ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆ, ಆಧುನಿಕತೆ ಮೇಳೈಸಲಿ

ಸಾಹಿತ್ಯ ಸಮ್ಮೇಳನ ನಿರೀಕ್ಷೆ ಏನು?
Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಡಿಕೇರಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸಜ್ಜಾಗುತ್ತಿದೆ. ಈ ಸಾಹಿತ್ಯ  ಸಮ್ಮೇಳನ ಹೇಗಿರಬೇಕು? ಈ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತಿಯೇ ವಿಜೃಂಭಿಸಬೇಕೆಂಬ ಆಶಯ ಈಡೇರುವುದು ಸಾಧ್ಯವೇ? ಉನ್ನತ ಸಾಹಿತ್ಯ ಚಿಂತನೆಗಳು ಭಿನ್ನ ನೆಲೆಗಳಲ್ಲಿ ಮೂಡಲು ಸಾಹಿತ್ಯ ಸಮ್ಮೇಳನ ವೇದಿಕೆಯಾಗುವುದು ಹೇಗೆ? ಇತ್ಯಾದಿ ಪ್ರಶ್ನೆಗಳ ಸುತ್ತ ಲೇಖಕಿ ಆರ್.ತಾರಿಣಿ ಶುಭದಾಯಿನಿ ಅವರು ಮಂಡಿಸಿರುವ ವಿಚಾರಗಳು ಇಲ್ಲಿವೆ....

ಸಾಹಿತ್ಯ ಸಮ್ಮೇಳನ ನಡೆಯುವ ಈ ಹೊತ್ತಿನಲ್ಲಿ ಒಂದು ಮುಖ್ಯ ಅಂಶವನ್ನು ಗಮನಿಸಬೇಕು. ಇದೀಗ ಎಲ್ಲೆಲ್ಲೂ  ಉತ್ಸವ­ಗಳು, ಸಮ್ಮೇಳನಗಳು ನಡೆಯುತ್ತವೆ. ಸರ್ಕಾರವೇ ಪ್ರೋತ್ಸಾಹಿಸುವ ಹಂಪಿ ಉತ್ಸವ, ಲಕ್ಕುಂಡಿ ಉತ್ಸವ­ಗಳ ಜೊತೆ ಪ್ರಾದೇಶಿಕವಾಗಿ ಜಿಲ್ಲಾವಾರು ಉತ್ಸವಗಳು ಹಾಗು ಖಾಸಗಿಯಾಗಿ ನಡೆಯುವ ನುಡಿಸಿರಿ, ಧಾರವಾಡ ಸಂಭ್ರಮ ಮುಂತಾದ ಸಾಹಿತ್ಯೋತ್ಸವಗಳು ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನವನ್ನು ಅವಲೋಕಿಸುವಂತೆ ಮಾಡುತ್ತವೆ.

ಏಕೆಂದರೆ ಹೆಚ್ಚೂ ಕಡಿಮೆ ವರ್ಷಪೂರ್ತಿ ನಡೆಯುವ ಈ ಉತ್ಸವಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ­ಗಳೊಂದಿಗೆ ಒಂದೇ ಬಗೆಯ ವಿಷಯ, ಗೋಷ್ಠಿಗಳು ನಡೆಯುತ್ತವೆ. ಹೀಗಿರುವಾಗ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನದ ಸ್ವರೂಪವು ಬದಲಾಗ­ಬೇಕೇ ಎಂದು ಯೋಚಿಸಬೇಕಿದೆ. ದಿನಕಳೆದಂತೆ ಈ ಬಗೆಗಿನ ನಿರೀಕ್ಷೆಯೂ ಹೆಚ್ಚಾಗಲಿದೆ.  ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತು ಈ ಸವಾಲುಗಳನ್ನು ಹೇಗೆ ಎದುರಿಸುತ್ತದೆ ಎನ್ನುವುದು ಇಂದು ಮುಖ್ಯವಾಗುತ್ತದೆ.

ಪ್ರತೀ ಸಲ ಸಾಹಿತ್ಯ ಸಮ್ಮೇಳನ ನಡೆಯುವಾಗಲೂ ಅದರ ಸ್ವರೂಪ ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತದೆ.  ಸಾಹಿತ್ಯ ಸಮ್ಮೇಳನದ ಸ್ವರೂಪ ಎರಡು ರೀತಿಯದಾಗಿರುತ್ತದೆ;  ಒಂದು, ಗಂಭೀರವಾದ ಚರ್ಚೆ, ವಿಷಯ ಹಂಚಿಕೆ ಇತ್ಯಾದಿಯಾದರೆ, ಇನ್ನೊಂದು ಉತ್ಸವದ ಸ್ವರೂಪ. ಈ ಎರಡೂ ಅಂಶಗಳು ಸಾಧುವೇ. ನಾಡಿನವರೆಲ್ಲ ಒಂದೆಡೆ ಸೇರುವ ಅವಕಾಶ ಕಲ್ಪಿಸುವ ಸಮ್ಮೇಳನವು ಒಂದು ಬಗೆಯ ಧನ್ಯತಾಭಾವ ಉಂಟು­ಮಾಡುತ್ತದೆ. ಆದರೆ ಸಮ್ಮೇಳನದ ಉದ್ದೇಶ ಅಷ್ಟಕ್ಕೇ ಸೀಮಿತವಾದರೆ ಅದರ ಉದ್ದೇಶವೇ ವಿಫಲಗೊಂಡಂತೆ.

ಅಥವಾ ಸಾಹಿತ್ಯದ ತಾತ್ವಿಕ ಚರ್ಚೆಗಳು ದಂತಗೋಪುರದ ಚರ್ಚೆಗಳಾಗಿ ಸಮಕಾಲೀನ ಜನಜೀವನವನ್ನು ಮುಟ್ಟದಿದ್ದರೆ ಅದು ಕೂಡ ವಿಫಲವೇ. ಈ ಎರಡೂ ಅಂಶಗಳನ್ನು ಬೆಸೆಯಲು ಕನ್ನಡ ಸಾಹಿತ್ಯ ಪರಿಷತ್ತು ಸಾಕಷ್ಟು ಸರ್ಕಸ್ ಮಾಡುತ್ತಲೇ ಇರುತ್ತದೆ. ಸಾಹಿತ್ಯಕ್ಕೆಂದು ಒಂದೆರಡು ಗೋಷ್ಠಿಗಳು, ಕೃಷಿ, ಜಾನಪದ, ಮಹಿಳೆ, ದಲಿತ, ಕಾರ್ಪೊರೇಟ್ ಇತ್ಯಾದಿ ವಲಯಗಳನ್ನು ಅಡಕಗೊಳಿಸಲೆಂದು ಕೆಲವು ಗೋಷ್ಠಿಗಳು ಹೀಗೆ ಸಮನ್ವಯ ಸಾಧಿಸುವ ಯತ್ನಗಳು ಕಾಣುತ್ತವೆ.

ಸಾಹಿತ್ಯ ಸಮ್ಮೇಳನದ ಬಗೆಗೆ ನಮ್ಮ ನಿರೀಕ್ಷೆಗಳು ಏನೆಂದರೆ ಅವು ಹೆಚ್ಚು ಕಾನ್ಸೆಪ್ಟ್ ಬೇಸ್ಡ್ ಆಗಬೇಕು. ಅದರಿಂದ ಅವುಗಳಿಗೆ ಖಚಿತ ಸ್ವರೂಪ ಬರುತ್ತದೆ. ಪ್ರತಿ ವರ್ಷವೂ ಒಂದೊಂದು ವಿಷಯವನ್ನು ಎತ್ತಿಕೊಳ್ಳುವುದಕ್ಕೆ ಅವಕಾಶವಾಗುತ್ತದೆ. ಅಥವಾ ಈಗ ಆಯೋಜಿಸಲಾಗುವ ಸಾಹಿತ್ಯ ಸಮ್ಮೇಳನದಲ್ಲೇ ಮೂರು ದಿನಗಳ ಅವಧಿಯನ್ನು ಒಂದೊಂದು ವಿಷಯಕ್ಕೆಂದು ಮೀಸಲಿರಿಸಿದರೂ ಸಾಕು.  ಆಗ ಆಸಕ್ತರು ತಮ್ಮ ಆಸಕ್ತಿಯ ವಲಯಗಳನ್ನು ಗುರುತಿಸಿಕೊಂಡು ಅದರಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸುವ ಗೋಷ್ಠಿಗಳು ನಿರೀಕ್ಷಿತ ಚರ್ಚೆಗಳನ್ನು ಹುಟ್ಟುಹಾಕುವುದರಲ್ಲಿ ಅಷ್ಟೇನೂ ಯಶಸ್ವಿಯಾಗುತ್ತಿಲ್ಲ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ನನ್ನ ಗ್ರಹಿಕೆಯಂತೆ  ಮೊದಲನೆಯದಾಗಿ ಮಾತನಾಡುವ ಭಾಷಣಕಾರ, ವಿಷಯ ಮಂಡನೆಕಾರರು ಅಗಾಧವಾಗಿ ಸೇರುವ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡು ವಾಗ ಚರ್ಚೆಯ ಸ್ವರೂಪವನ್ನು ನಿರೀಕ್ಷಿಸಲಾಗುವುದಿಲ್ಲ.

ಎರಡನೆಯದಾಗಿ ಪ್ರತೀ ಸಲ  ಸಮ್ಮೇಳನದಲ್ಲಿ ದೊಡ್ಡವರು ಆಗಮಿಸಿ ಗೋಷ್ಠಿಗಳ ಸಮಯದ ಬಹು ಭಾಗ­ವನ್ನು ತಿಂದು ಹಾಕಿರುತ್ತಾರಾದ್ದರಿಂದ ಮಾತನಾಡು­ವವರಿಗೆ ಸಿಗುವ ಸಮಯಾವಕಾಶ ಕೆಲವೇ ನಿಮಿಷಗಳು! ಈ ಅಲ್ಪಾವಧಿಯಲ್ಲಿ ಮಂಡನೆಯಾಗುವ ವಿಷಯ ಅವಸರದ್ದಾಗಿರುತ್ತದೆ. ಹೀಗಾಗಿ ಎಷ್ಟೋ ಬಾರಿ ಔಪಚಾರಿಕವಾದ ಮಾತುಗಳಲ್ಲೇ ಗೋಷ್ಠಿಗಳು ಮುಗಿದು ಹೋಗುವುದುಂಟು.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗುತ್ತಲಿದ್ದು ಅದು ಕೇವಲ ಸಾಹಿತ್ಯ ಸಮ್ಮೇಳನವಾಗಿ ಮಾತ್ರ ಉಳಿದಿಲ್ಲ. ಅದು ಹಾಗೆ ಉಳಿಯಲೂಬಾರದು. ನಾಡು ನುಡಿ, ಸಂಸ್ಕೃತಿ ಚಿಂತನೆಗಳೂ ಮೇಳವಿಸಿದ ಸಮ್ಮೇಳನವಾಗಿದ್ದು ಅದರ ವ್ಯಾಪ್ತಿ ದೊಡ್ಡದಾಗಿದೆ. ಅದನ್ನು ನಿಭಾಯಿಸುವುದು ಅಷ್ಟು ಸುಲಭವೇನಲ್ಲ. ಏಕೆಂದರೆ ಹಲವಾರು ನಿರೀಕ್ಷೆಗಳು, ಒತ್ತಡಗಳು ಸಾಹಿತ್ಯ ಸಮ್ಮೇಳನದ ಮೇಲಿರುತ್ತವೆ.

ಎಲ್ಲ ಬಗೆಯ, ಎಲ್ಲ ವರ್ಗದ ಜನರನ್ನೂ ಒಟ್ಟಿಗೇ ಕರೆದೊಯ್ಯುವ ಕೆಲಸ ಸಮ್ಮೇಳನಗಳಿಂದ ಆಗಬೇಕಿದೆ. ಅದರಲ್ಲೂ ಹೊಸ ತಲೆಮಾರು ಕನ್ನಡದ ಕೆಲಸಗಳಿಂದ ದೂರ ಉಳಿಯುತ್ತಿರುವ ಸಂದರ್ಭದಲ್ಲಿ ಅವರನ್ನು ಒಳಗೊಳ್ಳುವ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ. ಪರಂಪರೆ ಮತ್ತು ಆಧುನಿಕತೆಗಳನ್ನು ಒಟ್ಟಿಗೇ ಕಲ್ಪಿಸುವ ಸಮ್ಮೇಳನವು ಇಂದಿನ ಅಪೇಕ್ಷೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT