ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮೇಶ್ವರ್‌ಗೆ ಸಚಿವ ಸ್ಥಾನ: ಮಠಾಧೀಶರ ಗಡುವು

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಮುಂದಿನ ಲೋಕಸಭೆ ಚುನಾವಣೆಯೊಳಗೆ ಸಂಪುಟದಲ್ಲಿ ಉನ್ನತ ಸ್ಥಾನಮಾನ ನೀಡಬೇಕು. ಇಲ್ಲದಿದ್ದರೆ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನಿಶ್ಚಿತ ಎಂದು ವಿವಿಧ ಮಠಾಧೀಶರು ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದರು.

ಪರಮೇಶ್ವರ್ 62ನೇ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಹೆಗ್ಗೆರೆಯ ಅವರ ನಿವಾಸಕ್ಕೆ ಆಗಮಿಸಿದ 25ಕ್ಕೂ ಹೆಚ್ಚು ಮಠಾಧೀಶರು ಹುಟ್ಟುಹಬ್ಬದ ಶುಭ ಹಾರೈಸಿದರು.

ಮುಂದಿನ ಲೋಕಸಭೆ ಚುನಾವಣೆಯೊಳಗೆ ಉನ್ನತ ಸ್ಥಾನ ನೀಡಬೇಕು ಎಂದು ಮಠಾಧೀಶರು ಗಡುವು ನೀಡಿ ಎಚ್ಚರಿಸಿದರು.
ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ,  ಪರಮೇಶ್ವರ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದು ಜಿಲ್ಲೆಗಾದ ನಷ್ಟ. ಕ್ಷೇತ್ರದಲ್ಲಾದ ಸೋಲನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಗುರಿ ಸಾಧನೆಗೆ ಮುಂದಾಗಬೇಕು. ಇದಕ್ಕಾಗಿ ಪುನರ್ಜೀವ ಪಡೆಯಬೇಕು. ಶ್ರಮಮೂಲ, ನೆಲಮೂಲದಿಂದ ಬೆಳೆದುಬಂದ ಶಕ್ತಿ ಮೂಲ ಸಂಸ್ಕೃತಿಯನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಲಹೆ ಮಾಡಿದರು.

ದಲಿತ ಕುಟುಂಬದಿಂದ ಬಂದ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದು ವಿಷಾದಕರ. ಕೇಂದ್ರ, ರಾಜ್ಯ ಸರ್ಕಾರದ ನ್ಯೂನತೆಗಳನ್ನು ಕೆಳ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತಿವೆ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದೆ ಇದಕ್ಕೆ ನಿದರ್ಶನ ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಲೋಕಸಭೆ ಚುನಾವಣೆಯ ಒಳಗೆ ಉನ್ನತ ಸ್ಥಾನ ನೀಡದಿದ್ದರೆ ಅದು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದರು. ಇದಕ್ಕೆ ದನಿಗೂಡಿಸಿದ ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, 500 ಮಠಾಧೀಶರ ಸಮೇತ ದೆಹಲಿಗೆ ಹೋಗಿ, ಪರಮೇಶ್ವರ್ ಅವರಿಗೆ ಉನ್ನತ ಸ್ಥಾನ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಆಗ್ರಹಿಸಲಾಗುವುದು ಎಂದರು.

ಸೋಲಿನಿಂದ ಧೃತಿಗೆಡಬೇಕಿಲ್ಲ. ಸಮಾಜದ ಯಾವುದೇ ಸಜ್ಜನ ವ್ಯಕ್ತಿಗೂ ಪರಮೇಶ್ವರ್ ಸೋಲು ವಿಷಾದಕರ ಎನಿಸುವಂತಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವಿರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಹೈಕಮಾಂಡ್ ತೀರ್ಮಾನ: `ನಾನು ರಾಜ್ಯದ ಚುಕ್ಕಾಣಿ ಹಿಡಿಯಬೇಕು ಎಂಬುದು ಮಠಾಧೀಶರ ಒತ್ತಾಸೆಯಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು, ಉತ್ತಮ ಆಡಳಿತ ನೀಡುತ್ತಿದ್ದೇವೆ. ಉನ್ನತ ಸ್ಥಾನ ನೀಡುವುದು, ಬಿಡುವುದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವುದೇ ತಮ್ಮ ಮುಂದಿರುವ ತಕ್ಷಣದ ಗುರಿ' ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದರು.

`ಕ್ಷೇತ್ರದಲ್ಲಿ ಆದ ಸೋಲನ್ನು ಅಂದೇ ಮರೆತಿರುವೆ. ಅಧಿಕಾರ, ಆಡಳಿತವನ್ನು ಎಂದಿಗೂ ದುರುಪಯೋಗ ಮಾಡಿಕೊಳ್ಳುವುದಿಲ್ಲ' ಎಂದು ತಿಳಿಸಿದರು.  ಡಿ.ಕೆ.ಶಿವಕುಮಾರ್ ಸಚಿವ ಸ್ಥಾನಕ್ಕೆ ಅರ್ಹರು. ಆದರೆ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ ಎಂದರು.

ಹೊಸದುರ್ಗದ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತಂಗನಹಳ್ಳಿ ಮಠದ ಬಸವಲಿಂಗ ಸ್ವಾಮೀಜಿ, ತಗ್ಗೀಹಳ್ಳಿ ರಾಮಕೃಷ್ಣ ಸ್ವಾಮೀಜಿ, ಗವಿರಾಜೇಂದ್ರ ಮಠದ ಕರಿಬಸವ ಸ್ವಾಮೀಜಿ, ಚಿಕ್ಕತೊಟ್ಲುಕೆರೆ ಅಟವಿ ಸ್ವಾಮೀಜಿ, ಮೌಲ್ವಿಗಳಾದ ಮುಫ್ತಿ ಮೊಹಮ್ಮದ್ ಖುರ್ಬಾನ್ ಅಸಾದಿ, ಷರೀಫ್, ಕ್ರಿಶ್ಚಿಯನ್ ಸಮುದಾಯದ ಫಾದರ್ ಬಾರ್ಥಾಲೋಮ್ಯೂ, ಪಾಸ್ಟರ್ ಪಿಂಟೋ ಸೇರಿದಂತೆ 25ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT