ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ವಿಷಯದ ಮೂಲಕ ಹೋರಾಟ

ಇಂದಿನ ಸಾಹಿತ್ಯದ ಮುಖ್ಯ ಲಕ್ಷಣ ಕುರಿತು ಡಾ.ರಾಜೇಂದ್ರ ಚೆನ್ನಿ ಅಭಿಮತ
Last Updated 11 ಡಿಸೆಂಬರ್ 2012, 11:06 IST
ಅಕ್ಷರ ಗಾತ್ರ

ಶಿವಮೊಗ್ಗ: ಸಮಸ್ಯೆಗಳನ್ನು ಗ್ರಹಿಸಿ, ಹೋರಾಟವನ್ನು ಪರಿಸರ ವಿಷಯದ ಮೂಲಕ ಅಭಿವ್ಯಕ್ತಿಸುತ್ತಿರುವುದು ಈ ಕಾಲದ ಸಾಹಿತ್ಯದ ಮುಖ್ಯ ಲಕ್ಷಣ ಎಂದು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.
ನಗರದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಸಾಹಿತ್ಯಾಸಕ್ತರ ವೇದಿಕೆ ಹಮ್ಮಿಕೊಡಿದ್ದ ಕಲ್ಕುಳಿ ವಿಠ್ಠಲ ಹೆಗ್ಗಡೆ ಅವರ ಮಂಗನ ಬೇಟೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರಿಸರವನ್ನು ಕೃತಿಯಲ್ಲಿ, ಸಾಹಿತ್ಯದಲ್ಲಿ ಕಟ್ಟಿಕೊಡುವ ಜತೆ-ಜತೆಗೆ ತುರ್ತಾಗಿ ಕಂಡುಕೊಳ್ಳಬೇಕಾದ ಚರ್ಚೆ, ಮಂಥನ, ಹೊರಾಟದ ಅಂಶಗಳನ್ನು ಇಂದಿನ ಸಾಹಿತ್ಯದಲ್ಲಿ ಕಾಣುತ್ತಿದ್ದೇವೆ ಎಂದರು.ಮಂಗನ ಬೇಟೆಯಂತಹ ಕೃತಿಯಗಳಲ್ಲಿ ಬೌದ್ಧಿಕ ವಿಚಾರಗಳು ಜೀವಂತ ಪಡೆದಿದ್ದು, ಇಂದು ಪರಿಸರದ ಹೋರಾಟ; ವರ್ಗದ ಹೋರಾಟವಾಗಿ ರೂಪುಗೊಳ್ಳುತ್ತಿದೆ. ಪರಿಸರದ ಉಳಿವಿಲ್ಲದೆ ನಾವಿಲ್ಲ; ಪರಿಸರದ ನಡುವೆ ನಾವಿಲ್ಲದ್ದಿದ್ದರೆ ನಮ್ಮ ಮತ್ತು ಪರಿಸರದ ಉಳಿವಿಲ್ಲ ಎಂಬ ಅಂತಿಮ ಹೋರಾಟ ಆರಂಭವಾಗಿದೆ ಎಂದರು.

ಕುವೆಂಪು ಅವರ ಕೃತಿಗಳು ಮಲೆನಾಡಿನ ಕ್ಷುದ್ರ ಲೋಕವನ್ನು  ಸಾಹಿತ್ಯದ ನಡುಮನೆಗೆ, ಶೂದ್ರ ಲೋಕವನ್ನು ಜನಮಾನಸದ ನಡುವೆ ಸವಾಲಾಗಿ ತಂದಿದ್ದವು. ಇದರಿಂದ ಸಾಹಿತ್ಯದ ಲಕ್ಷಣಗಳಲ್ಲಿ ಒಂದಾದ ಕಾದಂಬರಿ ಶೈಲಿಯನ್ನು ಸೀಳಿ ಹೊಸ ಕಥನ ಶೈಲಿ ಜನಿಸಿತು. ಅದೇ ರೀತಿ ಮಂಗನ ಬೇಟೆಯಲ್ಲಿ ವ್ಯಕ್ತವಾಗಿರುವ ವ್ಯವಸ್ಥೆಯ ವ್ಯಂಗ್ಯ, ಪರಿಸರದ ಅಂಶಗಳಲ್ಲಿನ ಅಂತರ್ಗತ ಹೋರಾಟದ ಅಂಶಗಳು ಸಾಹಿತ್ಯ ಲಕ್ಷಣಗಳಲ್ಲಿ ಹೊಸ ಹೆಜ್ಜೆ ಗುರುತು ಮೂಡಿಸಲಿವೆ ಎಂದರು.

ಕೃತಿಯಲ್ಲಿ ಇತರ ಕೃತಿಗಳಂತೆ ಮಲೆನಾಡನ್ನು ವೈಭವೀಕರಿಸಿಲ್ಲ. ಆದರೆ, ಮಲೆನಾಡು ಮತ್ತು ನಡುವೆ ನಾವು ಕಳೆದು ಹೋದ ಭಾವ ಓದುಗರಿಗೆ ಉಂಟಾಗುತ್ತದೆ ಎಂದರು.

ಕೃತಿ ಪರಿಸರದ ವಿವರ ಮಾತ್ರವಲ್ಲ ನಮ್ಮ ಬದುಕಿನ ಕ್ರಮಗಳು ಯಾವ ಅನಾಹುತ ಸೃಷ್ಟಿಸಿವೆ ಎಂದು ಹೇಳುತ್ತದೆ. ಅರಣ್ಯ ಕಾಯ್ದೆ ಹೆಸರಿನಲ್ಲಿ ಒಕ್ಕಲೆಬ್ಬಿಸುವುದು 90ವರ್ಷದ ಪಹಣಿ ಇಲ್ಲವೆಂದು ರೈತರನ್ನು ಭಿಕ್ಷುಕರನ್ನಾಗಿ ಮಾಡುವುದು ಜನಸಾಮಾನ್ಯರ ಮೇಲೆ ಮಾಡುವ ಹಿಂಸೆ, ಕ್ರೌರ್ಯ, ಆಘಾತ ಎಂದು ನಾವು ಕೃತಿಯಿಂದ ಅರ್ಥೈಸಬೇಕಿದೆ ಎಂದರು. 

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಬರಹಗಾರ ಸತ್ಯಮೂರ್ತಿ ಆನಂದೂರು, ನಿಸರ್ಗದೊಂದಿಗೆ ಹೊಂದಿಕೊಂಡಿರುವ ಜನಾಂಗ ದೇಶದಲ್ಲಿದೆ. ಇದನ್ನು ಕಾನೂನು ನಾಶ ಮಾಡುತ್ತಿದೆ. ಒಂದು ಒಳ್ಳೆ ಸಂಪ್ರದಾಯ ಹೇಗೆ ಇನ್ನೊಂದು ಸಂಪ್ರದಾಯಕ್ಕೆ ಮಾರ್ಪಾಡಾಗಿ ನಾಶವಾಗುತ್ತಿದೆ ಎಂಬುದನ್ನು ಕೃತಿ ಗುರುತಿಸಿದೆ ಎಂದರು.
ಕೃತಿಕಾರ ಕಲ್ಕುಳಿ ವಿಠ್ಠಲ ಹೆಗ್ಗಡೆ ಮಾತನಾಡಿ, ಪ್ರಕೃತಿಯ ಭಾಗವಾಗಿರುವ ಜನರನ್ನು ಮುಖ್ಯವಾಹಿನಿಗೆ ತರುವುದು ಎಂದರೆ ಸಾವಿರಾರು ವರ್ಷಗಳಿಂದ ಕಾಡನ್ನು ರಕ್ಷಿಸುತ್ತಿರುವವರನ್ನು ಮುಗಿಸಿಹಾಕುವುದಾಗಿದೆ ಎಂದು ಅಭಿಪ್ರಾಯಪಟ್ಟರು.

ರೈತ ಮುಖಂಡ ಕಡಿದಾಳ್ ಶಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತೆ ಗೌರಿ ಲಂಕೇಶ್ ಉಪಸ್ಥಿತರಿದ್ದರು. ಕೆ.ಪಿ. ಶ್ರೀಪಾಲ್ ಸ್ವಾಗತಿಸಿದರು. ಎಚ್.ಟಿ. ಕೃಷ್ಣಮೂರ್ತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT