ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್: ಬಿಜೆಪಿ ಅಭ್ಯರ್ಥಿ ಅಂತಿಮ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಪರಿಷತ್‌ನ ಹಾಲಿ ಉಪ ಸಭಾಪತಿ ವಿಮಲಾಗೌಡ, ಸದಸ್ಯ ಡಿ.ಎಸ್.ವೀರಯ್ಯ ಸೇರಿದಂತೆ ಆರು ಮಂದಿಯ ಹೆಸರನ್ನು ಬಿಜೆಪಿ ರಾಜ್ಯ ಘಟಕ ಬುಧವಾರ ಅಂತಿಮಗೊಳಿಸಿದೆ.

ಪಕ್ಷದಿಂದ ಇತ್ತೀಚೆಗಷ್ಟೇ ಅಮಾನತುಗೊಂಡ ಬಿ.ಜೆ.ಪುಟ್ಟಸ್ವಾಮಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಘುನಾಥ ರಾವ್ ಮಲಕಾಪುರೆ, ಉಪಾಧ್ಯಕ್ಷ ಭಾನುಪ್ರಕಾಶ್ ಮತ್ತು ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರಿಗೂ ಜೂನ್ 11ರಂದು ನಡೆಯುವ ಪರಿಷತ್ ಚುನಾವಣೆಯಲ್ಲಿ ಅವಕಾಶ ನೀಡಲು ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ವಿಧಾನಸಭೆಯಲ್ಲಿನ ಸದಸ್ಯಬಲದ ಅನ್ವಯ ಆರು ಜನರನ್ನು ವಿಧಾನ ಪರಿಷತ್‌ಗೆ ಆಯ್ಕೆಮಾಡುವ ಅವಕಾಶವನ್ನು ಬಿಜೆಪಿ ಹೊಂದಿದೆ. ವಿಮಲಾಗೌಡ ಅವರನ್ನು ಮೂರನೇ ಬಾರಿ ಮತ್ತು ವೀರಯ್ಯ ಅವರನ್ನು ಎರಡನೇ ಬಾರಿ ವಿಧಾನಮಂಡಲದ ಮೇಲ್ಮನೆಗೆ ಕಳುಹಿಸಲುನಿರ್ಧರಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿರುವ ಪುಟ್ಟಸ್ವಾಮಿ ಅವರಿಗೆ ಬಿಜೆಪಿಯಿಂದ ಮೊದಲ ಬಾರಿಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ರಘುನಾಥ ರಾವ್, ಭಾನುಪ್ರಕಾಶ್ ಮತ್ತು ಸೋಮಣ್ಣ ಮೊದಲ ಬಾರಿಗೆ ಅವಕಾಶ ಪಡೆಯುತ್ತಿದ್ದಾರೆ.

ಮಲ್ಲೇಶ್ವರದಲ್ಲಿರುವ ಪಕ್ಷದ ರಾಜ್ಯ ಕಚೇರಿ `ಜಗನ್ನಾಥ ಭವನ~ದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಧಮೇಂದ್ರ ಪ್ರಧಾನ್ ಉಪಸ್ಥಿತಿಯಲ್ಲಿ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯ ಬಿಜೆಪಿಯ ಎಲ್ಲ ಪ್ರಮುಖ ಮುಖಂಡರು ಹಾಜರಾಗಿದ್ದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈಶ್ವರಪ್ಪ ಮತ್ತು ಸದಾನಂದ ಗೌಡ ಅವರೊಂದಿಗೆ ಮುನಿಸಿಕೊಂಡಿದ್ದ ಯಡಿಯೂರಪ್ಪ ಸಭೆಗೆ ಹಾಜರಾಗಿ ತಮ್ಮ ಬೆಂಬಲಿಗರ ಪರ ಲಾಬಿ ನಡೆಸಿದರು.

ಪುಟ್ಟಸ್ವಾಮಿ ಮತ್ತು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಅವರಿಗೆ ಟಿಕೆಟ್ ನೀಡಲೇಬೇಕೆಂದು ಸಭೆಯಲ್ಲಿ ಪಟ್ಟು ಹಿಡಿದಿದ್ದರು. ಕೊನೆಗೂ ಪುಟ್ಟಸ್ವಾಮಿ ಅವರಿಗೆ ಅವಕಾಶ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು.

ಅಚ್ಚರಿಗೆ ಕಾರಣ: ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪುಟ್ಟಸ್ವಾಮಿ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿತ್ತು.

 ಈಗ ಅವರನ್ನೇ ಪರಿಷತ್ ಚುನಾವಣೆಯಲ್ಲಿ ಕಣಕ್ಕಿಳಿಸಲು ತೀರ್ಮಾನಿಸಿರುವುದು ಪಕ್ಷದ ವಲಯದಲ್ಲೇ ಅಚ್ಚರಿಗೆ ಕಾರಣವಾಗಿದೆ.

ಪರಿಶಿಷ್ಟ ಜಾತಿಗೆ (ಬಲ) ಸೇರಿದ ವೀರಯ್ಯ, ಕುರುಬ ಸಮುದಾಯಕ್ಕೆ ಸೇರಿದ ಮಲಕಾಪುರೆ, ಸೋಮಣ್ಣ ಬೇವಿನಮರದ ಮತ್ತು ಬ್ರಾಹ್ಮಣ ಸಮುದಾಯದ ಭಾನುಪ್ರಕಾಶ್ ಹೆಸರನ್ನು ದೀರ್ಘ ಚರ್ಚೆಯ ಬಳಿಕ ಅಂತಿಮಗೊಳಿಸಲಾಗಿದೆ.

ವೀರಯ್ಯ ಅವರು ಯಡಿಯೂರಪ್ಪ ಗುಂಪಿನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಉಳಿದವರು ಯಾವುದೇ ಗುಂಪಿನಲ್ಲೂ ಬಹಿರಂಗವಾಗಿ ಕಾಣಿಸಿಕೊಂಡವರಲ್ಲ.

ವಿಮಲಾ ಗೌಡ ಅವರನ್ನು ಮೂರನೇ ಬಾರಿ ಪರಿಷತ್‌ಗೆ ಆಯ್ಕೆ ಮಾಡುವ ಪ್ರಸ್ತಾವಕ್ಕೆ ಕೆಲವರು ಸಭೆಯಲ್ಲೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಚರ್ಚೆಯ ಬಳಿಕ ಅವರ ಹೆಸರನ್ನೂ ಅಂತಿಮ ಪಟ್ಟಿಯಲ್ಲಿ ಸೇರಿಸಲಾಯಿತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಒಗ್ಗಟ್ಟಿನ ಮಂತ್ರ: ಚುನಾವಣಾ ಸಮಿತಿ ಸಭೆಯ ಬಳಿಕ ಆರು ಜನರ ಪಟ್ಟಿಯನ್ನು ಈಶ್ವರಪ್ಪ ಪ್ರಕಟಿಸಿದರು. ನಂತರ ಈಶ್ವರಪ್ಪ, ಯಡಿಯೂರಪ್ಪ ಮತ್ತಿತರರು ಒಗ್ಗಟ್ಟಿನ ಮಂತ್ರ ಜಪಿಸಿದರು.

`ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲ ಸಮಸ್ಯೆಗಳಿಗೂ ತೆರೆಬಿದ್ದಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ~ ಎಂದು ಈ ನಾಯಕರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT