ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರವಾನಗಿ ಇಲ್ಲದ ಮರಳು ಲಾರಿಗೆ ತಡೆಯೇ ಇಲ್ಲ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೈಕೋರ್ಟ್ ಸೂಚನೆಗೂ ಕವಡೆ ಕಿಮ್ಮತ್ತು ನೀಡದ ಕೋಲಾರ ಜಿಲ್ಲಾಡಳಿತ

ಕೋಲಾರ: ಮರಳು ಅಕ್ರಮ ಸಾಗಣೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್, ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್, ಮುಳಬಾಗಲು ಶಾಸಕ ಅಮರೇಶ್ ಸೇರಿದಂತೆ ಜಿಲ್ಲಾಡಳಿತದ 20 ಮಂದಿಗೆ ನೋಟಿಸ್ ಜಾರಿ ಮಾಡಿದ್ದರೂ ಮರಳು ಸಾಗಣೆ ಮಾತ್ರ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.

ಮರಳು ಅಕ್ರಮ ಸಾಗಣೆ ತಡೆಯಲು ತಪಾಸಣೆ ಕೇಂದ್ರ ಸ್ಥಾಪಿಸಿದ್ದರೂ ಅದರ ಅಂಕೆಯೇ ಇಲ್ಲದಂತೆ ಲಾರಿಗಳು ಸಂಚರಿಸುತ್ತಿರುವುದು ಜಿಲ್ಲೆಯ ವಿಶೇಷ. ಮರಳು ಸಾಗಿಸುವ ಲಾರಿಗಳ ಮೇಲೆ ಯಾವ ಹೊದಿಕೆಯೂ ಇರುವುದಿಲ್ಲ. ಅವುಗಳಿಗೆ ಸಮಯದ ಮಿತಿಯೂ ಇಲ್ಲ.

ಜಿಲ್ಲೆಯ ಮುಳಬಾಗಲು ಕಡೆಯಿಂದ ಬೆಂಗಳೂರು ಕಡೆಗೆ ನೂರಾರು ಲಾರಿಗಳಲ್ಲಿ ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದರೂ ವಾಹನಗಳ ಸಂಖ್ಯೆ ಬರೆದುಕೊಳ್ಳುವುದು ಬಿಟ್ಟರೆ ಅದನ್ನು ತಡೆಯುವುದಾಗಲಿ  ಪರವಾನಗಿ ಪರಿಶೀಲಿಸುವುದಾಗಲಿ  ಸಮರ್ಪಕವಾಗಿ ನಡೆಯುತ್ತಿಲ್ಲ.
 
ಇದಕ್ಕೆ ಅತಿ ಹೆಚ್ಚಿನ ಮರಳು ಗಣಿಗಾರಿಕೆ ಮತ್ತು ಸಾಗಣೆಗೆ ಕುಖ್ಯಾತವಾಗಿರುವ ಮುಳಬಾಗಲು ಹೊರವಲಯದ ನರಸಿಂಹತೀರ್ಥದ ಮುಂಭಾಗದಲ್ಲಿ ಲೋಕೋಪಯೋಗಿ ಇಲಾಖೆಯು ಸ್ಥಾಪಿಸಿರುವ ಮರಳು ಸಾಗಣೆ ತನಿಖಾ ಠಾಣೆ ನಿದರ್ಶನವಾಗಿದೆ.ಈ ಠಾಣೆಯಲ್ಲಿ ದಿನಗೂಲಿ ಆಧಾರದಲ್ಲಿ ಎರಡು ಪಾಳಿಯಲ್ಲಿ ಕೆಲಸ ಮಾಡಲು ಇಬ್ಬರನ್ನು ನಿಯೋಜಿಸಲಾಗಿದೆ.

ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಒಬ್ಬರು, ರಾತ್ರಿ ಎಂಟರಿಂದ ಬೆಳಿಗ್ಗೆ 8 ಗಂಟೆವರೆಗೆ ಮತ್ತೊಬ್ಬರು ಕೆಲಸ ಮಾಡುತ್ತಾರೆ. ಯಾವುದೇ ಸಮಯದಲ್ಲೂ ಅಕ್ರಮ ಮರಳು ಸಾಗಣೆ ಲಾರಿ ತಡೆಯಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಇದು ಅಕ್ಷರಶಃ ವಿಫಲವಾಗಿದೆ. ಏಕೆಂದರೆ ಭಾನುವಾರ ಬೆಳಿಗ್ಗೆ 8ರ ಸುಮಾರಿಗೆ `ಪ್ರಜಾವಾಣಿ~ ಪ್ರತಿನಿಧಿ ಈ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲಸಗಾರ ಯುವಕ ಗಾಢ ನಿದ್ರೆಯಲ್ಲಿದ್ದ ! ಅದೇ ವೇಳೆಯಲ್ಲಿ ಹಲವು ಲಾರಿಗಳು ಕೋಲಾರದ ಕಡೆಗೆ ಹಾದು ಹೋಗಿದ್ದವು.

ಮರಳು ಸಾಗಾಣಿಕೆ  ತನಿಖೆ ಮಾಡಲೆಂದೇ ಇರುವ ಈ ಠಾಣೆ ಸಿಬ್ಬಂದಿ ಕೆಲಸ ಮಾಡುವ ಬಗೆಯೂ ಜಿಲ್ಲೆಯ ಆಡಳಿತ ವ್ಯವಸ್ಥೆ ಮತ್ತು ಮರಳು ಸಾಗಣೆ ತಡೆಗೆ ಇರುವ ಜಿಲ್ಲಾ ಸಮಿತಿಯ ಕಾರ್ಯವೈಖರಿಗೂ ಕನ್ನಡಿ ಹಿಡಿಯುತ್ತದೆ.

ತನ್ನ ಕೆಲಸದ ಬಗ್ಗೆ ಸಿಬ್ಬಂದಿ ವಿನೋದ ಹೇಳಿದ್ದು ಹೀಗೆ- `ಠಾಣೆ ಮುಂದೆ ಹಾದು ಹೋಗುವ ಮರಳು ಲಾರಿಗಳ ನೋಂದಣಿ ಸಂಖ್ಯೆಯನ್ನು ನಾವು ನೋಟ್ ಪುಸ್ತಕವೊಂದರಲ್ಲಿ ಬರೆದುಕೊಳ್ಳುತ್ತೇವೆ. ಪರವಾನಗಿ ಇಲ್ಲದ ಯಾವ ಲಾರಿಯೂ ಈ ಠಾಣೆ ಮುಂದೆ ನಿಲ್ಲುವುದಿಲ್ಲ.
 
ಅವುಗಳನ್ನು ನಾವು ನಿಲ್ಲಿಸುವುದಿಲ್ಲ. ತಪಾಸಣೆಯನ್ನೂ ಮಾಡುವುದಿಲ್ಲ. ಆದರೆ ಪರವಾನಗಿ ಇರುವ ಲಾರಿಗಳು ಠಾಣೆ ಮುಂದೆ ನಿಲ್ಲುತ್ತವೆ. ಅವುಗಳ ಮಾಹಿತಿಯನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ಬರೆದುಕೊಳ್ಳುತ್ತೇವೆ. ಈಗ ಸದ್ಯಕ್ಕೆ ಲೋಕೋಪಯೋಗಿ ಇಲಾಖೆಯು ಮರಳು ತೆಗೆಯುವುದನ್ನು ನಿಲ್ಲಿಸಿದೆ~.  ಸಾಕಷ್ಟು ಮರಳು ಲಾರಿಗಳು ಸಂಚರಿಸುತ್ತಿವೆಯಲ್ಲಾ ? ಎಂಬ ಪ್ರಶ್ನೆಗೆ ಆತ ಅದರ ಬಗ್ಗೆ ಗೊತ್ತಿಲ್ಲ ಎಂದಷ್ಟೇ ನುಡಿಯುತ್ತಾರೆ.

185 ಲಾರಿ: ಅ. 13ರ ರಾತ್ರಿ ನಂಗಲಿ ಪೊಲೀಸರು 50 ಮರಳು ಸಾಗಣೆ ಲಾರಿಗಳನ್ನು ಹಿಡಿದಿದ್ದಾರೆ. ಆದರೆ ಠಾಣೆಯ ಪುಸ್ತಕದಲ್ಲಿ ದಾಖಲಾಗಿರುವ ಪ್ರಕಾರ, ಅ.13ರಂದು ಬೆಳಿಗ್ಗೆ 6.15ರಿಂದ 14ರ ಮುಂಜಾನೆ 12.50ರವರೆಗೆ 185 ಅನಧಿಕೃತ ಮರಳು ಲಾರಿಗಳು ಮುಳಬಾಗಲು ದಾಟಿ ಹೋಗಿವೆ. ಮುಂಜಾನೆ 12.50ರ ಬಳಿಕ ಬೆಳಿಗ್ಗೆವರೆಗೆ ಏನಾಯಿತು. ಎಷ್ಟು ಲಾರಿಗಳು ಸಾಗಿ ಹೋಗಿವೆ ಎಂದರೆ ಸಿಬ್ಬಂದಿ ಬಳಿ ಉತ್ತರವಿಲ್ಲ. ಏಕೆಂದರೆ ಆತ ಈ ಅವಧಿಯಲ್ಲಿ ಗಾಢ ನಿದ್ರೆಯಲ್ಲಿದ್ದ !

ಕೋರ್ಟ್ ಸೂಚನೆ ಪಾಲಿಸಿಲ್ಲ...

ಮುಳಬಾಗಲಿನ ಮುಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ತಡೆಯುವಂತೆ ಕೋರಿದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಹೈಕೋರ್ಟ್ ಸೂಚಿಸಿದೆ. ಆದರೆ ಆ ಸೂಚನೆಗೆ ಜಿಲ್ಲಾಡಳಿತ ಕವಡೆ ಕಿಮ್ಮತ್ತೂ ನೀಡದಿರುವುದು ವಿಪರ್ಯಾಸ ಮತ್ತು ವಿಷಾದನೀಯ.
 - ಎಂ.ಶಿವಪ್ರಕಾಶ್  (ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೂಡಿರುವ ಹೈಕೋರ್ಟ್ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT