ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ದರ್ಶನ್

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸರು ನಟ ದರ್ಶನ್ ಅವರನ್ನು ಕಾರಿನಲ್ಲಿ ರಾತ್ರಿ 8.30ಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತಂದರು.`ದರ್ಶನ್ ಅವರು ದೈಹಿಕವಾಗಿ ಸಾಕಷ್ಟು ಬಳಲಿದ್ದರಿಂದ ಅವರನ್ನು ಕಾರಾಗೃಹದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವೈದ್ಯರು ಅವರಿಗೆ ಗ್ಲೋಕೋಸ್ ಹಾಕಿದ್ದಾರೆ. ಅವರನ್ನು ಶನಿವಾರ ಬೆಳಿಗ್ಗೆ ಇತರೆ ಕೈದಿಗಳ ಕೊಠಡಿಗೆ ಸ್ಥಳಾಂತರಿಸಲಾಗುತ್ತದೆ. ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ- 9000 ನೀಡಲಾಗಿದೆ~ ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ಲಘು ಲಾಠಿ ಪ್ರಹಾರ: ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತರುವ ವಿಷಯ ತಿಳಿದ ನೂರಾರು ಅಭಿಮಾನಿಗಳು ಕಾರಾಗೃಹದ ಬಳಿ ಜಮಾಯಿಸಿ ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದರು.

ಕಾರಾಗೃಹದ ಪ್ರವೇಶ ದ್ವಾರದ ಬಳಿ ಗುಂಪುಗೂಡಿದ್ದ ಅಭಿಮಾನಿಗಳು ದರ್ಶನ್ ಪರ ಘೋಷಣೆಗಳನ್ನು ಕೂಗಿ ಪೊಲೀಸರು ಕಾರಾಗೃಹದ ಒಳಗೆ ಪ್ರವೇಶಿಸದಂತೆ ಅಡ್ಡಿಪಡಿಸಿದರು. ಈ ಹಂತದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅಭಿಮಾನಿಗಳ ಗುಂಪನ್ನು ಚದುರಿಸಿದರು.

ಮುಖಕ್ಕೆ ಕಚ್ಚಿ, ಸಿಗರೇಟ್‌ನಿಂದ ಸುಟ್ಟ ನಟ
ಪತ್ನಿಯನ್ನು ಕಾರಿನಲ್ಲಿ ಬಲವಂತವಾಗಿ ಎಳೆದೊಯ್ದ ದರ್ಶನ್ ಅವರು ಸತತ ಎರಡು ಗಂಟೆಗಳ ಕಾಲ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಹಲ್ಲೆ ನಡೆಸುತ್ತಿದ್ದ ವೇಳೆ ಕಾರು ನಗರದ ಹೊರವಲಯದಲ್ಲಿ ಚಲಿಸುತ್ತಲೇ ಇತ್ತು. ಇನ್ನೋವಾ ಕಾರಿನ ಸೀಟುಗಳನ್ನು ಆಲ್ಟರ್ ಮಾಡಿಕೊಳ್ಳಲಾಗಿತ್ತು.

ಆದ್ದರಿಂದ ಚಾಲಕನಿಗೆ ಹಿಂದೆ ಏನು ನಡೆಯುತ್ತಿದೆ ಎಂದು ಗೊತ್ತಾಗಿಲ್ಲ. ಗಾಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಕೊಂಡಿದ್ದರಿಂದ ವಿಜಯಲಕ್ಷ್ಮಿ ಅವರ ಚೀರಾಟ ಯಾರಿಗೂ ಕೇಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

`ಕಾರಿನಲ್ಲಿ ಕೂರಿಸಿಕೊಂಡ ತಕ್ಷಣ ಕಿವಿ ಓಲೆಯನ್ನು ದರ್ಶನ್ ಎಳೆದರು. ಆದ್ದರಿಂದ ನನ್ನ ಕಿವಿ ಕಿತ್ತುಹೋಯಿತು. ಮುಖದ ಮೇಲೆ ಕಚ್ಚಿದ ಅವರು, ಸಿಗರೇಟ್‌ನಿಂದ ಕೈ-ಕಾಲುಗಳ ಮೇಲೆ ಸುಟ್ಟರು. ನನ್ನದೇ ಹೀಲ್ಡ್ ಚಪ್ಪಲಿ ಕಿತ್ತುಕೊಂಡು ತಲೆ, ಮೈ ಮೇಲೆ ಮನಬಂದಂತೆ ಹೊಡೆದರು.
 
ರಿವಾಲ್ವರ್ ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿ, ಸತತವಾಗಿ ಹಲ್ಲೆ ನಡೆಸಿದರು. ನನ್ನ ಹೆಸರಿನಲ್ಲಿರುವ ಎಲ್ಲ ಆಸ್ತಿಯನ್ನು ಅವರ ಹೆಸರಿಗೆ ಬರೆದುಕೊಡುವಂತೆ ಬೆದರಿಕೆ ಹಾಕಿದರು~ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.

10 ವರ್ಷ ಜೈಲು?
 ದರ್ಶನ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 498ಎ (ಹಿಂಸೆ ನೀಡುವುದು), 323 (ಹಲ್ಲೆ ನಡೆಸಿ ಗಾಯಗೊಳಿಸುವುದು), 506ಬಿ (ಕ್ರಿಮಿನಲ್ ಉದ್ದೇಶದ ಕೃತ್ಯ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲ ಆರೋಪಗಳು ಸಾಬೀತಾದರೆ ಕನಿಷ್ಠ ಹತ್ತು ವರ್ಷ ಕಾಲ ಜೈಲು ಶಿಕ್ಷೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT