ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಗೆತಾಕತ್ತು

Last Updated 14 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳ ತಲೆಯಲ್ಲಿ ತುಂಬಿಕೊಳ್ಳುವ ಏಕೈಕ ಅಂಶ ಎಂದರೆ  ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸುವುದು. ಹೀಗಾಗಿ ಆರೋಗ್ಯದ ಕಡೆ ಗಮನವನ್ನೇ ಕೊಡುವುದಿಲ್ಲ.  ಹೆಚ್ಚೆಚ್ಚು ಟ್ಯೂಷನ್ ತರಗತಿಗಳತ್ತಲೇ ಲಕ್ಷ್ಯ ವಹಿಸುವುದರ ಜತೆಗೆ, ಮನೆಯಲ್ಲಿ ಅಧ್ಯಯನ ಮಾಡಲು ಹೆಚ್ಚು ಸಮಯವನ್ನೂ ಕಳೆಯುತ್ತಾರೆ.

ಈ ಗೊಂದಲದಲ್ಲಿ ಮಕ್ಕಳು ಆಹಾರ ಮತ್ತು ಪೌಷ್ಟಿಕತೆಯನ್ನು ನಿರ್ಲಕ್ಷಿಸುತ್ತಾರೆ. ಈ ಪರೀಕ್ಷಾಪೂರ್ವ ಸಿದ್ಧತೆ ದಿನಗಳಲ್ಲಿ ಚಟುವಟಿಕೆಯಿಂದ ಇರಲು ಅದರಲ್ಲೂ
ವಿಶೇಷವಾಗಿ ಮಾನಸಿಕವಾಗಿ ಹೆಚ್ಚು ಕ್ರಿಯಾಶೀಲವಾಗಿರಲು ಪೌಷ್ಟಿಕ ಆಹಾರ ಸೇವನೆ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಭಾರತೀಯ ಪಥ್ಯಾಹಾರ ಸಂಘದ ಅಧ್ಯಕ್ಷರಾದ ಡಾ. ಧರಣಿ ಕೃಷ್ಣನ್ ಅಭಿಪ್ರಾಯಪಡುತ್ತಾರೆ.

ಪರೀಕ್ಷಾ ಮಂಡಳಿಯ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು ಎಂದರೆ ಹಗಲು ರಾತ್ರಿ ಅಧ್ಯಯನ ಮಾಡಬೇಕು ಎಂದು 16 ವರ್ಷದ ಮುರಳಿ ಕೆಲ ದಿನಗಳ ಹಿಂದಿನವರೆಗೆ ದೃಢವಾಗಿ ನಂಬಿದ್ದ. ಈ ಕಾರಣಕ್ಕೆ ಮನೆಯಲ್ಲಿ ಆತ ದೀರ್ಘಕಾಲ ಅಭ್ಯಾಸದಲ್ಲಿ ನಿರತವಾಗಿರುತ್ತಿದ್ದ; ಅಲ್ಲದೇ ಟ್ಯೂಷನ್‌ಗಳಿಗೆ ಸಾಕಷ್ಟು ಎಡತಾಕುತ್ತಿದ್ದ. ಹೀಗಾಗಿ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರವನ್ನೇ ಸೇವಿಸುತ್ತಿರಲಿಲ್ಲ.

ನಿಗದಿತ ಸಮಯಕ್ಕೆ ಊಟ ಮಾಡುವ ಬದಲಿಗೆ ಕುರುಕಲು ತಿಂಡಿಗಳನ್ನಷ್ಟೇ ಸೇವಿಸುತ್ತಿದ್ದ. ಟ್ಯೂಷನ್‌ಗೆ ಹೋಗುವ ದಾರಿಯಲ್ಲಿ ಚಾಟ್ ತಿನ್ನುತ್ತಿದ್ದ. ಆದರೆ, ಆತ ಈಗ ಬೇರೆ ರೀತಿಯಲ್ಲಿಯೇ ಆಲೋಚಿಸುತ್ತಿದ್ದಾನೆ. ಕಾಲಕಾಲಕ್ಕೆ ಓದಿನ ಮಧ್ಯೆ ಬಿಡುವು ತೆಗೆದುಕೊಳ್ಳುತ್ತಿದ್ದಾನೆ. ಊಟ ತ್ಯಜಿಸುವ ಆಲೋಚನೆಯನ್ನೇನೂ ಮಾಡುತ್ತಿಲ್ಲ. ಈಗ ಆತ ತನ್ನ ಅಚ್ಚುಮೆಚ್ಚಿನ ಪೋಷ್ಟಿಕಾಂಶಗಳ ಶಕ್ತಿವರ್ಧಕ ಪಾನೀಯವನ್ನೂ ಸೇವಿಸುತ್ತಿದ್ದಾನೆ.

ಊಟ ಬಿಡುವುದು ಜಾಣತನದ ನಿರ್ಧಾರವಲ್ಲ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕೆಂದು ಬಯಸುವವರು ದೇಹ ಬಯಸುವ ಪೋಷಕಾಂಶಗಳನ್ನು ನಿರ್ಲಕ್ಷಿಸಬಾರದು ಎಂದು ಹೇಳುತ್ತಾನೆ.

ಮುರಳಿಯ ದೃಷ್ಟಿಕೋನದಲ್ಲಿ ದಿಢೀರ್ ಬದಲಾವಣೆ ಕಂಡು ಬರಲು ಕಾರಣವೇನು? ಮನೆಯಲ್ಲಿ ದೀರ್ಘಕಾಲದವರೆಗೆ ಅಧ್ಯಯನ ಮಾಡುವುದು, ಟ್ಯೂಷನ್‌ಗಳಿಗೆ ತೆರಳುವುದರಿಂದ ಆತನ ದೇಹ ಮತ್ತು ಮನಸ್ಸಿನ ಮೇಲೆ ಗಮನಾರ್ಹ ಎನ್ನಬಹುದಾದ ಒತ್ತಡ ಬಿದ್ದಿತ್ತು.

ಪರೀಕ್ಷಾ ಸಿದ್ಧತೆ ಸಮಯದಲ್ಲಿ ದೇಹ ಮತ್ತು ಮನಸ್ಸು ಬಯಸುವ ಹೆಚ್ಚುವರಿ ಪೋಷಕಾಂಶಗಳ ಬದಲಿಗೆ ಆತ ವಾಸ್ತವದಲ್ಲಿ ಒತ್ತಡ ಎದುರಿಸಲು ಸಮಯಕ್ಕೆ ಸರಿಯಾಗಿ ಆಹಾರವನ್ನೇ ಸೇವಿಸುತ್ತಿರಲಿಲ್ಲ. ಹೀಗಾಗಿ ಕೆಲವೇ ಕೆಲ ವಾರಗಳಲ್ಲಿ ಆತ ಅನಾರೋಗ್ಯಪೀಡಿತನಾದ. ಹಾಸಿಗೆಯಲ್ಲಿ ಮಲಗಿರುವಾಗಲೇ ಆತನಿಗೆ ಸರಿಯಾಗಿ ಆಹಾರ ಸೇವಿಸದ ದುಷ್ಪರಿಣಾಮಗಳು ಮತ್ತು ಪರೀಕ್ಷಾ ದಿನಗಳಲ್ಲಿ ಪೌಷ್ಟಿಕ ಆಹಾರ ಸೇವಿಸುವುದರ ಮಹತ್ವ ಮನವರಿಕೆಯಾಗಿತ್ತು.

ಪರೀಕ್ಷಾ ದಿನಗಳಲ್ಲಿ ದೇಹ ಮತ್ತು ಮನಸ್ಸುಗಳೆರಡೂ ಪರೀಕ್ಷೆಗೆ ಒಳಗಾಗುತ್ತವೆ. ವ್ಯಕ್ತಿಯೊಬ್ಬನ ಇಡೀ ದೇಹದ ವ್ಯವಸ್ಥೆ ಗಮನಾರ್ಹ ಪ್ರಮಾಣದ ಒತ್ತಡ ತಾಳಿಕೊಳ್ಳಬೇಕಾಗುತ್ತದೆ. ದೀರ್ಘ ಸಮಯದ ಒತ್ತಡ ಎದುರಿಸಲು ವ್ಯಕ್ತಿ ಆಂತರಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳಬೇಕು. ಇದರಿಂದ ಅಧ್ಯಯನಕ್ಕೆ ಹೆಚ್ಚು ಗಮನ ನೀಡಲು, ಓದಿನಲ್ಲಿ ಮನಸ್ಸು ಕೇಂದ್ರಿಕರಿಸಲು ಸಾಧ್ಯವಾಗುತ್ತದೆ ಎಂದು ನಿಮ್ಹಾನ್ಸ್‌ನ ಮನಶಾಸ್ತ್ರಜ್ಞ ಸಲಹಾ ತಜ್ಞ ಡಾ. ಜಿತೇಂದ್ರ ನಾಗಪಾಲ್ ಹೇಳುತ್ತಾರೆ.

ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಲವಾರು ಮಾರ್ಗೋಪಾಯಗಳಿವೆ. ಸಮತೋಲಿತ ಆಹಾರ ಸೇವನೆ ಮೂಲಕ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುವುದು ಹೆಚ್ಚು ಪ್ರಯೋಜನಕಾರಿ. ಪೋಷಕಾಂಶಗಳಿಂದ ಕೂಡಿದ ಶಕ್ತಿವರ್ಧಕ ಪಾನೀಯ ಸೇವನೆಯೂ ತುಂಬ ಉಪಯುಕ್ತ ಎನ್ನುವುದು ತಜ್ಞರ ಖಚಿತ ಅಭಿಪ್ರಾಯ.

ದೇಹದ ಆಂತರಿಕ ಸಾಮರ್ಥ್ಯದ ನಿರ್ಲಕ್ಷ್ಯ ಸಲ್ಲ
ದೇಹದ ಆಂತರಿಕ ಸಾಮರ್ಥ್ಯ ತುಂಬ ಮಹತ್ವದ್ದು. ಅದರಲ್ಲೂ ಋತುಮಾನದ ಏರಿಳಿತ ಸಂದರ್ಭಗಳಲ್ಲಂತೂ ನಿರ್ಲಕ್ಷಿಸುವಂತೆಯೇ ಇಲ್ಲ. ಪರೀಕ್ಷೆಗಳ ಮುಂಚೆ ಅಥವಾ ಪರೀಕ್ಷಾ ದಿನಗಳಲ್ಲಿ ದೈಹಿಕ ಆರೋಗ್ಯದಲ್ಲಿ ಹೆಚ್ಚುಕಡಿಮೆಯಾದರೆ, ಪರೀಕ್ಷೆಗಳಿಗೆ ಚೆನ್ನಾಗಿ ಸಿದ್ಧತೆ ಮಾಡಿಕೊಂಡಿದ್ದರೂ ಹಿಂದೆ ಬೀಳಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ದೇಹದ ಆಂತರಿಕ ಶಕ್ತಿಯನ್ನು ವೃದ್ಧಿಸಿಕೊಂಡಿರಬೇಕಾಗುತ್ತದೆ.

ಮೂಲ ಮಂತ್ರ
ನೀವು ಸೇವಿಸುವ ಆಹಾರ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ದೈಹಿಕ ಚಟುವಟಿಕೆಗಳಂತೆ, ಸರಿಯಾದ ಆಹಾರ ಸೇವನೆಯು ದೇಹದ ಆಂತರಿಕ ಶಕ್ತಿಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ದೇಹದ ಪೋಷಕಾಂಶಗಳ ಬೇಡಿಕೆಯನ್ನು ಪೌಷ್ಟಿಕ ಶಕ್ತಿವರ್ಧಕ ಪಾನೀಯಗಳು ಸಮರ್ಥವಾಗಿ ಪೂರೈಸುತ್ತವೆ ಎಂದು ಭಾರತೀಯ ಆಹಾರಪಥ್ಯ ಸಂಘದ ಬೆಂಗಳೂರು ಘಟಕದ ಅಧ್ಯಕ್ಷೆ ಮತ್ತು ಅಪೊಲೊ ಆಸ್ಪತ್ರೆಯ ಮುಖ್ಯ ಪೋಷಕಾಂಶ ತಜ್ಞೆ ಡಾ. ಪ್ರಿಯಂಕಾ ರೋಹಟಗಿ ಅಭಿಪ್ರಾಯಪಡುತ್ತಾರೆ.

ಇದನ್ನು ಸೇವಿಸಿ

ಮನೆಯಲ್ಲಿ ಸಿದ್ಧಪಡಿಸಿದ ಆಹಾರ

ಹಣ್ಣು ಮತ್ತು ತರಕಾರಿ, ಸಲಾಡ್

ಸಾಕಷ್ಟು ಪ್ರಮಾಣದಲ್ಲಿ ನೀರು

ನಿಯಮಿತವಾಗಿ ಸಣ್ಣ ಪ್ರಮಾಣದಲ್ಲಿ ಆಹಾರ

ಸಮತೋಲನ ಆಹಾರ

ಬೆಳಗಿನ ತಿಂಡಿ: ಪೂರ್ಣ ಪ್ರಮಾಣದ ಧಾನ್ಯ, 1 ಹಣ್ಣು, 1 ಮೊಟ್ಟೆ, 5 ರಿಂದ 8 ಬಾದಾಮಿ.

ಮಧ್ಯಾಹ್ನದ ಊಟದ ಮುಂಚೆ ಮಧ್ಯಂತರದಲ್ಲಿ: ಆರೋಗ್ಯಕರ ಪೇಯ, ಒಂದು ಲೋಟದಷ್ಟು ಹಣ್ಣಿನ ರಸ.

ಊಟ: ಸೋಯಾ ಅಥವಾ ಗೋಧಿ ಹಿಟ್ಟಿನ 2 ಚಪಾತಿ, ಮೊಳಕೆ ಒಡೆದ ಕಾಳು 1 ಬಟ್ಟಲು, ಬೇಳೆ 1 ಬಟ್ಟಲು, ಮೊಸರು, ತರಕಾರಿ ಮತ್ತು ಸಲಾಡ್.

ಸಂಜೆ: ಆರೋಗ್ಯಕರ ಪೇಯ, ಹಣ್ಣಿನ ರಸ, 8 ರಿಂದ 10 ಒಣದ್ರಾಕ್ಷಿ ಅಥವಾ ತಾಜಾ ಹಣ್ಣಿನ ರಸ.

ರಾತ್ರಿ ಊಟ: ಒಂದು ಬಟ್ಟಲು ಅನ್ನ, ಸೋಯಾ ಮತ್ತು ಗೋಧಿ ಹಿಟ್ಟಿನ  2 ಚಪಾತಿ, ಬೇಳೆ ಸಾರು ಅಥವಾ ಮೀನು, ತರಕಾರಿ ಮತ್ತು ಸಲಾಡ್. ಒಂದು ಲೋಟ ಹಾಲು ಅಥವಾ ಹಣ್ಣಿನ ರಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT