ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ನಾಶದ ಭೀತಿ

Last Updated 9 ಜನವರಿ 2011, 10:05 IST
ಅಕ್ಷರ ಗಾತ್ರ

ನಿಸರ್ಗದ ವಿರುದ್ಧ ನಡೆದರೆ ಭವಿಷ್ಯದಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಬಹುದು ಎಂದು ಊಹಿಸಿದರೇ ಭಯವಾಗುತ್ತದೆ. ಜಾಗತೀಕರಣ ಮತ್ತು ನಗರೀಕರಣದಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗಿ ಬದುಕು ಹಾಳಾಗಬಹುದು. ಪ್ರಕೃತಿಯಲ್ಲಿ ಆಗುತ್ತಿರುವ ಏರುಪೇರು ಜೀವ ಪ್ರಪಂಚದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ತೋರಿಸಿಕೊಡುವ ಪ್ರಯತ್ನವನ್ನು ಎಂಟು ಚಿತ್ರಕಲಾವಿದರು ‘ಒಕ್ಟಾಗಾನ್’ ಶೀರ್ಷಿಕೆಯ ಚಿತ್ರ ಪ್ರದರ್ಶನದಲ್ಲಿ ಮಾಡಿದ್ದಾರೆ.

ಹೆಸರೇ ಸೂಚಿಸುವಂತೆ ಎಂಟು ಕಲಾವಿದರ 48 ವಿವಿಧ ಬಗೆಯ ಅಪರೂಪದ ಕಲಾಕೃತಿಗಳು ಪ್ರದರ್ಶನದ ವಿಶೇಷ. ಜಾಗತೀಕರಣದ ಪ್ರಭಾವ ಮನುಷ್ಯನಿಂದ ಹಿಡಿದು ಸಮುದ್ರದೊಳಗಿನ ಮೀನು, ಪಶು ಪಕ್ಷಿಗಳ ಮೇಲೆಯೂ ಆಗಿದೆ ಎಂಬುದನ್ನು ಒಣಗಿ ನಿಂತ ಮರದ ಮೇಲೆ ಮೀನು ಬದುಕಲು ಪ್ರಯತ್ನಿಸುತ್ತಿರುವುದು, ಮೇವಿಗಾಗಿ ದನಕರುಗಳು ಹಾರಲು ಯತ್ನಿಸುತ್ತಿರುವುದನ್ನು ವಿಡಂಬನಾತ್ಮಕವಾಗಿ ತೋರಿಸಿದ್ದಾರೆ ಬೆಂಗಳೂರಿನ ಎಸ್. ವಿಷ್ಣುಕುಮಾರ ಅಕ್ರಿಲಿಕ್ ಕಲಾಕೃತಿಗಳಲ್ಲಿ.

ಪರಮೇಶ್ ಡಿ. ಜೋಳದ ಅವರ ಅಮೂರ್ತ ಕಲಾಕೃತಿಗಳು ಕಲ್ಪನೆಗೆ ಮೀರಿದ್ದು, ಅವುಗಳು ನೈಜತೆಯಿಂದ ಭಿನ್ನವಾಗಿ ಒಬ್ಬೊಬ್ಬರ ಕಲ್ಪನೆಯಲ್ಲಿ ಒಂದೊಂದು ತೆರನಾದ ಭಾವನೆ ಮೂಡುವಂತೆ ಮಾಡುತ್ತವೆ. ಪಟ್ಟಣ ಪ್ರದೇಶದ ಜೀವನ ಮೇಲೆ ಬೆಳಕು ಹರಿಸುವ ಪ್ರಯತ್ನ ಅಶೋಕ ಮಾಡಿದ್ದಾರೆ. ರವಿ ನಾಡಿಗೇರ್ ಅವರ ಜಲವರ್ಣದ ಕಲಾಕೃತಿಗಳು ಗ್ರಾಮೀಣ ಜೀವನ ಹಾಗೂ ವಾಸ್ತುಶಿಲ್ಪದ ಕುರಿತಾಗಿದೆ. ಎಲ್ಲ ಕಲಾಕೃತಿಗಳು ನೇರವಾಗಿದ್ದು ಅರ್ಥವಾಗುವಂತಿವೆ.

ವೈ.ಡಿ. ಕೃಷ್ಣಮೂರ್ತಿ ಅವರ ಜಲವರ್ಣದ ಕಲಾಕೃತಿಗಳಲ್ಲಿ ನಿಸರ್ಗದ ಸೊಬಗನ್ನು ಕಾಣಬಹುದು. ಪ್ರಕೃತಿ ವಿರುದ್ಧ ಹೋದರೆ ಭವಿಷ್ಯದಲ್ಲಿ ಎಂತಹ ಗಂಡಾಂತರ ಎದುರಿಸಬಹುದು ಎಂಬುದೇ ಕಲಾವಿದ ಮಂಜುನಾಥ ಎಚ್.ಎಸ್. ಅವರ ತೈಲವರ್ಣದ ಕಲಾಕೃತಿಗಳ ವಿಶೇಷ.

ಹಳೆಬೇರು ಹೊಸ ಚಿಗುರು ಎನ್ನುವಂತೆ ಹಳೆಯದರ ಜೊತೆ ಹೊಸತು ಬೆಳೆಯಬೇಕು ಎಂಬ ಭಾವನೆ ಸತೀಶ ಪಿ. ಬಿರಾದಾರ ಅವರ ಜಲವರ್ಣದ ಕಲಾಕೃತಿಗಳಲ್ಲಿ ಕಾಣಬಹುದು. ಹಾಲು ಮಾರಾಟ ಮಾಡುವವನಿಗೆ ಗೋವುಗಳೇ ದೇವತೆ, ಬೆಸ್ತನಿಗೆ ಮೀನು ಹಾಗೂ ಕಡಲ ಕಿನಾರೆಯೆ ಜೀವನ ಎಂಬ ವಾಸ್ತವವನ್ನು ಹಾಸನದ ಕಲಾವಿದ ಚಂದ್ರಶೇಖರ್ ಅವರ ತೈಲವರ್ಣದ ಕಲಾಕೃತಿಗಳಲ್ಲಿ ನೋಡಬಹುದು. ಜಲ ಹಾಗೂ ತೈಲವರ್ಣದ ಕಲಾಕೃತಿಗಳು ಒಂದಕ್ಕೊಂದು ಸಂಪೂರ್ಣವಾಗಿ ಭಿನ್ನವಾಗಿದ್ದು, ಅವುಗಳನ್ನು ನೋಡುತ್ತಿದ್ದರೆ ಯೋಚನೆಗೆ ಒಳಪಡಿಸಿ ಮೈಮರೆಯುವಂತೆ ಮಾಡುತ್ತವೆ.

ಸ್ಥಳ: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10 ರಿಂದ 7 (ಭಾನುವಾರದ ವರೆಗೆ ಪ್ರದರ್ಶನ ನಡೆಯಲಿದೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT