ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆಯಲ್ಲಿಎನ್‌ಜಿಒ ಪಾತ್ರ ದೊಡ್ಡದು

Last Updated 21 ಡಿಸೆಂಬರ್ 2010, 10:15 IST
ಅಕ್ಷರ ಗಾತ್ರ

ಅಭಿವೃದ್ಧಿ ಆಧಾರಿತ ಆರ್ಥಿಕತೆಯ ಬಗ್ಗೆ ತಿಳಿದುಕೊಳ್ಳಲು ನಾನು ಕಾಲು ಶತಮಾನಕ್ಕೂ ಅಧಿಕ ಸಮಯದಿಂದ ಪ್ರಯತ್ನಿಸುತ್ತಲೇ ಇದ್ದೇನೆ. ಮಹಾನ್ ಯೋಜನೆಗಳ ತವರೆನಿಸಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡ ನನಗೆ ಹತ್ತಾರು ವಿಷಯಗಳು ಗೊತ್ತಾದವು. ಕುಮಟಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜನರು ತಮ್ಮ ಹೃದಯದಲ್ಲಿ ಇನ್ನೂ ಅಪಾರ ಪ್ರಮಾಣದ ಸದಾಶಯ ಇಟ್ಟುಕೊಂಡಿರುವುದನ್ನು ಕಂಡು ಅಚ್ಚರಿ ಆಗದೆ ಇರಲಿಲ್ಲ.

ಇಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಿನವರು ಕಳೆದ 25 ವರ್ಷಗಳಲ್ಲಿ ಭಾರಿ ಆರ್ಥಿಕ ಕಂಡವರು. ಆದರೂ, ಇವರಲ್ಲಿ ಶೇ 97ರಷ್ಟು ಮಂದಿ ಫಲಪ್ರದ ಅಭಿವೃದ್ಧಿ ಆಗಿಲ್ಲ ಎಂಬುದನ್ನು ಬೆಟ್ಟುಮಾಡಿ ತೋರಿಸುವಷ್ಟು ಸಮರ್ಥರಾಗಿದ್ದರು.ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತಿರುವ ಜನರಿಗೆ ರಾಜಕೀಯ ನಾಯಕರ ಅಥವಾ ಆಡಳಿತಗಾರರ ಮೋಸದ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇ. ಅಭಿವೃದ್ಧಿಯ ಆರ್ಥಿಕತೆಯು ಹಲವಾರು ವರ್ಷಗಳಿಂದ ತಬ್ಬಿಬ್ಬುಗೊಳಿಸುತ್ತಲೇ ಇದೆ. 1950ರ ದಶಕದಲ್ಲಿ ಮೊದಲಾಗಿ ರೂಪುಗೊಂಡ ಕೆಲವು ಆದ್ಯತೆಗಳಿಂದಾಚೆಗೆ ಅಭಿವೃದ್ಧಿ ಕಾರ್ಯಕ್ರಮಗಳು ಹೋಗಿಯೇ ಇಲ್ಲ. ಆಡಳಿತ ನಡೆಸುವವರು ಇಂತಹ ಸ್ಥಳಗಳಲ್ಲಿ ನೆಲೆಸಿರುವ ಜನರ ಮನಸ್ಸನ್ನು ಅರಿತೇ ಇಲ್ಲ.

ಕಳೆದ 30 ವರ್ಷಗಳಿಂದೀಚೆಗೆ ಸರ್ಕಾರೇತರ ಸಂಘಟನೆಗಳು (ಎನ್‌ಜಿಒ) ಸರ್ಕಾರಿ ಇಲಾಖೆಗಳಿಗೆ ಪರ್ಯಾಯವೆಂಬಂತೆ ಕೆಲಸ ಮಾಡುತ್ತಿವೆ. ಇಂತಹ ಸಂಘಟನೆಗಳ ಸಂಖ್ಯೆ ಹೆಚ್ಚುತ್ತಿದ್ದರೂ ಜನರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇವುಗಳು ದಿನಕಳೆದಂತೆ ವಿಫಲವಾಗುತ್ತಿವೆ. ಜನರ ಜೀವನ ಗುಣಮಟ್ಟ ಹೆಚ್ಚಿಸುವುದಕ್ಕೆ ಎಂತಹ ಯೋಜನೆಗಳು, ನೀತಿಗಳು ಇರಬೇಕು ಎಂದು ಸರ್ಕಾರಕ್ಕೆ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡುವಲ್ಲಿ ಇವುಗಳು ಸೋಲುತ್ತಿವೆ. ಹೆಚ್ಚಿನ ‘ಎನ್‌ಜಿಒ’ಗಳಿಗೆ ನಿರ್ವಹಣೆಯ ಸೂತ್ರಗಳು ಅರ್ಥವಾದಂತಿಲ್ಲ ಅಥವಾ ಸರ್ಕಾರದೊಂದಿಗೆ ಸಂಧಾನ ನಡೆಸುವ ಕಲೆ ಗೊತ್ತಾದಂತೆ ಇಲ್ಲ. ಅಭಿವೃದ್ಧಿಯ ಗುರಿ ಹೊಂದಿದ ನಾಯಕರಲ್ಲಿ ಆ ಬಗ್ಗೆ ಕಾಳಜಿ ಇದ್ದರೂ ಸರ್ಕಾರ ಏನೇನು ಮಾಡಬಹುದು ಎಂಬುದನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ವಿಫಲವಾಗುತ್ತಿದ್ದಾರೆ.

‘ಎನ್‌ಜಿಒ’ಗಳು, ಸಮುದಾಯ ನಾಯಕರು ಮತ್ತು ಅಭಿವೃದ್ಧಿ ಚಿಂತನೆಯ ಜನರ ಈ ಕೊರತೆಗಳನ್ನೇ ಶೋಷಿಸುವ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ.ಸರ್ಕಾರೇತರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಮತ್ತೊಂದು ಬೇಸರದ ಸಂಗತಿ ಇದೆ. ಅದು ಏನೆಂದರೆ ಹೆಚ್ಚಿನ ‘ಎನ್‌ಜಿಒ’ಗಳು ಇಂದು ಎಲ್ಲರಿಂದಲೂ ದೂರ ಇದ್ದು ಏಕಾಂಗಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಮತ್ತು ಅಭಿವೃದ್ಧಿ ಕ್ಷೇತ್ರದಲ್ಲೇ ತನ್ನನ್ನು ಗುರುತಿಸಿಕೊಂಡು ತನ್ನ ಜೀವನದ ಹಾದಿಯನ್ನು ನೋಡಿಕೊಂಡಿರುವುದು. ಇದೊಂದು ಹಾಸ್ಯಾಸ್ಪದ ಎಂಬಂತೆ ಕಂಡುಬಂದರೂ ಇದೊಂದು ಕಟು ವಾಸ್ತವ ಅಂಶ. ಉತ್ತರ ಕನ್ನಡ ಜಿಲ್ಲೆಯ ಭವಿಷ್ಯ ಹಿರಿಯ ಸರ್ಕಾರಿ ಅಧಿಕಾರಿಗಳ ಹೆಚ್ಚುವರಿ ತಿಳಿವಳಿಕೆ ಮತ್ತು ಜನರ ಸ್ವಂತ ಜಾಣ್ಮೆಯ ಮೇಲೆ ನಿಂತಿದೆ.

ನೀರು, ಇಂಧನ, ತ್ಯಾಜ್ಯ ನಿರ್ವಹಣೆಯಂತಹ ವಿಚಾರಗಳಲ್ಲಿ ಸಣ್ಣ ಪಟ್ಟಣಗಳಲ್ಲಿನ ನಗರ ನಿರ್ವಹಣಾ ಕ್ರಮಗಳನ್ನು ಸ್ವಂತವಾಗಿ ನಿಭಾಯಿಸಿ ಅದನ್ನು ಉದ್ಯಮ ರೀತಿಯಲ್ಲಿ ಪರಿವರ್ತಿಸಿ ಜೀವನದ ಹಾದಿ ಕಂಡುಕೊಳ್ಳುವುದಕ್ಕೆ ಜಿಲ್ಲೆಯ ಜನತೆಗೆ ಉತ್ತೇಜನ ನೀಡಬೇಕಿದೆ. ಇಂತಹ ಸುಸ್ಥಿರ ಆರ್ಥಿಕ ಅಭಿವೃದ್ಧಿ ಕ್ರಮಗಳಲ್ಲಿ ಭೂತಾನ್ ಆಕರ್ಷಕ ನಿದರ್ಶನವನ್ನು ನಮ್ಮ ಮುಂದಿಟ್ಟಿದೆ. ಆ ಮೂಲಕವೇ ಅದು ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದೆ. ಐದು ವರ್ಷಗಳ ನಿರ್ದಿಷ್ಟ ಗಮನ ಹರಿಸಿ ಮಾಡಿದಂತಹ ಯೋಜನೆ ಮತ್ತು ಅನುಷ್ಠಾನಗಳಿಂದ ಅದನ್ನು ಸಾಧಿಸುವುದಕ್ಕೆ ಅವರಿಗೆ ಸಾಧ್ಯವಾಗಿದೆ. ಜಗತ್ತಿನ ಇನ್ನೂ ಹಲವು ಕಡೆ ಇಂತಹದೇ ಉದಾಹರಣೆಗಳು ನಡೆದಿವೆ. ಇದೆಲ್ಲ ಉತ್ತರ ಕನ್ನಡ ಜಿಲ್ಲೆಗೆ ಮಾದರಿಯಾಗಬೇಕು, ಬಳಿಕ ಇಡೀ ರಾಜ್ಯದಲ್ಲಿ ಇಂತಹ ಯೋಜನೆಗಳು ಜಾರಿಗೆ ಬರುವಂತಾಗಬೇಕು.

ಮಹತ್ವದ ಸಮೀಕ್ಷೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಲು ಇದೇ ಪ್ರಥಮ ಬಾರಿಗೆ ವಿಶಿಷ್ಟ ರೀತಿಯ ಸಮೀಕ್ಷೆಯೊಂದನ್ನು ನಡೆಸಲಾಗುತ್ತಿದೆ. ಕಳೆದ ಎರಡು ದಶಕಗಳಿಂದೀಚೆಗೆ ಜಿಲ್ಲೆಯಲ್ಲಿ ಜಾರಿಗೆ ಬಂದ ಸರ್ಕಾರಿ ಯೋಜನೆಗಳಿಂದ ನದಿಗಳು, ಅರಣ್ಯಗಳು ಮತ್ತು ಜನರ ಸಾಂಸ್ಕೃತಿಕ ಬೇರುಗಳ ಮೇಲೆ ಎಂತಹ ಹಾನಿ ತಂದಿದೆ ಎಂಬುದನ್ನು ತಿಳಿಯುವುದು ಈ ಸಮೀಕ್ಷೆಯ ಉದ್ದೇಶ.

2010ರ ಜನವರಿಯಲ್ಲಿ ಈ ಸಮೀಕ್ಷೆ ಆರಂಭವಾಗಿದ್ದು, ಜಿಲ್ಲೆಯ 1300 ಗ್ರಾಮಗಳ ಪೈಕಿ 40 ಗ್ರಾಮಗಳಲ್ಲಿ ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿದೆ. 15 ಸಾವಿರ ಜನರನ್ನು ಈಗಾಗಲೇ ಮಾತನಾಡಿಸಲಾಗಿದೆ. ಸಮೀಕ್ಷೆಯ ಸಂಕಲನಕ್ಕೇ ಎರಡು ತಿಂಗಳು ಹಿಡಿದಿದೆ ಎಂದು ಹೊನ್ನಾವರ ಮೂಲದ ಸ್ನೇಹಕುಂಜ ಟ್ರಸ್ಟ್‌ನ ಅಧಿಕಾರಿಯೊಬ್ಬರು ಹೇಳುತ್ತಾರೆ. ‘ಫೇವರ್ಡ್’ ಹೆಸರಿನ ಮತ್ತೊಂದು ಸ್ವಯಂಸೇವಾ ಸಂಘಟನೆಯೊಂದಿಗೆ ಸೇರಿಕೊಂಡು ಸ್ನೇಹಕುಂಜ ಟ್ರಸ್ಟ್ ಈ ಸಮೀಕ್ಷೆ ನಡೆಸುತ್ತಿದೆ.

ಸಮೀಕ್ಷೆ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ಯೋಜನೆಗಳಾದ ಶರಾವತಿ-ಸುಪಾ ಅಣೆಕಟ್ಟೆಗಳು, ಕೊಡಸಳ್ಳಿ-ಕದ್ರಾ ಜಲವಿದ್ಯುತ್ ಸ್ಥಾವರಗಳು, ಉದ್ದೇಶಿತ ತದಡಿ ವಿದ್ಯುತ್ ಸ್ಥಾವರ, 1600 ಎಕರೆ ಅರಣ್ಯ ನಾಶಮಾಡಿರುವ ಕೈಗಾ ಅಣುವಿದ್ಯುತ್ ಸ್ಥಾವರ, ಶತಮಾನಗಳಿಂದ ನಡೆದುಕೊಂಡು ಬಂದಿದ್ದ ಮೀನುಗಾರಿಕೆ  ನಾಶಗೊಳಿಸಿ ಕರಾವಳಿ ಮಲಿನಗೊಳಿಸಿರುವ ಬೆಲೇಕೇರಿ ಅದಿರು ದಾಸ್ತಾನು, ರೂ 500 ಕೋಟಿಗಳ ಹಳದಿಪುರ ಬಂದರು ಯೋಜನೆಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಇನ್ನು ಸ್ಥಾಪಿಸಲು ಉದ್ದೇಶಿಸಿರುವ ಮತ್ತು ಬದ್ಧವಾಗಿರುವ ಯೋಜನೆಗಳ ಒಟ್ಟು ಹೂಡಿಕೆ ಪ್ರಮಾಣ ರೂ 15 ಸಾವಿರ ಕೋಟಿಗಳಿಗೂ ಅಧಿಕ. ಜಿಲ್ಲೆಯ ಸೂಕ್ಷ್ಮ ಪರಿಸರದ ಮೇಲಾಗುವ ದುಷ್ಪರಿಣಾಮ ಅಗಾಧ. ಈ ಯೋಜನೆಗಳು ಉಂಟುಮಾಡುವ ಹಾನಿ ಕೇವಲ ಜನರಿಗೆ ಮಾತ್ರವಲ್ಲ, ಈ ಭಾಗದ ಅರಣ್ಯ, ನದಿಗಳು, ಮಣ್ಣು, ಗಿಡ ಮೂಲಿಕೆಗಳ ಮೇಲೆಲ್ಲ ಅದರ ದುಷ್ಪರಿಣಾಮ ಇದೆ. ಜಿಲ್ಲೆಯ ಸೂಕ್ಷ್ಮ ಜೀವವೈವಿಧ್ಯ ನಾಶವಾದರೆ ಅದು ಇಲ್ಲಿನ ಜನರಿಗೆ ಮಾತ್ರ ದುಷ್ಪರಿಣಾಮ ಬೀರುವುದಲ್ಲ, ಬದಲಿಗೆ ಇದರ ದುಷ್ಪರಿಣಾಮ ದೂರದ ಸ್ಥಳಗಳಿಗೂ ವ್ಯಾಪಿಸುತ್ತದೆ.

ಈ ಸಭೆಯಲ್ಲಿ ನನ್ನಂತಹ ಕೆಲವು ಮಂದಿ ಬೆಂಗಳೂರಿನಿಂದ ಆಗಮಿಸಿದವರು ಇದ್ದರು.  ಈ ಜಿಲ್ಲೆ 10 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕೇವಲ 10 ಲಕ್ಷ ಜನರನ್ನು ಹೊಂದಿರುವಂತದ್ದು. ನಮ್ಮೆಲ್ಲರ ಭವಿಷ್ಯಕ್ಕಾಗಿ ಈ ಜಿಲ್ಲೆಯ ಪರಿಸರ  ನಾಶಪಡಿಸದೆ ಇರಬೇಕು ಎಂಬ ಕಳಕಳಿ ಮೂಡದೆ ಇರಲಿಲ್ಲ.

ಸರ್ಕಾರ  ದೂರ ಇಡಲು ಸಾಧ್ಯವೇ: ಕುಮಟಾ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮೌನವಾಗಿ ಕುಳಿತು ಚರ್ಚೆ  ಕೇಳಿಸಿಕೊಳ್ಳುತ್ತಿದ್ದುದು ಹೃದಯಸ್ಪರ್ಶಿ ಸಂಗತಿಯಾಗಿತ್ತು. ಚರ್ಚೆಯಲ್ಲಿ ‘ಎನ್‌ಜಿಒ’ ಕಾರ್ಯಕರ್ತರು ಅಥವಾ ಜಿಲ್ಲೆಯ ಪತ್ರಕರ್ತರೇ ಹೆಚ್ಚಾಗಿ ಪಾಲ್ಗೊಂಡಿದ್ದರು. ‘ಸರ್ಕಾರವು ಜನರಿಗಾಗಿ ಕೆಲಸ ಮಾಡುತ್ತಿಲ್ಲ’ ಎಂಬುದು ಚರ್ಚೆಯ ಒಟ್ಟಾರೆ ಅಂಶವಾಗಿತ್ತು. ಅಲ್ಲಿ ನಮಗೆ ಮತ್ತು ಅವರಿಗೆ ಎಂಬ ಸ್ಪಷ್ಟ ವಿಭಜನೆಯೊಂದು ಕಂಡುಬರುತ್ತಿತ್ತು. ‘ಎನ್‌ಜಿಒಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮಲ್ಲಿ ತೀವ್ರ ಭಾವೋದ್ರೇಕವಿದೆ.ಕೆಲವೊಮ್ಮೆ ರೋಷಾವೇಷದಿಂದಲೂ ಮಾತನಾಡುತ್ತೇವೆ. ಆದರೆ ನಮ್ಮಲ್ಲಿ ಅಚ್ಚುಕಟ್ಟುತನ ಇಲ್ಲ’ ಎಂದು ಒಬ್ಬ ಹಿತೈಷಿ ಹೇಳುತ್ತಾರೆ. ‘ವ್ಯಾವಹಾರಿಕ ಕಾರ್ಯತಂತ್ರಗಳು ಮತ್ತು ಪರಿಹಾರಗಳ ರೂಪದಲ್ಲಿ ಯಾವುದು ಒಳ್ಳೆಯದು ಎಂಬುದು ನಮಗೆ ಗೊತ್ತಿಲ್ಲ. ಈ ನೆಲದಿಂದಲೇ, ನಮ್ಮಿಂದಲೇ ದೃಢವಾದ ಚಿಂತನೆಗಳೇನಿದ್ದರೂ ಹೊರಹೊಮ್ಮಬೇಕು ಎಂಬುದನ್ನು ನಾವು ಅರಿತುಕೊಂಡಿದ್ದೇವೆ’ ಎಂದು ಅಘನಾಶಿನಿ ನದಿ ತೀರದಲ್ಲಿ ಕಾರ್ಯ ನಿರ್ವಹಿಸುವ ಯುವ ಉತ್ಸಾಹಿ ಸ್ವಯಂಸೇವಕ ಸೋಮಶೇಖರ್ ಹೇಳುತ್ತಾರೆ.

ಚಿಂತಾಕ್ರಾಂತರಾಗಿದ್ದ ಗೋಕರ್ಣದ ಭಾರತಿ ದೇವತೆ ಅವರ ಚಿಂತನೆ ಮತ್ತೊಂದು ಬಗೆಯಲ್ಲಿತ್ತು. ಅವರು ಈಗಾಗಲೇ ಹಲವು ಸಮುದಾಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ‘ಸಾಧ್ಯವಾದಷ್ಟು ಮಟ್ಟಿಗೆ ಸರ್ಕಾರವನ್ನು ದೂರ ಇಡಬೇಕೆಂದು ನಾವು ಬಯಸುತ್ತೇವೆ.ನಮ್ಮಲ್ಲೇ ಅವಕಾಶಗಳನ್ನು ಸೃಷ್ಟಿಸಬೇಕು ಎಂಬ ವಿಚಾರವೂ ನಮ್ಮಲ್ಲಿದೆ. ಆದರೆ ಅದಕ್ಕಾಗಿ ನಾವೇನು ಮಾಡಬೇಕು? ಈ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ. ಸರ್ಕಾರ ಏನು ಮಾಡುತ್ತಿದೆಯೋ ನಾವೂ ಅದನ್ನೇ ಮಾಡುತ್ತಿದ್ದೇವೆ.ಅಂದರೆ ನಾವು ನಮ್ಮ ಬಗ್ಗೆ ಚಿಂತಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದೇವೆ’ ಎಂದು ಅವರು ಹೇಳಿದರು. ಅವರ ಈ ವಿನೋದದ ನಡುವೆಯೂ ಆತ್ಮವಿಮರ್ಶೆಯ ಮಿಂಚು ಹರಿದಿತ್ತು.

ಮತ್ತೊಬ್ಬ ಸ್ವಯಂಸೇವಕ ಗಣೇಶ್ ಭಟ್ ಎಲ್ಲರ ಕಣ್ಣು ತೆರೆಸುವ ವಿಚಾರ ಮುಂದಿಟ್ಟರು. ‘ನಮ್ಮ ಹಳ್ಳಿಗಳಿಂದ ಸರ್ಕಾರವನ್ನು ದೂರ ಇಟ್ಟು ನಮ್ಮಷ್ಟಕ್ಕೆ ಬದುಕಿಕೊಳ್ಳಲು ನಮಗೆ ಸಾಧ್ಯವಿಲ್ಲವೇ? ನಮಗೆ ಯಾವುದೇ ಉಪಕಾರ ಮಾಡದ ಅವರ ಅಗತ್ಯ ನಮಗೆ ಇಲ್ಲ.ಅವರು ನಮ್ಮಲ್ಲಿ ಏನಿದೆಯೋ ಅದೆಲ್ಲವನ್ನೂ ಲೂಟಿ ಮಾಡಿದ್ದಾರೆ. ಅವರು ನಮ್ಮ ತುತ್ತು ಅನ್ನವನ್ನೂ ಕಿತ್ತುಕೊಂಡಿದ್ದಾರೆ.ಉದ್ಯೋಗ ಒದಗಿಸುತ್ತೇವೆ ಎಂಬ ದುರ್ಬಲ ಭರವಸೆಯನ್ನಷ್ಟೇ ನೀಡುತ್ತಿದ್ದಾರೆ. ಇದು ಇಲ್ಲಿನ ಜನರ ಆತ್ಮಾಭಿಮಾನ ಮತ್ತು ಘನತೆ  ಕುಂದಿಸುತ್ತಿದೆ’ ಎಂದು ಅವರು ಹೇಳುತ್ತಾರೆ.

ಜೀವ ವೈವಿಧ್ಯದ ನೆಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಉಳಿವಿಗೆ ನಡೆದಿರುವ ಈ ಕಾರ್ಯಾಗಾರ ಒಂದು ಸಣ್ಣ ಪ್ರಯತ್ನ.ಇದಕ್ಕೆ ಇನ್ನಷ್ಟು ಬಲ ಸಿಗಬೇಕಿದೆ. ಸರ್ಕಾರದ ವಿಶ್ವಾಸ ಗಳಿಸಿಕೊಂಡು ಇಲ್ಲಿನ ಪರಿಸರ ಸಂರಕ್ಷಿಸುವ ಮಹಾನ್ ಕಾರ್ಯ ನಡೆಯಬೇಕಿದೆ.      
(ಲೇಖಕರನ್ನು 56767 ಸಂಖ್ಯೆಗೆ ZED ಎಂದು ಎಸ್‌ಎಂಎಸ್ ಮಾಡುವ ಮೂಲಕ ಇಲ್ಲವೇ 99010 54321 ಕರೆ ಮಾಡಿ ಸಂಪರ್ಕಿಸಬಹುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT