ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರರ ಬದುಕಿನ ಪರೋಪಕಾರಿ ಹಣತೆಗಳು

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

  ವಿಲ್ಲಾರ್ಡ್ ಅಪ್ಪೊಲನ್
2010ರಲ್ಲಿ ಹೈಟಿ ಎಂಬ ಪುಟ್ಟ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಇಡೀ ದೇಶವೇ ಹೈರಾಣಾಗಿ ಹೋಯಿತು. ಈ ಸಮಯದಲ್ಲಿ ಗಾಯಗೊಂಡು ತೀವ್ರ ಅಸ್ವಸ್ಥನಾಗಿದ್ದ ಗಂಡನ ಎದುರೇ ಪತ್ನಿ ವಿಲ್ಲಾರ್ಡ್ ಅಪ್ಪೊಲನ್ ಅತ್ಯಾಚಾರಕ್ಕೆ ಒಳಗಾದರು. ಪತಿ ವಿಲ್ಲಾರ್ಡ್‌ಳ ರಕ್ಷಣೆಗೆ ಮುಂದಾದಾಗ ಕಾಮುಕರು ಆತನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದರು.

ಬದುಕುಳಿದಿದ್ದ ಮಗಳನ್ನು ಸರ್ಕಾರದ ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿದರು. ಅಲ್ಲಿಯೂ ವಿಲ್ಲಾರ್ಡ್ ಮಗಳು ಅತ್ಯಾಚಾರಕ್ಕೆ ಬಲಿಯಾದಳು. ಬದುಕುವ ಆಸೆಯನ್ನೇ ಕಳೆದುಕೊಂಡ ವಿಲ್ಲಾರ್ಡ್ ಆತ್ಮಹತ್ಯೆಗೆ ಯತ್ನಿಸಿದರು. ಅದೃಷ್ಟವಶಾತ್ ಅವರು ಬದುಕುಳಿದರು. ಮನೆ ಮಠ ಕಳೆದುಕೊಂಡು ಬೀದಿಯಲ್ಲಿ ಬದುಕುತ್ತಿದ್ದ ಸಾವಿರಾರು ಮಹಿಳೆಯರ ಮೇಲಿನ ಅತ್ಯಾಚಾರವನ್ನು ಕಣ್ಣಾರೆ ಕಂಡು ಮತ್ತಷ್ಟು ಕುಗ್ಗಿ ಹೋದರು.

ಈ ಹಂತದಲ್ಲಿ ಅವರ ಬದುಕಿಗೆ ತಿರುವು ನೀಡಿದ್ದು ‘ಮದರ್ ತೆರೆಸಾ’ ಅವರ ಜೀವನ ಚರಿತ್ರೆ. ಅವರ ಪುಸ್ತಕ ಓದಿ ಒಂದೆರಡು ವಾರಗಳಲ್ಲೇ ವಿಲ್ಲಾರ್ಡ್ ‘ಕೊಫಾವಿವ್’ ಎಂಬ ಮಹಿಳಾ ಸಬಲೀಕರಣ ಸಂಸ್ಥೆ ಹುಟ್ಟು ಹಾಕಿದರು. ತಂಡಗಳನ್ನು ರಚಿಸಿಕೊಂಡು ಭೂಕಂಪ ಪೀಡಿತ ಸ್ಥಳಗಳಲ್ಲಿ ಪ್ರಾಣಿಗಳಂತೆ ಜೀವಿಸುತ್ತಿದ್ದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಹಿಳೆಯರು  ಹಾಗೂ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಿದರು.

ಕೆಲ ತಿಂಗಳುಗಳ ಬಳಿಕ ಸರ್ಕಾರದ ನೆರವಿನೊಂದಿಗೆ ನಿರಾಶ್ರಿತರಿಗೆ ವಸತಿ ಮತ್ತು ಉದ್ಯೋಗದ ವ್ಯವಸ್ಥೆ ಕಲ್ಪಿಸಿದರು. ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದರು. ಪ್ರಸ್ತುತ ಅನಾಥ ಮಕ್ಕಳಿಗಾಗಿಯೇ ವಿಶೇಷ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ವಿಲ್ಲಾರ್ಡ್ ಅವರ ಈ ಸೇವೆಗೆ ವಿಶ್ವಸಂಸ್ಥೆ 2012ರಲ್ಲಿ ವಿಶ್ವದ ಶ್ರೇಷ್ಠ ಮಹಿಳೆ ಎಂಬ ಬಿರುದು ನೀಡಿ ಗೌರವಿಸಿದೆ.

ಕೀ ರಾ

ಕಾಂಬೋಡಿಯಾದಲ್ಲಿ 70-–80ರ ದಶಕದಲ್ಲಿ ನಡೆದ ಗಲಭೆಯಿಂದಾಗಿ ತಂದೆ ತಾಯಿ ಕಳೆದುಕೊಂಡು ಬೀದಿ ಪಾಲಾಗಿದ್ದ ಕೀ ರಾ ಇಂದು ನೆಲ ಬಾಂಬ್ ಪತ್ತೆ ಹಚ್ಚುವ ವಿಶೇಷ ತಜ್ಞರಾಗಿ ಜನಪ್ರಿಯರಾಗಿದ್ದಾರೆ.

ನೆಲದಲ್ಲಿ ಹುದುಗಿಸಿಟ್ಟಿದ್ದ ಬಾಂಬ್ ಪತ್ತೆ ಹಚ್ಚಲು ಇಂದು ಅತ್ಯಾಧುನಿಕ ಸಾಧನ ಸಲಕರಣೆಗಳು ಲಭ್ಯವಿವೆ. ಆದರೆ ಕೀ ರಾ ಮಾತ್ರ ಚಾಕು, ಒಂದು ಸಣ್ಣ ಕಟ್ಟಿಗೆಯ ತುಂಡಿನಿಂದ ನೆಲಬಾಂಬ್‌ಗಳನ್ನು ನಾಶಪಡಿಸುವ ಪರಿಣಿತಿ ಹೊಂದಿದ್ದಾರೆ.

ದೇಶದಲ್ಲಿ ಉಂಟಾಗಿದ್ದ ರಾಜಕೀಯ ಕ್ಷೋಭೆಯಿಂದ ಕೀ ರಾ ಅನಾಥರಾದರು. ಹೊಟ್ಟೆಪಾಡಿಗಾಗಿ ಹತ್ತನೇ ವಯಸ್ಸಿಗೆ ಖೇಮರ್ ರೋಗ್ ಮಿಲಿಟರಿ ಪಡೆ ಸೇರಬೇಕಾಯಿತು. ಅರಣ್ಯ ಪ್ರದೇಶ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಶತ್ರುಗಳು ಹುದುಗಿಸಿಟ್ಟಿದ್ದ ನೆಲ ಬಾಂಬ್ ಪತ್ತೆ ಹಚ್ಚುವ ದಳಕ್ಕೆ ರಾನನ್ನು ನಿಯೋಜಿಸಲಾಯಿತು.

ನೆಲ ಬಾಂಬ್ ಇರುವ ಬಗ್ಗೆ ಅನುಮಾನ ಬಂದ ಸ್ಥಳಗಳಲ್ಲಿ ರಾನನ್ನು ಮೊದಲು ಕಳುಹಿಸುತ್ತಿದ್ದರು. ರಾ ಬದುಕಿ ಬಂದರೆ ಉಳಿದ ಸೈನಿಕರು ಮುಂದೆ ತೆರಳುತ್ತಿದ್ದರು. ಒಂದಲ್ಲಾ ಎರಡಲ್ಲ ನೂರಾರು ಬಾರಿ ರಾ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ.
90ರ ದಶಕದಲ್ಲಿ ಕಾಂಬೋಡಿಯಾದಲ್ಲಿ ಉಂಟಾಗಿದ್ದ ಅರಾಜಕತೆಯನ್ನು ತಹಬದಿಗೆ ತರಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿತು. ಆಗ ಬಾಂಬ್‌ಗಳನ್ನು ಪತ್ತೆ ಹಚ್ಚಲು ವಿಶ್ವಸಂಸ್ಥೆಯ ವಿಶೇಷ ಸೇನೆ ರಾನನ್ನು ನೇಮಕ ಮಾಡಿಕೊಂಡಿತ್ತು.

38ರ ಆಸುಪಾಸಿನಲ್ಲಿರುವ ರಾ ಇಲ್ಲಿಯವರೆಗೂ ಸುಮಾರು 30 ರಿಂದ 40 ಸಾವಿರ ನೆಲಬಾಂಬ್‌ಗಳನ್ನು ಪತ್ತೆ ಹಚ್ಚಿ ಸಾವಿರಾರು ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ. ಗಲಭೆ ಮತ್ತು ಯುದ್ಧದ ಸಂದರ್ಭದಲ್ಲಿ ತಂದೆ ತಾಯಿ ಕಳೆದುಕೊಂಡು ಅನಾಥರಾಗಿರುವ ನೂರಾರು ಮಕ್ಕಳಿಗೆ ರಾ ಆಶ್ರಯ ನೀಡಿದ್ದಾರೆ. ಇವರ ಸಾಧನೆಗೆ ವಿಶ್ವಸಂಸ್ಥೆ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಪುರಸ್ಕಾರ ನೀಡಿ ಸನ್ಮಾನಿಸಿವೆ.

ಮಾಡೊಂಡೊ


ದಕ್ಷಿಣ ಆಫ್ರಿಕಾದಲ್ಲಿ ಕ್ಲಿಪ್‌ಟೌನ್ ಕೊಳೆಗೇರಿ ಎಂದರೆ ಸಾಕು ಮೂಗು ಮುರಿಯುವವರೇ ಹೆಚ್ಚು. ಇಲ್ಲಿನ ಬಹುತೇಕ ನಿವಾಸಿಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರು. ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಇದನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಆದರೆ ಇಲ್ಲಿನ ಯುವ  ನಿವಾಸಿಯೊಬ್ಬ ಇದನ್ನು ಪುನಶ್ಚೇತನಗೊಳಿಸುವ ಕಾಯಕದಲ್ಲಿ ನಿರತನಾಗಿದ್ದಾನೆ.

ಹೌದು, ಇಂತಹ ಭಗೀರಥ ಯತ್ನಕ್ಕೆ ಮುಂದಡಿ ಇಟ್ಟವರೇ ಮೂವತ್ತರ ಹರೆಯದ ಮಾಡೊಂಡೊ. ಪದವಿ ಓದಿರುವ ಮಾಡೊಂಡೊಗೆ ತನ್ನ ನಿವಾಸಿಗಳು ಅಭಿವೃದ್ಧಿ ಹೊಂದಬೇಕು ಎಂಬ ಅತೀವ ಹಂಬಲ. ಇಲ್ಲಿನ ಮಕ್ಕಳು ಶಿಕ್ಷಣ ಪಡೆದರೆ ಕ್ಲಿಪ್ ಟೌನ್ ಕೊಳೆಗೇರಿ ತನ್ನಷ್ಟಕ್ಕೆ ತಾನೇ ಬದಲಾಗುತ್ತದೆ ಎಂಬ ವಿಶ್ವಾಸ ಹೊಂದಿದ್ದಾರೆ.

ಮೂರ್ನಾಲ್ಕು ವರ್ಷಗಳ ಹಿಂದಷ್ಟೇ ಮಾಡೊಂಡೊ ಕ್ಲಿಪ್‌ಟೌನ್ ಯೂತ್ ಪ್ರೋಗ್ರಾಮ್(ಕೆವೈಪಿ) ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಹತ್ತು ಸಾವಿರ ರೂಪಾಯಿ ದೇಣಿಗೆಯಿಂದ ಆರಂಭವಾದ ಈ ಸಂಸ್ಥೆಯಲ್ಲಿ ಇಂದು ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ಈ ಸಂಸ್ಥೆ ವತಿಯಿಂದ ಸುಮಾರು 40 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಹತ್ತು ಸಾವಿರಕ್ಕೂ ಹೆಚ್ಚು ಯುವಕರಿಗೆ ಸಾಲ ಸೌಲಭ್ಯ ಕಲ್ಪಿಸಿ ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟ ಹೆಗ್ಗಳಿಕೆ  ಕೆವೈಪಿ ಸಂಸ್ಥೆಯದ್ದು. ಯುವಕ ಮಾಡೊಂಡೊನ ಈ ಸೇವೆಗೆ ವಿಶ್ವಸಂಸ್ಥೆ ‘ವಿಶ್ವದ ಭವಿಷ್ಯದ ನಾಯಕ’ ಎಂಬ ಬಿರುದು ನೀಡಿದೆ.

ಇಶ್ರಾತ್ ಜಾನ್


ಕಾಬೂಲ್ ಸುತ್ತ ಮುತ್ತ ಬಂದೂಕಿನ ಸದ್ದು ಮಾತ್ರ ಕೇಳುತ್ತಿಲ್ಲ, ಇಲ್ಲಿ ಪುಟಾಣಿ ಮಕ್ಕಳ ಅಕ್ಷರ ಪಠಣವು ಸದ್ದಿಲ್ಲದೇ ಕೇಳಿ ಬರುತ್ತಿದೆ. ಹೌದು ಕಾಬೂಲ್‌ನ ಹೊರವಲಯದಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಇಶ್ರಾತ್ ಜಾನ್‌ನ ತಾಯಿ ರಜಿಯಾ ಜಾನ್ ಜ್ಯುಬುಲೀ ಶಿಕ್ಷಣ ಸಂಸ್ಥೆಯನ್ನು ತೆರೆದಿದ್ದಾರೆ.

ಇಲ್ಲಿನ ಹತ್ತಾರು ಹಳ್ಳಿಗಳ 345 ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ರಜಿಯಾ ಜಾನ್‌ಗೆ ವಯಸ್ಸಾಗಿರುವುದರಿಂದ ಇದನ್ನು ಇಶ್ರಾತ್ ಜಾನ್ ಮುನ್ನಡೆಸುತ್ತಿದ್ದಾರೆ. ಜ್ಯುಬಿಲೀ ಶಾಲೆ ತಾಲಿಬಾನ್ ಉಗ್ರರ ಹಿಡಿತದಲ್ಲಿರುವ ಪ್ರದೇಶ. ಉಗ್ರರು ಆಗಾಗ್ಗೆ ಬಂದು ಕಿರುಕುಳ ನೀಡುತ್ತಿದ್ದರೂ ಇಶ್ರಾತ್ ತಮ್ಮ ಶಿಕ್ಷಣ ಸೇವೆಯನ್ನು ಮುಂದುವರೆಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಶಾಲೆಯಿಂದ ಇಶ್ರಾತ್ ಜಾನ್ ಅವರನ್ನು ಅಪಹರಿಸಿ ಹತ್ತಾರು ಬಾರಿ ಅತ್ಯಾಚಾರ ಮಾಡಲಾಗಿದೆ. ಶಾಲೆ ಮೇಲೆ ದಾಳಿ ಮಾಡುತ್ತಿದ್ದ ತಾಲಿಬಾನ್ ಉಗ್ರರು ‘ನೀನು ನಮ್ಮಂದಿಗೆ ಬರದಿದ್ದರೆ ಬಾಲಕಿಯರನ್ನು ಹತ್ಯೆ ಮಾಡುತ್ತೇವೆ’ ಎಂದು ಬೆದರಿಸುತ್ತಿದ್ದರು.

ಮಕ್ಕಳನ್ನು ರಕ್ಷಿಸುವ ಸಲುವಾಗಿ ಕಳೆದು ಎರಡು ವರ್ಷಗಳಲ್ಲಿ  ಹಲವು ಸಲ ತಾಲಿಬಾನ್ ಉಗ್ರರ ಅತ್ಯಾಚಾರಕ್ಕೆ ಬಲಿಯಾಗಿದ್ದೇನೆ’ ಎಂದು ಇಶ್ರಾತ್ ನೊಂದು ನುಡಿಯುತ್ತಾರೆ. ಪ್ರಸ್ತುತ, ಶಾಲೆಗೆ ಸರ್ಕಾರದಿಂದ ಭಾರಿ ಭದ್ರತೆ ನೀಡಲಾಗಿದೆ. ಭಾರತ ಸರ್ಕಾರದ ನೆರವಿನಿಂದ 14 ಕೊಠಡಿಗಳಿರುವ ಕಟ್ಟಡವನ್ನು ನಿರ್ಮಿಸಲಾಗಿದೆ.

ಇಶ್ರಾತ್ ಜಾನ್ ದೂರದ ಗುಡ್ಡಗಾಡು ಪ್ರದೇಶಗಳಲ್ಲಿನ ಹೆಣ್ಣು ಮಕ್ಕಳನ್ನು ಕರೆತಂದು ಶಿಕ್ಷಣ ನೀಡುವ ಕಾಯಕವನ್ನು ಮುಂದುವರೆಸಿದ್ದಾರೆ.  ಉಗ್ರರ ಉಪಟಳ ಮತ್ತು ಅತ್ಯಾಚಾರದಂತಹ ಹೇಯ ಕೃತ್ಯಗಳನ್ನು ಸಹಿಸಿಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ನನಗೆ ಹೆಮ್ಮೆಯ ಸಂಗತಿ ಎನ್ನುತ್ತಾರೆ ಇಶ್ರಾತ್ ತಾಯಿ ರಜಿಯಾ.

ಇಲ್ಲಿನ ಹೆಣ್ಣು ಮಕ್ಕಳು ಶಿಕ್ಷಿತರಾಗಬೇಕು, ಮಹಿಳೆಯರು  ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದೇ ನನ್ನ ಆಶಯ. ಇದಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧಳಿದ್ದೇನೆ ಎಂದು ಇಶ್ರಾತ್ ಭಾವುಕರಾಗಿ ನುಡಿಯುತ್ತಾರೆ. ಇವರ ಸಾಧನೆಯನ್ನು ಮೆಚ್ಚಿ ಅಂತರರಾಷ್ಟ್ರೀಯ ಮಹಿಳಾ ಸಂಘಟನೆಗಳು ಸನ್ಮಾನಿಸಿವೆ.
– ಪೃಥ್ವಿರಾಜ್‌ ಎಂ.ಎಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT