ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಚುನಾವಣೆ: ಮೋಟಮ್ಮಗೆ ಪುನಃ ಅವಕಾಶ

Last Updated 31 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ನಾಲ್ಕನೇ ಅಭ್ಯರ್ಥಿಯನ್ನೂ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಪರಿಷತ್‌ನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರನ್ನು ಎರಡನೇ ಬಾರಿಗೆ ಮೇಲ್ಮನೆಗೆ ಕಳುಹಿಸಲು ನಿರ್ಧರಿಸಿರುವ ಕಾಂಗ್ರೆಸ್ ಹೈಕಮಾಂಡ್, ಮಾಜಿ ಶಾಸಕ ಎಂ.ಆರ್.ಸೀತಾರಾಂ ಅವರಿಗೆ ನಾಲ್ಕನೇ ಅಭ್ಯರ್ಥಿಯಾಗುವ ಅವಕಾಶ ಕಲ್ಪಿಸಿದೆ.

ಗುಲ್ಬರ್ಗದ ಮಾಜಿ ಸಂಸದ ಇಕ್ಬಾಲ್ ಅಹಮ್ಮದ್ ಸರಡಗಿ ಮತ್ತು ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜು ಅವರಿಗೆ ಪರಿಷತ್ ಚುನಾವಣೆಯಲ್ಲಿ ಅವಕಾಶ ದೊರೆತಿದೆ. ಜನತಾ ಪರಿವಾರದಿಂದ ಬಂದ ಯಾವುದೇ ಆಕಾಂಕ್ಷಿಗೂ ಟಿಕೆಟ್ ನೀಡದಿರುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಸಂಪೂರ್ಣವಾಗಿ ಮೂಲ ಕಾಂಗ್ರೆಸ್ಸಿಗರಿಗೆ ಮಣೆ ಹಾಕಿದೆ.

ಪರಿಷತ್‌ನ 11 ಸ್ಥಾನಗಳಿಗೆ ಜೂನ್ 11ರಂದು ಚುನಾವಣೆ ನಡೆಯಲಿದೆ. ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸ್ಪಷ್ಟ ಅವಕಾಶ ಕಾಂಗ್ರೆಸ್‌ಗೆ ಇದ್ದು, ಹೆಚ್ಚುವರಿ ಮತಗಳನ್ನೂ ಹೊಂದಿದೆ. 90ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್ ಬಯಸಿ ಲಾಬಿ ನಡೆಸಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರವಾನಿಸಿದ್ದ ಆಕಾಂಕ್ಷಿಗಳ ಪಟ್ಟಿಯನ್ನು ಅಳೆದು-ತೂಗಿದ ಕಾಂಗ್ರೆಸ್ ಹೈಕಮಾಂಡ್ ಗುರುವಾರ ಸಂಜೆ ನಾಲ್ವರ ಹೆಸರನ್ನು ಅಂತಿಮಗೊಳಿಸಿದೆ. ದೆಹಲಿಯಿಂದ ವಾಪಸಾದ ಬಳಿಕ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಅಭ್ಯರ್ಥಿಗಳ ಹೆಸರು ಪ್ರಕಟಿಸಿದರು.

ತಾವು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಕಾರಣ ನೀಡಿದ್ದ ಮೋಟಮ್ಮ, ಪರಿಷತ್ ಚುನಾವಣೆಯಲ್ಲಿ ಎರಡನೇ ಬಾರಿ ಅವಕಾಶ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅವರ ಕೋರಿಕೆಗೆ ಮಣಿದಿರುವ ಹೈಕಮಾಂಡ್, ಈ ಬಾರಿ ನಿವೃತ್ತರಾಗುತ್ತಿರುವವರಲ್ಲಿ ಮೋಟಮ್ಮ ಅವರಿಗೆ ಮಾತ್ರ ಅವಕಾಶ ನೀಡಿದೆ. ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಎಂಬುದೂ ಎರಡನೇ ಬಾರಿ ಅವಕಾಶ ದೊರೆಯಲು ಕಾರಣವಾಗಿದೆ ಎಂದು ಗೊತ್ತಾಗಿದೆ.

ಇಕ್ಬಾಲ್ ಅಹಮ್ಮದ್ ಸರಡಗಿ 14ನೇ ಲೋಕಸಭೆಯಲ್ಲಿ ಗುಲ್ಬರ್ಗ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಈ ಕಾರಣಕ್ಕಾಗಿಯೇ ಸರಡಗಿ ಅವರನ್ನು ಮೇಲ್ಮನೆಗೆ ಕಳುಹಿಸಲು ಖರ್ಗೆ ತೀವ್ರ ಪ್ರಯತ್ನ ನಡೆಸಿದ್ದರು. ಸಂಸದ ಧರ್ಮಸಿಂಗ್ ಕೂಡ ಬೆಂಬಲಕ್ಕೆ ನಿಂತಿದ್ದರು. ಖರ್ಗೆ, ಧರ್ಮಸಿಂಗ್ ಪ್ರಭಾವದ ಜೊತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬುದು ಸರಡಗಿ ಅವರಿಗೆ ವರದಾನವಾಗಿದೆ.

ಪರಿಷತ್ ಚುನಾವಣೆಗೆ ಸ್ಪರ್ಧಿಸಲು ತುದಿಗಾಲ ಮೇಲೆ ನಿಂತಿದ್ದ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ಗೋವಿಂದರಾಜು ಹೆಸರು ಇರಲಿಲ್ಲ. ಕೊನೆ ಗಳಿಗೆಯಲ್ಲಿ ಅವರ ಪರ ಪ್ರಬಲ ಲಾಬಿ ನಡೆದಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಗೋವಿಂದರಾಜು ಪರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಲಾಬಿ ನಡೆಸಿದ್ದರು. ಈ ಕಾರಣಕ್ಕಾಗಿಯೇ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಕೊನೆ ಕ್ಷಣದಲ್ಲಿ ತೀರ್ಮಾನ ಕೈಗೊಂಡಿದೆ ಎಂಬ ಮಾತು ಕಾಂಗ್ರೆಸ್  ವಲಯದಲ್ಲಿ ಕೇಳಿಬಂದಿದೆ.

1999ರ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೋವಿಂದರಾಜು ಸೋಲು ಅನುಭವಿಸಿದ್ದರು. ನಂತರ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಬಳಿಕ ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಧಾನಸಭೆಯ ಸದಸ್ಯಬಲದ ಪ್ರಕಾರ ಮೂರು ಸ್ಥಾನಗಳನ್ನು ಮಾತ್ರ ಸಲೀಸಾಗಿ ಗೆಲ್ಲಲು ಕಾಂಗ್ರೆಸ್‌ಗೆ ಅವಕಾಶವಿದೆ. ಉಳಿದಂತೆ ಹೆಚ್ಚುವರಿ ಮತಗಳನ್ನು ಹೊಂದಿದವರಲ್ಲಿ ಮುಂಚೂಣಿಯಲ್ಲಿದೆ. ಈ ಅವಕಾಶವನ್ನು ಬಳಸಿಕೊಂಡು ನಾಲ್ಕನೇ ಸ್ಥಾನವನ್ನೂ ಪಡೆಯಲು ಮುಂದಾಗಿದೆ. ನಾಲ್ಕನೇ ಅಭ್ಯರ್ಥಿಯಾಗಲು ಬಲಿಜ ಸಮುದಾಯದ ಸೀತಾರಾಂ ಒಲವು ತೋರಿದ್ದರು. ಖರ್ಗೆ ಸೇರಿದಂತೆ ಕೆಲ ಪ್ರಮುಖ ನಾಯಕರು ಬೆಂಬಲಕ್ಕೆ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ಹೈಕಮಾಂಡ್ ಪರಿಗಣಿಸಿದೆ ಎಂದು ಗೊತ್ತಾಗಿದೆ.

 ಹಲವರಿಗೆ ನಿರಾಸೆ: ಮುಖಂಡರಾದ ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ನಿವೃತ್ತಿಯ ಹಾದಿಯಲ್ಲಿರುವ ಕೆ.ಸಿ.ಕೊಂಡಯ್ಯ, ವಿ.ಆರ್.ಸುದರ್ಶನ್, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮತ್ತಿತರರು ಟಿಕೆಟ್ ಬಯಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT