ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಪಂಗಡದ ಕಲ್ಯಾಣ ಮಂಡಳಿ ಸ್ಥಾಪನೆಗೆ ಒತ್ತಾಯ

ವಾಲ್ಮೀಕಿ ನಾಯಕ ಸಮಾವೇಶಕ್ಕೆ ಸಿಎಂ ಖಚಿತ: ಶಾಸಕ ಟಿ.ರಘುಮೂರ್ತಿ
Last Updated 10 ಜನವರಿ 2014, 9:22 IST
ಅಕ್ಷರ ಗಾತ್ರ

ಚಿತ್ರದುರ್ಗ:  ಇದೇ 11ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವಾಲ್ಮೀಕಿ ನಾಯಕ ಸಮುದಾಯದ ಸಮಾವೇಶಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ನಾಯಕ ಸಮುದಾಯದ ಪ್ರಮುಖ ರಾಜಕೀಯ ನಾಯಕರು ಗುರುವಾರ ಸಮಾವೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸಮಾವೇಶದ ಪಕ್ಕದಲ್ಲೇ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು, ‘ಪರಿಶಿಷ್ಟ ಪಂಗಡಕ್ಕೆ ಅಗತ್ಯವಿರುವ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಪರಿಶಿಷ್ಟ ಪಂಗಡಕ್ಕೆ ಪ್ರಸ್ತುತ ನೀಡುತ್ತಿರುವ ಮೀಸಲಾತಿಯ ಪ್ರಮಾಣವನ್ನು ಶೇ. 3 ರಿಂದ ಶೇ. 7.5ಕ್ಕೆ ಹೆಚ್ಚಿಸಬೇಕು. ಮಹರ್ಷಿ ವಾಲ್ಮೀಕಿ ಪ್ರಾಧಿಕಾರ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಪರಿಶಿಷ್ಟ ಪಂಗಡದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಲ್ಯಾಣ ಮಂಡಳಿ (ಪ್ರಾಧಿಕಾರ) ಸ್ಥಾಪನೆಯಾಗಬೇಕಿದ್ದು, ಸಮಾವೇಶದ ಮೂಲಕ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

‘ನಾಯಕ ಸಮುದಾಯದ ಪರ್ಯಾಯ ಪದಗಳಾದ ತಳವಾರ ಸೇರಿದಂತೆ ವಿವಿಧ ಹೆಸರುಗಳಿಂದ ಕರೆಯುವವರಿಗೆ ಕೆಲವೆಡೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಅವರಿಗೂ ಕೂಡ ಪ್ರಮಾಣ ಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗುವುದು’ ಎಂದು ಹೇಳಿದರು.

ಬೃಹತ್ ವೇದಿಕೆ: ರಾಜ್ಯ ಮಟ್ಟದ ವಾಲ್ಮೀಕಿ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ವೀಕ್ಷಕರಿಗಾಗಿ ಸುಮಾರು ೫೦ ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ರಾಜ್ಯದ ವಿವಿಧ ಪಕ್ಷಗಳ ನಾಯಕ ಸಮುದಾಯದ ೧೮ ಮಂದಿ ಶಾಸಕರು, ಇಬ್ಬರು ಸಂಸತ್‌ ಸದಸ್ಯರು, ಒಬ್ಬರು ಮೇಲ್ಮನೆ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ವಿವಿಧ ಸಮುದಾಯಗಳ ೨೦ ಶಾಸಕರನ್ನು ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಅವರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಪೂರ್ವಸಿದ್ಧತೆ ಪರಿಶೀಲಿಸಿದ ಶಾಸಕ ಟಿ. ರಘುಮೂರ್ತಿ ಅವರು, ‘ಯಾವುದಕ್ಕೂ ಕೊರತೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಸಮುದಾಯದ ಸ್ಥಳೀಯ ಮುಖಂಡರಿಗೆ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್, ಮಾಜಿ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ನಿವೃತ್ತ ಜಿಲ್ಲಾಧಿಕಾರಿ ಶಿವಣ್ಣ  ಪಾಲ್ಗೊಂಡಿದ್ದರು.

ಅನುಮಾನವೇ ಬೇಡ...
‘ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಈ ಬಗ್ಗೆ ಅನುಮಾನವೇ ಬೇಡ’ ಎಂದು ಶಾಸಕ ಟಿ.ರಘುಮೂರ್ತಿ ಸ್ಪಷ್ಟಪಡಿಸಿದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿರುವುದರಿಂದ ವಾಲ್ಮೀಕಿ ಜನಾಂಗದ ಸಮಾವೇಶಕ್ಕೆ ಮುಖ್ಯಮಂತ್ರಿ ಬರುವುದು ಅನುಮಾನ ಎನ್ನುವ ಮಾತಿಗೆ  ಪ್ರತಿಕ್ರಿಯಿಸಿದ ಅವರು, ‘ಯಾವುದೇ ಸಮಸ್ಯೆ ಇಲ್ಲದೇ, ಸಿದ್ದರಾಮಯ್ಯ ಅವರು ಸಮಾವೇಶಕ್ಕೆ ಆಗಮಿಸಿ ಸಮಾಜದವರ ಸಮಸ್ಯೆಗಳನ್ನು ಆಲಿಸಲಿದ್ದಾರೆ’ ಎಂದು ಖಚಿತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT