ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾರ್ಥಿಗಳಿಗೆ ಜೆರಾಕ್ಸ್‌ ಪ್ರಶ್ನೆಪತ್ರಿಕೆ!

Last Updated 9 ಡಿಸೆಂಬರ್ 2013, 8:48 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ವಿವಿಧೆಡೆ ಭಾನುವಾರ ‘ಕೆ–ಸ್ಲೆಟ್‌’ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಯನ್ನು ‘ಜೆರಾಕ್ಸ್‌’ ಮಾಡಿಸಿ ನೀಡಿದ ಘಟನೆ ನಡೆಯಿತು.

ನಗರದ ವಿವಿಧ 11 ಕೇಂದ್ರಗಳಲ್ಲಿ ಪರೀಕ್ಷೆ ನಿಗದಿಯಾಗಿತ್ತು.  ಇಲ್ಲಿನ ಎಸ್‌.ಎಸ್‌.ಬಡಾವಣೆಯ ಎಸ್‌ಬಿಸಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಬಿ.ಎಸ್‌್‌.ಚನ್ನಬಸಪ್ಪ ಕಾಲೇಜಿನಲ್ಲಿ ಬೆಳಿಗ್ಗೆ ಸಾಮಾನ್ಯ ಜ್ಞಾನ ಪರೀಕ್ಷೆ ಸುಗಮವಾಗಿ ನಡೆಯಿತು. ಮಧ್ಯಾಹ್ನ 1.30ಕ್ಕೆ ಭೌತಶಾಸ್ತ್ರ ಅಭ್ಯರ್ಥಿಗಳಿಗೆ ಭೌತಶಾಸ್ತ್ರ ವಿಜ್ಞಾನ ಪರೀಕ್ಷೆ ಬದಲಿಗೆ ಕಂಪ್ಯೂಟರ್‌ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಗಳನ್ನು ನೀಡಲಾಯಿತು. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲ ಕಾಲ ಪ್ರತಿಭಟನೆಯನ್ನೂ ನಡೆಸಿದರು. ಇದರಿಂದಾಗಿ ಪರೀಕ್ಷೆಯ ಅವಧಿ ಮುಂದೂಡಲಾಯಿತು.

ಮಧ್ಯಾಹ್ನ 3 ಗಂಟೆಯಾದರೂ ಪರೀಕ್ಷೆ ಆರಂಭವಾಗಲಿಲ್ಲ. ನಂತರ, ಹೇಗೋ ಒಂದು ಪ್ರಶ್ನೆಪತ್ರಿಕೆ ವ್ಯವಸ್ಥೆ ಮಾಡಿದ ಅಲ್ಲಿನ ಪರೀಕ್ಷಾ ಸಿಬ್ಬಂದಿ ಅದನ್ನೇ ಜೆರಾಕ್ಸ್‌ ಮಾಡಿಸಿ ಅಭ್ಯರ್ಥಿಗಳಿಗೆ ನೀಡಿದರು. 4ಕ್ಕೆ ಮುಗಿಯಬೇಕಾಗಿದ್ದ ಪರೀಕ್ಷೆ ಸಂಜೆ 5.30ರವರೆಗೂ ನಡೆಯಿತು.

‘ವಿವಿಯ ಸಿಬ್ಬಂದಿಯ ಅಚಾತುರ್ಯದಿಂದ ನಾವು ಗೊಂದಲಕ್ಕೆ ಒಳಗಾಗಬೇಕಾಯಿತು. ಯಾವ ಕೇಂದ್ರಕ್ಕೆ ಯಾವ ವಿಷಯದ ಪ್ರಶ್ನೆಪತ್ರಿಕೆ ಪೂರೈಸಬೇಕು ಎಂಬುದರಲ್ಲಿಯೂ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ ಎಂದರೆ ಏನೇಳಬೇಕು? ಅಭ್ಯರ್ಥಿಗಳಿಗೆ ಆತಂಕ ಉಂಟು ಮಾಡುವ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು’ ಎಂದು ಅಭ್ಯರ್ಥಿಗಳು ಪ್ರತಿಕ್ರಿಯೆ ನೀಡಿದರು.

‘ಕಣ್ತಪ್ಪಿನಿಂದ ಬೇರೆ ಪ್ರಶ್ನೆಪತ್ರಿಕೆ ಬಂದಿತ್ತು. ಅನಿವಾರ್ಯವಾಗಿ ಜೆರಾಕ್ಸ್‌ ಪ್ರಶ್ನೆಪತ್ರಿಕೆಯನ್ನೇ ನೀಡಬೇಕಾಯಿತು’ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಈ ಸಂಬಂಧ ಪ್ರತಿಕ್ರಿಯೆಗೆ, ದಾವಣಗೆರೆ ವಿಶ್ವವಿದ್ಯಾಲಯದ ಅಧಿಕಾರಿಗಳ ಸಂಪರ್ಕ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT