ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸೂಕ್ಷ್ಮ ವಲಯಕ್ಕೆ ತಾ.ಪಂ. ವಿರೋಧ

Last Updated 9 ಸೆಪ್ಟೆಂಬರ್ 2011, 10:10 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಜಿಲ್ಲೆಗೆ ಮಾರಕವಾಗಿರುವ ಪರಿಸರ ಸೂಕ್ಷ್ಮ ವಲಯ ಹಾಗೂ ಇನ್ನಿತರ  ಯೋಜನೆಗಳನ್ನು ವಿರೋಧಿಸಿ ಒಮ್ಮತ ನಿರ್ಣಯವನ್ನು ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗುರುವಾರ ಕೈಗೊಳ್ಳಲಾಯಿತು.

ಪೊನ್ನಂಪೇಟೆ ತಾ.ಪಂ.ಸಭಾಂಗಣದಲ್ಲಿ ಅಧ್ಯಕ್ಷ ಹೆಚ್.ಕೆ.ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ  ಸಭೆಯಲ್ಲಿ ನಿರ್ಣಯವನ್ನು ಕೇಂದ್ರ ಪರಿಸರ ಇಲಾಖೆ ಸಚಿವರಿಗೆ  ರವಾನಿಸಲು ತೀರ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಪತ್ನಿ ಪುಷ್ಪ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಿ ನಿಜವಾದ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸುವ ನಿರ್ಣಯ ಕೈಗೊಂಡು  ರಾಜ್ಯ ಗೃಹ ಇಲಾಖೆಗೆ  ಪತ್ರ ಕಳಿಸಲು ತೀರ್ಮಾನಿಸಲಾಯಿತು. ಅರಣ್ಯ ಹಕ್ಕು, ಕಾಡಾನೆ  ದಾಳಿ,  ಪರಿಸರ ಸೂಕ್ಷ್ಮ ವಲಯ ಮೊದಲಾದ ಸಮಸ್ಯೆಗಳು  ಕೊಡಗಿನ ಜನತೆಯ ನಿದ್ದೆಗೆಡಿಸುತ್ತಿದ್ದರೂ ಇವುಗಳ ಬಗ್ಗೆ ಸಭೆಯಲ್ಲಿ  ಚರ್ಚಿಸಲು ಯಾವುದೇ ಅರಣ್ಯ ಅಧಿಕಾರಿಗಳು ಸಭೆಗೆ ಹಾಜರಾಗಿಲ್ಲ ಎಂದು  ಸದಸ್ಯರು  ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಅರಣ್ಯಾಧಿಕರಿಗಳಿಗೆ ನೋಟೀಸ್ ನೀಡಲು ನಿರ್ಣಯಿಸಲಾಯಿತು. ಸಭೆಯ ಆರಂಭದಲ್ಲಿ ಅಧ್ಯಕ್ಷ ದಿನೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಸದಸ್ಯರಾದ ಟಾಟು ಮೊಣ್ಣಪ್ಪ, ಜಾನ್ಸನ್, ದಯಾಚಂಗಪ್ಪ ಕಳೆದ  ಮೂರುವರೆ ತಿಂಗಳಿನಿಂದ ಸಾಮಾನ್ಯ ಸಭೆ ಕರೆಯದೆ ಬೇಜವಾಬ್ದಾರಿ ತೋರಿಸಲಾಗಿದೆ. ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಕುಂಠಿತಗೊಂಡಿದೆ ಎಂದು ಆರೋಪಿಸಿದರು.

 ಇದಕ್ಕೆ ಉತ್ತರಿಸಿದ ದಿನೇಶ್ ಅಭಿವೃದ್ಧಿ ಕಾಮಗಾರಿಗಳ ಬಿಲ್ ವಿತರಣೆಯಲ್ಲಿ ವಿಳಂಬವಾದ್ದರಿಂದ ಸಭೆ  ನಡೆಸುವುದು ತಡವಾಯಿತು ಎಂದು ಸಬೂಬು  ನೀಡಿದರು. ಸದಸ್ಯೆ  ಮುತ್ತಮ್ಮ  ಮಾತನಾಡಿ ಗಿರಿಜನರ ಅಭಿವೃದ್ಧಿಯ ಹೆಸರಿನಲ್ಲಿ ತಿತಿಮತಿಯ ಹೊಸಕರೆ ನಿರ್ಮಾಣವನ್ನು ಕೋಟಿ ಹಣದ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಗಿರಜನರಿಗೆ ಯಾವುದೇ ಪ್ರಯೋಜನವಿಲ್ಲ. ಜತೆಗೆ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಈ ಹಿಂದೆಯೇ  ಇದರ ಬಗ್ಗೆ ಪ್ರಸ್ತಾಪ ಮಾಡಿದ್ದರೂ ಅಧ್ಯಕ್ಷರೂ ಅತ್ತ ತಿರುಗಿಯೂ ನೋಡಲಿಲ್ಲ. ಯಾವುದೋ ರಾಜಕೀಯ ಮರ್ಜಿಗೆ ಒಳಗಾಗಿ ಗಿರಿಜನರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು  ದೂರಿದರು.

ಕಾಡಾನೆಗಳು ನಾಡಾನೆಗಳಾಗಿ ಜನತೆಗೆ ಸಮಸ್ಯೆ ಒಡ್ಡಿದ್ದರೂ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ಪಡೆಯುವ ಐಎಫ್‌ಎಸ್ ಅಧಿಕಾರಿಗಳು ಜನತೆಯತ್ತ ಗಮನಹರಿಸುತ್ತಿಲ್ಲ. ಕಿರಿಯ ಅಧಿಕಾರಿಗಳನ್ನು  ಸ್ಥಳಕ್ಕೆ ಕಳಿಸಿ ಮೌನವಾಗಿದ್ದಾರೆ ಎಂದು  ಸದಸ್ಯ ಶ್ರೀಧರ್ ಆರೋಪಿಸಿದರು.

ಪುಷ್ಪ ಕೊಲೆ ಪ್ರಕರಣದಲ್ಲಿ ಕೊಲೆ ಆರೋಪಿಯನ್ನು ಬಂಧಿಸಿದ್ದರೂ ಆತ  ಘಟನೆ ಸಂದರ್ಭದಲ್ಲಿ ಕಳವು ಮಾಡಿದ್ದ ಎನ್ನಲಾದ ಆಭರಣಗಳನ್ನು ಪೊಲೀಸರು ಒಪ್ಪಿಸದಿರುವುದು ಸಾರ್ವಜನಿಕ ವಲಯದ ಅನುಮಾನಕ್ಕೆ ಆಸ್ಪದವಾಗಿದೆ.  ಇದರ  ಬಗ್ಗೆ ಸೂಕ್ತ ಮಾಹಿತಿ ಬೇಕು ಎಂದು ಹಲವು ಸದಸ್ಯರು ಪಟ್ಟು  ಹಿಡಿದರು. 

 ಈ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ಸಬ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್  ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಪ್ರಕರಣದ ಬಗ್ಗೆ ವಿಚಾರಣೆ ಮುಂದುವರಿದಿದೆ ಎಂದು ಹೇಳಿದರು.

 ಲೈಂಗಿಕ ಕಿರುಕುಳ ನೀಡಿದ ಆರೋಪ ಮೇರೆಗೆ ಹುದಿಕೇರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ವರ್ಗಾವಣೆ  ಮಾಡುವಂತೆ ವರದಿ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್  ಸದಸ್ಯರ ಪ್ರಶ್ನೆಗೆ ಉತ್ತರಿಸಿದರು. ಉಪಾಧ್ಯಕ್ಷೆ ಧರಣಿ ಕಟ್ಟಿ,  ಕಾರ್ಯನಿರ್ವಾಹಣಾಧಿಕಾರಿ ಅಲೆಗ್ಸಾಂಡರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT