ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾತ್ಮನ ಪುರಪ್ರವೇಶ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

2010ರ ಜುಲೈ. ನಿರ್ಮಾಪಕ ಜಯಣ್ಣ ಥೈಲಿಯಿಂದ ಒಂದಿಷ್ಟು ಮುಂಗಡಹಣ ತೆಗೆದು ಪುನೀತ್‌ಗೆ ಒಪ್ಪಿಸಿದರು. ಕಾಲ್‌ಷೀಟ್ ಸಿಕ್ಕಿತು. ಸ್ಟಾರ್ ನಟನ ಡೇಟ್ಸ್ ಸಿಕ್ಕಿದ್ದೇ ಎದುರಲ್ಲಿ ಇದ್ದದ್ದು ನಿರ್ದೇಶಕರು ಯಾರೆಂಬ ಪ್ರಶ್ನೆ. ಎರಡು ತಿಂಗಳು ಚಿಂತನೆ, ಮಂಥನ ನಡೆಯಿತು. ಪುನೀತ್ ಕುಟುಂಬದವರು ಆಗ ಸೂಚಿಸಿದ ಹೆಸರು- ಯೋಗರಾಜ ಭಟ್.

ಜಯಣ್ಣ ತಡಮಾಡದೆ ಭಟ್ಟರಿಗೆ ಫೋನಾಯಿಸಿದರು. ಹೋಟೆಲ್‌ನಲ್ಲಿ ಅರ್ಧ ತಾಸು ಮೀಟಿಂಗ್. `ಇಂಥ ನಟನಿಗೆ ಇಂಥ ಸಿನಿಮಾ~ ಎಂಬ ತೀರ್ಮಾನದ ಬೀಜ ಮೊಳೆತದ್ದು ಆ ಹೋಟೆಲ್‌ನಲ್ಲಿ. ಆಮೇಲೆ ಭಟ್ಟರು ಹಗಲಿಗಿಂತ ರಾತ್ರಿಗಳೇ ಹೆಚ್ಚು ಕೆಲಸ ಮಾಡಿ ಸ್ಕ್ರಿಪ್ಟ್ ಸಿದ್ಧಪಡಿಸಿದರು (ಇದು ಅವರೇ ಹೇಳಿಕೊಳ್ಳುವ ಅವರ ಕಾರ್ಯವೈಖರಿಯ ಶೈಲಿ).

`ಪರಮಾತ್ಮ~ ಶೀರ್ಷಿಕೆ ಕೇಳಿದ್ದೇ ರಾಜ್‌ಕುಮಾರ್ ಕುಟುಂಬದ ಎಲ್ಲರಿಗೂ ಖುಷಿಯೋ ಖುಷಿ. ಸ್ಟಾರ್ ನಟನಿಗೆ ಸ್ಟಾರ್ ನಿರ್ದೇಶಕ ಹಾಗೂ ಎಲ್ಲರಿಗೂ ಒಂದೇ ಸಲಕ್ಕೆ ಇಷ್ಟವಾದ ಶೀರ್ಷಿಕೆ ಸಿಕ್ಕಿದು ಸಂತಸಕ್ಕೆ ಕೊಸರು. ಆಮೇಲೆ ಜಯಣ್ಣ ಜೊತೆಗೆ ಭೋಗಣ್ಣ ಕೂಡ ಹಣ ಹೂಡಿದರು.

ಈಗ `ಪರಮಾತ್ಮ~ ತೆರೆಗೆ ಬಂದದ್ದಾಗಿದೆ. ಬರುವ ಮೊದಲೇ ಅದರದ್ದು ಭರ್ಜರಿ ವಹಿವಾಟು. ಜಯಣ್ಣ ಹೇಳುವಂತೆ ಸುವರ್ಣ ವಾಹಿನಿಗೆ ಮೂರೂವರೆ ಕೋಟಿ ರೂಪಾಯಿಗೆ ಚಿತ್ರದ ಸ್ಯಾಟಲೈಟ್ ಹಕ್ಕು ಮಾರಾಟವಾಗಿದೆ. ಆಡಿಯೋ ಹಕ್ಕಿಗೆಂದೇ ಅಶ್ವಿನಿ ಆಡಿಯೋದವರು 77 ಲಕ್ಷ ನೀಡಿದ್ದು, ಹಾಡುಗಳು ಭರ್ಜರಿ ಹಿಟ್ ಆಗಿವೆ. ಒಂದು ಹಾಡಿಗೆ ಪುನೀತ್ ಹಾಕಿರುವ ಕೆಲವು ಸ್ಟೆಪ್ಪುಗಳನ್ನು ಕಂಡೇ ಕೆಲವರು ರೋಮಾಂಚನ ಪಡುತ್ತಿರುವುದನ್ನು ಕಂಡು ಜಯಣ್ಣ ಮೂಕವಿಸ್ಮಿತರಾಗಿದ್ದಾರೆ. ಆದರೆ, ಅವರು ಚಿತ್ರಕ್ಕೆ ಆಗಿರುವ ಖರ್ಚನ್ನು ಹೇಳಲು ಹಾಗೂ ಚಿತ್ರದ ಎರಡನೇ ಅರ್ಧದಲ್ಲಿ ಇರುವ ಊಹಿಸಲಾಗದಂಥ ಕಥಾನಕವನ್ನು ಹಂಚಿಕೊಳ್ಳಲು ಸಿದ್ಧರಿಲ್ಲ.

ಯೋಗರಾಜ ಭಟ್ಟರು ಹಾಡುಗಳಲ್ಲೇ ಖಾರ ಮಸಾಲೆ ಅರೆದಿದ್ದು, ಹರಿಕೃಷ್ಣ ಅಳವಡಿಸಿರುವ ಸಂಗೀತ ಯುವಜನತೆಯ ಮನಸೂರೆಗೊಂಡಿದೆ. ಜಯಣ್ಣ ಇನ್ನೂ ಪೂರ್ತಿ ಚಿತ್ರವನ್ನು ನೋಡಿಲ್ಲ. ಅಲ್ಲಲ್ಲಿ ಬಿಡಿಬಿಡಿಯಾಗಿ ನೋಡಿರುವುದಷ್ಟೇ. ಚಿತ್ರೀಕರಣ ನಡೆಯುವಾಗ ಮಾತ್ರ ಅವರು ತಂಡದ ಜೊತೆಯಲ್ಲೇ ಇರುತ್ತಿದ್ದರು. ಆಗಲೇ ಅವರಿಗೆ ಚಿತ್ರ ಗೆದ್ದೇಗೆಲ್ಲುತ್ತದೆಂದು ಅನಿಸಿತಂತೆ.

ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ತಂತ್ರವನ್ನು ಜಯಣ್ಣ ಒಪ್ಪುವುದಿಲ್ಲ. ಅದಕ್ಕೇ ಅವರು ಹೆಚ್ಚೆಂದರೆ 90 ಚಿತ್ರಮಂದಿರಗಳಲ್ಲಿ ಮಾತ್ರ `ಪರಮಾತ್ಮ~ನನ್ನು ತೆರೆಗೆ ತಂದಿದ್ದಾರೆ. ಸ್ಟಾರ್ ನಟ, ಸ್ಟಾರ್ ನಿರ್ದೇಶಕರ ಚಿತ್ರ ಕನ್ನಡದ ಮಟ್ಟಿಗೆ ಅಪರೂಪ. ಚಿತ್ರದ ಫಲಿತಾಂಶವೇನು ಎಂಬುದನ್ನು ಪ್ರೇಕ್ಷಕ ನಿರ್ಧರಿಸಲು ಇನ್ನು ಕೆಲವು ಗಂಟೆಗಳಷ್ಟೇ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT