ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪಾಠದ ಮುಂದೆ ವಿವಿ ಬೋಧನೆ ನಗಣ್ಯ

Last Updated 5 ಅಕ್ಟೋಬರ್ 2012, 4:55 IST
ಅಕ್ಷರ ಗಾತ್ರ

ಹರಪನಹಳ್ಳಿ: ದೈನಂದಿನ ಬದುಕಿನಲ್ಲಿ ಘಟಿಸುವ ಮತ್ತು ಪರಿಸರದಲ್ಲಿ ನಡೆಯುವ ನೈಜ ಅನುಭವಗಳ ಪಾಠೋಪದೇಶದ ಮುಂದೆ ವಿಶ್ವವಿದ್ಯಾಲಯದ ಬೋಧನೆಗಳು ನಗಣ್ಯ ಎಂದು ಉಪ ವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು ಅಭಿಪ್ರಾಯಪಟ್ಟರು.

ಸ್ಥಳೀಯ ತರಳಬಾಳು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ರ‌್ಯಾಂಕ್‌ಬ್ಯಾಡ್ಜ್ ವಿತರಣಾ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರ‌್ಯಾಂಕ್‌ಬ್ಯಾಡ್ಜ್ ತೊಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಠ್ಯ-ಪುಸ್ತಕಗಳು ಕೇವಲ ಅಂಕಗಳನ್ನು ಅಳೆಯುವ ಮೌಲ್ಯಮಾಪನಕ್ಕೆ ಮಾತ್ರ ಸೀಮಿತವಾದ ಬೋಧನೆಯನ್ನು ನೀಡಿದರೆ, ಪರಿಸರದಲ್ಲಿ ಕಲಿಯುವ ಪಾಠಗಳು ಭವಿಷ್ಯದ ಹೊಸ ತಿರುವುಗಳಿಗೆ ಪ್ರೇರಣೆಯಾಗುತ್ತವೆ.

ಹೀಗಾಗಿ ಕಲಿಕೆಯ ಅವಧಿಯಲ್ಲಿನ ಜತೆಗೆ, ಆಟೋಟ, ಮನೋರಂಜನೆಗೂ ಕೆಲಕಾಲ ವಿನಿಯೋಗಿಸಿ, ಬದುಕಿಗೆ ಪೂರಕವಾದ ವಿದ್ಯೆಯ ದೀಕ್ಷೆ ನೀಡುವ ಮೂಲಕ ಆರೋಗ್ಯಕರವಾದ ನಾಗರಿಕ ಸಮಾಜದ ಕಟ್ಟುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳ ನಿರಂತರ ಕಲಿಕೆಯ ಸಂದರ್ಭದಲ್ಲಿ ಅವರ ಆಸಕ್ತಿ, ಅಭಿರುಚಿಗಳಲ್ಲಿ ಶಿಕ್ಷಕ ಭಾಗಿಯಾಗುವ ಮೂಲಕ ಕಲಿಕೆಗೆ ಪ್ರೇರಣೆ ಹಾಗೂ ಸ್ಫೂರ್ತಿ ದಿಕ್ಸೂಚಿಯಾಗಬೇಕು ಎಂದು ಆಶಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್. ಜತ್ತಿ ಮಾತನಾಡಿ, ಸ್ಫರ್ಧಾತ್ಮಕ ವೇಗಕ್ಕೆ ಅನುಗುಣವಾಗಿ ಮಕ್ಕಳ ಪೈಪೋಟಿ ಹೆಚ್ಚಿಸಲು ಶಾಲೆ ವಿನೂತನ ಪ್ರಾಯೋಗಿಕತೆ ಅಳವಡಿಸಿ ಕೊಂಡಿರುವುದು ಶ್ಲಾಘನೀಯ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಮನೋಭಾವದಲ್ಲಿ ಬದಲಾವಣೆ ಮೂಡಿಸಲು ವಿನೂತನ ಯೋಜನೆಗಳು ಸ್ಫೂರ್ತಿಯಾಗಬೇಕೆ ಹೊರತು, ಮಕ್ಕಳಲ್ಲಿ ನಿರಾಸೆ ಮನೋಭಾವ ಕುಡಿಯೊಡೆಯಲು ಕಾರಣವಾಗಬಾರದು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಹಿರೇಮೇಗಳಗೇರಿ ಪಾಟೀಲ್ ಸಿದ್ದನಗೌಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜೆ.ಆರ್. ಷಣ್ಮುಖಪ್ಪ, ಶಿಕ್ಷಣ ಸಂಯೋಜಕ ಇಸ್ಮಾಯಿಲ್ ಎಲಿಗಾರ್, ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಕುಸುಮಾ ಜಗದೀಶ್ ಉಪಸ್ಥಿತರಿದ್ದರು.

ಶಾಲೆಯ ಮುಖ್ಯೋಪಾಧ್ಯಾಯ ಎಸ್. ನಂಜಪ್ಪ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಶಿಕ್ಷಕಿ ಉಷಾದೇವಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶ್ವೇತಾ ಸ್ವಾಗತಿಸಿದರು. ಸಿ. ಅಂಜಿನಪ್ಪ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT