ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರದೇಶದ ಊಟ ಸವಿದು...

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಹಿಂದಿನ ಕಾಲದಲ್ಲಿ ರಾಜಮಹಾರಾಜರಿಗೆ ಐವತ್ತಾರು ಬಗೆಯ ಆಹಾರಗಳನ್ನು ಬಡಿಸುತ್ತಿದ್ದರು. ಅದರಲ್ಲಿ ಸಲಾಡ್‌ನಿಂದ ಹಿಡಿದು ಡೆಸರ್ಟ್‌ತನಕ ಎಲ್ಲವೂ ಇರುತ್ತಿದ್ದವು. ಅವನ್ನೆಲ್ಲಾ ತಿಂದು ಅರಗಿಸಿಕೊಳ್ಳುವ ತಾಕತ್ತು ಅವರಲ್ಲಿತ್ತು. ಆದರೆ ಈಗಿನವರಲ್ಲಿ ಈ ತಾಕತ್ತು ಇಲ್ಲ. ನಾಲ್ಕು ಬಗೆಯ ತಿನಿಸುಗಳನ್ನು ಎದುರಿಗಿಟ್ಟರೆ ಚಮಚದಲ್ಲಿ ರುಚಿ ನೋಡಿ ಇಟ್ಸ್‌ ನೈಸ್‌ ಎಂದಷ್ಟೇ ಹೇಳಿ ತುಟಿಯಂಚಿನಲ್ಲಿ ನಗುತ್ತಾರೆ’ ಎಂದು ಕೀಸ್‌ ಹೊಟೇಲ್‌ನ ಶೆಫ್ ಅನೂಪ್ ಮಾತಿಗೆ ಶುರುವಿಟ್ಟುಕೊಂಡರು.

ಹೊಸೂರು ರಸ್ತೆಯಲ್ಲಿರುವ ಕೀಸ್‌ ಹೋಟೆಲ್‌ ಓರಿಯೆಂಟಲ್‌ ದೇಶಗಳ ಸ್ವಾದಿಷ್ಟ ರುಚಿಗಳನ್ನು ಪರಿಚಯಿಸುತ್ತಿದೆ. ಪೂರ್ವ ಸೈಬೀರಿಯಾ, ಇಂಡೋನೇಷ್ಯಾ, ಮಂಗೋಲಿಯಾ, ಜಪಾನ್‌, ಕೊರಿಯಾ, ವಿಯೆಟ್ನಾಂ, ಥಾಯ್ಲೆಂಡ್‌ ಮತ್ತು ಚೀನಾ ದೇಶಗಳ ವಿವಿಧ ಭಕ್ಷ್ಯಗಳು ಹಸಿದವರ ಹೊಟ್ಟೆ ತಣಿಸಲು ಕಾದಿದ್ದವು. ಇದರ ಜತೆಗೆ ವಿಯೆಟ್ನಾಂ ಮತ್ತು ಜಪಾನ್‌, ಥಾಯ್‌ ಮತ್ತು ಮಲೇಷಿಯಾ, ಇಂಡೋನೇಷ್ಯಾ ಮತ್ತು ಚೀನಾದ ಮಿಶ್ರ ಸಂಸ್ಕೃತಿಯ ರುಚಿಗಳು ಕೂಡ ಇತ್ತು.

ಆಹಾರದ ಬಗ್ಗೆ, ಅದು ಬೆಳೆದು ಬಂದ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾ ಶೆಫ್‌ ‘ತರಕಾರಿ ಸೂಪ್‌ ರುಚಿ ನೋಡಿ’ ಎಂದು ತಂದಿಟ್ಟರು. ಎಲ್ಲಾ ಬಗೆಯ ತರಕಾರಿಗಳನ್ನು ಬೇಯಿಸಿ ಅದರ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು, ಖಾರ ಸೇರಿಸಿ ಕ್ಯಾಬೇಜ್‌ನ್ನು ತೆಳುವಾಗಿ ಹೆಚ್ಚಿ ಹಾಕಿದ್ದರು. ಹೊರಗೆ ಚಳಿಗೆ ಹೊಗೆಯಾಡುತ್ತಿದ್ದ ಸೂಪ್‌ ಬೆಚ್ಚಗಿನ ಹಿತ ನೀಡಿತ್ತು. ಕೆಲಸದ ಒತ್ತಡವಿರುವಾಗ ಅಡುಗೆ ಮಾಡಿಕೊಳ್ಳುವಷ್ಟು ಸಮಯ ಇಲ್ಲದಿದ್ದಾಗ ಈ ರೀತಿಯ ತರಕಾರಿ ಸೂಪ್‌ ಮಾಡಿ ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಶೆಪ್‌ ನೀಡುವ ಟಿಪ್ಸ್‌.

ಸೂಪ್‌ ಕುಡಿದು ಹತ್ತು ನಿಮಿಷ ಆಗುತ್ತಿದ್ದಂತೆ ಹೋಟೆಲ್‌ನ ಸಿಗ್ನೇಚರ್‌ ಖಾದ್ಯ ‘ನಾಸಿ ಗೊರೆಂಗ್‌’ ಅನ್ನು ಮುಂದಿಟ್ಟರು. ಒಂದು ಪ್ಲೇಟ್‌ನಲ್ಲಿ ಫ್ರೈಡ್‌ ರೈಸ್‌, ಕೋಳಿಮಾಂಸದ ಎರಡು ಚಿಕ್ಕ ತುಂಡುಗಳು, ಜತೆಗೆ ಅರ್ಧಬೇಯಿಸಿದ ಆಮ್ಲೆಟ್‌, ಹಪ್ಪಳ ಮತ್ತು ಸೌತೆಕಾಯಿ, ಟೊಮೆಟೊ ತುಣುಕುಗಳನ್ನು ಇದು ಹೊಂದಿತ್ತು. ಇದೇನು ಹೆಸರು ಇಷ್ಟು ವಿಚಿತ್ರವಾಗಿದೆಯಲ್ಲಾ ಎಂದಾಗ, ‘ಇದು ಇಂಡೋನೇಷ್ಯಾದ ಸಾಂಪ್ರದಾಯಿಕ ಖಾದ್ಯ’ ಎಂದರು.

ಬಾಸುಮತಿ ಅಕ್ಕಿ–ಟೊಮೆಟೊ, ಕರಿಮೆಣಸಿನ ಕಾಳು, ಹಸಿಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಸ್ಪ್ರಿಂಗ್‌ ಆನಿಯನ್‌, ಹುರಿದ ನೆಲಗಡಲೆ ಬಳಸಿ ಮಾಡುವ ಈ ಫ್ರೈಡ್‌ ರೈಸ್‌ ನಮ್ಮಲ್ಲಿ ಮಾಡುವ ಫ್ರೈಡ್‌ರೈಸ್‌ನಂತೆ ಇತ್ತು. ಅದರ ಮಧ್ಯೆ ಮಧ್ಯೆ ಬಾಯಿಗೆ ಸಿಗುವ ಕೋಳಿಮಾಂಸದ ತುಣುಕು ಫ್ರೈಡ್‌ರೈಸ್‌ನ ರುಚಿ ಹೆಚ್ಚಿಸಿತ್ತು. ರಾತ್ರಿ ಉಳಿದ ಅನ್ನವನ್ನು ಮತ್ತೆ ಬೇಯಿಸಿ ಮಾಡುವ ಈ ಫ್ರೈಡ್‌ರೈಸ್‌ ಇಂಡೋನೇಷ್ಯಾದವರ ನೆಚ್ಚಿನ ಬ್ರೇಕ್‌ಫಾಸ್ಟ್‌ ಅಂತೆ.

ಇದಾದ ನಂತರ ಸೊಮ್‌ ಟಾಮ್‌ ತಂದಿಟ್ಟರು. ಸೊಮ್‌ ಟಾಮ್‌ ಥಾಯ್‌ ಖಾದ್ಯ. ಪಪ್ಪಾಯದ ಸಲಾಡ್‌. ಕಾಯಿ ಪಪ್ಪಾಯದಿಂದ ಮಾಡುವ ಈ ಖಾದ್ಯ ರುಚಿಯ ಜತೆಗೆ ಖಾರದ ಅನುಭವವನ್ನೂ ನೀಡುತ್ತದೆ. ಕಾಯಿ ಪಪ್ಪಾಯವನ್ನು ಚೆನ್ನಾಗಿ ತುರಿದು ಅದಕ್ಕೆ ಬೆಳ್ಳುಳ್ಳಿ, ಥಾಯ್‌ ಕೆಂಪು ಮೆಣಸು, ಲಿಂಬೆಹಣ್ಣಿನ ರಸ, ಸಣ್ಣಗೆ ಕತ್ತರಿಸಿದ ನೆಲಕಡಲೆ ಮತ್ತು  ಬೀನ್ಸ್‌ ಹಾಕಿ ತಯಾರಿಸುವ ಈ ಖಾದ್ಯ ತಿಂದರೆ ಮತ್ತಷ್ಟೂ ತಿನ್ನಬೇಕು ಅನಿಸುತ್ತದೆ.

ಥಾಯ್ಲೆಂಡ್ ಜನ ಹೆಚ್ಚು ಖಾರ ತಿನ್ನುವುದರಿಂದ ಅವರಿಗೆ ಈ ಖಾದ್ಯ ತುಂಬಾ ಇಷ್ಟವಂತೆ. ಬೆಂಗಳೂರಿನವರೂ ಈ ಸಲಾಡನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ ಎನ್ನುತ್ತಾರೆ ಶೆಫ್‌. ‘ಪಾನಿಪುರಿ ಒಳಗೆ ಹಾಕುವ ಮಸಾಲೆಯ ಬದಲು ಈ ಸಲಾಡ್‌ ಹಾಕಿದರೆ ಇದರ ರುಚಿ ಮತ್ತಷ್ಟೂ ಚೆನ್ನಾಗಿರುತ್ತದೆ. ಈ ರೀತಿಯ ಪ್ರಯೋಗಗಳನ್ನು ಮಾಡಿದ್ದೇನೆ’ ಎಂದು ಹೆಮ್ಮೆಯಿಂದ ಬೀಗುತ್ತಾರೆ ಅವರು.

‘ಖಾರದ ನಂತರ ಸಿಹಿ ತಿನ್ನಿ’ ಎಂದು ಬಾಳೆಹಣ್ಣಿನ ಟಾಫಿ ಕೊಟ್ಟರು. ಏಲಕ್ಕಿ ಬಾಳೆ ಹಣ್ಣನ್ನು ಬಳಸಿ ಮಾಡಿರುವ ಈ ಸಿಹಿ ಖಾದ್ಯ ಸೊಮ್‌ ಟಾಮ್‌ನ ಖಾರದಿಂದ ಬಿಡುಗಡೆ ನೀಡಿತು. ಸಣ್ಣದಾಗಿ ಕತ್ತರಿಸಿದ ಬಾಳೆಹಣ್ಣನ್ನು ಹುರಿದು ಅದಕ್ಕೆ ಕ್ಯಾರಮಿಲ್ ಸಿರಪ್‌ ಹಾಕಿ ಮಾಡಿದ ಈ ಟಾಫಿ ಹದವಾದ ಸಿಹಿಯಿಂದ ರುಚಿಯಾಗಿತ್ತು. ‘ಏಲಕ್ಕಿ ಬಾಳೆಹಣ್ಣು ದೇಹಕ್ಕೆ ಒಳ್ಳೆಯದು. ಇದರಿಂದ ಸಿಹಿ ಖಾದ್ಯ ಮಾಡಿದರೆ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ’ ಎನ್ನುತ್ತಾರೆ ಶೆಫ್ ಅನೂಪ್‌.

ಚೆನ್ನಾಗಿ ಊಟ ಮಾಡಿ, ವಾಯ್ಯಾಮ ಮಾಡಿ; ಆಗ ತಿಂದಿದ್ದು ಮೈಗೆ ಹತ್ತುತ್ತೆ. ತಿನ್ನುವುದಕ್ಕೂ ಒಂದು ಶಿಸ್ತು ಇರುತ್ತದೆ. ಈಗಿನವರು ಯಾವುದೋ ಸಮಯದಲ್ಲಿ ತಿನ್ನುತ್ತಾರೆ, ಯಾವಾಗಲೋ ಮಲಗುತ್ತಾರೆ. ಇದರಿಂದ ಬೊಜ್ಜು ಬರುತ್ತದೆ. ಮನೆಯಲ್ಲಿ ಬೆಳೆದ ತರಕಾರಿಯನ್ನು ಹೆಚ್ಚಾಗಿ ತಿನ್ನಬೇಕು ಎಂಬುವುದು ಶೆಫ್‌ ಸಲಹೆ.
ಟೇಬಲ್‌ ಕಾಯ್ದಿರಿಸಲು ದೂ: 080- 3944 1000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT