ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷೆಯಲ್ಲಿ ಪುಸ್ತಕ ಉಚಿತ, ಖಚಿತ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕನ್ನಡ ಪುಸ್ತಕ ಓದುವ ಸಾಹಿತ್ಯ ಪ್ರಿಯರಿಗೆ ಸಂತಸದ ಸುದ್ದಿ! ನಿಮಗೆ ಇಷ್ಟವಾಗುವ ಹಾಗೂ ನೀವೇ ಆಯ್ದುಕೊಂಡ ಪುಸ್ತಕವನ್ನು ಉಚಿತವಾಗಿ ಪಡೆಯುವ ಓದುವ ಸದವಕಾಶವನ್ನು ಮತ್ತೊಮ್ಮೆ ಕಲ್ಪಿಸಿದೆ ಬಸವನಗುಡಿಯ `ಸೃಷ್ಟಿ ವೆಂಚರ್ಸ್‌~.

`ಪುಸ್ತಕ ಪರಿಷೆ~ ಶೀರ್ಷಿಕೆ ಅಡಿಯಲ್ಲಿ ಬಸವನಗುಡಿಯಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಏರ್ಪಡಿಸಿ ಆ ಮೂಲಕ ಸಾವಿರಾರು ಪುಸ್ತಕ ಪ್ರಿಯರಿಗೆ ಉಚಿತವಾಗಿ ಒಂದು ಕನ್ನಡ ಪುಸ್ತಕವನ್ನು ನೀಡಿ, ಪರೋಕ್ಷವಾಗಿ ಅವರಲ್ಲಿ ಓದುವ ಅಭಿರುಚಿಯನ್ನು ಬೆಳೆಸುತ್ತಾ ಬಂದಿರುವ ಸೃಷ್ಟಿ ವೆಂಚರ್ಸ್‌ನ ಈ `ಪುಸ್ತಕ ಪರಿಷೆ~ಗೆ ನಾಲ್ಕರ ಹರೆಯ!

ಸೃಷ್ಟಿ ವೆಂಚರ್ಸ್‌ ಸಂಸ್ಥೆ ಮತ್ತು ಅನುಭವ ಶಾಲೆಯ ಸಹಯೋಗದ ಈ ಪರಿಷೆ ಭಾನುವಾರ (ಅ.30) ಒಂದು ದಿನ ಮಾತ್ರ. ಇಲ್ಲಿ ಸಾಹಿತ್ಯ, ಕಥೆ, ಕವನ, ಕಾದಂಬರಿ, ಸೇರಿದಂತೆ  ಸುಮಾರು ಒಂದು ಲಕ್ಷಕ್ಕೂ ಅಧಿಕ ಕನ್ನಡ ಪುಸ್ತಕಗಳನ್ನು ಇಡಲಾಗುತ್ತದೆ. ಚಿಣ್ಣರ ಕಥೆ ಪುಸ್ತಕಗಳಿಂದ ಹಿರಿಯ ಸಾಹಿತಿಗಳ ಕೃತಿಗಳೂ ಇಲ್ಲಿರುತ್ತವೆ. ಈ ಪರಿಷೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ತಮಗಿಷ್ಟದ ಒಂದು ಕನ್ನಡ ಪುಸ್ತಕವನ್ನು ಉಚಿತವಾಗಿ ಪಡೆಯಬಹುದು.

`ಸಾರ್ವಜನಿಕರಲ್ಲಿ ಇತ್ತೀಚಿನ ದಿನಗಳಲ್ಲಿ ಓದುವ ಪ್ರವೃತ್ತಿ ಕ್ಷೀಣಿಸುತ್ತಿದೆ. ಅದರಲ್ಲೂ ಕನ್ನಡ ಪುಸ್ತಕ ಕೊಂಡು ಓದುವ ಪ್ರವೃತ್ತಿಯಂತೂ ಇನ್ನೂ ಕಡಿಮೆ. ಅವರಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ನಾವು  ಪ್ರತಿ ಆರು ತಿಂಗಳಿಗೊಮ್ಮೆ `ಪುಸ್ತಕ ಪರಿಷೆ~ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬಂದಿದ್ದೇವೆ. ಈ ಪರಿಷೆಯ ಮೂಲಕ ಇದುವರೆಗೂ ಸಾವಿರಾರು ಪುಸ್ತಕ ಪ್ರಿಯರು ಉಚಿತವಾಗಿ ಕನ್ನಡ ಪುಸ್ತಕಗಳನ್ನು ಪಡೆದು ಇದರ ಸದುಪಯೋಗ ಪಡೆದುಕೊಂಡಿದ್ದಾರೆ~ ಎನ್ನುತ್ತಾರೆ ಸೃಷ್ಟಿ ವೆಂಚರ್ಸ್‌ನ ನಾಗರಾಜ ನಾವುಂದ.

`ಇಲ್ಲಿ ಪುಸ್ತಕಗಳ ಮಾರಾಟ ಅಥವಾ ಖರೀದಿಗೆ ಅವಕಾಶ ಇಲ್ಲ. ಆಸಕ್ತರು ತಮ್ಮಲ್ಲಿದ್ದ, ತಾವು ಓದಿ ಮುಗಿಸಿದ ಪುಸ್ತಕಗಳನ್ನು ಈ ಪರಿಷೆಗೆ ಉಚಿತವಾಗಿ ಕೊಡಬಹುದು. ಆ ಪುಸ್ತಕಗಳನ್ನು ನಾವು ಇತರರಿಗೆ ಉಚಿತವಾಗಿಯೇ ನೀಡುತ್ತೇವೆ. ಓದುವ ಸಂಸ್ಕೃತಿಯನ್ನು ಬೆಳೆಸುವುದೇ ಪರಿಷೆ ಉದ್ದೇಶ~ ಎನ್ನುವುದು ಅವರ ವಿವರಣೆ.

ಸಾರ್ವಜನಿಕರು ತಮ್ಮಲಿದ್ದ, ಓದಿದ ಪುಸ್ತಕಗಳನ್ನು ಪರಿಷೆಗೆ ಉಚಿತವಾಗಿ ಕೊಟ್ಟು, ತಮ್ಮ ಇಷ್ಟದ ಮತ್ತೊಂದು ಪುಸ್ತಕವನ್ನು ಉಚಿತವಾಗಿ ಪಡೆಯಬಹುದು. ಈ ಪರಿಷೆಗೆ ಬರುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಪರಿಷೆ ಸ್ಥಳ: ವಾಲಿಬಾಲ್ ಕ್ರೀಡಾಂಗಣ, ನೆಟ್ಟಕಲ್ಲಪ್ಪ ಸರ್ಕಲ್, ಬಸವನಗುಡಿ. ಬೆಳಿಗ್ಗೆ 10 ರಿಂದ ಸಂಜೆ 5.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT