ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಜಾಗೃತಿಗೆ ಕಾವಾ ಕುಂಚ

Last Updated 2 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಆಧುನೀಕರಣ ಹೆಚ್ಚಾದಂತೆ ಮನುಷ್ಯನ ಆಸೆ, ಆಕಾಂಕ್ಷೆಗಳೂ ಹೆಚ್ಚುತ್ತಿವೆ. ಪ್ರಗತಿಯ ಕೊಡಲಿಗೆ ಮರಗಳು ಬಲಿ ಆಗುತ್ತಿವೆ. ಸುತ್ತಮುತ್ತಲೂ ಕಾಂಕ್ರೀಟ್ ಕಾಡು ನಿರ್ಮಾಣವಾಗುತ್ತಿದೆ.

ಪರಿಸರ ನಾಶದ ಮೂಲಕ ಅಭಿವೃದ್ಧಿ ಸರಿಯಾದ ಬೆಳವಣಿಗೆಯೇ ಎಂಬುದನ್ನು ಪ್ರಸಕ್ತ ಸನ್ನಿವೇಶದಲ್ಲಿ ನಾವೆಲ್ಲ ಚಿಂತಿಸಬೇಕಾದ ಪ್ರಮುಖ ಸಂಗತಿ. ಬದುಕಿನ ಸ್ವಾರ್ಥಕೋಸ್ಕರ ಮರಗಳನ್ನು ಬಲಿ ಕೊಡುವುದು ಎಷ್ಟರ ಮಟ್ಟಿಗೆ ಸರಿ?

ಮನುಷ್ಯನಿಗೂ ಮರಗಳಿಗೂ ಇರುವ ಭಾವನಾತ್ಮಕ ನಂಟು ಶಿಥಿಲವಾಗುತ್ತಿರುವ ಈ ಹೊತ್ತಿನಲ್ಲಿ ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯ (ಕಾವಾ) ವಿದ್ಯಾರ್ಥಿಗಳು ಹೊಸ ಭರವಸೆ ಮೂಡಿಸಿದ್ದಾರೆ.

`ಕಾವಾ~ ವಿದ್ಯಾರ್ಥಿಗಳಾದ ಪ್ರಶಾಂತ್ ಮತ್ತು ಕೌಶಿಕ್ ತಮ್ಮ ಮಿತ್ರರೊಂದಿಗೆ ಸೇರಿ ಚಿತ್ರಕಲೆಯ ಮೂಲಕ  ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಮರಗಳ ಮೇಲೆ ಪರಿಸರ ಜಾಗೃತಿ ಚಿತ್ರಗಳನ್ನು ಬಿಡಿಸುವ ಇವರ ಶ್ರಮ ಗಮನಸೆಳೆಯುತ್ತದೆ.

ಇದೊಂದು ಪುಟ್ಟ ಪ್ರಯತ್ನ. ಆದರೆ, ಯಾವುದೇ ದೊಡ್ಡ ಪ್ರಯತ್ನದ ಮೊದಲ ಹೆಜ್ಜೆ ತುಂಬಾ ಚಿಕ್ಕದಿರುತ್ತದೆ. ನಂತರ ಅದು ತ್ರಿವಿಕ್ರಮಾಕಾರವಾಗಿ ಬೆಳೆದಿರುತ್ತದೆ.
ಸದಾ ಚಿತ್ರಕಲೆಯ ಗುಂಗಿನಲ್ಲಿ ನಿರತರಾಗಿರುವ ಈ ವಿದ್ಯಾರ್ಥಿಗಳು ಕುಂಚ ಹಿಡಿದು ಪರಿಸರ ಜಾಗೃತಿಗೆ ನಿಂತಿರುವುದು ವಿಶೇಷ.
 
ಮರಗಳ ಕಾಂಡದ ಮೇಲೆ ಮೂಡಿರುವ ಬಣ್ಣಗಳ ಕಾಮನಬಿಲ್ಲು ಕಣ್ಣಿಗೂ ಮನೋಹರ. ಚಿತ್ರಕಲೆಯ ಮೂಲಕ ತಮ್ಮ ಪ್ರತಿಭೆಯನ್ನು ತೋರ್ಪಡಿಸಿಕೊಳ್ಳುತ್ತಿದ್ದವರು ಈಗ ಕಲೆಯ ಮೂಲಕ ಪ್ರಕೃತಿ ಸೇವೆಗೂ ನಿಂತಿದ್ದಾರೆ.

ಕಲೆಯ ಮೂಲಕ ಪರಿಸರ ಜಾಗೃತಿಗೆ ಯಾಕೆ ಪ್ರಯತ್ನಿಸಬಾರದು ಎನ್ನುವ ಯೋಚನೆಯೇ `ಮರಗಳ ಮೇಲೆ ಚಿತ್ರ ಮೂಡಲು~ ಪ್ರಮುಖ ಕಾರಣ ಎನ್ನುತ್ತಾರೆ ಈ ವಿದ್ಯಾರ್ಥಿಗಳು. ಮರದ ಕಾಂಡದಲ್ಲಿ ಚಿತ್ರಗಳನ್ನು ಬಿಡಿಸಿ ಜನರಲ್ಲಿ  ಜಾಗೃತಿ ಏಕೆ ಉಂಟು ಮಾಡಬಾರದೇಕೆ ಎಂದು ಅನಿಸಿತು.

ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ಚಿತ್ರ ಬಿಡಿಸಿದರೆ ಹೇಗೆ ಎನ್ನುವ ಯೋಚನೆಯೂ ಬಂತು. ಮನದಲ್ಲಿ ಮೂಡಿದ್ದನ್ನು ಮರಗಳ ಮೇಲೆ ಪ್ರಯೋಗಿಸಿದ್ದೇವೆ ಎನ್ನುತ್ತಾರೆ ಪ್ರಶಾಂತ್.

ವೃಕ್ಷ ಚಿತ್ರದ ವಿಶೇಷತೆ: ಮೈಸೂರಿನ ನಗರ ಪಾಲಿಕೆ ವ್ಯಾಪ್ತಿಯೊಳಗೆ ಬರುವ ಕುಕ್ಕರಹಳ್ಳಿ ಇಂದಿಗೂ ಹಳ್ಳಿಯ ಸೊಗಡನ್ನು ಉಳಿಸಿಕೊಂಡಿದೆ. ಈ ಪ್ರದೇಶವು ನಗರಕ್ಕೆ ಹಾದು ಹೋಗುವ ಮುಖ್ಯ ರಸ್ತೆಯನ್ನು ಹೊಂದಿದೆ. ರಸ್ತೆ ಪಕ್ಕದಲ್ಲಿ ಹಲವಾರು ಮರಗಳಿವೆ. ವಿದ್ಯಾರ್ಥಿಗಳು ರಾಸಾಯನಿಕ ಬಳಸದ ಪರಿಸರ ಸ್ನೇಹಿ ಬಣ್ಣಗಳ ಮೂಲಕ ಇಲ್ಲಿನ ಮರದ ಮೇಲೆ ಚಿತ್ರ ಬಿಡಿಸಿದ್ದಾರೆ.

ಬಣ್ಣಕ್ಕೆ ತಗಲುವ ವೆಚ್ಚವನ್ನು ಸ್ನೇಹಿತರಿಂದ ಸಂಗ್ರಹಿಸಿದ್ದಾರೆ. ಬಾದಲ್ ಎಂಬ ಕಲಾವಿದನ ಸಲಹೆ ಪಡೆದು ಮರಗಳಿಗೆ ಬಣ್ಣ ತುಂಬಿದರು. ಕಾಂಡಗಳಲ್ಲಿ ಚಿತ್ರ ಅರಳಿತು. ಪ್ರಯಾಣಿಕರ ಮುಖದಲ್ಲಿ ನಗುವೂ ಅರಳಿತು. ಪರಿಸರ ಜಾಗೃತಿ ಮೂಡಿಸುವಂತ ಚಿತ್ರಗಳಿಗೆ ಪ್ರಶಾಂತ್ ಮತ್ತು ಕೌಶಿಕ್ ಜೀವ ತುಂಬಿದರು.

ಮನುಷ್ಯ ಮತ್ತು ಮರಕ್ಕಿರುವ ಸಂಬಂಧ, ವೃಕ್ಷ ರಕ್ಷಣೆ, ಪರಿಸರ ನಾಶ, ಗೃಹ ಬಳಕೆಗೆ ಮರಗಳ ಕಡಿಯುವ ಪ್ರಕ್ರಿಯೆ, ಉರುವಲು, ಕಾಂಕ್ರೀಟ್ ಕಾಡು ಇತ್ಯಾದಿ ಸಂಗತಿಗಳು ಚಿತ್ರಗಳಲ್ಲಿ ಮೂಡಿವೆ. 

ಗಾಂಧೀಜಿ ಅವರ ಮೂರು ತತ್ವಗಳನ್ನು ಸಾರಿ ಹೇಳುವ ವಾನರಗಳ ಚಿತ್ರವೂ ಇಲ್ಲಿನ ವಿಶೇಷ. `ಮಾನವ ನೀ ಮರಗಳನ್ನು ಕಡಿಯುವುದನ್ನು ನಾ ನೋಡಲಾರೆ, ಮರ ಕತ್ತರಿಸುವ ಶಬ್ದವನ್ನು ನಾ ಕೇಳಲಾರೆ, ಮರಗಳನ್ನು ಕಡಿದು ವಿಲಾಸಿಯಾಗಿ ಬದುಕು ಎಂದು ನಾ ಹೇಳಲಾರೆ~ ಎನ್ನುವ ಚಿತ್ರ ಜನಾಕರ್ಷಣೆಯ ಮೂಲವಾಗಿದೆ.
 
ಮುಂದಿನ ಜನಾಂಗಕ್ಕೆ ಪರಿಸರ ಉಳಿಯಬೇಕಾದರೆ ಮಾನವ ಮರಗಳ ಮೇಲಿನ ಕೊಡಲಿ ಪೆಟ್ಟನ್ನು ನಿಲ್ಲಿಸಬೇಕು ಎಂದು ಹೇಳುವ ಚಿತ್ರ. ಪರಿಸರ  ರಕ್ಷಣೆ ಬಿಂಬಿಸುವ ಚಿತ್ರಗಳು ಪ್ರಮುಖ ಆಕರ್ಷಣೆಗಳಾಗಿವೆ.

ಕಲಾವಿದ ತನ್ನ ಕುಂಚ ಪಾವೀಣ್ಯತೆ ಬಳಸಿಕೊಂಡು ಕಲೆಗೆ ಮೆರಗು ನೀಡುವಂತಹ ಗುಣವನ್ನು ಹೊಂದಿದ್ದಾನೆ. ಪರಿಸರದ ಮೇಲೆ ನಡೆಸುತ್ತಿರುವ ಮನುಷ್ಯನ ದಬ್ಬಾಳಿಕೆಯ ಪರಿಯನ್ನು ಮರಗಳ ಮೇಲೆ ಚಿತ್ರಾಕೃತಿಗಳನ್ನು ಬಿಡಿಸಿ, ನಮಗೆ ಸ್ವಚ್ಛಂದವಾದ ಗಾಳಿ ನೀಡಿ ಪ್ರಕೃತಿಯ ಸಮತೋಲನ ಕ್ರಿಯೆಗೆ ಸಹಕರಿಸುವ ಬಗೆಯನ್ನು ಚಿತ್ರಗಳ ಮೂಲಕ ತಿಳಿಸಿರುವುದು ಶ್ಲಾಘನೀಯ. ಮರಗಳ ಮೇಲೆ ಬೇರೆ ಸ್ಥಳಗಳಲ್ಲಿಯೂ ಚಿತ್ರ ಬಿಡಿಸುವ ಆಸಕ್ತಿ ಇದೆ ಎನ್ನುತ್ತಾರೆ ಪ್ರಶಾಂತ್ ಮತ್ತು ಕೌಶಿಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT