ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಹಣ ವೆಚ್ಚ ಮಾಡದ ಅಧಿಕಾರಿಗಳಿಗೆ ಜೈಲು

ಮಹತ್ವದ ಮಸೂದೆಗೆ ವಿಧಾನಸಭೆ ಸರ್ವಾನುಮತದ ಅಂಗೀಕಾರ
Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ವಿನಿಯೋಗಿಸದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಮತ್ತು ಪರಿಶಿಷ್ಟರ ಕಲ್ಯಾಣದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸುವ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಮಸೂದೆಗೆ ವಿಧಾನಸಭೆ ಗುರುವಾರ ಸರ್ವಾನುಮತದಿಂದ ಅಂಗೀಕಾರ ನೀಡಿದೆ.

ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ (ಡಿ.೬) ಮುನ್ನಾ ದಿನ ಈ ಮಸೂದೆಗೆ ಅಂಗೀಕಾರ ಸಿಕ್ಕಿದ್ದು ವಿಶೇಷ. ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ನೀಡುವುದು ಹಾಗೂ ಅದನ್ನು ಏಕಗವಾಕ್ಷಿ ಮೂಲಕ ವೆಚ್ಚ ಮಾಡುವುದು ಇದರ ಪ್ರಮುಖ ಉದ್ದೇಶ ಎಂದು ಮಸೂದೆಯನ್ನು ಮಂಡಿಸಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.

ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಖರ್ಚು ಮಾಡಲು ಯಾವುದೇ ಅಧಿಕಾರಿ ನಿರ್ಲಕ್ಷ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ೬ ತಿಂಗಳವರೆಗೆ ಜೈಲಿಗೆ ಕಳುಹಿಸಲೂ ಮಸೂದೆಯಲ್ಲಿ ಅವಕಾಶ ಇದೆ ಎಂದರು. ಅನಿವಾರ್ಯ ಕಾರಣಗಳಿಂದ ಹಣ ಬಳಕೆಯಾಗದೇ ಇದ್ದರೆ ಅದನ್ನು ಮುಂದಿನ ವರ್ಷಕ್ಕೆ ಬಳಸಬಹುದು. ಪರಿಶಿಷ್ಟರ ಕಲ್ಯಾಣಕ್ಕೆ ನೀಡಲಾದ ಹಣವನ್ನು ವೆಚ್ಚ ಮಾಡುವುದಕ್ಕಾಗಿ ರಾಜ್ಯ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಅಸ್ತಿತ್ವಕ್ಕೆ ಬರುತ್ತದೆ.

ಮುಖ್ಯಮಂತ್ರಿ ಇದರ ಅಧ್ಯಕ್ಷರಾಗಿರುತ್ತಾರೆ. ಸಮಾಜಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಇದರ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಸಮಾಜ ಕಲ್ಯಾಣ ಖಾತೆ ಸಚಿವರಲ್ಲದೆ ಇತರ ಸಚಿವರೂ ಇದರ ಸದಸ್ಯರಾಗಿರುತ್ತಾರೆ. ವರ್ಷದಲ್ಲಿ ಕನಿಷ್ಠ ಎರಡು ಬಾರಿ ಇದು ಸಭೆ ನಡೆಸಬೇಕು ಎಂದು ಅವರು ತಿಳಿಸಿದರು.

ಈ ಪರಿಷತ್ ಅಲ್ಲದೆ ಯೋಜನೆಗಳನ್ನು  ಜಾರಿಗೊಳಿಸಲು ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನೋಡಲ್ ಏಜೆನ್ಸಿ ಇರುತ್ತದೆ. ಇದು ಪರಿಶಿಷ್ಟರ ಉಪ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಪರಿಶೀಲನೆ ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ.

ಪ್ರತಿಯೊಂದು ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪ ಯೋಜನೆಗಳ ಅನುಷ್ಠಾನ ಸಮಿತಿ ಇರುತ್ತದೆ. ರಾಜ್ಯದ ಒಟ್ಟು ಯೋಜನಾ ವೆಚ್ಚದ ಒಂದು ಭಾಗವನ್ನು ಅನುಸೂಚಿತ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ನಿಧಿಯಾಗಿ ಸ್ಥಾಪಿಸಬೇಕು ಎಂದು ಅವರು ಹೇಳಿದರು.

ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಾದ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸುವುದನ್ನೂ ಈ ಮಸೂದೆ ನಿಷೇಧಿಸುತ್ತದೆ ಎಂದು ಅವರು ತಿಳಿಸಿದರು. ಪರಿಶಿಷ್ಟರಿಗೆ ಮೀಸಲಾದ ಹಣ ಜನರಿಗೆ ನೇರವಾಗಿ ತಲುಪಿಸಲು ಈ ಮಸೂದೆ ನೆರವಾಗುತ್ತದೆ. ಇಂತಹ ಕಾನೂನು ಜಾರಿ ಮಾಡುತ್ತಿರುವ ಎರಡನೇ ರಾಜ್ಯ ನಮ್ಮದು. ಆಂಧ್ರಪ್ರದೇಶದಲ್ಲಿ ಈಗಾಗಲೇ ಅದು ಜಾರಿಯಲ್ಲಿದೆ ಎಂದು ಸಚಿವರು ಹೇಳಿದರು.

ಅಭಿನಂದನೆ: ಪರಿಶಿಷ್ಟರ ಪರವಾದ ಮಸೂದೆಯನ್ನು ಮಂಡಿಸಿದ್ದಕ್ಕಾಗಿ ವಿರೋಧ ಪಕ್ಷದ ಸದಸ್ಯರೂ ಸೇರಿದಂತೆ ಎಲ್ಲರೂ ಸಚಿವರನ್ನು ಅಭಿನಂದಿಸಿದರು. ಪರಿಶಿಷ್ಟರ ಅಭಿವೃದ್ಧಿಗಾಗಿ ಬೇರೆ ಬೇರೆ ನಿಗಮ, ಮಂಡಳಿಗಳನ್ನು  ರಚಿಸಲಾಗಿದ್ದು ಅವುಗಳು ವಿನಿಯೋಗಿಸುವ ಹಣ ಪುನರಾವರ್ತನೆಯಾಗುವುದನ್ನು ತಡೆಯಬೇಕು ಎಂದು ವಿರೋಧ ಪಕ್ಷದ ಉಪ ನಾಯಕ ವೈ.ಎಸ್.ವಿ.ದತ್ತ ಒತ್ತಾಯಿಸಿದರು.

ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜನಪ್ರತಿನಿಧಿಗಳಿಗೂ ಅವಕಾಶ ನೀಡಬೇಕು ಎಂದು ಬಿಜೆಪಿಯ ಜಗದೀಶ ಶೆಟ್ಟರ್ ಸಲಹೆ ಮಾಡಿದರು. ಕೇವಲ ಕಾನೂನು ಜಾರಿ ಮಾಡಿದರೆ ಪ್ರಯೋಜನವಿಲ್ಲ. ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೆಜೆಪಿಯ ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್‌ನ ಪಿ.ಎಂ.ನರೇಂದ್ರಸ್ವಾಮಿ, ರಮೇಶ ಕುಮಾರ್, ಎಂ.ಕೆ.ಸೋಮಶೇಖರ್, ಶಿವಮೂರ್ತಿ, ತುಕಾರಾಂ, ಜೆಡಿಎಸ್ ನ ಎಚ್.ಕೆ.ಕುಮಾರಸ್ವಾಮಿ, ಮಾನಪ್ಪ ವಜ್ಜಲ, ಬಿ.ಬಿ.ನಿಂಗಯ್ಯ, ಚಿಕ್ಕಮಾದು, ಶಿವಲಿಂಗೇಗೌಡ, ಬಿಜೆಪಿಯ ಸಿ.ಟಿ.ರವಿ, ಗೋವಿಂದ ಕಾರಜೋಳ, ಕೆ.ಜಿ.ಬೋಪಯ್ಯ, ರೈತ ಸಂಘದ ಕೆ.ಎಸ್.ಪುಟ್ಟಣ್ಣಯ್ಯ ಮುಂತಾದವರು ಮಸೂದೆ ಬೆಂಬಲಿಸಿ ಮಾತನಾಡಿದರು. ನಿಯಮಾವಳಿ ರೂಪಿಸುವಾಗ ಸದಸ್ಯರ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ಸಚಿವ ಆಂಜನೇಯ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT