ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ನೀತಿಯಲ್ಲಿ ಬದಲಾವಣೆ ಇಲ್ಲ

Last Updated 15 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದಾಗಿ ಅಲ್ಲಿನ ಅಣು ಸ್ಥಾವರಗಳಿಗೆ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಪರಮಾಣು ನೀತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಮತ್ತು ಹೊಸ ಅಣು ಸ್ಥಾವರ ಸ್ಥಾಪನೆಯನ್ನು ತಡೆಹಿಡಿಯುವುದಿಲ್ಲ ಎಂದಿದೆ.

ಇಂಧನ ಇಲಾಖೆಯ ಉಪ ಕಾರ್ಯದರ್ಶಿ ಡಾನ್ ಪೊನೆಮನ್, ಜಪಾನ್‌ನಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ಜಾಗರುಕತೆಯಿಂದ ಗಮನಿಸುತ್ತಿದ್ದೇವೆ. ಈ ರ್ದುಘಟನೆಯಿಂದ ವಿಚಲಿತರಾಗಿ ಅಮೆರಿಕ ತನ್ನ ಪರಮಾಣು ನೀತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಇಲ್ಲಿರುವ ಅಣು ಸ್ಥಾವರಗಳು ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಈಗ 104 ಅಣು ಸ್ಥಾವರಗಳಿವೆ. ಇವು ಅಮೆರಿಕದ ಇಂಗಾಲ ಮುಕ್ತ ವಿದ್ಯುತ್‌ನ ಒಟ್ಟು ಅಗತ್ಯದಲ್ಲಿ  ಶೇ 70ರಷ್ಟನ್ನು ಪೂರೈಕೆ ಮಾಡುತ್ತವೆ. ಆದಾಗ್ಯೂ ನಾವು ಅಣು ಸ್ಥಾವರಗಳ ಗರಿಷ್ಠ ಸುರಕ್ಷತೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.

‘ಅಮೆರಿಕದಲ್ಲಿರುವ ಅಣು ಸ್ಥಾವರಗಳು ಉನ್ನತ ಗುಣಮಟ್ಟದಲ್ಲಿ ವಿನ್ಯಾಸ ಮಾಡಿದಂತಹವು. ಯಾವುದೇ ರೀತಿಯ ಪ್ರಕೃತಿ ವಿಕೋಪದಿಂದ ಇವುಗಳಿಗೆ ಹಾನಿ ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ’ ಎಂದು ಅಮೆರಿಕದ ಪರಮಾಣು ನಿಯಂತ್ರಣ ಆಯೋಗದ ಅಧ್ಯಕ್ಷ ಜಾರ್ಜ್ ಜಾಕ್‌ಜ್ಕೊ ಹೇಳಿದ್ದಾರೆ.

ಕಾಂಗ್ರೆಸ್ ಕಳವಳ: ಈ ಮಧ್ಯೆ ಭೂಕಂಪ ಮತ್ತು ಸುನಾಮಿಯಿಂದಾಗಿ ಜಪಾನ್‌ನಲ್ಲಿನ ಅಣು ಸ್ಥಾವರಗಳಿಗೆ ಹಾನಿಯಾಗುತ್ತಿರುವುದರಿಂದ ಅಮೆರಿಕದಲ್ಲಿರುವ ಅಣು ಸ್ಥಾವರಗಳ ಸುರಕ್ಷತೆ ಮತ್ತು ಸಂರಕ್ಷಣೆ  ಬಗ್ಗೆ ಅಮೆರಿಕದ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ.

‘ಜಪಾನಿನ ಘಟನಾವಳಿಗಳು ಅಮೆರಿಕದವರಲ್ಲಿ ಅಣು ಸ್ಥಾವರಗಳ ಸುರಕ್ಷತೆ ಬಗ್ಗೆ ಆತಂಕದ ಪ್ರಶ್ನೆಗಳನ್ನು ಹುಟ್ಟಿಹಾಕಿವೆೆ’ ಎಂದು ಕಾಂಗ್ರೆಸ್‌ನ ಇಂಧನ ಮತ್ತು ವಾಣಿಜ್ಯ ಸಮಿತಿಯ ಸದಸ್ಯರೂ ಆದ ಡೆಮಾಕ್ರೇಟ್ ಪಕ್ಷದ ಸದಸ್ಯರೊಬ್ಬರು ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT