ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿ ಕಾಲೊನಿಗೆ ನೀರು ಒದಗಿಸಲು ಆಗ್ರಹ

Last Updated 19 ಡಿಸೆಂಬರ್ 2013, 5:51 IST
ಅಕ್ಷರ ಗಾತ್ರ

ಸೋಮವಾರಪೇಟೆ: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಕಾಲೊನಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಿದ್ಧಾರ್ಥನಗರ ಗ್ರಾಮಾಧ್ಯಕ್ಷ ಬಿ.ಎಂ. ದಿನೇಶ್ ಆಗ್ರಹಿಸಿದರು.

ಈ ಹಿಂದೆ ಕಾಲೊನಿಗೆ ಕುಡಿಯುವ ನೀರು ಒದಗಿಸುವ ಸಂಬಂಧವಾಗಿ ಬಾವಿ ಕೊರೆದು ಮೂರು ರಿಂಗ್‌ಗಳನ್ನು ಅಳವಡಿಸಿ ರೂ. 3 ಲಕ್ಷ ಹಣ ಪಡೆದು ಇದೀಗ ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ. ಕಾಲೊನಿಗೆ ಇಂದಿಗೂ ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಗ್ರಾಮಸಭೆಯಲ್ಲಿ ಜನಪ್ರತಿನಿಧಿಗಳು ಗಮನ ಸೆಳೆದರು.

ಸಮೀಪದ ಬೆಟ್ಟದಳ್ಳಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಎಚ್.ಪಿ. ರಜಿನಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಗಮನಸೆಳೆದರು.

3 ಲಕ್ಷ ಬಿಲ್ ಪಡೆದಿರುವ ಗುತ್ತಿಗೆದಾರರು ಕಾಮಗಾರಿಯನ್ನೇ ಪೂರ್ಣಗೊಳಿಸಿಲ್ಲ. ಆದರೂ ಬಿಲ್ ಮಾತ್ರ ಪಾವತಿಯಾಗಿದೆ. ಈ ಬಗ್ಗೆ ಕೂಡಲೇ ಗಮನ ಹರಿಸುವಂತೆ ದಿನೇಶ್ ಒತ್ತಾಯಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಪ್ಪ ಪೂಜಾರಿ, ತಕ್ಷಣ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಶಾಂತಳ್ಳಿ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಪಲ್ಲವಿ ಮಾತನಾಡಿ, ಇಲಾಖೆಯಿಂದ ರೈತರಿಗೆ ಸ್ಪ್ರೇಯರ್, ಟಾರ್ಪಲ್, ಎರೆಹುಳುಗೊಬ್ಬರ ನಿರ್ಮಾಣದ ತೊಟ್ಟಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಅರಣ್ಯ ಇಲಾಖೆಯ ಅಧಿಕಾರಿ ಸತೀಶ್‌ಕುಮಾರ್ ಮಾತನಾಡಿ, ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅಸ್ತ್ರ ಒಲೆ ಹಾಗೂ ಸೋಲಾರ್ ದೀಪಗಳನ್ನು ವಿತರಿಸುತ್ತಿರುವುದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬರಲಾಗಿದೆ. ಆದರೆ ಇದುವರೆಗೂ ಯಾವ ಪ್ರಗತಿಯೂ ಕಂಡಿಲ್ಲ.

ಇಲ್ಲಿಗೆ ಮೂಲಭೂತ ಸೌಲಭ್ಯ ಒದಗಿಸಿದಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಆ ಮೂಲಕ ಗ್ರಾಮಗಳ ಅಭಿವೃದ್ಧಿಯೂ ಆಗುತ್ತದೆ ಎಂದು ಗ್ರಾಮಸ್ಥ ವೆಂಕಟೇಶ್ ಸಭೆಯ ಗಮನ ಸೆಳೆದರು. ವೆಂಕಪ್ಪ ಪೂಜಾರಿ ಉತ್ತರಿಸಿ, ಮಲ್ಲಳ್ಳಿ ಜಲಪಾತಕ್ಕೆ ತೆರಳಲು ರಸ್ತೆ ಹಾಗೂ ಕುಡಿಯುವ ನೀರಿನ ಸೌಕರ್ಯವನ್ನು ಒದಗಿಸಲು ತಕ್ಷಣ ಗಮನಹರಿಸುವದಾಗಿ ತಿಳಿಸಿದರು.

ಸಿದ್ದಾರ್ಥನಗರದ ಬಿ.ಕೆ. ದೇವರಾಜು ಮಾತನಾಡಿ, ಸಿದ್ಧಾರ್ಥ ನಗರದ ಸುಮಾರು 60 ಕುಟುಂಬಗಳಿಗೆ ಸರ್ಕಾರದ ಕೆಲ ಸೌಲಭ್ಯಗಳು ಲಭಿಸುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಲತಾ, ಸದಸ್ಯರಾದ ಕೃಷ್ಣರಾಜು, ರಾಮಚಂದ್ರ, ಪ್ರದೀಪ್, ಉದಯಕುಮಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯು.ಎಂ. ತಮ್ಮಯ್ಯ, ತೋಟಗಾರಿಕಾ ಇಲಾಖೆ ಅಧಿಕಾರಿ ದುಂಡಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT