ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಸಾಮಗ್ರಿ ಖರೀದಿ: ಬೆಂಗಳೂರು ವಿವಿಯಿಂದ ಕಾನೂನು ಉಲ್ಲಂಘನೆ

Last Updated 26 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಪತ್ರಿಕೆಗಳ ಮುದ್ರಣ ಮತ್ತು ಪೂರೈಕೆ ಸೇರಿದಂತೆ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸಲು ಮತ್ತು ಕಾಮಗಾರಿ ಕೈಗೊಳ್ಳಲು `ಇ- ಪ್ರೊಕ್ಯೂರ್‌ಮೆಂಟ್~ ಮೂಲಕ ಟೆಂಡರ್ ಕರೆದ ಬಳಿಕ, ಸಾಮಾನ್ಯ ಟೆಂಡರ್ ಕರೆದಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ನಾಲ್ಕು ಕೋಟಿ ರೂಪಾಯಿ ಮೊತ್ತದ ಟೆಂಡರ್ ಇದಾಗಿರುವುದರಿಂದ ಕಡ್ಡಾಯವಾಗಿ ಇ- ಪ್ರೊಕ್ಯೂರ್‌ಮೆಂಟ್ ಪದ್ಧತಿಯಲ್ಲೇ ಗುತ್ತಿಗೆ ನೀಡಬೇಕಿತ್ತು. ಇ- ಪ್ರೊಕ್ಯೂರ್‌ಮೆಂಟ್‌ನಲ್ಲಿ ಬಿಡ್ ಮಾಡಿದವರ ಪೈಕಿ ಅರ್ಹರಾದವರಿಗೆ ಗುತ್ತಿಗೆ ನೀಡಬೇಕಿತ್ತು ಅಥವಾ ಅರ್ಹ ಬಿಡ್ ಸಲ್ಲಿಕೆಯಾಗಿಲ್ಲ ಎಂದು ಮತ್ತೆ ಇ- ಟೆಂಡರ್ ಕರೆಯಬೇಕಿತ್ತು. ಬದಲಿಗೆ ಇ- ಟೆಂಡರ್ ಪದ್ಧತಿ ಜಾರಿಗೆ ಮುನ್ನ ಚಾಲ್ತಿಯಲ್ಲಿದ್ದ ಟೆಂಡರ್ ಮೂಲಕ ಬಿಡ್ ಸಲ್ಲಿಕೆಗೆ ಆಹ್ವಾನ ನೀಡಿರುವುದು ಕಾನೂನು ಬಾಹಿರ ಎಂಬ ಮಾತು ತಜ್ಞರಿಂದ ಕೇಳಿ ಬಂದಿದೆ.

ಈ ಬಗ್ಗೆ ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಇ- ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್, `ಒಮ್ಮೆ ಇ- ಪ್ರೊಕ್ಯೂರ್‌ಮೆಂಟ್‌ನಲ್ಲಿ ಟೆಂಡರ್ ಅಧಿಸೂಚನೆ ಹೊರಡಿಸಿದ ಮೇಲೆ ಸಾಮಾನ್ಯ ಟೆಂಡರ್ ಕರೆಯುವಂತಿಲ್ಲ. ಹಾಗೇನಾದರೂ ಕರೆದಿದ್ದರೆ ಅದನ್ನು ರದ್ದು ಮಾಡಲಾಗುವುದು. ಆ ಅಧಿಕಾರ ಇಲಾಖೆಗೆ ಇದೆ~ ಎಂದರು.

ಪ್ರಕರಣದ ವಿವರ: 1999ರ ಕರ್ನಾಟಕ ಪಾರದರ್ಶಕತೆ ಕಾಯ್ದೆ ಪ್ರಕಾರ, ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸೇವೆಗಳನ್ನು ಪಡೆಯುವಾಗ ಮತ್ತು ಸರಕು ಖರೀದಿ ಮಾಡುವಾಗ ಇ- ಟೆಂಡರ್ ಕರೆಯಲೇಬೇಕು. ಐದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಕಡ್ಡಾಯವಾಗಿ ಇ- ಟೆಂಡರ್ ಮೂಲಕವೇ ಗುತ್ತಿಗೆ ನೀಡಬೇಕು.

ರಾಜ್ಯದಲ್ಲಿ 2007ರ ನವೆಂಬರ್‌ನಿಂದ ಇ- ಪ್ರೊಕ್ಯೂರ್‌ಮೆಂಟ್ ಪದ್ಧತಿ ಜಾರಿಗೆ ಬಂದಿದೆ. ಈ ಪದ್ಧತಿಯಲ್ಲಿ ಜಗತ್ತಿನ ಯಾವುದೇ ಮೂಲೆಯಿಂದ ಯಾರು ಬೇಕಾದರೂ ಬಿಡ್ ಸಲ್ಲಿಸಬಹುದು. ಸಂಬಂಧಪಟ್ಟ ಇಲಾಖೆ ಅಥವಾ ಸಂಸ್ಥೆಯ ಕಚೇರಿಗೆ ಬಂದು ಸಲ್ಲಿಸುವ ಅಗತ್ಯವಿರುವುದಿಲ್ಲ. ಇದರಿಂದಾಗಿ ಈ ಪದ್ಧತಿಯಲ್ಲಿ ಪಕ್ಷಪಾತ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ.

ಈ ಪದ್ಧತಿಯಲ್ಲಿಯೇ ಗುತ್ತಿಗೆ ನೀಡುವ ಅಧಿಸೂಚಿತ ಪಟ್ಟಿಯಲ್ಲಿ ಬೆಂಗಳೂರು ವಿ.ವಿ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ನಿಗಮಗಳು, ಸಂಸ್ಥೆಗಳು ಒಳಪಟ್ಟಿವೆ. ಈ ಪದ್ಧತಿ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಇದುವರೆಗೆ 90 ಸಾವಿರ ಕೋಟಿ ರೂಪಾಯಿ ಮೊತ್ತದ ಟೆಂಡರ್ ಪ್ರಕ್ರಿಯೆ ಇ- ಪ್ರೊಕ್ಯೂರ್‌ಮೆಂಟ್ ವಿಧಾನದಲ್ಲೇ ನಡೆದಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಕನಿಷ್ಠ 900 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಇ- ಆಡಳಿತ ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯಪಾಲರು 2010ರ ಜುಲೈ 16ರಂದೇ ಎಲ್ಲ ವಿ.ವಿಗಳಿಗೆ ಸುತ್ತೋಲೆ ಕಳುಹಿಸಿ, ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಟೆಂಡರ್‌ಗಳನ್ನು ಇ- ಪ್ರೊಕ್ಯೂರ್‌ಮೆಂಟ್ ಮೂಲಕವೇ ನಿರ್ವಹಿಸಬೇಕು ಎಂದು ಆದೇಶಿಸಿದ್ದರು. ಈ ಆದೇಶವನ್ನು ತತ್‌ಕ್ಷಣದಿಂದಲೇ ಅನುಸರಿಸಬೇಕು, ಆ ಬಗ್ಗೆ ತಮಗೆ ವರದಿ ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದರು ಎಂದು ವಿ.ವಿ ಮೂಲಗಳು ತಿಳಿಸಿವೆ.

ಕಾಯ್ದೆ ಪ್ರಕಾರ, ಬೆಂಗಳೂರು ವಿ.ವಿ ಫೆಬ್ರುವರಿ 1ರಂದು ರಾಜ್ಯ ಸರ್ಕಾರದ `ಇ- ಪ್ರೊಕ್ಯೂರ್‌ಮೆಂಟ್ ಪೋರ್ಟಲ್~ನಲ್ಲಿ ಇ- ಟೆಂಡರ್ ಕರೆದಿತ್ತು. ಬಿಡ್ ಸಲ್ಲಿಸಲು ಫೆ. 11 ಅನ್ನು ಕಡೆಯ ದಿನ ಎಂದು ನಿಗದಿಪಡಿಸಿ, ಫೆ. 15ರಂದು ತಾಂತ್ರಿಕ ಬಿಡ್ ಅನ್ನು ತೆರೆಯುವುದಾಗಿ ಪ್ರಕಟಿಸಿತ್ತು.
 
ಆದರೆ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಫೆ. 22ರಂದು ದಿನಪತ್ರಿಕೆಯೊಂದರಲ್ಲಿ ಅದೇ ಸೇವೆ ಮತ್ತು ಕಾಮಗಾರಿಗಳ ಗುತ್ತಿಗೆ ನೀಡಲು ಪರೀಕ್ಷಾ ವಿಭಾಗದ ಕುಲಸಚಿವರು ಟೆಂಡರ್ ಆಹ್ವಾನಿಸಿದ್ದಾರೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂಬುದು ತಜ್ಞರ ಅಭಿಮತ.

ಈ ಬಗ್ಗೆ ವಿ.ವಿ ಕುಲಪತಿ ಡಾ.ಎನ್.ಪ್ರಭುದೇವ್ ಅವರನ್ನು ಪ್ರಶ್ನಿಸಿದರೆ, `ರಿಜಿಸ್ಟ್ರಾರ್ (ಇವ್ಯಾಲುವೇಷನ್) ಅವರನ್ನು ಕೇಳಿ~ ಎಂದರು. `ಇ- ಟೆಂಡರ್‌ನಲ್ಲಿ ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ಅವಕಾಶವಾಗುವುದಿಲ್ಲ. ಅದಕ್ಕಾಗಿಯೇ ಮ್ಯಾನ್ಯುಯಲ್ ಟೆಂಡರ್ ಕರೆದು ಅವ್ಯವಹಾರಕ್ಕೆ ಅವಕಾಶ ಮಾಡಿಕೊಳ್ಳುವ ಯತ್ನ ನಡೆದಿದೆ~ ಎಂದು ವಿ.ವಿ ಅಧಿಕಾರಿಯೊಬ್ಬರು ಆರೋಪಿಸಿದರು.

ದೊಡ್ಡ ಹಗರಣದ ಶಂಕೆ
`ವಿ.ವಿ ಪರೀಕ್ಷಾ ವಿಭಾಗದಲ್ಲಿ ದೊಡ್ಡ ಹಗರಣವೇ ನಡೆದಿರುವ ಶಂಕೆ ಉಂಟಾಗುತ್ತಿದೆ. ಮೂರು ವರ್ಷಗಳಿಂದ ಆ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಅಧಿಕಾರಿಗಳ ಸಂಶಯಾಸ್ಪದ ಪಾತ್ರದ ಬಗ್ಗೆ ನನಗೆ ದೂರುಗಳು ಬಂದಿವೆ~ ಎಂದು ವಿ.ವಿ ಕುಲಸಚಿವ (ಆಡಳಿತ) ಪ್ರೊ.ಬಿ.ಸಿ.ಮೈಲಾರಪ್ಪ ತಿಳಿಸಿದರು.

`ದೂರುಗಳ ಪರಿಶೀಲಿಸಿ, ಟೆಂಡರ್ ಕರೆಯುವ ವಿಚಾರದಲ್ಲಿ ಕಾನೂನು ಪಾಲಿಸದೇ ಇದ್ದರೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರ ಮತ್ತು ರಾಜ್ಯಪಾಲರಿಗೆ ವರದಿ ಸಲ್ಲಿಸಲಾಗುವುದು~ ಎದರು.
- ಬಿ.ಸಿ.ಮೈಲಾರಪ್ಪ

ಕಾನೂನಿನ ಅರಿವಿದೆ
`ಉತ್ತರ ಪತ್ರಿಕೆಗಳ ಮುದ್ರಣಕ್ಕೆ ಕರೆಯಲಾಗಿದ್ದ ಇ-ಟೆಂಡರ್ ಮೂಲಕ ನಾಲ್ಕೈದು ಅರ್ಜಿಗಳು ಮಾತ್ರ ಬಂದಿದ್ದವು. ಹೀಗಾಗಿ ಹಿಂದಿನ ರೀತಿಯಂತೆ ಸಾಮಾನ್ಯ ಟೆಂಡರ್ ಕರೆಯಲಾಗಿದೆ~ ಎಂದು ವಿ.ವಿ ಕುಲಸಚಿವ (ಪರೀಕ್ಷಾ ವಿಭಾಗ) ಡಾ.ಟಿ.ಆರ್.ಸುಬ್ರಹ್ಮಣ್ಯ ಹೇಳಿದರು.
 
`ಒಂದು ಲಕ್ಷಕ್ಕಿಂತ ಹೆಚ್ಚು ಮೊತ್ತದ ಕೆಲಸಗಳಿಗೆ ಇ-ಟೆಂಡರ್ ಕರೆಯಬೇಕೆಂಬ ನಿಯಮ ನನಗೂ ಗೊತ್ತಿದೆ. ಆದರೆ ಕೆಲ ಸಂದರ್ಭಗಳಲ್ಲಿ ನಿಯಮಗಳ ಸಡಿಲಿಕೆಗೆ ಅವಕಾಶವಿದೆ. ಹೀಗಾಗಿ ಇದು ನಿಯಮ ಉಲ್ಲಂಘನೆಯಾಗುವುದಿಲ್ಲ.  ನನಗೂ ಕಾನೂನಿನ ಅರಿವಿದೆ~ ಎಂದರು.
- ಟಿ.ಆರ್. ಸುಬ್ರಹ್ಮಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT