ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ

Last Updated 25 ಸೆಪ್ಟೆಂಬರ್ 2013, 5:19 IST
ಅಕ್ಷರ ಗಾತ್ರ

ಹರಿಹರ:   ನಗರದ ತ್ಯಾಜ್ಯ ನೀರು ಪರಿಷ್ಕರಣೆ ಘಟಕ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸ ಬೇಕಾಗುತ್ತದೆ ಎಂದು ಬೆಂಗಳೂರಿನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಎಸ್. ವೆಂಕಟೇಶ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರಕ್ಕೆ ಮಂಗಳವಾರ ಭೇಟಿ ನೀಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳ ತಂಡ, ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಪರಿಶೀಲನೆ ನಡೆಸಿ ಮಾತನಾಡಿದರು.

ನದಿಪಾತ್ರದಲ್ಲಿರುವ ನಗರಗಳ ತಾಜ್ಯ ನೀರನ್ನು ಶುದ್ಧೀಕರಣಗೊಳಿಸದೇ ನದಿಗೆ ಬಿಡುವುದು ಅಪರಾಧ ನಗರದ ತ್ಯಾಜ್ಯ ನೀರು ಘಟಕ ಕೆಲಸ ನಿರ್ವಹಿಸದ ಕಾರಣ ತ್ಯಾಜ್ಯ ನೀರು ಸಂಸ್ಕರಣೆ ಆಗಿಲ್ಲ ಎಂದು ದಾವಣಗೆರೆ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಉಪಪರಿಸರ ಅಧಿಕಾರಿ ಎಂ.ಎಸ್.ಮಹೇಶ್ವರಪ್ಪ, ನಗರಸಭೆ ಪರಿಸರ ಎಂಜಿನಿಯರ್‌ ಮಹೇಶ್ ಕೋಡಬಾಳ್ ಹಾಗೂ ಕೆಎಂಆರ್ ಪಿ ಎಇಇ ರಾಜಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು.

15 ದಿನಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಪುನರ್ ಕಾರ್ಯಾರಂಭಗೊಳ್ಳದೇ ಇದ್ದರೆ, ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪೌರಾಯುಕ್ತ ಎಂ.ಕೆ. ನಲವಡಿ ಮಾತನಾಡಿ, ನಗರಸಭೆಯಿಂದ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲು ನಾನು ಸಿದ್ಧನಿದ್ದೇನೆ. ಯುಜಿಡಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಕಾರ್ಯ ವಿಳಂಬದಿಂದಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸಮಸ್ಯೆಗೆ ಸಿಲುಕಿದೆ. ಪರಿಸರ ಎಂಜಿನಿಯರ್‌ ಹಾಗೂ ಕೆಎಂಆರ್‌ಪಿ ಅಧಿಕಾರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸದೇ ಇದ್ದರೆ, ನೋಟಿಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ, ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕಕ್ಕೆ ಭೇಟಿದ ಅಧಿಕಾರಿಗಳು, ನಗರಸಭೆಯ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ಕಸದಿಂದ ಗಾಜು, ಚಪ್ಪಲಿ, ಲೋಹದ ತುಂಡು ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಬೇರ್ಪಡಿಸಿಬೇಕು. ಹೀಗೆ ಬೇರ್ಪಡಿಸಿದ ಕಸವನ್ನು ಕೊಪ್ಪಳ ಮಾದರಿಯ ಯಂತ್ರದ ಮೂಲಕ ಸಂಸ್ಕರಿಸಬೇಕು ಎಂದು ತಿಳಿಸಿದರು.

ಸಂಸ್ಕರಣಾ ಘಟಕದ ಸ್ಥಾಪನೆಗಾಗಿ ಪರಿಸರ ಇಲಾಖೆಯಿಂದ ` 4ಲಕ್ಷ ಅನುದಾನ ನೀಡಿದ್ದೇವೆ. ಸಂಸ್ಕರಿಸಿದ ಕಸವು ಸಾವಯವ ಗೊಬ್ಬರ ಆಗುತ್ತದೆ. ಈ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ನಗರಸಭೆಗೆ ಆದಾಯ ಬರುತ್ತದೆ ಹಾಗೂ ಈ ಘಟಕ ಸ್ಥಾಪನೆಯಿಂದ ಶೇ. 60ರಿಂದ 80ರಷ್ಟು ಘನತ್ಯಾಜ್ಯ ವಿಲೇವಾರಿಯಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ವಿ.ಆನಂದ್, ನಗರಸಭೆ ಕಿರಿಯ ಎಂಜಿನಿಯರ್‌  ಸಿ.ಬಿ.ಮಾಲತೇಶ, ಕಿರಿಯ ಎಂಜಿನಿಯರ್‌ ರಾಮಕೃಷ್ಣಗೌಡ, ಆರೋಗ್ಯ ನಿರೀಕ್ಷಕರಾದ ರವಿಪ್ರಕಾಶ್, ಕೋಡಿ ಭೀಮರಾಯ್, ಸಂತೋಷ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT