ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ವತವೇ ಆದ ಸರ್ವಜ್ಞ

Last Updated 9 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನಿರ್ದೇಶಕ ಎಸ್. ಶಿವಕುಮಾರ್ 60 70ರ ದಶಕದಲ್ಲಿ ಕಂಡ ಕನಸೊಂದು ನನಸಾಗುತ್ತಿದೆ. `ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ~ ಚಿತ್ರದ ಮೂಲಕ ಹದಿನೇಳನೇ ಶತಮಾನದ ತ್ರಿಪದಿ ಕವಿಯ ಜೀವನಗಾಥೆಯನ್ನು ಅವರು ಬೆಳ್ಳಿತೆರೆಗೆ ತರುತ್ತಿದ್ದಾರೆ.

ಸರ್ವಜ್ಞನ ಹುಟ್ಟು, ಆತನ ಬದುಕು, ಸಾಹಿತ್ಯ ಕೃಷಿ, ಪವಾಡ ಇತ್ಯಾದಿ ಅಂಶಗಳು ಚಿತ್ರದಲ್ಲಿ ಮೂಡಿ ಬರುತ್ತಿವೆ. ಕವಿಯ ಹುಟ್ಟೂರು ಹಾವೇರಿ ಜಿಲ್ಲೆಯ ಮಾಸೂರಿನಿಂದ ಹಿಡಿದು ವಾರಣಾಸಿಯವರೆಗೆ ದೇಶದ ವಿವಿಧೆಡೆ ಚಿತ್ರೀಕರಣ ನಡೆಯಲಿದೆ.  

 ಸರ್ವಜ್ಞನ ಬಗ್ಗೆ ಅವರು ಹೆಚ್ಚು ತಿಳಿದುಕೊಂಡಿದ್ದು ಅಭಿನವ ಸರ್ವಜ್ಞ ಎಂದೇ ಪ್ರಸಿದ್ಧರಾದ ಸಾಹಿತಿ ಉತ್ತಂಗಿ ಚೆನ್ನಪ್ಪ ಅವರಿಂದ. ಸರ್ವಜ್ಞನ ಚಿತ್ರ ಮಾಡಲು ಉತ್ತಂಗಿಯವರೇ ಪ್ರೇರಣೆಯಂತೆ. ಮುಂಬೈನಿಂದ ಹಿಂತಿರುಗಿದ ಬಳಿಕ ಶಿವಕುಮಾರ್ ಅವರನ್ನು ಸರ್ವಜ್ಞ ಪೂರ್ಣವಾಗಿ ಆವರಿಸಿದ.
 
ದಸರೆಯ ಹೊತ್ತಿಗೆ ಚಿತ್ರವನ್ನು ತೆರೆಗೆ ತರುವ ಯತ್ನ ಅವರಿಂದ. ಸರ್ವಜ್ಞನ 300 ವಚನಗಳು ಹಾಗೂ ಐದು ಹಾಡುಗಳನ್ನು ಚಿತ್ರ ಹೊಂದಿದೆಯಂತೆ. ಚಿತ್ರಕ್ಕೆ ಹೊಂದಿಕೆಯಾಗಿರುವ ಲೊಕೇಷನ್ ದೊರೆತಿರುವುದು ತಲಕಾಡು ಸಮೀಪದ ಹಳ್ಳಿಯೊಂದರಲ್ಲಿ.

ಆಧುನಿಕತೆಯಿಂದ ದೂರವಿರುವ ಈ ಗ್ರಾಮ ಚಿತ್ರಕ್ಕೆ ಹೇಳಿ ಮಾಡಿಸಿದ ಹಾಗೆ ಇದೆಯಂತೆ. ಪ್ರಶಸ್ತಿ, ಸಬ್ಸಿಡಿಯ ಆಸೆಗೆ ಚಿತ್ರ ನಿರ್ಮಿಸುತ್ತಿಲ್ಲ. ಇದು ನನ್ನ ಜೀವಮಾನದ ಕನಸು ಎಂಬುದು ನಿರ್ದೇಶಕರ ಸ್ಪಷ್ಟನೆ.

ಸರ್ವಜ್ಞನ ಪಾತ್ರ ವಹಿಸುತ್ತಿರುವ ಸಂತೋಷ್ ಎಂ.ಎಸ್ಸಿ ಪದವೀಧರ. ಅಭಿನಯ ತರಂಗದಲ್ಲಿ ನಟನೆಯ ಅಭ್ಯಾಸ ಮಾಡಿದವರು. ಈ ಪಾತ್ರಕ್ಕೆ ಸ್ವಾಮೀಜಿಗಳಾದಿಯಾಗಿ ಅನೇಕರ ಹುಡುಕಾಟ ನಡೆಸಿದ್ದರು ನಿರ್ದೇಶಕರು.
 
ಆದರೆ ಅದಾವುದೂ ಸರಿ ಹೊಂದದ ಸಂದರ್ಭದಲ್ಲಿ ಅವರ ಕಣ್ಣಿಗೆ ಬಿದ್ದದ್ದು ಸಂತೋಷ್ ಎಂಬ ಯುವ ನಟ. ಚಿತ್ರದ ನಾಯಕ ತಾನು ಎಂಬುದನ್ನು ಸಂತೋಷ್ ಒಪ್ಪುವುದಿಲ್ಲ. ರಂಗಭೂಮಿ ಹಿನ್ನೆಲೆ ಇದಕ್ಕೆ ಕಾರಣವಂತೆ.
 
ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದೇನೆ ಎಂಬುದು ಅವರ ವಿನಯದ ಮಾತು. ಪ್ರಕಾಶ್ ಬೆಳವಾಡಿಯಂಥ ರಂಗಕರ್ಮಿಗಳ ಬಳಿ ಪಳಗಿರುವ ಅವರು ಪಾತ್ರಕ್ಕೆ ಜೀವ ತುಂಬುವ ವಿಶ್ವಾಸ ಹೊಂದಿದ್ದಾರೆ.

ಚಿತ್ರದ ಸಾಹಿತ್ಯ ಸಂಭಾಷಣೆಯ ಹೊಣೆ ಹೊತ್ತವರು ಬಿ.ಎಸ್.ಸ್ವಾಮಿ. ಸಾಹಿತ್ಯದ ಬಗೆಗಿನ ಅವರ ಅಭಿರುಚಿ ಈ ಕೆಲಸದಲ್ಲಿ ಅವರನ್ನು ತೊಡಗಿಸಿದೆ. ತಮ್ಮ ಆಳವಾದ ಸಂಶೋಧನಾ ಜ್ಞಾನವನ್ನು ಬಳಸಿಕೊಂಡು ಅವರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
 
ಡಾ.ರಾಜ್‌ಕುಮಾರ್ ಅಭಿನಯದ `ಸರ್ವಜ್ಞ ಮೂರ್ತಿ~ ಚಿತ್ರಕ್ಕಿಂತಲೂ ಭಿನ್ನವಾದ ಕತೆ ಇದರಲ್ಲಿದ್ದು ಸಮಕಾಲೀನ ಸಂದರ್ಭವನ್ನು ಮಾರ್ಮಿಕವಾಗಿ ಬಿಂಬಿಸುವ ಎಳೆ ಒಳಗೊಂಡಿದೆ ಎಂದರು ಅವರು.

ಕುಡಿತ, ಧೂಮಪಾನ ಮುಂತಾದ ದುಶ್ಚಟಗಳ ಬಗ್ಗೆ ಉತ್ತಮ ಸಂದೇಶವನ್ನೂ ಚಿತ್ರದಲ್ಲಿ ನೀಡಲಾಗುತ್ತಿದೆ. ಆದರೆ ಸರ್ವಜ್ಞ ಪ್ರತಿಮೆ ಪ್ರತಿಷ್ಠಾಪನೆಯಂಥ ಸಮಕಾಲೀನ ವಿವಾದಗಳನ್ನು ಸೇರಿಸಿಲ್ಲ.

ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ರಾಜು ಭಾಸ್ಕರ್. ಛಾಯಾಗ್ರಾಹಕ ಮುತ್ತು, ಸಂಕಲನಕಾರ ಸ್ವಾಮಿ, ನಿರ್ಮಾಪಕಿ ನಾಗರತ್ನ ಶಿವಕುಮಾರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT