ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣತಿಯ ತುಣುಕುಗಳು...

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಪ್ರತಿ ತಿಂಗಳ ಮೊದಲ ದಿನ ಮಲ್ಲೇಶ್ವರದ ಸೇವಾ ಸದನ ಸಭಾಂಗಣದಲ್ಲಿ ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಆಶ್ರಯದಲ್ಲಿ  ಸಾಯಿ ನೃತ್ಯೋತ್ಸವ ನಡೆಯುತ್ತಿದ್ದು, ಯುವ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರಕುತ್ತಿವೆ.

ಜುಲೈ 1ರಂದು ಸಂಜೆ ನಡೆದ 38ನೇ ಸಾಯಿ ನೃತ್ಯೋತ್ಸವದಲ್ಲಿ ಎರಡು ಭರತನಾಟ್ಯ ಕಾರ್ಯಕ್ರಮಗಳೂ ಒಂದು ಕೂಚಿಪುಡಿ ನಾಟ್ಯವೂ ಮೂಡಿಬಂದಿತು. ಸಭಾಂಗಣದಲ್ಲಿ ತುಂಬಿದ್ದ ರಸಜ್ಞರಿಗೆ ಅದೊಂದು ನೃತ್ಯದೌತಣ.

ನಲವತ್ತೈದು ನಿಮಿಷಗಳ ಅವಧಿಗೆ ತಕ್ಕಂತೆ ಕಲಾವಿದರು ತಮ್ಮ ಪ್ರದರ್ಶನಗಳನ್ನು ಯೋಜಿಸಿ ಉಪಯುಕ್ತವಾಗಿದ್ದ ಧ್ವನಿ ಮುದ್ರಿತ ಸಂಗೀತದ ನೆರವಿನೊಂದಿಗೆ ಪ್ರದರ್ಶನ ನೀಡಿದ್ದು ಮೆಚ್ಚತಕ್ಕ ವಿಷಯ.

ಲವಲವಿಕೆಯ ಭರತನಾಟ್ಯ
ಚೆನ್ನೈನ ಋತ್ವಿಕಾ ಘೋಷ್ ಅವರು ಬಹಳ ಆಸ್ಥೆಯಿಂದ ಲವಲವಿಕೆಯ ಹಸ್ತ ಪಾದಚಲನೆಗಳಿಂದ ತಮ್ಮ ಭರತನಾಟ್ಯವನ್ನು ಅಂದಗಾಣಿಸಿದರು. ಆರಂಭದ `ಗಣಪತಿ ಕೌತುವಂ~ನಲ್ಲಿ ತಮ್ಮ ಪರಿಣತಿಯ ತುಣುಕನ್ನು ತೋರಿದರು.

ವಿಘ್ನನಾಶಕನ ಗುಣ ಲಕ್ಷಣಗಳ ಕಾಣ್ಕೆಯಲ್ಲಿ ಸುಂದರ ಹಾಗೂ ಬಿಗಿಯಾದ ಲಯವು ಗಮನ ಸೆಳೆಯಿತು. ಅದರಲ್ಲಿದ್ದ ನೃತ್ತವು ಎಗರಡುವು ಮತ್ತು ನಡೆ ಭೇದಗಳಿಂದ ವೈವಿಧ್ಯಕ್ಕೆ ಎಡಮಾಡಿಕೊಟ್ಟಿತು.

ಭಗವಂತ ಅಥವಾ ಭಗವತಿಯನ್ನು ನಾನಾ ರೂಪದಲ್ಲಿ ಆರಾಧಿಸುವುದು ಭಕ್ತಿಪಂಥದ ವಿಶೇಷ. ಪುಟ್ಟ ಮಗುವಿನಲ್ಲಿ ದೇವಿಯನ್ನು ಕಾಣುತ್ತಾ ಧನ್ಯತೆ ಹೊಂದುವ ವಿಷಯ ವಸ್ತುವಿರುವ ಸುಬ್ರಹ್ಮಣ್ಯ ಭಾರತೀ ಅವರ ತಮಿಳು ಪದವನ್ನು (ಚಿಣ್ಣದಿಂ, ರಾಗಮಾಲಿಕೆ) ಬಳಸಿಕೊಂಡು ತನ್ನ ಮಗುವಿನಲ್ಲಿ ಪರಾಶಕ್ತಿಯನ್ನು ನೋಡುತ್ತಾ ಆನಂದಿಸುವ ತಾಯಿಯನ್ನು ಚಿತ್ರಿಸಲಾಯಿತು.

ತ್ರಿಶ್ರ ನಡೆಯಲ್ಲಿ ಆ ದೇವಿಯ ಸ್ತುತಿ ಅರ್ಥಪೂರ್ಣವಾಗಿತ್ತು. ಕೊನೆಯ ಬೃಂದಾವನಿ ತಿಲ್ಲಾನ ಆಕರ್ಷಕ ನಯನ ಮತ್ತು ಶಿರೋಭೇದಗಳು ಮತ್ತು ರೇಚಿಕಗಳ ಹೂರಣವನ್ನು ಹೊಂದಿತ್ತು.

ಪ್ರಾಮಾಣಿಕ ಪ್ರದರ್ಶನ

ಎರಡನೆಯ ಕಾರ್ಯಕ್ರಮವನ್ನು ನೀಡಿದವರು ಬೆಂಗಳೂರಿನ ನೃತ್ಯಗಾರ್ತಿ ವಿದ್ಯಾ ಶಿಮ್ಲಡ್ಕ ಅವರ ಶಿಷ್ಯೆ ಬಿ.ವಿ. ಸುಹಾಸಿನಿ. ಉದ್ದೇಶದ ಪ್ರಾಮಾಣಿಕತೆ ಮತ್ತು ಆಸ್ಥೆಯಿಂದ ಸುಹಾಸಿನಿ ಚೊಕ್ಕ ಪ್ರದರ್ಶನ ನೀಡಿದರು. ಶಿವನ ವೈವಿಧ್ಯಮಯ ರೂಪಗಳು ಮತ್ತು ಆಯುಧಗಳು ಗಮನಾರ್ಹವಾದವು.

ದಯಾನಂದ ಸರಸ್ವತಿ ಅವರ ಚಿರಿಪರಿಚಿತ `ಭೋ ಶಿವ ಶಂಭೋ~ (ರೇವತಿ) ನೃತ್ಯಕ್ಕೆ ಹೇಳಿ ಮಾಡಿಸಿರುವಂತಹುದು. ಅದರಂತೆ ಶಿವನನ್ನು ತಮ್ಮ ಪ್ರಭಾವಶಾಲಿ ಅಭಿನಯದ ಮೂಲಕ ಸುಹಾಸಿನಿ ಸ್ತುತಿಸಿದರು. ಪೀಠಿಕೆಯಂತೆ `ಶಾಂತಂ ಪದ್ಮಾನಸ್ಥಂ~ ಸಂಸ್ಕೃತ ಶ್ಲೋಕವನ್ನು ವಿಶದಪಡಿಸಿ ಶಿವನ ಹಲವಾರು ಭಂಗಿಗಳನ್ನು ಅವರು ಕಡೆದರು. ಕನಕದಾಸರ `ಬಾಗಿಲನು ತೆರೆದು~ (ರಾಗಮಾಲಿಕೆ) ಪದವು ನೃತ್ಯ ಕ್ಷೇತ್ರದಲ್ಲಿ ನಿರಂತರವಾಗಿ ಬಳಕೆಯಲ್ಲಿದ್ದು, ಅತ್ಯಂತ ಜನಪ್ರಿಯವಾಗಿದೆ.
 
ಭಕ್ತನು ತನ್ನ ಆರಾಧ್ಯ ದೇವ ಕೃಷ್ಣನನ್ನು ಬಳಿಗೆ ಬರುವಂತೆ ಮನವಿ ಮಾಡಿಕೊಳ್ಳುವ ಪರಿಯನ್ನು ಆ ಪದದಲ್ಲಿ ಆಸ್ವಾದಿಸಬಹುದಾಗಿದೆ. ನರ್ತಕಿಯು ಅದರ ಆಶಯವನ್ನು ಯಥಾವತ್ತಾಗಿ ಸೂಕ್ತ ಅಭಿನಯದ ಮೂಲಕ ಅಭಿವ್ಯಕ್ತಿಸಿದರು. ಉಡುಪಿಯಲ್ಲಿ ಕನಕದಾಸರಿಗೆ ಕೃಷ್ಣನು ವಿಶೇಷವಾದ ದರ್ಶನವನ್ನು ಕೊಟ್ಟ ಸ್ಥಳ `ಕನಕನ ಕಿಂಡಿ~ ಎಂದು ಹೆಸರಾಗಿದೆ.

ಆ ಸಂದರ್ಭವನ್ನು `ವಾಸ ಉಡುಪಿಲಿ ನೆಲೆಯಾದಿ ಕೇಶವನ ದಾಸ...~  ಪಂಕ್ತಿಯ ಮೂಲಕ ಆತ್ಮೀಯವಾಗಿ ಮರು ಚಿತ್ರಿಸಿದರು. ಮುತ್ತಯ್ಯ ಭಾಗವತರ ಅಪರೂಪದ ತಮಿಳು ಕೃತಿ `ಯಾರಕ್ಕುಂ ಅಡಂಗಾದ~ (ಆಭೋಗಿ)ಯನ್ನು ಆಧರಿಸಿ ದೇವಿಯ ವೈಭವವನ್ನು ಪ್ರಕಟಗೊಳಿಸಲಾಯಿತು.

ಒಂದೆರಡು ಆವರ್ತನಗಳಿಗೆ ನೃತ್ತವನ್ನೂ ಅಳವಡಿಸಿ ಮಹಿಷಾಸುರ ಮರ್ದನ ಪ್ರಸಂಗದ ಚಿತ್ರವನ್ನು ಅರ್ಥಪೂರ್ಣವಾಗಿ ಬಿಡಿಸಿಟ್ಟರು. ನಟುವನಾರ್‌ನ ಜತಿಗಳು ಮತ್ತು ಗಾಯಕಿಯ ಸ್ವರಗಳನ್ನು ನೃತ್ತ ವೈವಿಧ್ಯದೊಂದಿಗೆ ಸುಹಾಸಿನಿ ತಮ್ಮ ಹೆಜ್ಜೆಗಳಲ್ಲಿ ಅನುವಾದಿಸಿದರು. ಮೇಲ್ಕಾಲದ ಜತಿಗಳಂತೂ ಖುಷಿ ಉಂಟುಮಾಡಿದವು. ನಿರೀಕ್ಷೆಯಂತೆ `ಅಯಗಿರಿ ನಂದಿನಿ~ ಶ್ಲೋಕದ ಪ್ರಯೋಗವೂ ಆಯಿತು.

ಸಲ್ಲಕ್ಷಣ ಕೂಚಿಪುಡಿ ನಾಟ್ಯ
ಅಮೆರಿಕಾದ ಪಲ್ಲವಿ ಕುಮರ್ ಅವರ ಕೂಚಿಪುಡಿ ನಾಟ್ಯದಲ್ಲಿ ಆ ಪ್ರಕಾರದ ಸಕಲ ಲಕ್ಷಣಗಳೂ ತುಂಬಿಬಂದವು. ಆರಂಭದ ವಂದನಾ ಕೃತಿಯಲ್ಲಿ ಬಾಲಮುರಳೀಕೃಷ್ಣ ಅವರ `ಶ್ರಿಸಕಲ ಗಣಾಧಿಪ~ (ಆರಭಿ) ಕೃತಿಯ ಮೂರು ಪಲ್ಲವಿಗಳಲ್ಲಿ ವರ್ಣಿತವಾಗಿರುವಂತೆ ಗಣೇಶ, ಮಾರುತಿ ಮತ್ತು ಕೃಷ್ಣನಿಗೆ ವಂದನೆ ಸಲ್ಲಿಸಲಾಯಿತು.

ಆರಂಭದಲ್ಲಿ ಕೂಚಿಪುಡಿಯ ಓಟದಲ್ಲಿ ಏರುಪೇರಾಯಿತೆನಿಸಿದರೂ ನಂತರದ ನಿರೂಪಣೆಗಳಲ್ಲಿ ಪಲ್ಲವಿಯವರು ಕಲಾ ಪ್ರಭುತ್ವ ಮೆರೆದರು. ವಾಚಿಕಾಭಿನಯವೂ ಗಮನಾರ್ಹವಾಗಿತ್ತು. ಸೂರ್ಯಾಷ್ಟಕದಂತೆ (ಆದಿದೇವ ನಮಸ್ತುಭ್ಯಂ, ರಾಗಮಾಲಿಕೆ) ಆರೋಗ್ಯಕಾರಕ ಸೂರ್ಯ ಗ್ರಹಕ್ಕೆ ನಮಿಸುವುದರ ಜೊತೆಗೆ ಸೂರ್ಯನ ಮಹಿಮೆಯನ್ನೂ ಸರಳವಾಗಿ ಅಭಿನಯಿಸಲಾಯಿತು. ಅದರ ನಡುವೆ ಅಡಕವಾಗಿದ್ದ ನೃತ್ತ ಅಭಿನಂದನಾರ್ಹವಾಗಿತ್ತು.

ಎಂದಿನಂತೆ ಪಲ್ಲವಿ ತಮ್ಮ ಕಾರ್ಯಕ್ರಮದಲ್ಲಿ ತಟ್ಟೆಯ ಮೇಲಿನ ನೃತ್ತದಲ್ಲಿ ಮಿಂಚಿದರು. ಊತ್ತುಕ್ಕಾಡು ವೆಂಕಟ ಸುಬ್ಬಯ್ಯರ್ ಅವರ ಸುಪರಿಚಿತ `ಮರಕತ ಮಣಿಮಯ~ (ಆರಭಿ) ಕೃತಿಯಂತೆ ಕೃಷ್ಣನ `ಮದನಕೋಟಿ ಸುಂದರಾಂಗ~ ರೂಪವನ್ನು ತಮ್ಮ ನಟನೆಯಲ್ಲಿ ಬಹು ವಿಧವಾಗಿ ಬಣ್ಣಿಸಿದರು. ಸಾತ್ವಿಕಾಭಿನಯಕ್ಕೂ ಪ್ರಾತಿನಿಧ್ಯವಿದ್ದುದು ಸ್ತುತ್ಯರ್ಹ. ವೇದಿಕೆಯನ್ನು ಸಂಪೂರ್ಣವಾಗಿ ಬಳಸಿಕೊಂಡು `ಕನಕಮಣಿಮಯ ನೂಪುರ ಚರಣ~ ಸಾಲನ್ನು ಹಿತ್ತಾಳೆ ತಟ್ಟೆಯ ಮೇಲೆ ನಿಂತು ವೇಗದ ಜತಿಗಳೊಂದಿಗೆ ವಿಸ್ತಾರವಾಗಿ ಹರಡಿದರು.

ನಟುವನಾರ್ ಮತ್ತು ನರ್ತಕಿಯ ನಡುವಿನ ನೃತ್ತ ಸಂವಾದ ರೋಮಾಂಚಕವಾಗಿತ್ತು. ಜತಿಗಳು ಹಿತ್ತಾಳೆ ತಟ್ಟೆಯ ಅವರ ಪಾದಗಳ ಮೂಲಕ ಅನುರಣಗೊಂಡವು.

ಬೆಳಗಿದ ಪ್ರತಿಭೆ
ತಮ್ಮ ಶೈಕ್ಷಣಿಕ ಪ್ರಗತಿಯೊಂದಿಗೆ ಭರತನಾಟ್ಯವನ್ನು ಹವ್ಯಾಸವನ್ನಾಗಿಟ್ಟುಕೊಂಡು ಅದರಲ್ಲೂ ಪ್ರಶಂಸನೀಯ ಸಾಧನೆಯನ್ನು ಮಾಡುತ್ತಿರುವ ಕಲಾರ್ಥಿಗಳನ್ನು ಮೆಚ್ಚಿ ಪ್ರೋತ್ಸಾಹಿಸಲೇಬೇಕು. ಗುರು ಮಮತಾ ಕಾರಂತ ಅವರ ಶಿಷ್ಯೆ ಅಶ್ವಿನಿ ರತ್ನಂ ಜೆಪಿ ನಗರದ ಬ್ರಿಗೇಡ್ ಮಿಲೇನಿಯಂನ ಸಭಾಂಗಣದಲ್ಲಿ ಭಾನುವಾರ ನೀಡಿದ ಕಾರ್ಯಕ್ರಮ ರಂಜಿಸಿತು.

ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಕ್ರೈಸ್ಟ್ ಜೂನಿಯರ್ ಕಾಲೇಜು ವಿದ್ಯಾರ್ಥಿನಿಯಾಗಿರುವ ಅಶ್ವಿನಿ ತೋರಿದ ಆತ್ಮವಿಶ್ವಾಸ ಮತ್ತು ಭರವಸೆಗೆ ರಸಿಕರಿಂದ ಮೆಚ್ಚುಗೆ ಸಂದಿತು. ಗುರು ಮಮತಾ ಕಾರಂತ್(ನಟುವಾಂಗ), ಶ್ರಿವತ್ಸ (ಗಾಯನ), ದಯಾಕರ್ (ಪಿಟೀಲು), ವಿವೇಕ್‌ಕೃಷ್ಣ (ಕೊಳಲು), ಲಿಂಗರಾಜು (ಮೃದಂಗ) ಮತ್ತು ಪ್ರಸನ್ನ (ಖಂಜರಿ) ಅವರ ಉತ್ತಮ ಸಹಕಾರದೊಂದಿಗೆ ಸರಸ್ವತಿಗೆ ನಮಿಸಿ ರಾಗಮಾಲಿಕಾ ಜತಿಸ್ವರದಲ್ಲಿ ತಮ್ಮ ನೃತ್ತ ಹಿಡಿತವನ್ನು ಪ್ರಕಟಿಸಿದರು.
 
`ಮಾಮವ ಸದಾ ಜನನಿ~ (ಕಾನಡಾ) ಕೀರ್ತನೆಯನ್ನು ಆಧರಿಸಿ ದೇವಿಯ ರೂಪಲಾವಣ್ಯಗಳನ್ನು ಪರಿಚಯಿಸಿದರು. ಶ್ರಿರಾಮನನ್ನು ಕುರಿತಾದ ಮಹೇಶ್‌ಸ್ವಾಮಿ ಅವರ `ಬಾರೈ ರಘುವಂಶ ಚಂದ್ರನೆ ಬಾ~ ಕನ್ನಡ ವರ್ಣವನ್ನು ನೃತ್ತ, ನೃತ್ಯ ಮತ್ತು ಅಭಿನಯಗಳ ಮೂಲಕ ಸಜ್ಜುಗೊಳಿಸಿ ನೆರೆದಿದ್ದ ನೃತ್ಯ ಪ್ರೇಮಿಗಳನ್ನು ತಣಿಸಿದರು. `ನಿನ್ನ ಪಾದ ಸೇವೆ ನೀಡೆನೆಗೆ~ ಚರಣ ಭಾಗವನ್ನು ದ್ರುತಕಾಲದಲ್ಲಿ ಮುಂದುವರಿಸಿ ರಾಮಾಯಣದ ಹಲವಾರು ಪ್ರಸಂಗಗಳನ್ನು ಸರಸವಾಗಿ ಅಭಿನಯಿಸಿದರು.

`ಆಡಿಕೊಂಡಾರ್~ (ಮಾಯಾಮಾಳವಗೌಳ) ಪದಾಭಿನಯದಲ್ಲಿ ಶಿವನ ವರ್ಣನೆ ಮತ್ತು ಶಿವ ಪಾರ್ವತಿಯರ ನೃತ್ಯ ಸನ್ನಿವೇಶವನ್ನು ತೋರಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT