ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಭಾಷೆ ಬಳಕೆಗೆ ಕಡಿವಾಣ ಹಾಕಿ: ಹಂಪನಾ

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಭಾರತೀಸುತ ವೇದಿಕೆ (ಮಡಿಕೇರಿ): ‘ಕನ್ನಡ  ರಕ್ಷಿಸುವ ಕೆಲಸ ಇಂದಿನ ಜರೂರು. ಕನ್ನಡ ಬಳಸಿ, ಕನ್ನಡ ಉಳಿಸಿ ಎಂಬ ದೊಡ್ಡ ಚಳವಳಿ ನಾಡಿನಾದ್ಯಂತ ವ್ಯಾಪಕವಾಗಿ ಆಗಬೇಕು. ಇದು ಭಾಷೆಯ ಉಳಿವಿಗಾಗಿ ನಡೆಯುವ ಚಳವಳಿ ಆಗಬೇಕು’ ಎಂದು ಹಿರಿಯ ಸಾಹಿತಿ ಡಾ.ಹಂಪ. ನಾಗರಾಜಯ್ಯ ಕರೆ ನೀಡಿದರು.

80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು ‘ಅಹಿಂಸಾತ್ಮಾಕ ಚಳವಳಿ ಆಗಬೇಕು. ಅನಗತ್ಯವಾಗಿ ಇಂಗ್ಲಿಷನ್ನು ಬಳಸುವು­ದನ್ನು ನಿಲ್ಲಿಸಿ, ಕನ್ನಡ ಮಾತುಗಳನ್ನು ಬಳಸಿ. ಕನ್ನಡ ಮನಸುಗಳನ್ನು ಕ್ರಿಯಾಶೀಲವಾಗಿಸುವ ತುರ್ತು ಬಂದಿದೆ’ ಎಂದು ಎಚ್ಚರಿಸಿದರು.


‘ಭಾಷೆ ಬದುಕುವುದು ನಮ್ಮ ಬಾಯಲ್ಲಿ. ನಮ್ಮ ಎದೆಯಲ್ಲಿ ಅದರ ಬೇರುಗಳಿವೆ. ಬನ್ನಿ ಕನ್ನಡಿಗರೆ, ನಾವೆಲ್ಲ ಒಂದಾಗಿ ಒಟ್ಟಾಗಿ ಕನ್ನಡ ಬಳಸೋಣ, ಕನ್ನಡ ಉಳಿಸೋಣ. ನಮ್ಮ ಹೆಜ್ಜೆಗಳು ಸಮಾಧಿಯ ಕಡೆಗೆ ಅಲ್ಲ. ಅದು ಕನ್ನಡದ ಪುನರುಜ್ಜೀವನದತ್ತ ಸಾಗಲಿ. ನಮ್ಮ ನಾಲಿಗೆಗಳಲ್ಲಿ ಕನ್ನಡ ನುಲಿಯಲಿ, ನಲಿಯಲಿ. ನಾವು ಮೊದಲು ಕನ್ನಡಿಗರಾದರೆ ಕನ್ನಡ ಉಳಿಯುತ್ತದೆ’ ಎಂದು ಸಲಹೆ ನೀಡಿದರು.

‘ಕನ್ನಡ ಸಾಯುವ ಭಾಷೆ ಅಲ್ಲ, ಅದು ಚಿರಂಜೀವಿ. ಅನ್ಯಭಾಷೆಗಳ ದಾಳಿಯನ್ನು ಎದುರಿಸಿ ನಿಲ್ಲುವ ಮೃತ್ಯುಂಜಯ ಶಕ್ತಿ ಕನ್ನಡಕ್ಕೆ ಇದೆ. ಹಿಂದೆ ಪ್ರಾಕೃತ, ಸಂಸ್ಕೃತ, ಅರಬ್ಬಿ, ಪಾರಸಿ ಭಾಷೆಗಳ ಪ್ರಭಾವವನ್ನು ದಿಟ್ಟವಾಗಿ ಎದುರಿಸಿ ಜಯಶಾಲಿ ಆಗಿದೆ. ಈಗ ಇಂಗ್ಲಿಷ್ ಭಾಷೆಯ ಸವಾಲನ್ನು ಕನ್ನಡ ಎದುರಿಸಿ ಗೆಲ್ಲಬೇಕಾಗಿದೆ. ಈ ಸವಾಲನ್ನು ಬಗ್ಗು ಬಡಿಯುವುದು ಹೇಗೆ ಎಂಬ ಆತಂಕ ಬೇಡ. ಕನ್ನಡಕ್ಕೆ ಶತ್ರುಗಳು ಹೊರಗಡೆ ಇಲ್ಲ. ನಮಗೆ ನಾವೇ ಹಗೆಗಳಾಗಿದ್ದೇವೆ.

ಕನ್ನಡವನ್ನು ಬಳಸಬೇಡಿ ಎಂದು ಯಾರು ನಮ್ಮ ಬಾಯಿ ಹೊಲಿದಿದ್ದಾರೆ? ಕನ್ನಡಿಗರೇ ಕನ್ನಡವನ್ನು ಬಳಸದೆ ಪರಭಾಷೆ ಉಪಯೋಗಿಸಿದರೆ ಅದಕ್ಕೆ ಹೊಣೆ ಯಾರು? ಕನ್ನಡ ಪದಗಳನ್ನು ಸಾರಾಸಗಟು ಗುಡಿಸಿ ಹಾಕುತ್ತಿದ್ದೇವೆ’ ಎಂದು ಆತಂಕಪಟ್ಟರು.
‘ಕನ್ನಡ  ಉಳಿಸಿಕೊಳ್ಳಲು ಇರುವುದು ಒಂದೇ ದಾರಿ. ನಮ್ಮ ನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ನಾವೇ ಜಾರಿಗೆ ತರಬೇಕು. ಮೊಬೈಲ್ ಸಂಖ್ಯೆಯನ್ನು ನೈನ್ ಫೋರ್ ತ್ರಿ ಸಿಕ್ಸ್... ಎಂದು ಹೇಳದೆ ಒಂಬತ್ತು ನಾಲ್ಕು ಮೂರು ಆರು ಎಂದು ಹೇಳಿದರೆ ಕನ್ನಡ ಅಂಕಿಸಂಖ್ಯೆ ಉಳಿಯುತ್ತದೆ. ಗುಡ್‌ ಮಾರ್ನಿಂಗ್‌, ಗುಡ್‌ ಆಫ್ಟರ್‌ನೂನ್, ಗುಡ್‌ನೈಟ್‌– ಇದನ್ನು ನಲ್‌ಬೆಳಗು, ನಲ್‌ಮಧ್ಯಾಹ್ನ, ನಲ್‌ಸಂಜೆ, ನಲ್‌ರಾತ್ರಿ ಎಂದು ಹೇಳತೊಡಗಿದರೆ ಕನ್ನಡ ಉಳಿಯುತ್ತದೆ’ ಎಂದು ಕಿವಿಮಾತು ಹೇಳಿದರು.

‘ಭಾಷೆಯಲ್ಲಿ ಅಂಧಾಭಿಮಾನ, ಮಡಿವಂತಿಕೆ ಬೇಡ. ನಮ್ಮಲ್ಲಿ ಇಲ್ಲದಿರುವ ವಸ್ತುಗಳು ಬಂದಾಗ, ಸಮಾನ ಶಬ್ದಗಳು ಇರದಿದ್ದಾಗ ಅನ್ಯಭಾಷೆಯ ಶಬ್ದಗಳನ್ನೇ ಬಳಸಿ. ಅವನ್ನು ಕನ್ನಡ ನುಡಿಭಂಡಾರದಲ್ಲಿ ಸೇರಿಸೋಣ. ರೈಲು, ಬಸ್ಸು, ಕಾರು, ಪೊಲೀಸು, ಎಂಜಿನಿಯರ್‌ ಮುಂತಾದ ಶಬ್ದಗಳನ್ನು ಅನಾಮತ್ತಾಗಿ ಬಳಸಿದರೆ ತಪ್ಪಲ್ಲ. ಆರಕ್ಷಕ, ಅಭಿಯಂತರ ಎಂದೆಲ್ಲ ಹೇಳುವುದು ಬೇಕಿಲ್ಲ. ಆದರೆ, ಯಾವ ಭಾಷೆಯನ್ನೂ ದ್ವೇಷಿಸಬೇಕಾಗಿಲ್ಲ. ಯಾರನ್ನೂ ತಳ್ಳಬೇಕಾಗಿಲ್ಲ. ನಾವು ಕನ್ನಡಕ್ಕೆ ಪಟ್ಟ ಕಟ್ಟಿದರೆ ಉಳಿದವರೂ ನಮ್ಮೊಡನೆ ಕೂಡಿಕೊಳ್ಳುತ್ತಾರೆ. ಕನ್ನಡವನ್ನು ಕಟ್ಟುವ, ಸಿಂಗರಿಸುವ ಕೆಲಸವನ್ನು ನಾವೇ ಮಾಡಬೇಕು’ ಎಂದು ವಿವರಿಸಿದರು.

ಗುರು ಸೋಲಿಸಿದ ಶಿಷ್ಯ!
‘1981ರಲ್ಲಿ ಮಡಿಕೇರಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕಿಂತ ಹತ್ತು ಪಟ್ಟು ದೊಡ್ಡದು ಈ ಬಾರಿಯ ಸಮ್ಮೇಳನ. ಹೀಗಾಗಿ ನನ್ನ ಶಿಷ್ಯರಾದ ಪುಂಡಲೀಕ ಹಾಲಂಬಿ ಅವರು ನನ್ನನ್ನು ಸೋಲಿಸಿದ್ದಾರೆ’ ಎಂದು ಹೆಮ್ಮೆಯಿಂದ ಹಂಪನಾ ಹೇಳಿದರು.

‘ಇಂಗ್ಲಿಷ್‌ ಜತೆಗೆ ಯಾವುದೇ ಭಾಷೆಯನ್ನು ಕನ್ನಡೀಕರಣ ಮಾಡಬಹುದು. ಥರ್ಮಾಮೀಟರ್‌ಗೆ ಹಿರಿಯರೊಬ್ಬರು ಜ್ವರದ ಕಡ್ಡಿ ಎಂದಿದ್ದರು. ಹೀಗೆಯೇ ನೇಲ್‌ಕಟರ್‌ಗೆ ಉಗುರುಳಿ ಎಂದಿದ್ದನ್ನು ಕೇಳಿದ್ದೇನೆ. ಆದರೆ, ಐದು ಸಾವಿರ ಕನ್ನಡ ಅಧ್ಯಾಪಕರು ಇರುವ ಈ ನಾಡಿನಲ್ಲಿ ಕನ್ನಡ ಬಳಸದಿದ್ದರೆ ಹೇಗೆ? ಈಗಿನ ವಿದ್ಯಾರ್ಥಿಗಳು – ಭೀಮಾ ಅಂಡ್‌ ಅರ್ಜುನ್ ಸೋ... ಎಂದು ಪರೀಕ್ಷೆಯಲ್ಲಿ ಬರೆಯುವವರು ಇದ್ದಾರೆ. ಈ ಬಗೆಯ ತಪ್ಪನ್ನು ಅಧ್ಯಾಪಕರು ತಿದ್ದಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT