ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಕೆ ಹೆಚ್ಚಳ

Last Updated 3 ಅಕ್ಟೋಬರ್ 2012, 18:55 IST
ಅಕ್ಷರ ಗಾತ್ರ

ಬೆಂಗಳೂರು: `ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದೆ. ಈ ವರ್ಷ ಶೇ 20ರಷ್ಟು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸಲಾಗಿದ್ದು, ಇದರಿಂದ ಮಾಲಿನ್ಯದ ಪ್ರಮಾಣ ತಕ್ಕ ಮಟ್ಟಿಗೆ ಇಳಿಮುಖವಾಗಿದೆ~ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ವಾಮನ ಆಚಾರ್ಯ ಹೇಳಿದರು.

ನಗರದ ಪರಿಸರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
`ಹಿಂದಿನ ವರ್ಷಗಳಿಗೆ ಹೋಲಿಸಿದರೆ ನಗರವೂ ಸೇರಿದಂತೆ ರಾಜ್ಯಾದ್ಯಂತ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಹೆಚ್ಚಾಗಿದೆ. ವಿಷಕಾರಿ ಬಣ್ಣಗಳಿಂದ ಹೊರತಾದ ಮಣ್ಣಿನ ಗಣೇಶ ಮೂರ್ತಿಗಳ ಬಳಕೆ ಹೆಚ್ಚುತ್ತಿದೆ. ಜನರಲ್ಲಿ ಧಾರ್ಮಿಕ ಆಚರಣೆಗಳ ಜತೆಗೆ ಪರಿಸರ ಕಾಳಜಿಯೂ ಹೆಚ್ಚಾಗುತ್ತಿದೆ~ ಎಂದು ಅವರು ತಿಳಿಸಿದರು.

`ಗಣೇಶ ಮೂರ್ತಿಗಳ ವಿಸರ್ಜನೆಗೂ ಮುನ್ನ ಹಾಗೂ ವಿಸರ್ಜನೆಯ ನಂತರ ನಗರದ 11 ಕೆರೆಗಳ ನೀರಿನ ಮಾದರಿಯನ್ನು ಪರೀಕ್ಷಿಸಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಯ ನಂತರ ಲಾಲ್‌ಬಾಗ್, ಯಡಿಯೂರು, ಶಿವಪುರ ಹಾಗೂ ಸ್ಯಾಂಕಿ ಕೆರೆಗಳು ಸೇರಿದಂತೆ ಎಲ್ಲ 11 ಕೆರೆಗಳಲ್ಲಿ ಈ ವರ್ಷ ನೀರಿನಲ್ಲಿ ಕರಗಿದ ಆಮ್ಲಜನಕದ ಪ್ರಮಾಣವು ಶೇ 25 ರಷ್ಟು ಕಡಿವೆುಯಾಗಿದೆ. ಇದರಿಂದ ಜಲಚರಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಆದರೆ, ಈ ವರ್ಷದ ಮಾಲಿನ್ಯದ ಪ್ರಮಾಣ ಹಿಂದಿನ ವರ್ಷಗಳಿಗಿಂತ ಕಡಿಮೆ ಇದೆ~ ಎಂದು ತಿಳಿಸಿದರು.

`ವಿಷಕಾರಿ ಬಣ್ಣಗಳುಳ್ಳ ಗಣೇಶ ಮೂರ್ತಿಗಳ ವಿಸರ್ಜನೆಯಿಂದ ನಗರದ ಕೆರೆಗಳ ನೀರು ಮಲಿನಗೊಂಡಿದೆ. ಗಣೇಶ ವಿಸರ್ಜನೆಗೂ ಮುನ್ನ ಇದ್ದ ರಸಾಯನಿಕಗಳ ಪ್ರಮಾಣ, ಮೂರ್ತಿಗಳ ವಿಸರ್ಜನೆಯ ನಂತರ ಹೆಚ್ಚಾಗಿದೆ. ಶೇ 8ರಷ್ಟು ಕ್ಷಾರತೆ ಹಾಗೂ ಶೇ 15ರಷ್ಟು ಘನ ಸಂಯುಕ್ತಗಳು ಹೆಚ್ಚಾಗಿವೆ. ಲಾಲ್‌ಬಾಗ್ ಹಾಗೂ ಸ್ಯಾಂಕಿ ಕೆರೆಗಳಲ್ಲಿ ಪಾದರಸ ಹಾಗೂ ಸೀಸದ ಪ್ರಮಾಣ ಹೆಚ್ಚಾಗಿದೆ~ ಎಂದರು.

`ರಾಜ್ಯದಲ್ಲಿ ಪೂನಾದ ಮಾದರಿಯಲ್ಲಿ ಬೃಹತ್ ಗಣೇಶ ಮೂರ್ತಿಗಳನ್ನು ಪುನರ್ ಬಳಕೆ ಮಾಡುವ ಬಗ್ಗೆ ಪ್ರಚಾರ ನಡೆಸಲಾಗುವುದು. ವಿಷಕಾರಿ ಬಣ್ಣಗಳ ಬದಲಿಗೆ ನೈಸರ್ಗಿಕ ಮೂಲದ ಬಣ್ಣಗಳನ್ನು ಬಳಸಲು ಸಲಹೆ ನೀಡಲಾಗುತ್ತಿದೆ. ಹಂತ ಹಂತವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು~ ಎಂದು ಅವರು ತಿಳಿಸಿದರು.

ಒಣ ತ್ಯಾಜ್ಯದ ಕಡೆಗೂ ಗಮನ ನೀಡಬೇಕು
`ನಗರದಲ್ಲಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅಭಿಯಾನ ಆರಂಭವಾಗಿದ್ದು, ಇದರಲ್ಲಿ ಹಸಿ ತ್ಯಾಜ್ಯವನ್ನು ಬೇರ್ಪಡಿಸಿ ಗೊಬ್ಬರವಾಗಿ ಪರಿವರ್ತಿಸುವ ಕಾರ್ಯ ಸುಧಾರಣೆ ಕಾಣುತ್ತಿದೆ. ಆದರೆ, ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗುವ ಒಣತ್ಯಾಜ್ಯದ ಕಡೆಗೂ ಬಿಬಿಎಂಪಿ ಗಮನ ನೀಡಬೇಕು. ಒಣತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಕ್ರಮಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಈ ಬಗ್ಗೆ ಬಿಬಿಎಂಪಿ ಆಯುಕ್ತರೊಂದಿಗೂ ಮಾತುಕತೆ ನಡೆಸಿದ್ದೇನೆ~
 - ಡಾ. ವಾಮನ ಆಚಾರ್ಯ
 ಅಧ್ಯಕ್ಷರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT