ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಮಾಲಿನ್ಯ ತಡೆಗೆ ಸರ್ಕಾರ ಬದ್ಧ: ಸದಾನಂದ ಗೌಡ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂಕೋರ್ಟ್ ಪರಿಸರ ಸಂರಕ್ಷಣೆ ದೃಷ್ಟಿಯಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಿ ಆದೇಶಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮಾಲಿನ್ಯ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬುಧವಾರ ಇಲ್ಲಿ ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆಂಟ್ರಲ್ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಹಾಗೂ ಪರಿಸರ ಉತ್ಕೃಷ್ಟತಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ರಾಜ್ಯದಲ್ಲಿ ಬಿರುಗಾಳಿಯನ್ನೆಬ್ಬಿಸಿದ ಗಣಿಗಾರಿಕೆ ನಿಷೇಧಿಸಲು ಸುಪ್ರೀಂಕೋರ್ಟ್ ಪರಿಸರ ಮಾಲಿನ್ಯ ಅಂಶವನ್ನೇ ಮುಖ್ಯವಾಗಿ ಪರಿಗಣಿಸಿ ತೀರ್ಪನ್ನು ನೀಡಿದೆ. ಸರ್ಕಾರ ಖಂಡಿತಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವ್ಯವಸ್ಥೆ ಮಾಡಲು ಪ್ರಯತ್ನಿಸಲಿದೆ~ ಎಂದು ಅವರು ತಿಳಿಸಿದರು.

`ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಇಥೆನಾಲ್ ಬಳಕೆಗೆ ಸೂಕ್ತ ರೀತಿಯಲ್ಲಿ ಸಹಾಯಧನ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ~ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

`ಬಸ್‌ಗಳು ಉಗುಳುವಂತಹ ಇಂಗಾಲದ ಡೈ ಆಕ್ಸೈಡ್‌ನಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಾಲಿನ್ಯ ತಡೆಯಲು ಸಾರಿಗೆ ಬಸ್‌ಗಳಲ್ಲಿ ಡೀಸೆಲ್ ಬದಲಿಗೆ ಪರ್ಯಾಯ ಇಂಧನ ಬಳಸುವುದು ಅಗತ್ಯವಾಗಿದೆ. ಇದಲ್ಲದೆ, ಮಾಲಿನ್ಯ ತಡೆಯಲು ಪೂಜಾ ಸ್ಥಳ, ಉದ್ಯಾನ ಮತ್ತಿತರ ಪ್ರಮುಖ ತಾಣಗಳಲ್ಲಿ ನೂರು ಮೀಟರ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕೈಚೀಲಗಳ ಬಳಕೆ ನಿಷೇಧಿಸಲು ಕೂಡ ಸರ್ಕಾರ ಆದ್ಯತೆ ನೀಡಲಿದೆ~ ಎಂದರು.

`ರಾಜ್ಯ ಸರ್ಕಾರ ಕೇವಲ ಆದೇಶ ಅಥವಾ ಕಾನೂನು ಜಾರಿಗೊಳಿಸುವುದರಿಂದ ಮಾತ್ರ ಮಾಲಿನ್ಯ ನಿಯಂತ್ರಿಸಲು ಸಾಧ್ಯವಿಲ್ಲ. ಬದಲಿಗೆ ಸಾರ್ವಜನಿಕರು ಸರ್ಕಾರದ ಜತೆ ಕೈಜೋಡಿಸಬೇಕು~ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಆತಂಕ ದಿನಗಳನ್ನು ಎದುರಿಸುತ್ತಿದ್ದೇವೆ:

`ನಾವು ಈಗಾಗಲೇ ಜಾಗತಿಕ ತಾಪಮಾನದ ದುಷ್ಪರಿಣಾಮಗಳನ್ನು ಕಂಡಿದ್ದೇವೆ. ಭವಿಷ್ಯದಲ್ಲಿ ಹಲವು ರಾಷ್ಟ್ರಗಳೇ ಜಲಸಮಾಧಿಯಾಗುವ ಆತಂಕವಿದೆ. ಹಿಮಾಲಯ ಕೂಡ ಕರಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಹ ಅಪಾಯವಿದೆ. ಇಂತಹ ಪರಿಸ್ಥಿತಿಯಲ್ಲಿ ಬಹಳ ಆತಂಕದ ದಿನಗಳನ್ನು ಎದುರಿಸುತ್ತಿರುವ ನಾವು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ. ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ~ ಎಂದರು.

`ಅದ್ಭುತವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿಯೂ ಪರಿಸರ ಸಮತೋಲನ ಕಾಪಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಕಲುಷಿತ ನೀರಿನ ಶುದ್ಧೀಕರಣ, ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ.

ಜಲಮಂಡಳಿ ಈಗಾಗಲೇ 14 ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ. ಇದಲ್ಲದೆ, ದಾಬಸ್‌ಪೇಟೆ ಬಳಿ 90 ಎಕರೆ ಜಾಗದಲ್ಲಿ ಅಪಾಯಕಾರಿ ಕೈಗಾರಿಕಾ ತ್ಯಾಜ್ಯವನ್ನು ಜರ್ಮನಿ ತಂತ್ರಜ್ಞಾನದ ನೆರವಿನೊಂದಿಗೆ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ~ ಎಂದು ಅವರು ಹೇಳಿದರು.

ಇಥೆನಾಲ್ ತಡೆಗೆ ದೊಡ್ಡ ಲಾಬಿ:
 ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ, `ಡೀಸೆಲ್ ಜತೆಗೆ ಶೇ 7ರಷ್ಟು ಪ್ರಮಾಣದಲ್ಲಿ ಇಥೆನಾಲ್ ಮಿಶ್ರಣ ಮಾಡಿದ ಇಂಧನವನ್ನು ಸಾರಿಗೆ ಸಂಸ್ಥೆಯ 1500 ಬಸ್‌ಗಳಿಗೆ ಬಳಸಲಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹಲವು ಬಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ಪರ್ಯಾಯ ಇಂಧನ ಬಳಸುವುದು ಅನಿವಾರ್ಯವಾಗಿದೆ~ ಎಂದರು.

`ಕಬ್ಬು ಅರೆಯುವಂತಹ ಕಾರ್ಖಾನೆಗಳಿಂದ ಇಥೆನಾಲ್ ಪಡೆಯುವುದರಿಂದ ರೈತರಿಗೂ ಸಹಾಯ ಮಾಡಿದಂತಾಗುತ್ತದೆ. ಆದರೆ, ಬಸ್‌ಗಳಲ್ಲಿ ಇಥೆನಾಲ್ ಬಳಕೆ ತಡೆಗೆ ದೊಡ್ಡ ಪ್ರಮಾಣದಲ್ಲಿ ತೈಲ ಲಾಬಿ ನಡೆಯುತ್ತಿದೆ~ ಎಂದು ಆರೋಪಿಸಿದರು.

`ನಗರದಲ್ಲಿ ಪರಿಣಾಮಕಾರಿಯಾಗಿ ಮಳೆ ನೀರು ಸಂಗ್ರಹ ಮಾಡುವುದು ಹಾಗೂ ತಗ್ಗು ಪ್ರದೇಶಗಳಲ್ಲಿ ಪ್ರವಾಹ ತಡೆಗಟ್ಟಲು ಇನ್ನು 15 ದಿನಗಳಲ್ಲಿ ಬಿಬಿಎಂಪಿ, ಜಲಮಂಡಳಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಕೈಗಾರಿಕೋದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಭೆ ನಡೆಸಲಾಗುವುದು.

ಮುಂದಿನ ವರ್ಷದಿಂದ ನಗರದಲ್ಲಿ ರಾಸಾಯನಿಕ ಬಳಸಿದ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದನ್ನು ನಿರ್ಬಂಧಿಸಲು ಶೀಘ್ರ ಸರ್ಕಾರ ಆದೇಶ ಹೊರಡಿಸಲಿದೆ~ ಎಂದರು.

ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್, ಅರಣ್ಯದಲ್ಲಿ ಶ್ರೀಗಂಧ ಕಾಣೆಯಾಗುತ್ತಿರುವುದರಿಂದ ಸಂರಕ್ಷಿತ ಪ್ರದೇಶದಲ್ಲಿ ಶ್ರೀಗಂಧ ಬೆಳೆಯಲು ಕೈಗಾರಿಕೋದ್ಯಮಿಗಳು ಮುಂದಾಗಬೇಕು. ಇದಕ್ಕಾಗಿ ಸಾಮಾಜಿಕ ಅರಣ್ಯ ವಿಭಾಗ ನೀಡುವ ಸಸಿಗಳನ್ನು ಪಡೆದುಕೊಳ್ಳಬೇಕು ಎಂದು ಕೋರಿದರು.

ಬಹುಮಾನ ವಿತರಣೆ:

ಸಮಾರಂಭದಲ್ಲಿ ಅಂತರರಾಷ್ಟ್ರೀಯ ಓಜೋನ್ ರಕ್ಷಣಾ ದಿನಾಚರಣೆ ಪ್ರಯುಕ್ತ ಮಂಡಳಿಯು ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಸೇಂಟ್ ನಾರ್ಬರ್ಟ್ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಾದ ನಿಹಾರಿಕಾ ಎನ್. ರಾವ್ ಹಾಗೂ ಪ್ರಜ್ವಲ್ ಯು. ರಾವ್ ಅವರಿಗೆ ತಲಾ ನಾಲ್ಕು ಸಾವಿರ ರೂಪಾಯಿ ಮತ್ತು ದ್ವಿತೀಯ ಸ್ಥಾನ ಪಡೆದ ಬೆಂಗಳೂರಿನ ರಾಜಾಜಿನಗರದ ಶ್ರೀವಾಣಿ ವಿದ್ಯಾಸಂಸ್ಥೆಯ 10ನೇ ತರಗತಿಯ ಜಿ. ವಿವೇಕ್ ಮತ್ತು ಆರ್. ಶರತ್ ಅವರಿಗೆ ತಲಾ 2 ಸಾವಿರ ರೂಪಾಯಿ ಉಡುಗೊರೆ ಕೂಪನ್ ನೀಡಲಾಯಿತು.

ಪರಿಸರ ಮತ್ತು ಜೀವಿಶಾಸ್ತ್ರ, ಬಂದರು ಸಚಿವ ಜೆ. ಕೃಷ್ಣ ಪಾಲೇಮಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಮಂತ್ರಿಗಳ ನಗರಾಭಿವೃದ್ಧಿ ಸಲಹೆಗಾರ ಡಾ.ಎ. ರವೀಂದ್ರ, ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಎಚ್.ಎಸ್.ಎಲ್. ಮೂರ್ತಿ ಮಾತನಾಡಿದರು.

ಮಂಡಳಿಯ ಅಧ್ಯಕ್ಷ ಎ.ಎಸ್. ಸದಾಶಿವಯ್ಯ ಸ್ವಾಗತಿಸಿದರು. ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಕಾರ್ಯದರ್ಶಿ ಕನ್ವರ್‌ಪಾಲ್, ಸದಸ್ಯ ಕಾರ್ಯದರ್ಶಿ ಎಸ್.ಎಂ. ಪುಟ್ಟಬುದ್ಧಿ ಉಪಸ್ಥಿತರಿದ್ದರು.

ದೋಸೇಲಿ ತೂತು ಹುಡುಕುವುದು ಬೇಡ..!
ಮಾಧ್ಯಮಗಳು ದೋಸೆಯಲ್ಲಿ ತೂತು ಹುಡುಕುವ ಕೆಲಸ ಮಾಡುವುದು ಬೇಡ ಎಂದು ಸಂಸದ ಡಿ.ಬಿ. ಚಂದ್ರೇಗೌಡ ಸಲಹೆ ಮಾಡಿದರು.

ಸಮಾರಂಭದಲ್ಲಿ ಲೋಕಾಯುಕ್ತ ಶಿವರಾಜ್ ಪಾಟೀಲ್ ರಾಜೀನಾಮೆ ವಿಷಯವನ್ನು ಪ್ರಸ್ತಾಪಿಸಿದ ಅವರು, `ತನಿಖಾ ಪತ್ರಿಕೋದ್ಯಮ ತನ್ನ ವ್ಯಾಪ್ತಿ ಮೀರಿದರೆ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತ ಗಮನಹರಿಸಬೇಕು~ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT