ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಯಣದಲಿ ಜೊತೆಯಾದ ದೇವದಾಸ್-ಪಾರು

Last Updated 21 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ನನ್ನ ಸಿನಿಮಾಗೆ ದೇವದಾಸನ ಕತೆ ಸ್ಫೂರ್ತಿ ಅಷ್ಟೇ. ಇದು ನನ್ನದೇ ಸ್ವಂತ ಕತೆ. ಭಗ್ನ ಪ್ರೇಮಿಗಳಿಗೆ ಖುಷಿಯಾಗಲಿ ಎಂದು `ಪಾರು ವೈಫ್ ಆಫ್ ದೇವದಾಸ್' ಎಂದು ಹೆಸರಿಟ್ಟಿರುವೆ. ಒಂದೂವರೆ ವರ್ಷದಿಂದ ಇದರ ಕತೆಗಾಗಿ ಕೆಲಸ ಮಾಡಿದೆ. ಚಿತ್ರದಲ್ಲಿ ಕುಡಿತದ ನಶೆಗಿಂಥ ಪ್ರೀತಿಯ ನಶೆ ಹೆಚ್ಚಾಗಿದೆ.

ನಾಯಕ ಪಾಶ್ಚಾತ್ಯ ಹಾಡುಗಳ ಗಾಯಕ. ನಾಯಕಿ ಕಥಕ್ ನೃತ್ಯಗಾತಿ. ನಾಯಕ- ನಾಯಕಿ ಮೂರು ಆಯಾಮದ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಕತೆಯ ಕೊನೆಯಲ್ಲಿ ನಾಯಕನಿಗೆ ಭಾರತದ ಸಂಗೀತ ಇಷ್ಟವಾದರೆ, ನಾಯಕಿ ಪತ್ರಕರ್ತೆಯಾಗಿರುತ್ತಾಳೆ. ನಿರೂಪಣೆಯ ವಿಶಿಷ್ಟ ಪ್ರಯೋಗವನ್ನು ಇದರಲ್ಲಿ ಕಾಣಬಹುದು. ಅದನ್ನು ಉಲ್ಟಾ ಮಾದರಿ ಎನ್ನಬಹುದು”.

ನಿರ್ದೇಶಕ ಕಿರಣ್ ಗೋವಿ ತಮ್ಮ ಹೊಸ ಚಿತ್ರದ ವಿವರಗಳನ್ನು ದೀರ್ಘ ಪ್ರಸ್ತಾವನೆಯೊಂದಿಗೆ ಆರಂಭಿಸಿದರು. ಅದು ಅವರ ನಿರ್ದೇಶನದ `ಪಾರು ವೈಫ್ ಆಫ್ ದೇವದಾಸ್' ಚಿತ್ರದ ಪತ್ರಿಕಾಗೋಷ್ಠಿ.

ಐದು ವರ್ಷಗಳ ಹಿಂದೆ `ಪಯಣ' ಸಿನಿಮಾ ನಿರ್ದೇಶಿಸಿದ್ದ ಕಿರಣ್ ಗೋವಿ, ಬಳಿಕ `ಸಂಚಾರಿ' ನಿರ್ದೇಶಿಸಿ ಸಹೃದಯರ ಗಮನಸೆಳೆದಿದ್ದರು. ಅದಾದ ಮೂರು ವರ್ಷಗಳ ತರುವಾಯ ಪಾರು-ದೇವದಾಸ್ ಮದುವೆ ಮಾಡಲು ಬಂದಿದ್ದಾರೆ.

ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆಯನ್ನೂ ಬರೆದಿರುವ ಅವರು ಚಿತ್ರದ ಬಜೆಟ್ ಒಪ್ಪುವ ನಿರ್ಮಾಪಕರಿಗಾಗಿ ಇಷ್ಟು ದಿನ ಕಾಯಬೇಕಾಯಿತಂತೆ. ಇದೀಗ ನಿರ್ಮಾಪಕರು ಸಿಕ್ಕಿರುವುದು ಮತ್ತು ಗೆಳೆಯ ಶ್ರೀನಗರ ಕಿಟ್ಟಿ ನಾಯಕನ ಪಾತ್ರ ನಿಭಾಯಿಸುತ್ತಿರುವುದು ಅವರ ಉತ್ಸಾಹಕ್ಕೆ ರೆಕ್ಕೆ ಮೂಡಿಸಿದೆ.

`ನನ್ನ ನಾಯಕನಿಗೆ ಇರುವ ನವಿರು ಭಾವನೆಗಳನ್ನು ನಿಭಾಯಿಸಲು ಕಿಟ್ಟಿಯಿಂದ ಮಾತ್ರ ಸಾಧ್ಯ. ಅವರು ಒಪ್ಪಿಕೊಂಡಿದ್ದು ಖುಷಿಯಾಗಿದೆ. ನಟಿ ಜಯಾಮಾಲ ಅವರ ಮಗಳು ಸೌಂದರ್ಯ ಪಾರು ಪಾತ್ರಕ್ಕೆ ಸೂಕ್ತ ಎನಿಸಿದೆ. ಸದ್ಯದಲ್ಲಿಯೇ ಚಿಕ್ಕಮಗಳೂರಿನ ಹಸಿರು ಆವರಣದಲ್ಲಿ ಕಥಕ್ ಗುರುಕುಲದ ಸೆಟ್ ಹಾಕಿಸಿ 15 ದಿನ ಚಿತ್ರೀಕರಿಸುವ ಉದ್ದೇಶ ಇದೆ. ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಇಸ್ಮಾಯಿಲ್ ಹಿಮಾವೃತ ಸೆಟ್ ಹಾಕಿದ್ದಾರೆ. ಅಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ' ಎಂದು ಮತ್ತಷ್ಟು ಮಾಹಿತಿ ನೀಡಿದರು.

ಶ್ರೀನಗರ ಕಿಟ್ಟಿ ಅವರಿಗೆ ಚಿತ್ರಕತೆ ಮಜ ನೀಡಿತಂತೆ. ಚಿತ್ರದಲ್ಲಿ ಅವರಿಗೆ ಗಾಯಕ ಆಗಬೇಕೆಂಬಾಸೆ ಇರುವ ಶ್ರೀಮಂತ ಹುಡುಗನ ಪಾತ್ರ. `ಸಣ್ಣ ಸಣ್ಣ ಅಹಂಗಳು ದೊಡ್ಡದಾಗುವ ರೀತಿ ಚಿತ್ರದಲ್ಲಿ ನೈಜವಾಗಿ ಮೂಡಿ ಬರಲಿದೆ. ಅಹಂ ಮೀರಿ ಪ್ರೀತಿಸಿದ ಹುಡುಗಿ ಪಡೆಯುವ ಪಾತ್ರ ನನ್ನದು' ಎಂದ ಅವರು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚಿತ್ರದ ಹಾಡುಗಳಿಗೆ ಸೂಫಿ ಸಂಗೀತವನ್ನು ಮಿಶ್ರ ಮಾಡಿರುವ ರೀತಿಯನ್ನು ಮೆಚ್ಚಿಕೊಂಡರು.

ನಾಯಕಿ ಸೌಂದರ್ಯ ಅವರಿಗೆ ತಾವು ನಟಿಸಿದ ಮೊದಲ ಸಿನಿಮಾ `ಗಾಡ್‌ಫಾದರ್' ಆದರೂ, ನಿಜವಾದ ಅರ್ಥದಲ್ಲಿ `ಪಾರು ವೈಫ್ ಆಫ್ ದೇವದಾಸ್' ತಮ್ಮ ಮೊದಲ ಚಿತ್ರ ಎನಿಸಿದೆ. ಅದಕ್ಕೆ ಕಾರಣ `ಪಾರು' ಎಂಬ ಗಟ್ಟಿಪಾತ್ರ.

`ಚಿತ್ರದಲ್ಲಿ ನಾನು ಕಥಕ್ ನರ್ತಕಿ. ಅದಕ್ಕಾಗಿ ನೃತ್ಯದ ತರಬೇತಿ ಪಡೆಯುತ್ತಿದ್ದೇನೆ. ಮುಗ್ಧತೆ, ಸಾಂಪ್ರದಾಯಿಕತೆ ನನ್ನ ಪಾತ್ರದಲ್ಲಿ ಇದ್ದರೂ ಅದೆಲ್ಲವನ್ನೂ ಮೀರಿದ ಗಟ್ಟಿತನವೂ ಇದೆ. ನನ್ನನ್ನು ಚಿತ್ರದಲ್ಲಿ ದೇವತೆಯಂತೆ ತೋರಿಸಲಾಗುತ್ತದೆ' ಎನ್ನುತ್ತಾ ಕಣ್ಣು ಅರಳಿಸಿದರು.

ಈ ಪಾತ್ರ ಸಿಕ್ಕಿದ ಬಳಿಕ ತಾವು `ಗಾಡ್‌ಫಾದರ್' ನಂತರ ಒಂದು ವರ್ಷ ಯಾವ ಕತೆಯನ್ನು ಒಪ್ಪಿಕೊಳ್ಳದೇ ಇದ್ದದ್ದು ಸಾರ್ಥಕವಾಯಿತು ಎಂಬ ಭಾವನೆ ಅವರದು.ಹಾಡುಗಳನ್ನು ಬರೆದಿರುವ ನಾಗೇಂದ್ರ ಪ್ರಸಾದ್ ತಾವು ಬರೆಯುವ ಸಾಲುಗಳನ್ನು ಆರಿಸಿಕೊಳ್ಳುವ ನಿರ್ದೇಶಕರಿಗೆ ಒಳ್ಳೆಯ ಅಭಿರುಚಿ ಇದ್ದರೆ ಮಾತ್ರ ಉತ್ತಮ ಹಾಡು ಹುಟ್ಟಲು ಸಾಧ್ಯ ಎಂದರು. `ಈ ಚಿತ್ರಕ್ಕಾಗಿ ಮೋಹಕತೆ, ಉತ್ಕಟ ಪ್ರೀತಿ ಇರುವ ಸಾಲುಗಳನ್ನು ಬರೆದಿರುವೆ.

ನನ್ನ ಮೇಲೆ ಭರವಸೆ ಇಟ್ಟ ನಿರ್ದೇಶಕರಿಗೆ ಇಷ್ಟವಾಗುವಂತೆ ಮನಸಾಕ್ಷಿಯನ್ನು ಮುಂದಿಟ್ಟುಕೊಂಡು ಹಾಡು ಬರೆದಿರುವೆ' ಎಂದು ಭಾವುಕರಾಗಿ ನುಡಿದರು.
ನಿರ್ಮಾಪಕ ಕೃಷ್ಣದೇವೇಗೌಡ ಅವರಿಗೆ ನಿರ್ದೇಶಕರ ಕತೆ ಇಷ್ಟವಾಗಿದೆ. ಖರ್ಚು ಎಷ್ಟಾದರೂ ತೊಂದರೆ ಇಲ್ಲ ಎನಿಸಿದೆ. ಮತ್ತೊಬ್ಬ ನಿರ್ಮಾಪಕ ಮುಖ್ತಾರ್ ಅವರಿಗೆ ನಿರ್ದೇಶಕರ ಬೇಡಿಕೆಗಳು ಜಾಸ್ತಿ ಎನಿಸಿದರೂ ಪ್ರತಿಫಲದ ಮೇಲೆ ವಿಶ್ವಾಸ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT