ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ವಿರುದ್ಧ ದೌರ್ಜನ್ಯ ಹೆಚ್ಚಳ?

Last Updated 1 ಜೂನ್ 2013, 10:38 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆಯೇ?
ಕಳೆದ ಜನವರಿಯಿಂದ ಮೇ ವರೆಗೆ ಜಿಲ್ಲೆಯಲ್ಲಿ ಎಸ್‌ಸಿ, ಎಸ್‌ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ದಾಖಲಾದ ಪ್ರಕರಣಗಳನ್ನು ಗಮನಿಸಿದರೆ ಈ ಸಂಶಯ ಕಾಡುತ್ತದೆ.

2012ರ ಜನವರಿಯಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 22 ಪರಿಶಿಷ್ಟರು ದೌರ್ಜನ್ಯ ಒಳಗಾಗಿರುವ ಆರೋಪದಡಿ 14 ಪ್ರಕರಣಗಳು ದಾಖಲಾಗಿವೆ. ಆದರೆ, 2013ರ ಜನವರಿಯಿಂದ ಮೇ ವರೆಗಿನ ಅವಧಿಯಲ್ಲಿ 38 ಜನ ಪರಿಶಿಷ್ಟರು ದೌರ್ಜನ್ಯಕ್ಕೆ ಒಳಗಾಗಿರುವ ಆರೋಪದಡಿ 13 ಪ್ರಕರಣಗಳು ದಾಖಲಾಗಿರುವುದು ಈ ಸಂಶಯಕ್ಕೆ ಪುಷ್ಟಿ ನೀಡುತ್ತದೆ.
ಅಂದರೆ, 2012ರಲ್ಲಿ ಇಡೀ ವರ್ಷದ ಅವಧಿಯಲ್ಲಿ 14 ಪ್ರಕರಣಗಳು ದಾಖಲಾಗಿದ್ದರೆ, ಪ್ರಸಕ್ತ ವರ್ಷ 5 ತಿಂಗಳ ಅವಧಿಯಲ್ಲಿ 13 ಪ್ರಕರಣಗಳು ದಾಖಲಾಗಿರುವುದು ಕಂಡು ಬರುತ್ತದೆ.

ಕಳೆದ ವರ್ಷ ಜಾತಿ ನಿಂದನೆಗೆ ಸಂಬಂಧಿಸಿದಂತೆ 4 ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಜಾತಿ ನಿಂದನೆ ಪ್ರಕರಣಗಳು ದಾಖಲಾಗಿಲ್ಲ. ಆದರೆ, ಜಾತಿ ನಿಂದನೆ ಮತ್ತು ಹೊಡೆದಾಟಕ್ಕೆ ಸಂಬಂಧಿಸಿದಂತೆ 8 ಪ್ರಕರಣಗಳು ದಾಖಲಾಗಿರುವುದನ್ನು ಸಮಾಜ ಕಲ್ಯಾಣ ಇಲಾಖೆ ಒದಗಿಸಿರುವ ದಾಖಲೆಗಳು ಸ್ಪಷ್ಟಪಡಿಸುತ್ತವೆ.

ಕಳೆದ ವರ್ಷ ಹೊಡೆದಾಟಕ್ಕೆ ಸಂಬಂಧಿಸಿದಂತೆ ಯಲಬುರ್ಗಾ ತಾಲ್ಲೂಕಿನ ಕುಕನೂರು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಈ ವರ್ಷ ಅಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ.

ಈ ವರ್ಷ, ಜಾತಿ ನಿಂದನೆ, ಹೊಡೆದಾಟ ಮತ್ತು ಮಾನಭಂಗಕ್ಕೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ 3 ಹಾಗೂ ಗಂಗಾವತಿ ನಗರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿವೆ. ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಒಂದು ಪ್ರಕರಣ ದಾಖಲಾಗಿದೆ.

ಕಳೆದ ವರ್ಷ ಗಂಗಾವತಿ ತಾಲ್ಲೂಕಿನಲ್ಲಿ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 4 ಪ್ರಕರಣ ದಾಖಲಾಗಿದ್ದರೆ, ಈ ವರ್ಷ 6 ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷ ಕುಕನೂರು ಠಾಣೆ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದರೆ, ಈ ವರ್ಷ 2 ಪ್ರಕರಣ ದಾಖಲಾಗಿವೆ.

2012ರಲ್ಲಿ ಕುಷ್ಟಗಿ ಠಾಣೆಯಲ್ಲಿ 2, ಕೊಪ್ಪಳ, ಮುನಿರಾಬಾದ, ತಾವರಗೇರಾ ಹಾಗೂ ಹನುಮಸಾಗರ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಈ ವರ್ಷ ಕಾರಟಗಿ ಠಾಣೆಯಲ್ಲಿ 2, ಯಲಬುರ್ಗಾ, ಕನಕಗಿರಿ, ತಾವರಗೇರಾ ಹಾಗೂ ಹನುಮಸಾಗರ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಅಳವಂಡಿ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

ಪರಿಹಾರ ಧನ ಮೊತ್ತ ಹೆಚ್ಚಳ
ಕೊಪ್ಪಳ: ದೌರ್ಜನ್ಯಕ್ಕೆ ಒಳಗಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನೀಡಲಾಗುತ್ತಿರುವ ಪರಿಹಾರ ಧನವನ್ನು 2012ರ ಜೂನ್‌ನಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ.

ಖಾದ್ಯವಲ್ಲದ ಅಥವಾ ಅಸಹ್ಯಕರ ಪದಾರ್ಥಗಳನ್ನು ತಿನಿಸುವ ಮೂಲಕ ಎಸೆಗುವ ದೌರ್ಜನ್ಯಕ್ಕೆ ಈ ಮೊದಲು 25 ಸಾವಿರ ರೂಪಾಯಿಗಳ ಪರಿಹಾರ ನೀಡಲಾಗುತ್ತಿತ್ತು. ಆದರೆ, ಪರಿಷ್ಕೃತ ಪರಿಹಾರ ಮೊತ್ತವನ್ನು 60 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಪರಿಹಾರ ಮೊತ್ತದ ಪೈಕಿ ಶೇ 25ರಷ್ಟು ಹಣವನ್ನು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ ತಕ್ಷಣ ನೀಡಬೇಕು ಹಾಗೂ ಆರೋಪಿಗಳಿಗೆ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ನಂತರ ಉಳಿದ ಮೊತ್ತವನ್ನು ಪಾವತಿಸಬೇಕು ಎಂಬ ನಿಬಂಧನೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗ ಈ ಮೊದಲು 50 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುತ್ತಿತ್ತು. ಈಗ ಈ ಪರಿಹಾರ ಮೊತ್ತವನ್ನು 1.20 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.

ಪರಿಹಾರ ಮೊತ್ತವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಕುರಿತು `ಪ್ರಜಾವಾಣಿ'ಯಲ್ಲಿ 2012ರ ಜೂನ್ 14ರಂದು ವಿಶೇಷ ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT