೊರಟಾಗ ಮನೆಯೊಂದರ ಅಟ್ಟದ ಮೇಲೆ ಪಾರ್ವತಮ್ಮ ರಾಜ್‌ಕುಮಾರ್ ನಿಂತಿದ್ದರು. ಅಲ್ಲಿಂದಲೇ ಕೈಬೀಸಿ ಶುಭ ಕೋರಿದರು. ಹೆಲಿಕಾಪ್ಟರ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಕಂಠೀರವ ಕ್ರೀಡಾಂಗಣದ ಮೇಲೂ ಹಾರಾಟ. ಅಲ್ಲಿಯೂ ಪುಷ್ಪವೃಷ್ಠಿ.

ಈಗ ಆ ಸಂಭ್ರಮಕ್ಕೆ ಭರ್ತಿ ಮೂವತ್ತು ವರ್ಷ ತುಂಬಿದೆ. ವೈಭವೋಪೇತ ಸನ್ಮಾನ ಸಮಾರಂಭ ಆಯೋಜಿಸಿದ್ದು `ಕನ್ನಡ ಚಿತ್ರರಸಿಕರ ಸಂಘ'. ಅದು ಕನ್ನಡ ಪರ ಚಳವಳಿಯ ಜೊತೆಗೂ ಕೈಗೂಡಿಸಿದ್ದ ಸಂಘಟನೆ. ಮದ್ರಾಸ್‌ನಿಂದ ಕನ್ನಡ ಚಿತ್ರರಂಗವನ್ನು ಬೆಂಗಳೂರಿಗೆ ಕರೆತಂದದ್ದರಲ್ಲಿ ಅದರ ಪಾತ್ರವೂ ಹಿರಿದು. ಪತ್ರಕರ್ತ ಎಂ. ದ್ವಾರಕಾನಾಥ್ ಅವರಿಂದ ಸ್ಫೂರ್ತಿ ಪಡೆದು 1970ರಲ್ಲಿ ಹುಟ್ಟಿದ ಸಂಘಕ್ಕೆ ಹೆಗಲು ನೀಡಿದ್ದು ಕೆ.ಎಂ. ಪದ್ಮನಾಭರಾಜು.

1972ರಿಂದ ಚಿತ್ರರಂಗದ ಹಲವು ಗಣ್ಯರನ್ನು ಸನ್ಮಾನಿಸುತ್ತಾ ನಿಸ್ವಾರ್ಥ ಸೇವೆಗೆ ಸಂಘ ಹೆಸರಾಯಿತು. ರಾಜ್‌ರ 150ನೇ ಚಿತ್ರ `ಗಂಧದ ಗುಡಿ' ಯಶಸ್ವಿಯಾದಾಗ, ಅವರು ಗೌರವ ಡಾಕ್ಟರೇಟ್ ಪಡೆದಾಗ, ದ್ವಾರಕೀಶ್ ನೂರು ಚಿತ್ರಗಳನ್ನು ಪೂರೈಸಿದಾಗ ಸಂಘ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಇಷ್ಟೆಲ್ಲಾ ಅನುಭವವಿರುವ ಸಂಘವೇ `ಪದ್ಮಭೂಷಣ' ಪ್ರಶಸ್ತಿ ಪುರಸ್ಕೃತ ರಾಜ್‌ರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಪಾರ್ವತಮ್ಮ ಕೋರಿದ್ದರು. ಅದರಂತೆ ಸಿ.ವಿ.ಎಲ್. ಶಾಸ್ತ್ರಿ ಅವರು `ರಾಜ್ ಅಭಿನಂದನಾ ಸಮಿತಿ'ಯ ಅಧ್ಯಕ್ಷರಾದರು.

ಕಾರ್ಯಕ್ರಮದಲ್ಲಿ ರಾಜ್ ಅವರ ಕಂಠ ಬಿಗಿದಿತ್ತು. `ಜನ್ಮ ಕೊಟ್ಟವರು ಮಾತ್ರ ನನ್ನ ತಂದೆ ತಾಯಿಗಳಲ್ಲ. ಕರ್ನಾಟಕದ ಎಲ್ಲರೂ ನನ್ನ ತಂದೆ ತಾಯಿಗಳು. ನಿಮ್ಮ ಋಣವನ್ನು ಈ ಜನ್ಮದಲ್ಲಂತೂ ತೀರಿಸಲು ಸಾಧ್ಯವಿಲ್ಲ...'ಅದು ಕೇವಲ ಕನ್ನಡದ ಸಡಗರವಷ್ಟೇ ಆಗಿರಲಿಲ್ಲ.

ಹಿಂದಿ ಚಿತ್ರರಂಗದ ಗಣ್ಯರಾದ ಧರ್ಮೇಂದ್ರ, ಪ್ರಾಣ್ (ಈ ಸಾಲಿನ ದಾದಾ ಸಾಹೇಬ್ ಪ್ರಶಸ್ತಿ ಪುರಸ್ಕೃತರು), ರತಿ ಅಗ್ನಿಹೋತ್ರಿ, ಸಂಜಯ್‌ದತ್, ಕುಮಾರ್‌ಗೌರವ್ ಎಲ್ಲರೂ ರಾಜ್‌ರನ್ನು ಕಣ್ತುಂಬಿಕೊಳ್ಳುವವರೇ. ತಮಿಳುನಾಡಿನಿಂದ ಬಂದ ಬಾಲಚಂದರ್ ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ವಾರ್ತಾ ಸಚಿವ ರಘುಪತಿ, ವಿಷ್ಣುವರ್ಧನ್, ಜಯಂತಿ, ಲೀಲಾವತಿ, ಮಂಜುಳಾ, ಅಂಬರೀಷ್, ದ್ವಾರಕೀಶ್, ಲಕ್ಷ್ಮಿ, ಎಸ್. ಜಾನಕಿ ಸೇರಿದಂತೆ ಹಲವು ಗಣ್ಯರು ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಪದ್ಮನಾಭರಾಜು ಸ್ಮರಿಸುತ್ತಾರೆ. `ನಟ ವಿಷ್ಣುವರ್ಧನ್ ಮಾತನಾಡುವಾಗ ಸಾರ್ವಜನಿಕರು ವಿರೋಧಿಸಿದರು.

ಅದಕ್ಕೂ ಮುನ್ನ ಪಲ್ಲವಿ ಚಿತ್ರಮಂದಿರದ ಬಳಿ ಇದ್ದ ವಿಷ್ಣು ಅವರ ಕಟೌಟ್‌ಗಳನ್ನು ಕಿತ್ತೆಸೆದಿದ್ದರು. ಆದರೆ ಇದನ್ನು ರಾಜ್ ಸಹಿಸಲಿಲ್ಲ. ಅವರೂ ನನ್ನ ಸಹೋದ್ಯೋಗಿ. ಅವರನ್ನು ಅವಮಾನಿಸಿದರೆ ನನ್ನನ್ನು ಅಪಮಾನಿಸಿದಂತೆ ಎಂದರು. ಅಂದಿನಿಂದ ವಿಷ್ಣು ಹಾಗೂ ರಾಜ್ ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಶೀತಲ ಸಮರಕ್ಕೆ ತೆರೆಬಿತ್ತು' ಎನ್ನುತ್ತಾರೆ ಅವರು.

ಸಮಾರಂಭ ನಡೆದ ಹೊತ್ತಿನಲ್ಲಿ ಕನ್ನಡ ಚಳವಳಿಯೂ ಬಿರುಸಾಗಿತ್ತು. ದಾರಿಯಲ್ಲಿ ಸಿಕ್ಕ ಕನ್ನಡೇತರ ನಾಮಫಲಕಗಳೆಲ್ಲಾ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಬಲಿಯಾದವು. ಯಾರೂ ಅದನ್ನು ಪ್ರಶ್ನಿಸುವಂತಿರಲಿಲ್ಲ. ಹಾಗಿತ್ತು ರೋಷ. ಸಂಪಿಗೆ ರಸ್ತೆಯಲ್ಲಿ ಜನ ಬಸ್‌ನಿಲ್ದಾಣದ ಛಾವಣಿ ಮೇಲೆ ಹತ್ತಿದ್ದರಿಂದ ಅದು ಕುಸಿದು ಐವರು ಗಾಯಗೊಂಡಿದ್ದರು.

ಅಂದು ರಾಜ್- `ನಿಮಗೆ ನಾನು ಚಿರಋಣಿ. ನಿಮಗೆ ನನ್ನ ಕೋಟಿ ನಮನ' ಎಂದು ಅಭಿಮಾನಿಗಳತ್ತ ಕೈ ಬೀಸಿದ್ದರು. ಆ ಮಾತು ಕೋಟಿ ಕೋಟಿ ಅಭಿಮಾನಿಗಳನ್ನು ಹುಟ್ಟು ಹಾಕಿತು. ರಾಜ್ ಈಗಿಲ್ಲ. ಆದರೆ ಯಾರಾದರೂ `ಬಂಗಾರದ ಮನುಷ್ಯ'ನನ್ನು ಕಳೆದುಕೊಳ್ಳಲು ಸಾಧ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT