ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಫಲಿತಾಂಶದ ವೈಭವೀಕರಣ ಬೇಡ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಒಂದೊಂದೇ ಪರೀಕ್ಷೆಗಳ ಫಲಿತಾಂಶಗಳು ಬರತೊಡಗಿವೆ. ಪರೀಕ್ಷೆ ಎದುರಿಸಿರುವ ವಿದ್ಯಾರ್ಥಿಗಳಲ್ಲಿ, ಅವರ ಪೋಷಕರಲ್ಲಿ, ಬೋಧಕರಲ್ಲಿ ಎಲ್ಲಿಲ್ಲದ ಆತಂಕ ಮತ್ತು ಕುತೂಹಲ. ವಿದ್ಯಾರ್ಥಿಗಳ ಪೋಷಕರಲ್ಲಿ ಹತ್ತಾರು ಕನಸುಗಳಿವೆ. ಅದು ಸಹಜ.
 
ಪರೀಕ್ಷೆ ಬರೆದ ವಿದ್ಯಾರ್ಥಿಗಿಂತ  ಪೋಷಕರಿಗೇ ಹೆಚ್ಚು ಉದ್ವೇಗ, ತಲ್ಲಣ. ಈ ವಿಷಯದಲ್ಲಿ ಎರಡು ಮಾತಿಲ್ಲ. ಅಂಕಗಳಿಗೆ ಹೊರತಾದ ತಮ್ಮ ಮಕ್ಕಳನ್ನು ಉದ್ಧರಿಸುವ ಸಾಮರ್ಥ್ಯ ಈ ಜಗತ್ತಿನಲ್ಲಿ ಬೇರ‌್ಯಾವುದೂ ಅಲ್ಲ ಎಂದೇ ಬಹುತೇಕ ಪೋಷಕರು ನಂಬಿದ್ದಾರೆ.

ಅನುತ್ತೀರ್ಣರಾದ ತಮ್ಮ ಮಕ್ಕಳನ್ನು, ಅದರಲ್ಲೂ ಹೆಣ್ಣು ಮಕ್ಕಳನ್ನು ಭಿಕ್ಷಾಟನೆಗೋ ಇಲ್ಲವೇ ಕೂಲಿ ಕೆಲಸಕ್ಕೋ ಕಳಿಸುವ `ಆದರ್ಶ~ ತಂದೆ- ತಾಯಿಗಳನ್ನು ನಾವು ನೋಡಿದ್ದಾಗಿದೆ. ಮೊನ್ನೆ ತಾನೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅಂತರ್ಜಾಲದ ಪರದೆ ಮೇಲೆ ಕಾಣಿಸಿದ್ದೇ ತಡ ಫೇಲಾದ ಹುಡುಗನೊಬ್ಬ ನೇಣು ಬಿಗಿದುಕೊಳ್ಳುವ ಮೂಲಕ ಸೋಲನ್ನು ಒಪ್ಪಿಕೊಂಡಿದ್ದಾನೆ.

 ಮಗ ಅಥವಾ ಮಗಳು ಪರೀಕ್ಷೆಯಲ್ಲಿ ಫೇಲು ಅಥವಾ ಕಡಿಮೆ ಅಂಕಗಳನ್ನು ಪಡೆದರೆ ಅಥವಾ ನಿರೀಕ್ಷಿಸಿದ ದರ್ಜೆ ಬಾರದೇ ಇದ್ದರೆ ಅದು ಘೋರ ಅವಮಾನ, ನಿರಾಶೆ, ಮರ್ಯಾದೆಗೆ ಕುಂದು ಅಥವಾ ತಮಗೆ ದುರ್ದೆಸೆ ಆರಂಭವಾಯಿತು ಎಂದು ಭಾವಿಸುವ ಪೋಷಕರಿದ್ದಾರೆ!

ಮಗ ಅಥವಾ ಮಗಳು ಫೇಲಾದಳೆಂಬ ಕಾರಣಕ್ಕೆ ಒಂದಷ್ಟು ದಿನ ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಯಾವುದೇ ಸಮಾರಂಭಗಳಿಗೆ ಹೋಗದವರಿದ್ದಾರೆ. ಪರೀಕ್ಷೆಗಳಿಗೆ ಪೋಷಕರು ಕೊಡುವ ಅತಿಯಾದ ಮಹತ್ವವೇ ಇಂತಹ ಅತಿರೇಕ ಹಾಗೂ ವಿಪರ್ಯಾಸಕ್ಕೆ ಮೂಲ.

ಕೆರೆಯಲ್ಲಿ ಮುಳುಗುತ್ತಿದ್ದ ಮಗುವೊಂದನ್ನು ಬಾಲಕನೊಬ್ಬ ತನ್ನ ಜೀವದ ಹಂಗು ತೊರೆದು ರಕ್ಷಿಸುತ್ತಾನೆ ಎಂದಿಟ್ಟುಕೊಳ್ಳಿ. ಆ ಬಾಲಕನ ತಂದೆ, ತಾಯಿಗೆ  ಮಗನದು ಬಹು ದೊಡ್ಡ ಸಾಹಸ ಅಥವಾ ಸಾಧನೆ ಎಂದಾಗಲೀ ಅನ್ನಿಸುವುದು ವಿರಳ.
 
ಆದರೆ ಅದೇ ಬಾಲಕ ಪರೀಕ್ಷೆಯಲ್ಲಿ ಎಂಬತ್ತೋ ಅಥವಾ ಎಂಬತ್ತೈದೋ ಅಂಕಗಳನ್ನು ಗಳಿಸಿದರೆ ಅದು ಬಹು ದೊಡ್ಡ ಸಾಧನೆ! ಮಗನ ಬುದ್ಧಿವಂತಿಕೆಯ ವೈಭವೀಕರಣಕ್ಕೆ ಇಳಿದು ಬಿಡುತ್ತಾರೆ.
 
ಇತ್ತೀಚೆಗೆ ಕೆಲವು  ಮಾಧ್ಯಮಗಳೂ ವಿದ್ಯಾರ್ಥಿಗಳ ಅಂಕ ಗಳಿಕೆಯನ್ನೇ ಬಹು ದೊಡ್ಡ ಸಾಧನೆ ಎಂದು ಬಿಂಬಿಸುತ್ತಿವೆ.ಹಾಡಿ ಹೊಗಳುತ್ತವೆ, ಮತ್ತೆ ಮತ್ತೆ ಸುದ್ದಿ ಪ್ರಸಾರ ಮಾಡುತ್ತವೆ. ಸಂಘಸಂಸ್ಥೆಗಳು ಸನ್ಮಾನ ಹಮ್ಮಿಕೊಳ್ಳುತ್ತವೆ.

ಇಂತಹ ವಿದ್ಯಾರ್ಥಿನಿಯರು ಕಲಿತ ಶಾಲೆಗಳ ಆಡಳಿತ ಮಂಡಳಿಗಳು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ವಿದ್ಯಾರ್ಥಿಗಳ ಸಾಧನೆಯನ್ನು ಜನರ ಗಮನಕ್ಕೆ ತರುತ್ತವೆ. ಅದು ತಪ್ಪಲ್ಲ.
 
ಆದರೆ ಪರೀಕ್ಷೆ, ಫಲಿತಾಂಶ, ಅಂಕ, ದರ್ಜೆ ಇತ್ಯಾದಿಗಳ ಸುತ್ತಲೇ ಎಲ್ಲರೂ ಗಿರಕಿ ಹೊಡೆಯುತ್ತಾರೆ. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಪ್ರತಿಭಾವಂತ ಎಂಬ ಭಾವನೆ ಅನೇಕರಲ್ಲಿದೆ. ಅದೇ ಸಾಧನೆಯ ಮಾನದಂಡ ಎಂಬ ಕಲ್ಪನೆ. ಅಂಕ ಗಳಿಕೆಯೇ ಅಖೈರು ಎಂಬ ಭ್ರಮೆ. ಪೋಷಕರು ಇಂತಹ ಭ್ರಮೆಯಿಂದ ಮೊದಲು ಹೊರಬರಬೇಕು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರತಿಭಾವಂತ ಹಾಗೂ ಯಶಸ್ವಿ ಉದ್ಯಮಿ ಬಿಲ್ ಗೇಟ್ಸ್  ವಿಶ್ವ ವಿದ್ಯಾಲಯದ ಪರೀಕ್ಷೆಗಳಲ್ಲಿ ಕನಿಷ್ಠ ಅಂಕಗಳನ್ನೂ ಪಡೆಯಲಿಲ್ಲವೆಂಬ ಕಾರಣಕ್ಕೆ ಅವರನ್ನು ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ ಹೊರಹಾಕಲಾಗಿತ್ತು! ವಿಜ್ಞಾನಿಗಳ ವಿಜ್ಞಾನಿ ಎಂದೇ ಖ್ಯಾತಿ ಪಡೆದ ಸರ್. ಐಸಾಕ್ ನ್ಯೂಟನ್ ಶಾಲಾ ತರಗತಿಯಲ್ಲಿ ಹಿಂದಿನ ಸಾಲಿನಲ್ಲಿ ಮಂಕಾಗಿ ಕುಳಿತಿರುತ್ತಿದ್ದ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು.
 
ಅವರ ಶಿಕ್ಷಕರು `ನಿನಗೆ ಸೊನ್ನೆ ಸುತ್ತಿದರೂ ಹೆಚ್ಚು ಕೊಟ್ಟ ಹಾಗೆ~ ಎಂದು ಒಮ್ಮೆ ಹಂಗಿಸಿದ್ದರಂತೆ! ಆದರೆ ಮುಂದೆ ಆದದ್ದೇನು? ಶಿಕ್ಷಣವೆಂದರೆ ನೂರಕ್ಕೆ ಸಮೀಪದ ಅಂಕಗಳನ್ನು ಗಿಟ್ಟಿಸುವಂತೆ ಮಕ್ಕಳನ್ನು ಅಣಿಗೊಳಿಸುವುದಲ್ಲ. ಬದಲಿಗೆ ಪ್ರಾಮಾಣಿಕ, ಸೃಜನಶೀಲ, ಶ್ರಮಶೀಲರನ್ನಾಗಿ ಅವರನ್ನು ರೂಪುಗೊಳಿಸುವುದು.

ಈ ಮಕ್ಕಳನ್ನು ನೋಡಿ, ಒಬ್ಬ  ಗಾಡಿ ಹೊಡೆಯುವವನ ಮಗ, ಇನ್ನೊಬ್ಬಳು ತರಕಾರಿ ಮಾರುವವಳ ಮಗಳು, ಮತ್ತೊಬ್ಬ ಸಂಜೆಯ ಹೊತ್ತು  ಬೀದಿಯಲ್ಲಿ ಬೋಂಡ ಕರಿಯುವ ಅಪ್ಪನಿಗೆ ಸಹಾಯ ಮಾಡುವ ಹುಡುಗ.

ಆದರೆ ಇವರೆಲ್ಲ ನೂರಕ್ಕೆ ಎಂಬತ್ತಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ ಎಂದು  ಬಣ್ಣಿಸುವುದೂ ಅತಿಶಯವೇ ಹೌದು. ಕಾರಣ ಸ್ಪಷ್ಟವಿದೆ. ಕಟ್ಟಿಗೆ, ತರಕಾರಿ ಇತ್ಯಾದಿ ಮಾರುವ ಪರಿಸರದಲ್ಲಿ  ಬೆಳೆಯುವ ಮಕ್ಕಳಿಗೆ ಪಾಠ ತಲೆಗೆ ಹತ್ತುವುದು ಪವಾಡವೇನೂ ಅಲ್ಲ,

ಹಾಗೆ ನೋಡಿದರೆ ದಿನಸಿ ಅಂಗಡಿಯಲ್ಲಿ ಪೊಟ್ಟಣ ಕಟ್ಟುವ ಹುಡುಗನಿಗೆ ಲೆಕ್ಕಾಚಾರ, ಮಳೆ, ಬೆಳೆ, ಲಾಭನಷ್ಟ, ಬೆಲೆಗಳ ಏರಿಳಿತಗಳ ಬಗ್ಗೆ ಉಳಿದ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ತಿಳುವಳಿಕೆ ಇರುತ್ತದೆ. ಇಂತಹ ಮಕ್ಕಳು ಎಲ್ಲರಂತೆ ಶ್ರದ್ಧೆಯಿಂದ ಓದುತ್ತಾರಷ್ಟೇ.

ಅವರ ಪರಿಸರ ಕಲಿಕೆಗೆ ಪೂರಕವಾಗಿರುತ್ತದೆ. ಗಣಿತ, ಸಮಾಜ ವಿಜ್ಞಾನದಲ್ಲಿ ಪ್ರಶ್ನೆಗಳನ್ನು ಅವರು ಸಮರ್ಥವಾಗಿ ಎದುರಿಸಬಲ್ಲರು. ಅದು ಎಲ್ಲರಿಗೂ ಸಾಧ್ಯವಾಗುವಂಥದ್ದೇ. ಅದನ್ನು ಅವರು   ಸಾಧ್ಯವಾಗಿಸಿದ್ದಾರಷ್ಟೇ.

ಅದು ಅತಿಶಯ ಸಾಧನೆ ಎಂದು ಪರಿಭಾವಿಸಿದರೆ ಇತರರನ್ನು ಅವಮಾನಿಸಿದಂತೆ. ಅಮೆರಿಕದಲ್ಲಿ ಎಳೆಯ ಮಕ್ಕಳೂ ಇಂಗ್ಲಿಷಿನಲ್ಲಿ ಸೊಗಸಾಗಿ ಮಾತನಾಡುತ್ತವೆ ಎಂದು ಹೇಳಿಕೊಂಡು ಅಚ್ಚರಿಪಟ್ಟಂತೆ.

ಹಾಗೆಯೇ ಈ ವರ್ಷ ಬಾಲಕಿಯರೇ ಮೇಲುಗೈ, ಗ್ರಾಮೀಣ ವಿದ್ಯಾರ್ಥಿಗಳು ಮುಂದೆ, ಕೆಲವು ಶಾಲೆಗಳಲ್ಲಿ ಶೂನ್ಯ ಸಂಪಾದನೆ, ಸರ್ಕಾರಿ ಶಾಲೆಯಲ್ಲಿ ಓದಿಯೂ ರ‌್ಯಾಂಕ್ ಪಡೆದ ವಿದ್ಯಾರ್ಥಿ ಇತ್ಯಾದಿ  ಬಣ್ಣನೆಗಳು ವರ್ಗ, ಪ್ರಾದೇಶಿಕ ಕಂದಕಗಳನ್ನು ಸೃಷ್ಟಿಸುತ್ತವೆ. ಟ್ಯೂಶನ್ನಿಗೆ ಹೋಗದೆಯೂ ವಿಶೇಷ ದರ್ಜೆಯಲ್ಲಿ ಪಾಸಾದ ಎಂಬ ಪ್ರಶಂಸೆ ಪರೋಕ್ಷವಾಗಿ ಟ್ಯೂಶನ್ ಅನಿವಾರ್ಯ, ಶಾಲೆ ನೆಪಮಾತ್ರ ಎನ್ನುವ ಕೆಟ್ಟ ಸಂದೇಶ ಬಿಂಬಿಸುತ್ತದೆ.

ಪಾಸಾದವರಷ್ಟೇ ನಪಾಸಾದವರೂ ಕೌಶಲವುಳ್ಳವರೇ. ಹೆಚ್ಚು ಅಂಕ ಪಡೆದವರನ್ನು ಅಭಿನಂದಿಸಬೇಕು. ನಪಾಸಾದವರಿಗೆ ಮರಳಿ ಯತ್ನಿಸುವಂತೆ ಬೆನ್ನು ತಟ್ಟಿ ಮುಂದಿನ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಪಾಸಾಗುವಂತೆ ಉತ್ತೇಜಿಸಬೇಕು. ಅದು ಪೋಷಕರು ಮತ್ತು ಶಿಕ್ಷಕರು ಮಾಡಬೇಕಾದ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT