ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಅಧ್ಯಯನಕ್ಕೆ ಅಧಿಕಾರಿಗಳಿಗೆ ಸೂಚನೆ

Last Updated 1 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಬೆಳಗಾವಿ: `ಸಕ್ಕರೆ ಕಾರ್ಖಾನೆಗಳ ಕಾಕಂಬಿಯಂತಹ ತ್ಯಾಜ್ಯಗಳ ಕಾಂಪೋಸ್ಟ್ ಗೊಬ್ಬರ ಬಳಕೆಯಿಂದ ರೈತರ ಹೊಲಗಳು ಬಂಜೆಯಾಗುತ್ತಿರುವ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೂಡಲೇ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಬೇಕು~ ಎಂದು ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ಲೋಕ ಅದಾಲತ್ ಅಧ್ಯಕ್ಷ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ ನಿರ್ದೇಶನ ನೀಡಿದರು.

ಬೆಳಗಾವಿಯ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ವಿಭಾಗ ಮಟ್ಟದ `ಲೋಕ ಅದಾಲತ್~ಅನ್ನು ಶನಿವಾರ ನಡೆಸಿದ ಅವರು, `ಸಕ್ಕರೆ ಕಾರ್ಖಾನೆಗಳು ತ್ಯಾಜ್ಯವನ್ನು ಮಣ್ಣಿನೊಂದಿಗೆ ಬೆರೆಸಿ ರೈತರಿಗೆ ನೀಡುತ್ತಿವೆ. ಇದನ್ನು ಹಾಕಿದ್ದರಿಂದ ಹೊಲ ಬಂಜೆಯಾಗುತ್ತಿದೆ. ಹೀಗಿದ್ದರೂ ಪರಿಸರ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮವನ್ನು ಏಕೆ ಕೈಗೊಳ್ಳುತ್ತಿಲ್ಲ~ ಎಂದು ತರಾಟೆಗೆ ತೆಗೆದುಕೊಂಡರು.

`ಸಕ್ಕರೆ ಕಾರ್ಖಾನೆಗಳ ತ್ಯಾಜ್ಯಯುಕ್ತ ಗೊಬ್ಬರವನ್ನು ಬಳಸಬಹುದು ಎಂದು ಕೃಷಿ ವಿಶ್ವವಿದ್ಯಾಲಯದ ತಜ್ಞರು ವರದಿ ನೀಡಿದ್ದಾರೆ~ ಎಂದು ಪರಿಸರ ಅಧಿಕಾರಿಗಳು ಸಭೆಗೆ ಮಾಹಿತಿಯನ್ನು ನೀಡಿದರು. ಇದನ್ನು ಲೋಕ ಅದಾಲತ್ ಸದಸ್ಯ ಹಾಗೂ ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ತಳ್ಳಿಹಾಕಿದರು.

`ಸಕ್ಕರೆ ಕಾರ್ಖಾನೆಗಳ ತ್ಯಾಜ್ಯವನ್ನು ರೈತರ ಜಮೀನಿನಲ್ಲಿ ಹಾಕುತ್ತಿರುವುದರಿಂದ ಭೂಮಾಲಿನ್ಯ ಆಗುತ್ತಿದೆ. ಕೃಷಿ ವಿವಿ ತಜ್ಞರು ನೀಡಿರುವ ಮಾಹಿತಿ ಸತ್ಯಕ್ಕೆ ದೂರವಾಗಿದೆ. ಪರಿಸರ ಮಾಲಿನ್ಯ ಮಂಡಳಿಯ ಅಧಿಕಾರಿಗಳು ವರದಿಯ ಸತ್ಯತೆಯನ್ನು ಪರಿಶೀಲಿಸಬೇಕಾಗಿತ್ತು. ಹೀಗಾಗಿ ಇದೀಗ ಪುನಃ ಈ ಬಗ್ಗೆ ಅಧ್ಯಯನ ನಡೆಸಿದ ಬಳಿಕ  ನಿರ್ಧಾರ ಕೈಗೊಳ್ಳಿರಿ. ಕೃಷಿ ವಿವಿ ತಜ್ಞರು ತಾವು ನೀಡಿದ ವರದಿಯನ್ನು ಪುನಃ ಪರಿಶೀಲನೆ ನಡೆಸಬೇಕು~ ಎಂದು ಸೂಚಿಸಿದರು.

`ಸಕ್ಕರೆ ಕಾರ್ಖಾನೆಯವರು ಮೀಸಲು ಅರಣ್ಯ ಪ್ರದೇಶಗಳಲ್ಲೂ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ. ರಾತ್ರಿ ಹೋಗಿ ರೈತರ ಜಮೀನಿನಲ್ಲಿ ಹಾಕಿ ಬರುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಜೀವವೈವಿಧ್ಯ ನಾಶವಾಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು~ ಎಂದು ನ್ಯಾಯಮೂರ್ತಿಗಳು ಆದೇಶಿಸಿದರು.

ಅರಣ್ಯೀಕರಣ: `ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೈಗಾರಿಕೆಗಳು ಅರಣ್ಯೀಕರಣ ಕೈಗೊಳ್ಳುವುದನ್ನು ಕಡ್ಡಾಯಗೊಳಿಸಿದ್ದರೂ, ಮನ ಬಂದಂತೆ ಸಸಿ ನೆಡುತ್ತಿವೆ. ಇದನ್ನು ಬಿಟ್ಟು ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ವೈಜ್ಞಾನಿಕವಾಗಿ ಅರಣ್ಯೀಕರಣ ಕಾರ್ಯಕ್ರಮಗಳನ್ನು ರೂಪಿಸಬೇಕು~ ಎಂದು ಲೋಕ ಅದಾಲತ್‌ನ ಸದಸ್ಯ ಯಲ್ಲಪ್ಪ ರೆಡ್ಡಿ ಸಲಹೆ ನೀಡಿದರು.

`ಮುಂಬರುವ ಮುಂಗಾರು ಮಳೆಯ ಅವಧಿಯಲ್ಲಿ ಅನುಷ್ಠಾನಗೊಳಿಸಲು ಅತ್ಯುತ್ತಮ ಕೈಗಾರಿಕಾ ಅರಣ್ಯೀಕರಣ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಹಮ್ಮಿಕೊಳ್ಳಬೇಕು~ ಎಂದು ಅವರು ಸೂಚಿಸಿದರು.
ಪ್ರಾದೇಶಿಕ ಆಯುಕ್ತ ಗಂಗಾರಾಮ್ ಬಡೇರಿಯಾ, ಬೆಳಗಾವಿ ವಿಭಾಗದ ಜಿಲ್ಲಾಧಿಕಾರಿ ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪುನರ್ಬಳಕೆಗೆ ಸೂಚನೆ:
`ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಯಲ್ಲಿ ಸೃಷ್ಟಿಯಾಗುತ್ತಿರುವ ಸುಮಾರು 2.5 ಲಕ್ಷ ಲೀ. ದ್ರವ ತ್ಯಾಜ್ಯವನ್ನು ಪುನರ್ ಬಳಕೆ ಘಟಕವನ್ನು ಕೂಡಲೇ ಆರಂಭಿಸಬೇಕು. ಇದರಿಂದ ಸುಮಾರು 1 ಲಕ್ಷ ಲೀ. ನೀರನ್ನು ಪುನಃ ಬಳಸಿಕೊಳ್ಳಲು ಸಾಧ್ಯವಿದೆ.

ಅಲ್ಲದೇ ಇದರಿಂದಾಗಿ ನೀರಿನ ಕರ ಪಾವತಿಸುವುದರಲ್ಲಿ ಪ್ರತಿ ತಿಂಗಳು ಸುಮಾರು 1.5 ಲಕ್ಷ ರೂಪಾಯಿ ಉಳಿತಾಯವಾಗಲಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಪುನರ್ ಬಳಕೆ ಘಟಕ ನಿರ್ಮಿಸಲು ಜಿಲ್ಲಾಧಿಕಾರಿಗಳು ಒತ್ತು ನೀಡಬೇಕು~ ಎಂದು ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ಸೂಚಿಸಿದರು.

ನರಗುಂದದ ರೈತ ಮುಖಂಡ ಹೇಮಂತ ಮಾತನಾಡಿ, `ಮಲಪ್ರಭಾ ಹಾಗೂ ಘಟಪ್ರಭಾ ಯೋಜನೆಯ ನೀರು ಕೇವಲ ಕಬ್ಬಿನ ಬೆಳೆಗಷ್ಟೇ ಎಂಬಂತಾಗಿದೆ. ನೀರಿನ ಸಮರ್ಪಕ ಬಳಕೆ ಮಾಡಿಕೊಳ್ಳಲು ಸೂಚಿಸಬೇಕು. ಇದರ ನೀರನ್ನು ಬಳಸಿಕೊಂಡು ಮೇವು ಹಾಗೂ ವಿವಿಧ ಧಾನ್ಯಗಳ ಬೀಜಗಳನ್ನು ಬೆಳೆಯುವುದನ್ನು ಕಡ್ಡಾಯ ಗೊಳಿಸಬೇಕು. ಬರ ನಿರೋಧಕ ಬೀಜಗಳ ಉತ್ಪಾದನೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು~ ಎಂದು ಮನವಿ ಮಾಡಿದರು.

ಬೆಳಗಾವಿಯ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ, ವಿಜಾಪುರದ ಶಿವಯೋಗಿ ಕಳಸದ, ಬಾಗಲ ಕೋಟೆಯ ಎ.ಎಂ. ಕುಂಜಪ್ಪ, ಧಾರವಾಡದ ಸಮೀರ್ ಶುಕ್ಲಾ, ಗದಗದ ಪಾಂಡುರಂಗ ನಾಯಕ, ಹಾವೇರಿಯ ಎಚ್.ಜಿ. ಶ್ರೀವರ, ಹಾಗೂ ಉತ್ತರ ಕನ್ನಡದ ಜಿಲ್ಲಾಧಿಕಾರಿ ಇಂಕಾಂಗ್ಲೊ ಜಮೀರ್ ತಮ್ಮ ಜಿಲ್ಲೆಗಳಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT