ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕೃತ ತೆರಿಗೆ ಒಪ್ಪಂದ ಜಾರಿ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಜಿನೀವಾ / ನವದೆಹಲಿ (ಪಿಟಿಐ): ಭಾರತ ಮತ್ತು ಸ್ವಿಟ್ಜರ್‌ಲೆಂಡ್ ಮಧ್ಯೆ ಪರಿಷ್ಕೃತ ತೆರಿಗೆ ಒಪ್ಪಂದವು ಸೋಮವಾರದಿಂದ ಜಾರಿಗೆ ಬಂದಿದ್ದು, ಕಪ್ಪು ಹಣದ ಮೂಲ ಮತ್ತು ತೆರಿಗೆ ತಪ್ಪಿಸಿದ ನಿರ್ದಿಷ್ಟ ಪ್ರಕರಣಗಳ ಮಾಹಿತಿ ಪಡೆಯಲು ಇದರಿಂದ ಸಾಧ್ಯವಾಗಲಿದೆ.

ವಿದೇಶಗಳಲ್ಲಿ ಇರುವ ಕಪ್ಪು ಹಣದ ಬಗ್ಗೆ ದೇಶದಲ್ಲಿ ತೀವ್ರ ಸ್ವರೂಪದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಒಪ್ಪಂದ ಜಾರಿಗೆ ಬಂದಿದೆ.ಈ ವರ್ಷದ ಜನವರಿಯಿಂದಲೇ ಭಾರತವು ತೆರಿಗೆ ಮಾಹಿತಿ ಪಡೆಯಬಹುದು ಎಂದು ಸ್ವಿಸ್ ಸರ್ಕಾರ ಹೇಳಿದೆ. ಈ ವರ್ಷದ ಏಪ್ರಿಲ್ ತಿಂಗಳಿನಿಂದ ನಿರ್ದಿಷ್ಟ ಪ್ರಕರಣಗಳಲ್ಲಿ ಮಾತ್ರ ಮಾಹಿತಿ ಪಡೆಯುವುದಾಗಿ ನೇರ ತೆರಿಗೆ ಕೇಂದ್ರೀಯ  ಮಂಡಳಿಯು (ಸಿಬಿಡಿಟಿ) ತಿಳಿಸಿದೆ. ತಿದ್ದುಪಡಿಯಾಗಿರುವ ದುಪ್ಪಟ್ಟು ತೆರಿಗೆ  ಒಪ್ಪಂದವು ಜಾರಿಗೆ ಬಂದಿರುವುದರಿಂದ ತೆರಿಗೆ ತಪ್ಪಿಸಿದವರ ವಿವರಗಳನ್ನು ಸ್ವಿಟ್ಜರ್‌ಲೆಂಡ್‌ನಿಂದ ಪಡೆಯಲು ಈಗ ಹಾದಿ ಸುಗಮವಾದಂತೆ ಆಗಿದೆ.

ಅಂತರರಾಷ್ಟ್ರೀಯ ಶಿಷ್ಟಾಚಾರ ಅನ್ವಯ ಮಾಹಿತಿ ವಿನಿಮಯಕ್ಕೆ ಈ ಒಪ್ಪಂದ ಅವಕಾಶ ಕಲ್ಪಿಸಿಕೊಡಲಿದೆ ಎಂದು ಸ್ವಿಟ್ಜರ್‌ಲೆಂಡ್‌ನ ಹಣಕಾಸು ಇಲಾಖೆ  ಹೇಳಿಕೆ ತಿಳಿಸಿದೆ.2012ರ ಜನವರಿ 1 ರಿಂದ ಆರಂಭಗೊಳ್ಳುವ ತೆರಿಗೆ ವರ್ಷದಲ್ಲಿ ವರಮಾನದ ಮೂಲ ಯಾವುದು ಎನ್ನುವುದನ್ನು ತಿಳಿದುಕೊಳ್ಳಲು ಈ ಒಪ್ಪಂದ ನೆರವಾಗಲಿದೆ. ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ ಈ ಒಪ್ಪಂದವು 2011ರ ಜನವರಿ 1ರಿಂದಲೇ ಅನ್ವಯಗೊಳ್ಳಲಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT