ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪರಲೋಕ'ದ ನಿಲ್ದಾಣ!

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

`ಸ್ಪೇಸ್ ಸ್ಟೇಷನ್' ಎಂದರೆ `ಅಂತರಿಕ್ಷ ನಿಲ್ದಾಣ' ಎಂದರ್ಥ. ಅದೊಂದು ಕೃತಕ ಉಪಗ್ರಹ. ಆದರೆ ಬೇರೆ ಕೃತಕ ಉಪಗ್ರಹಗಳಂತಲ್ಲದೆ ಸ್ಪೇಸ್‌ಸ್ಟೇಷನ್ `ಮಾನವ ಸಹಿತ ಕೃತಕ ಉಪಗ್ರಹ'. ಅದೇ ಇದರ ಮೊದಲ ವಿಶೇಷ.

ಅಂತರಿಕ್ಷದಿಂದ ಭೂಮಿ- ಬಾಹ್ಯಾಕಾಶ ಅಭ್ಯಸಿಸಲು ಮತ್ತು ಇನ್ನೂ ಹಲವು ಅನುಕೂಲಗಳಿಗೆಂದು ಕಳುಹಲಾಗುತ್ತಿರುವ ವ್ಯೋಮ ಸಾಧನಗಳದು ಪ್ರಧಾನವಾಗಿ ಎರಡು ಬಗೆ: ವ್ಯೋಮ ನೌಕೆಗಳು ಮತ್ತು ಕೃತಕ ಉಪಗ್ರಹಗಳು.

ಕೃತಕ ಉಪಗ್ರಹಗಳು (ಚಿತ್ರ 1, 3, 4) ಭೂ ಗುರುತ್ವದಲ್ಲೇ ಉಳಿದು, ಅಂತರಿಕ್ಷದಲ್ಲಿ ಪೂರ್ವ ನಿಶ್ಚಿತ ಪಥಗಳಲ್ಲಿ ಭೂಮಿಯನ್ನು ಸುತ್ತುತ್ತ, ನಿಯೋಜಿತ ವೈಜ್ಞಾನಿಕ ಕಾರ್ಯಗಳನ್ನು ನಡೆಸುತ್ತವೆ- ಟೆಲಿಸಂಪರ್ಕ, ದೂರಸಂವೇದನೆ, ಹವಾ ಅಧ್ಯಯನ, ಬಾಹ್ಯಾಕಾಶ ವೀಕ್ಷಣೆ, ಬೇಹುಗಾರಿಕೆ...

ಹೀಗೆಲ್ಲ ವಿವಿಧ ರಾಷ್ಟ್ರಗಳ ಇಂತಹ ನೂರಾರು ಕೃತಕ ಉಪಗ್ರಹಗಳು
ಭೂಮಿಯನ್ನು ಪರಿಭ್ರಮಿಸುತ್ತಿವೆ (ಚಿತ್ರ-2). ಇವಕ್ಕಿಂತ ಭಿನ್ನವಾಗಿ ವ್ಯೋಮನೌಕೆಗಳು ಭೂ ಗುರುತ್ವವನ್ನು ದಾಟಿ ಇತರ ಗ್ರಹ ಉಪಗ್ರಹ ಕ್ಷುದ್ರಗ್ರಹ ಧೂಮಕೇತು ಮುಂತಾದ ಕಾಯಗಳ ಬಳಿ ಸಾಗಿ (ಚಿತ್ರ 5, 6, 7) ಅವುಗಳ ಆಪ್ತ ಅಧ್ಯಯನಕ್ಕೆ ನೆರವು ನೀಡುತ್ತವೆ.

ಸ್ಪೇಸ್‌ಸ್ಟೇಷನ್‌ಗಳೂ ಕೂಡ ಕೃತಕ ಉಪಗ್ರಹಗಳೇ ಆದರೂ ಅವುಗಳ ಉದ್ದೇಶ ಬಹಳ ಭಿನ್ನ. ಪ್ರಮುಖವಾಗಿ ಸ್ಟೇಸ್‌ಸ್ಟೇಷನ್ ಅಂತರಿಕ್ಷದ ವಿಶೇಷ ಪ್ರಯೋಗಾಲಯ. ಜತೆಗೆ ವಿಜ್ಞಾನಿಗಳ ವಸತಿ ಕೇಂದ್ರ ಕೂಡ. ಹಾಗಾದ್ದರಿಂದ ಅದರ ಆಕಾರ, ವಿಸ್ತಾರ, ಗಾತ್ರ, ಸ್ವರೂಪ ಎಲ್ಲವೂ ಬೇರೆಲ್ಲ ಕೃತಕ ಉಪಗ್ರಹಗಳಿಗಿಂತ ವಿಭಿನ್ನ (ಚಿತ್ರ 9, 12). ಸಹಜವಾಗಿಯೇ ಸ್ಪೇಸ್‌ಸ್ಟೇಷನ್‌ಗಳ ನಿರ್ಮಾಣದ, ನಿರ್ವಹಣೆಯ ವೆಚ್ಚಗಳೂ ಕೂಡ ಕಲ್ಪನಾತೀತ; ಇತರ ಕೃತಕ ಉಪಗ್ರಹಗಳಿಗಿಂತ ವಿಪರೀತ.

ಆದ್ದರಿಂದಲೇ ಜಗದ ಯಾವ ರಾಷ್ಟ್ರವೂ ಏಕಾಂಗಿಯಾಗಿ ತನ್ನದೇ ಸ್ಪೇಸ್‌ಸ್ಟೇಷನ್ ಅನ್ನು ನಿರ್ಮಿಸಿ ನಿರ್ವಹಿಸುವುದು ಸಾಧ್ಯವೇ ಇಲ್ಲ. ಪ್ರಸ್ತುತ ಭೂಮಿಯ ಸುತ್ತ ಒಂದೇ ಒಂದು ಸ್ಪೇಸ್‌ಸ್ಟೇಷನ್ ಕ್ರಿಯಾಶೀಲವಾಗಿದೆ. `ಇಂಟರ್‌ನ್ಯಾಶನಲ್ ಸ್ಪೇಸ್‌ಸ್ಟೇಷನ್ (ಐ.ಎಸ್.ಎಸ್. ಚಿತ್ರ-12) ಎಂಬ ಈ ಅದ್ಭುತ ನಿರ್ಮಾಣಕ್ಕೆ ವ್ಯಯವಾಗಿರುವ ಹಣ ಸುಮಾರು ಇಪ್ಪತ್ತೈದು ಸಾವಿರ ಕೋಟಿ ರೂಪಾಯಿ! ಅದರ ನಿರ್ವಹಣಾ ವೆಚ್ಚ ವರ್ಷಕ್ಕೆ ಹನ್ನೆರಡು ಸಾವಿರ ಕೋಟಿ ರೂಪಾಯಿ! ಅವೆುರಿಕ, ರಷ್ಯಾ, ಕೆನಡ, ಬ್ರೆಜಿಲ್, ಜಪಾನ್ ಮತ್ತು ಹನ್ನೊಂದು ಯೂರೋಪಿಯನ್ ದೇಶಗಳು ಹೀಗೆ ಒಟ್ಟು ಹದಿನಾರು ರಾಷ್ಟ್ರಗಳು ಈ ಅಂತರಿಕ್ಷ ನಿಲ್ದಾಣದ ನಿರ್ಮಾಣ-ನಿರ್ವಹಣೆಯ ಪಾಲುದಾರರಾಗಿವೆ.

ಸ್ಪೇಸ್‌ಸ್ಟೇಷನ್‌ಗಳಿಗೆ ಸುದೀರ್ಘ ಇತಿಹಾಸ ಇದೆ. ಆರಂಭಿಕ ನಿಲ್ದಾಣಗಳದೆಲ್ಲ ಚಿಕ್ಕಗಾತ್ರ, ಕಡಿಮೆ ವೆಚ್ಚ, ಸೀಮಿತ ಕಾರ್ಯ ಸಾಮರ್ಥ್ಯ. ಹಿಂದಿನ `ಸೋವಿಯತ್ ಒಕ್ಕೂಟ'ದ ಏಳು `ಸಲ್ಯೂಟ್'ಗಳು ಮತ್ತು ಅಮೆರಿಕದ ನಾಲ್ಕು `ಸ್ಕೈಲ್ಯಾಬ್'ಗಳು (ಚಿತ್ರ-8) ಭೂಮಿಯನ್ನು ಸುತ್ತಿವೆ. 1986 ರಿಂದ 2001 ರವರೆಗೆ ಹದಿನೈದು ವರ್ಷಕಾಲ ಕ್ರಿಯಾಶೀಲವಾಗಿದ್ದ `ಮಿರ್' (ಚಿತ್ರ-9) ಬೃಹದ್ಗಾತ್ರದ, ಬಹುರಾಷ್ಟ್ರ ಸಹಯೋಗದ, ಬಹುವಿಧ ಸಾಮರ್ಥ್ಯಗಳ ಸ್ಪೇಸ್‌ಸ್ಟೇಷನ್ ಆಗಿತ್ತು.

ಸದ್ಯದ `ಇಂಟರ್‌ನ್ಯಾಶನಲ್ ಸ್ಪೇಸ್‌ಸ್ಟೇಷನ್' ಮೊದಲ ಮೂಲ ಭಾಗ `ಕೋರ್ ಮಾಡ್ಯೂಲ್' ಕಕ್ಷೆ ತಲುಪಿದ್ದು 1998ರಲ್ಲಿ. ಆಗಿನಿಂದ ಹಂತ ಹಂತವಾಗಿ ಅಂತರಿಕ್ಷದಲ್ಲೇ ಜೋಡಣೆಗೊಂಡು (ಚಿತ್ರ-10) ವಿಸ್ತರಣೆಗೊಂಡು ಪೂರ್ಣಗೊಂಡಿರುವ `ಐಎಸ್‌ಎಸ್'ನ ಪ್ರಮುಖ ಅಂಶಗಳು:

* ಉದ್ದ 356 ಅಡಿ, ಅಗಲ 192 ಅಡಿ; ಎತ್ತರ 100 ಅಡಿ. ಅದರ ಇಡೀ ತೂಕ 453 ಟನ್.

* ಇಲ್ಲಿ ಐದು ಪ್ರಯೋಗಶಾಲೆಗಳಿವೆ. ಜೊತೆಗೆ ಆರು ಅಥವಾ ಏಳು ಜನ ವಿಜ್ಞಾನಿ-ತಂತ್ರಜ್ಞರೂ ಒಟ್ಟಾಗಿ ವಾಸಿಸಲು ಸಾಧ್ಯವಾಗುವಂತಹ ವಸತಿ ವ್ಯವಸ್ಥೆಯೂ ಇದೆ. ಇದರ ಒಟ್ಟು ಸ್ಥಳಾವಕಾಶ 34700 ಘನ ಅಡಿ! ಎಂದರೆ ಸುಮಾರು ಐದು ಬೆಡ್‌ರೂಂಗಳಿರುವ ಒಂದು ಮನೆಯಷ್ಟು!

* ಇದರ ಎಲ್ಲ ವೈಜ್ಞಾನಿಕ ಮತ್ತು ವಸತಿ ವ್ಯವಸ್ಥೆಗಳಿಗೆ ನಿರಂತರ ಎಂಬತ್ತು ಕಿಲೋವಾಟ್ ವಿದ್ಯುತ್‌ಶಕ್ತಿ ಬೇಕು. ಇಷ್ಟನ್ನೂ ಸೌರಶಕ್ತಿಯಿಂದಲೇ ಉತ್ಪಾದಿಸಲು ಜೋಡಿಸಿರುವ ಸೌರವಿದ್ಯುತ್ಕೋಶ ಫಲಕಗಳ (ಚಿತ್ರ-12 ರಲ್ಲಿ ಗಮನಿಸಿ) ಒಟ್ಟೂ ವಿಸ್ತಾರ 32,578 ಚದರ ಅಡಿ!

* `ವ್ಯೋಮ ನಿಲ್ದಾಣ' ಎಂಬ ಹೆಸರಿದ್ದರೂ ಸ್ಪೇಸ್‌ಸ್ಟೇಷನ್ ಎಲ್ಲೂ ನಿಲ್ಲುವಂತಿಲ್ಲ. ಭೂನೆಲದಿಂದ 390 ಕಿ.ಮೀ. ಎತ್ತರದ ಪಥದಲ್ಲಿರುವ ಇದು ಭೂಮಿಯನ್ನು ದಿನಕ್ಕೆ ಹದಿನೈದು ಬಾರಿ ಸುತ್ತುತ್ತಿದೆ (ನಿರಭ್ರ ಇರುಳಿನಾಗಸದಲ್ಲಿ `ಓಡುತ್ತಿರುವ ನಕ್ಷತ್ರದಂತೆ' ಐಎಸ್‌ಎಸ್ ಬರಿಗಣ್ಣಿಗೇ ಗೋಚರಿಸುತ್ತದೆ!)

* ಇಲ್ಲಿನ ವಿಜ್ಞಾನಿಗಳು ಕೆಲ ತಿಂಗಳುಗಳಿಗೊಮ್ಮೆ ಬದಲಾಗುವಾಗ ಒಬ್ಬ `ಪ್ರವಾಸಿ'ಯೂ ಹೋಗಿ ಒಂದೆರಡು ದಿನ ಇದ್ದು ಬರಲು ಅವಕಾಶವಿದೆ. ಆದರೆ ಅಂಥ ಅಂತರಿಕ್ಷ ವಾಸ-ಪ್ರವಾಸದ ಟಿಕೆಟ್ ಶುಲ್ಕವೂ ಆಕಾಶದೆತ್ತರ; ಶತಕೋಟಿ ವೀರರಿಗಷ್ಟೇ ಅದು ಸಾಧ್ಯ. ಈವರೆಗೆ ಏಳು ಜನ ಈ ಪ್ರವಾಸ ಮಾಡಿ ಬಂದಿದ್ದಾರೆ.

* ಇದಕ್ಕೆ ಅವಶ್ಯವಾಗುವ ಎಲ್ಲ ಸಲಕರಣೆಗಳನ್ನು ತಲುಪಿಸುವ, ವಿಜ್ಞಾನಿ ತಂಡಗಳನ್ನು ಬದಲಿಸುವ ಕಾರ್ಯಕ್ರಮಗಳನ್ನು ಅಮೆರಿಕದ ಸ್ಪೇಸ್ ಶಟಲ್‌ಗಳು ಮತ್ತು ಈಗ ರಷ್ಯಾದ `ಸೋಯುಜ್'ಗಳು ನಿರ್ವಹಿಸುತ್ತ ಬಂದಿವೆ.
ಸ್ಪೇಸ್‌ಸ್ಟೇಷನ್‌ನಲ್ಲಿ ನಡೆಯುತ್ತಿರುವ ವೈಜ್ಞಾನಿಕ ಕೆಲಸಗಳು ಏನೇನು?

* ಅಂತರಿಕ್ಷದಲ್ಲಿನ ಪರಿಸರ ಸರ್ವ ವಿಧಗಳಲ್ಲೂ ಭೂ ಪರಿಸರಕ್ಕಿಂತ ವಿಭಿನ್ನ. ಹಾಗಾಗಿ ಭೂಮಿಯಲ್ಲಿ ಸಾಧ್ಯವೇ ಆಗದ, ಆದರೆ ತುಂಬ ಮಹತ್ವದ್ದಾದ ಹಲವಾರು ಪ್ರಾಯೋಗಿಕ ಅಧ್ಯಯನಗಳು ವ್ಯೋಮ ನಿಲ್ದಾಣದಲ್ಲಿ ಸಾಧ್ಯ. ಜೀವವಿಜ್ಞಾನ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳ ಹಲವಾರು ಪ್ರಯೋಗಗಳು ಅಲ್ಲಿ ನಡೆದಿವೆ.

* ದೀರ್ಘಕಾಲದ ಅಂತರಿಕ್ಷ ಯಾನ, ಅಂತರಿಕ್ಷ ವಾಸಗಳಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳ ಅಧ್ಯಯನ, ಬಾಹ್ಯಾಕಾಶದಲ್ಲೇ ವ್ಯೋಮನೌಕೆಗಳ ಜೋಡಣೆ-ಅಲ್ಲಿಂದಲೇ ಉಡಾವಣೆ ಇತ್ಯಾದಿ ಯೋಜನೆಗಳ ಸಾಧ್ಯತೆಯ, ಅದರ ಅನುಕೂಲ ಅನಾನುಕೂಲಗಳ ಅಧ್ಯಯನ ಇಂತಹವೂ ಐಎಸ್‌ಎಸ್‌ನಲ್ಲಿ ನಡೆದಿವೆ (ಚಿತ್ರ-11). ಅಂತರಿಕ್ಷದಲ್ಲೇ ಐಷಾರಾಮೀ ಪ್ರವಾಸಿ (ಚಿತ್ರ-13) ನೆಲೆಗಳನ್ನು ಸ್ಥಾಪಿಸಬಹುದಾದ ಭಾರೀ ಲಾಭದಾಯಕ ವಾಣಿಜ್ಯ ಸಾಧ್ಯತೆಗಳಿಗೂ ಸ್ಪೇಸ್‌ಸ್ಟೇಷನ್ ಸಂಶೋಧನಾ ಕೇಂದ್ರವಾಗಿದೆ.

ಒಂದು ಬ್ರೇಕಿಂಗ್ ನ್ಯೂಸ್: `ಇದೇ ತಿಂಗಳಲ್ಲಿ (ಆಗಸ್ಟ್) ಒಂದು ರೋಬೋಟ್ ವ್ಯೋಮಯಾತ್ರಿ ಐಎಸ್‌ಎಸ್ ಅನ್ನು ತಲುಪಲಿದೆ. 34 ಸೆಂ.ಮೀ. ಎತ್ತರದ, ಒಂದು ಕಿಲೋ ತೂಕದ ಈ ಸ್ವಯಂಚಾಲಿತ ಮಾನವ ರೂಪಿ ಸಾಂತ್ವನದ, ಮನರಂಜನೆಯ ಸಂಭಾಷಣೆಗಳನ್ನು ನಡೆಸುತ್ತ ನಿಲ್ದಾಣದ ಮಾನವರ ಸಂಗಾತಿಯಾಗಲಿದೆ. ಈ ಜಪಾನಿ ರೋಬೋಟ್ ಹೆಸರು `ಕಿರೋಬೋ'.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT