ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪೂರಕ ಮನೆಅಗತ್ಯಗಳೇನು?

Last Updated 16 ಜೂನ್ 2018, 9:38 IST
ಅಕ್ಷರ ಗಾತ್ರ

ಮನೆ ಕೊಳ್ಳುವವರು ಪರಿಸರ ಸ್ನೇಹಿಯಾದ ಪರಿಸರ ಸಂರಕ್ಷಣೆಗೆ ಪೂರಕವಾದ ಮನೆಯೇ ಬೇಕೆಂದು ಕೇಳುವುದಿಲ್ಲ. ಇಂತಹ ಮನೆಗಳನ್ನು ನಿರ್ಮಿಸದೆ ಇದ್ದರೆ ಬರಬಹುದಾದ ಹೆಚ್ಚುವರಿ ವೆಚ್ಚವನ್ನು ಭರಿಸಲು ಅವರು ಸಿದ್ಧರಿರುವಾಗ ನಾವೇಕೆ ಪರಿಸರ ಪೂರಕ ಮನೆ ನಿರ್ಮಿಸುವ ಗೊಡವೆಗೆ ಹೋಗಬೇಕು? ಇಂತಹ ಮನೋಭಾವ ಅದೆಷ್ಟೋ ಎಂಜಿನಿಯರ್‌ಗಳಲ್ಲಿ, ವಾಸ್ತು ವಿನ್ಯಾಸಗಾರರಲ್ಲಿ ಇದೆ.

ನೀರು, ವಿದ್ಯುತ್ ಕೊಡುವುದು ಸರ್ಕಾರದ ಕರ್ತವ್ಯ ಎಂಬ ವಿಚಾರ ಗ್ರಾಹಕರ ಮನಸ್ಸಲ್ಲಿ ಇರುವ ತನಕ ಪರಿಸರ ಪೂರಕ ಮನೆಗಳನ್ನು ನಿರ್ಮಿಸುವುದಕ್ಕೆ ಅಂತಹ ಆದ್ಯತೆ ನೀಡಬೇಕಿಲ್ಲ ಎಂಬ ಭಾವನೆ ಹಲವು ಕಟ್ಟಡ ನಿರ್ಮಾಣಗಾರರಲ್ಲಿ ಇದೆ ಎಂಬುದು ಸ್ಪಷ್ಟವಾಗುತ್ತದೆ. ಈಚೆಗೆ ನಾನು ಒಬ್ಬ ಹೆಸರಾಂತ ಬಿಲ್ಡರ್‌ನನ್ನು ಭೇಟಿ ಮಾಡಿದಾಗಲೂ ಸಹ ಅವರಿಂದಲೂ ಇಂತಹದೇ ಉತ್ತರ ಬಂತು.

ಹೀಗಿದ್ದರೂ ಮನೆಗಳು, ಅಪಾರ್ಟ್‌ಮೆಂಟ್‌ಗಳ ಜಾಹೀರಾತು ನೀಡುವಾಗ ‘ಪರಿಸರ ಪೂರಕ’ ಎಂಬ  ಪದವನ್ನು ಸೇರಿಕೊಂಡಿರುತ್ತದೆ. ಜನರಿಗೆ ಇಂತಹ ಮನೆಗಳು ಅಗತ್ಯ. ಅದನ್ನು ಅವರು ಇಷ್ಟಪಡುತ್ತಾರೆ ಎಂಬುದು ಗೊತ್ತಿದ್ದರೂ, ಅದರತ್ತ ಕಾಳಜಿ ವಹಿಸದೆ ಪರಿಸರ ಪೂರಕ ಕ್ರಮಗಳನ್ನು ಕಡೆಗಣಿಸಲಾಗುತ್ತದೆ. ಮನೆಗಳ ಮಾರಾಟವಾಗಬೇಕಾದರೆ ‘ಪರಿಸರ ಪೂರಕ’ ಎಂಬ ಮಾತು ಎಷ್ಟು ಮಹತ್ವದ್ದಾಗುತ್ತದೋ, ಅದನ್ನು ನಿಜವಾಗಿ ಅನುಷ್ಠಾನಕ್ಕೆ ತರುವಾಗ ಮಾತ್ರ ದಿವ್ಯ ನಿರ್ಲಕ್ಷ್ಯ ನಮ್ಮನ್ನು ಆವರಿಸಿಬಿಡುತ್ತಿರುವುದು ವಿಪರ್ಯಾಸ.

ಇಂದು ಮಾರುಕಟ್ಟೆಯ ಸ್ವರೂಪ ಬದಲಾಗಿರುವುದನ್ನು ಮೊದಲಾಗಿ ಗಮನಿಸಬೇಕು. ಮಾರಾಟ ಮಾಡುವವರಿಗಂತಲೂ ಕೊಳ್ಳುವವರ ಆಶಯಕ್ಕೆ ಇದೀಗ ಬೆಲೆ ಜಾಸ್ತಿಯೇ ಇದೆ. ವಾಸ್ತು ವಿನ್ಯಾಸದಲ್ಲಿ ಪರಿಣತರಾದ ವೃತ್ತಿಪರರ ಕೊರತೆ ಇದೆ.

ಜತೆಗೆ ನೀರು, ಒಳಚರಂಡಿ, ವಿದ್ಯುತ್ ಮತ್ತು ತ್ಯಾಜ್ಯ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಪರಿಣತರಾದ ತಜ್ಞರ ಕೊರತೆಯೂ ಇದೆ. ಕಳೆದ 50 ವರ್ಷಗಳಿಂದ ಆಚರಣೆಯಲ್ಲಿದ್ದ ಪದ್ಧತಿಯನ್ನು ಬದಲಿಸಿ ಹೊಸತನ ತರುವಂತಹ ಪರಿಣತರ ಅಗತ್ಯ ಇಂದು ಹೆಚ್ಚಿದೆ. ಇಂತಹ ವಿಚಾರಗಳಲ್ಲಿ ಪಳಗಿದವರೂ ಪರಿಸರ ಪೂರಕ ಮನೆಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿದ ನಿದರ್ಶನ ಇಲ್ಲ. ತಾವು ಮಾಡಿದ ಪ್ರಯೋಗ ಎಲ್ಲಿ ವಿಫಲವಾಗುತ್ತದೆಯೋ ಎಂಬ ಭಯದಿಂದಲೇ ಅದೆಷ್ಟೋ ಬಿಲ್ಡರ್‌ಗಳು ಹೊಸ ವಿಧಾನಗಳಿಗೆ ಕೈಹಾಕದೆ ಹಳೆಯ ಸಾಂಪ್ರದಾಯಿಕ ವಿಧಾನವನ್ನೇ ಅನುಸರಿಸುತ್ತ ಹೋಗುತ್ತಿದ್ದಾರೆ.

ಹವಾನಿಯಂತ್ರಿತ ವ್ಯವಸ್ಥೆಯೇ ಬೇಕಾಗದ, ಫ್ಯಾನ್ ಸಹ ಅಗತ್ಯ ಇಲ್ಲದ ರೀತಿಯಲ್ಲಿ ಮನೆಗಳನ್ನು ನಿರ್ಮಿಸಬಹುದು. ಇದರಿಂದ ಇಂಧನ ಅದೆಷ್ಟು ಉಳಿತಾಯವಾಗುತ್ತದೆ ಎಂಬ ಸಲಹೆಗಳನ್ನು ಕಿವಿ ಮೇಲೆ ಹಾಕಿಕೊಳ್ಳುವ ಬಿಲ್ಡರ್‌ಗಳು, ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು ಕಡಿಮೆ. ಅಂತಹ ವ್ಯವಸ್ಥೆಯಲ್ಲಿ ಕಟ್ಟಡ ದೀರ್ಘ ಕಾಲ ಬಾಳಿಕೆ ಬರುತ್ತದೆ ಎಂಬ ಖಾತರಿ ಇಲ್ಲ ಎಂದು ಹೇಳಿ ಹೊಸತನಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ದೂರ ಸರಿಯುತ್ತಾರೆ.

ಆದರೆ, ವಾಸ್ತವ ಹಾಗಿಲ್ಲ ಎಂಬುದನ್ನು ಬಿಲ್ಡರ್‌ಗಳು ತಿಳಿದುಕೊಳ್ಳಬೇಕು. ಪರಿಸರ ಪೂರಕ ಕ್ರಮಗಳನ್ನು ಒದಗಿಸಿಕೊಟ್ಟರೆ ಗ್ರಾಹಕರು ಅದನ್ನು ತುಂಬು ಮನಸ್ಸಿನಿಂದ ಸ್ವೀಕರಿಸಿ ತಾವೂ ಇಂಧನ ಉಳಿಸುವತ್ತ ವಿಶೇಷ ಗಮನ ಹರಿಸುತ್ತಾರೆ.

ಬಿಲ್ಡರ್‌ಗಳು ಹೊಸತನವನ್ನು ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಅದುವೇ ಅವರಿಗೆ ಕಪ್ಪುಚುಕ್ಕೆಯಾಗಿಬಿಡುವ ಅಪಾಯ ಇದೆ. ಹೀಗಾಗಿ ಪರಿಸರ ಪೂರಕ ಕಟ್ಟಡಗಳು, ಮನೆಗಳನ್ನು ಕಟ್ಟುವತ್ತ ಸಲಹೆಗಾರರು, ವಾಸ್ತು ವಿನ್ಯಾಸಕರು, ಎಂಜಿನಿಯರ್‌ಗಳು, ಬಿಲ್ಡರ್‌ಗಳು ಹೆಚ್ಚಿನ ಗಮನ ಹರಿಸಲೇಬೇಕು.

ನೀರು, ವಿದ್ಯುತ್, ತ್ಯಾಜ್ಯ ನಿರ್ವಹಣೆ ಈ ಮೂರು ವಿಚಾರಗಳನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಬೇಡಿಕೆ ಮತ್ತು ಪೂರೈಕೆಗಳತ್ತ ಗಮನ ಹರಿಸಿಬಿಟ್ಟರೆ ಯಾವುದೇ ಸಮಸ್ಯೆಯೂ ಇರುವುದಿಲ್ಲ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಯೋಜನೆಯನ್ನೇ ತೆಗೆದುಕೊಳ್ಳಿ, ಅದರಿಂದ ಅದೆಷ್ಟು ಪ್ರಯೋಜನ ಇದೆ ಎಂಬುದು ಈಗಾಗಲೇ ಈ ವ್ಯವಸ್ಥೆ ಮಾಡಿಕೊಂಡವರಿಗೆ ಮನವರಿಕೆಯಾಗಿದೆ.

ಒಂದು ಸಾವಿರ ಚದರ ಅಡಿ ತಾರಸಿ ಪ್ರದೇಶಕ್ಕೆ ಬೀಳುವ ಮಳೆ ನೀರಿನಿಂದ ವರ್ಷಕ್ಕೆ 2.5 ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ. ಸಣ್ಣ ಕುಟುಂಬಕ್ಕೆ ಇಷ್ಟು ನೀರು ಆರು ತಿಂಗಳಿಗೆ ಸಾಕು. ಸೌರಶಕ್ತಿಯಲ್ಲಿ ನೀರು ಕಾಯಿಸುವುದರಿಂದ ಪ್ರತಿ ತಿಂಗಳು ಶೇ 40ರಷ್ಟು ವಿದ್ಯುತ್ ಬಿಲ್ ಉಳಿಸಬಹುದು. ನಿಮ್ಮದೇ ನೀರಿನ ಮೂಲ ನಿಮ್ಮಲ್ಲಿದ್ದರೆ ನೀರಿಗಾಗಿ ಅವಲಂಬಿಸುವ ಅಗತ್ಯ ಇರುವುದಿಲ್ಲ.

ಇದರಾಚೆಗೂ ಸ್ವಲ್ಪ ಚಿಂತಿಸಿದರೆ ಸಂಪನ್ಮೂಲ ಉಳಿಸಿಕೊಂಡು ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವ ಸಾಕಷ್ಟು ಅವಕಾಶಗಳು ಕಾಣಿಸುತ್ತವೆ. ಅದನ್ನು ಸಮರ್ಥವಾಗಿ ಬಳಸಿಕೊಂಡರೆ ಪರಿಸರ ನಾಶವನ್ನು ಭಾರಿ ಪ್ರಮಾಣದಲ್ಲಿ ತಡೆಗಟ್ಟಬಹುದು.

ನದಿಯನ್ನು ಅವಲಂಬಿಸದೆ, ಮರಳು ಆಧಾರಿತ ಕಾಂಕ್ರೀಟಿಗೆ ಬದಲಿಗೆ  ಟ್ರಿಪಲ್ ಬ್ಲೆಂಡ್ ಕಾಂಕ್ರೀಟ್ ಬಳಸಿದರೆ, ಹಗುರವಾದ ಬ್ಲಾಕ್‌ಗಳನ್ನು ಬಳಸಿದರೆ, ಕಟ್ಟಡಗಳ ಅವಶೇಷಗಳನ್ನು ರಸ್ತೆಗಳಿಗೆ ಬಳಸಿದರೆ, ಕಟ್ಟಡದ ವಿನ್ಯಾಸದ ಹಂತದಲ್ಲೇ ಪರಿಸರ ಪೂರಕ ಕ್ರಮಗಳನ್ನು ಕೈಗೊಂಡರೆ ಸಂಪನ್ಮೂಲ ಮತ್ತು ಹಣ ಉಳಿಸುವುದು ಸಾಧ್ಯವಿದೆ.

ನಾವು ಶೋಧಕರಲ್ಲ ನಿಜ. ಆದರೆ ಕಟ್ಟಡಗಳ ನಿರ್ಮಾಣದಲ್ಲಿ ನಾವು ಸದಾ ಹೊಸತನ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಕಟ್ಟಡಗಳ ನಿರ್ವಹಣೆ ವ್ಯವಸ್ಥೆಯಲ್ಲಿ ನಮ್ಮನ್ನು ಹೊಸತನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. (ಇದಕ್ಕಾಗಿ ಸ್ಟಾನ್ ಕಾಕ್ಸ್ ಅವರ ‘ಲೂಸಿಂಗ್ ಅವರ್ ಕೂಲ್’ ಕೃತಿ ಓದುವುದು ಒಳಿತು. ಇನ್ನಷ್ಟು ಮಾಹಿತಿಗೆ http://www.losingourcool.com ಸಂಪರ್ಕಿಸಬಹುದು).

ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ, ಪರಿಣಾಮಕಾರಿ ನೀರಿನ ನಿರ್ವಹಣೆ ಮತ್ತು ಪುನರ್ ಸಂಸ್ಕರಣೆಗಳೇ ಕಟ್ಟಡ ನಿರ್ಮಾಣ ಕಂಪೆನಿಗಳ ಸಾಮರ್ಥ್ಯಗಳಾಗಿ ಇಂದು ಹೊರಹೊಮ್ಮುತ್ತಿವೆ. ನೀರು, ಇಂಧನಕ್ಕೆಲ್ಲ ನಗರ ಸ್ಥಳೀಯ ಸಂಸ್ಥೆಗಳನ್ನು ಅವಲಂಬಿಸುವುದನ್ನು ಇದು ತಪ್ಪಿಸುತ್ತದೆ. ಹೀಗೆ ಮಾಡಿದ್ದೇ ಆದರೆ ಇಡೀ ಅಪಾರ್ಟ್‌ಮೆಂಟ್‌ಗೆ ಔಪಚಾರಿಕ ನೀರು, ವಿದ್ಯುತ್ ಸಂಪರ್ಕದ ಅಗತ್ಯವೇ ಇರುವುದಿಲ್ಲ.

ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರಿಗೆ ಔಪಚಾರಿಕ ಶಿಕ್ಷಣ ಮತ್ತು ಜ್ಞಾನ ಅಗತ್ಯ. ಅದೆಷ್ಟೋ ಎಂಜಿನಿಯರ್‌ಗಳು ತಮ್ಮ ಜ್ಞಾನವನ್ನು ಮೇಲ್ದರ್ಜೆಗೆ ಏರಿಸಿಕೊಳ್ಳುವ ಗೊಡವೆಗೆ ಹೋಗುವುದಿಲ್ಲ. ಅವರಿಗೆಲ್ಲ ತಮ್ಮ ಕೌಶಲ್ಯ ಸುಧಾರಣೆಗೆ ತರಬೇತಿ ನೀಡುವ ಅಗತ್ಯ ಇದೆ.

ನೀವು ‘ಪರಿಸರ ಸ್ನೇಹಿ’ ಮನೆ ನಿರ್ಮಿಸುವ ವಿಚಾರ ಮಾಡಿದ್ದರೆ ಈ ಕ್ಷೇತ್ರದಲ್ಲಿ ಪರಿಣತಿ ಪಡೆದ ಹಾಗೂ ಭಾರತೀಯ ಹಸಿರು ಉದ್ಯಮ ಮಂಡಳಿಯಂತಹ (ಐಜಿಬಿಸಿ) ಸಂಸ್ಥೆಗಳಿಂದ ಪ್ರಮಾಣಪತ್ರ ಪಡೆದ ವಾಸ್ತು ವಿನ್ಯಾಸಕಾರರೇ ನಿಮ್ಮ ಮನೆ/ ಕಟ್ಟಡದ ನೀಲನಕ್ಷೆ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುವಂತಾಗಬೇಕು.

ಪ್ರತಿಯೊಂದು ಹಂತದಲ್ಲೂ ಪ್ರಶ್ನೆಗಳನ್ನು ಹಾಕುತ್ತ ಸುಸ್ಥಿರ ವ್ಯವಸ್ಥೆ ನಿರ್ಮಾಣಕ್ಕಾಗಿ ಎಂಜಿನಿಯರ್‌ಗಳು ಯಾವ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಸವಾಲಿನ ಸಂಗತಿಯೇ. ಕಾಲ ಸರಿದಂತೆ ಮತ್ತು ಅನುಭವ ಆದಂತೆ ನಿಮಗೆ ಅದರ ತಿಳಿವಳಿಕೆ ಬರುತ್ತದೆ. ಇದೊಂದು ನಿಧಾನಗತಿಯ ಪ್ರಯಾಣವಾದರೂ ಇದರಿಂದ ನಿಮಗೆ ತೃಪ್ತಿ ಸಿಗುವುದಂತೂ ನಿಶ್ಚಿತ. ಪರಿಸರ ಸ್ನೇಹಿ ಮನೆಯೊಂದರ ನಿರ್ಮಾಣದಲ್ಲಿ ನೀವೆಲ್ಲ ಬಯಸುವ ಇಂತಹ ತೃಪ್ತಿ ಖಂಡಿತವಾಗಿಯೂ ಅಡಗಿರುತ್ತದೆ.

(ಲೇಖಕರನ್ನು 56767 ಸಂಖ್ಯೆಗೆ ZED ಎಂದು ಎಸ್‌ಎಂಎಸ್ ಮಾಡುವ ಮೂಲಕ ಇಲ್ಲವೇ 99010 54321 ಕರೆ ಮಾಡಿ ಸಂಪರ್ಕಿಸಬಹುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT