ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ವೇಜ್ ರಸೂಲ್‌ಗೆ ಸ್ಥಾನ

ಕ್ರಿಕೆಟ್: ಭಾರತ ತಂಡದಲ್ಲಿ ಅವಕಾಶ ಪಡೆದ ಕಾಶ್ಮೀರದ ಮೊದಲ ಆಟಗಾರ
Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಏಕದಿನ ಸರಣಿಯನ್ನಾಡಲು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಪರ್ವೇಜ್ ರಸೂಲ್‌ಗೆ ಸ್ಥಾನ ಲಭಿಸಿದೆ. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಕಾಶ್ಮೀರದ ಆಟಗಾರನೊಬ್ಬ ತಂಡದಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು.

ಬಿಸಿಸಿಐ ಆಯ್ಕೆ ಸಮಿತಿ ಶುಕ್ರವಾರ ಸೇರಿದ್ದ ಸಭೆಯಲ್ಲಿ ತಂಡವನ್ನು ಆಯ್ಕೆ ಮಾಡಲಾಯಿತು. ಸ್ನಾಯುಸೆಳೆತದ ನೋವಿನಿಂದ ಬಳಲುತ್ತಿರುವ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ವಿರಾಟ್ ಕೊಹ್ಲಿ ತಂಡ ಮುನ್ನಡೆಸಲಿದ್ದಾರೆ.

ಐಪಿಎಲ್ ಆರನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಸೌರಾಷ್ಟ್ರದ ವೇಗಿ ಜಯದೇವ್ ಉನದ್ಕತ್ ಹಾಗೂ ಹರಿಯಾಣದ ಮೋಹಿತ್ ಶರ್ಮ ಅವರಿಗೆ ಸ್ಥಾನ ಲಭಿಸಿದೆ. ಆದರೆ, ವೇಗಿಗಳಾದ ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಮುರಳಿ ವಿಜಯ ಅವರನ್ನು ಕೈಬಿಡಲಾಗಿದೆ.

ಕಳಪೆ ಪ್ರದರ್ಶನದ ಕಾರಣ ಸ್ಥಾನ ಕಳೆದುಕೊಂಡಿರುವ ಹಿರಿಯ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ವೇಗಿಗಳಾದ ಪ್ರವೀಣ್ ಕುಮಾರ್ ಹಾಗೂ ಜಹೀರ್ ಖಾನ್ ಅವರನ್ನು ಆಯ್ಕೆ ಸಮಿತಿ ಪರಿಗಣಿಸಿಲ್ಲ. ಜಿಂಬಾಬ್ವೆ ಪ್ರವಾಸಕ್ಕೆ ಬಹುತೇಕ ಯುವ ಆಟಗಾರರರಿಗೆ ಬಿಸಿಸಿಐ ಮಣೆ ಹಾಕಿದೆ. ಜುಲೈ 24ರಂದು ಆರಂಭವಾಗಲಿರುವ ಈ ಪ್ರವಾಸದಲ್ಲಿ ಭಾರತ ಐದು ಏಕದಿನ ಪಂದ್ಯಗಳನ್ನು ಆಡಲಿದೆ.

`ಎ' ತಂಡವೂ ಪ್ರಕಟ: ದಕ್ಷಿಣ ಆಫ್ರಿಕಾಕ್ಕೆ ತೆರಳಲಿರುವ ಭಾರತ `ಎ' ತಂಡವನ್ನೂ ಈ ವೇಳೆ ಪ್ರಕಟಿಸಲಾಯಿತು. ಈ ತಂಡದಲ್ಲಿ ರೂಸೂಲ್ ಹಾಗೂ ಕರ್ನಾಟಕದ ಸ್ಪುವರ್ಟ್ ಬಿನ್ನಿ ಸ್ಥಾನ ಪಡೆದಿದ್ದಾರೆ.

ತಂಡಗಳು ಇಂತಿವೆ: ಜಿಂಬಾಬ್ವೆ ಪ್ರವಾಸಕ್ಕೆ ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ದಿನೇಶ್ ಕಾರ್ತಿಕ್, ಚೇತೇಶ್ವರ ಪೂಜಾರ, ಸುರೇಶ್ ರೈನಾ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಪರ್ವೇಜ್ ರಸೂಲ್, ಮಹಮ್ಮದ್ ಶಮಿ, ಆರ್. ವಿನಯ್ ಕುಮಾರ್, ಜಯದೇವ್ ಉನದ್ಕತ್ ಮತ್ತು ಮೋಹಿತ್ ಶರ್ಮ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ `ಎ' ತಂಡ: ಚೇತೇಶ್ವರ ಪೂಜಾರ (ನಾಯಕ), ಶಿಖರ್ ಧವನ್, ಮುರಳಿ ವಿಜಯ್, ರೋಹಿತ್ ಶರ್ಮ, ಸುರೇಶ್ ರೈನಾ, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ, ಪರ್ವೇಜ್ ರಸೂಲ್, ಶಹಬಜ್ ನದೀಮ್, ಮಹಮ್ಮದ್ ಶಮಿ, ಸ್ಟುವರ್ಟ್ ಬಿನ್ನಿ, ಈಶ್ವರ್ ಪಾಂಡೆ, ಜಯದೇವ್ ಉನದ್ಕತ್ ಹಾಗೂ ಸಿದ್ಧಾರ್ಥ್ ಕೌಲ್.

`ನಂಬಲು ಸಾಧ್ಯವಾಗುತ್ತಿಲ್ಲ'
ಬೆಂಗಳೂರು: `ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ವಿಷಯ ತಿಳಿದು ಖುಷಿಯಾಯಿತು. ಮೊದಲು ನನಗೆ ನಂಬಲು ಸಾಧ್ಯವಾಗಲಿಲ್ಲ' ಎಂದು ಕರ್ನಾಟಕದ ಸ್ಟುವರ್ಟ್ ಬಿನ್ನಿ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.

ಭಾರತ ತಂಡದ ಮಾಜಿ ನಾಯಕ ರೋಜರ್ ಬಿನ್ನಿ ಅವರ ಪುತ್ರ ಸ್ಟುವರ್ಟ್, ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ಪರ ಆಡಿ ಗಮನಾರ್ಹ ಪ್ರದರ್ಶನ ತೋರಿದ್ದರು. ಕಳೆದ ಋತುವಿನ ರಣಜಿ ಟೂರ್ನಿಯಲ್ಲೂ ಹಲವು ಪಂದ್ಯಗಳಿಗೆ ಅವರು ಕರ್ನಾಟಕ ತಂಡವನ್ನು ಮುನ್ನಡೆಸಿದ್ದರು.

`ದೇಶವನ್ನು ಪ್ರತಿನಿಧಿಸಬೇಕು ಎನ್ನುವುದು ಪ್ರತಿ ಆಟಗಾರ ಕನಸು. ಅದಕ್ಕಾಗಿ ತುಂಬಾ ಕಾಯುತ್ತಿದ್ದೆ. ಕನಸು ಕೊನೆಗೂ ನನಸಾಗಿದೆ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತೇನೆ' ಎಂದು ಸ್ಟುವರ್ಟ್ ಹೇಳಿದರು.

ಯಾರೀ ಪರ್ವೇಜ್ ರಸೂಲ್....
ಕಿಟ್‌ನಲ್ಲಿ ಸ್ಫೋಟಕ ವಸ್ತು ಹೊಂದಿದ್ದಾರೆ ಹಾಗೂ ಉಗ್ರವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಪರ್ವೇಜ್ ರಸೂಲ್ ಅವರನ್ನು 2009ರಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಪೊಲೀಸರು ಬಂಧಿಸ್ದ್ದಿದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಿದ್ದರು. 22 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಬಂದಾಗ ಈ ಘಟನೆ ನಡೆದಿತ್ತು.

ರಣಜಿಯಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನದ ಕಾರಣ ರಸೂಲ್‌ಗೆ ಭಾರತ `ಎ' ತಂಡದಲ್ಲಿ ಸ್ಥಾನ ಲಭಿಸಿತ್ತು. ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ಪರ ಆಡಿ ಮಿಂಚಿದ್ದರು.

`ಆ ದುರ್ಘಟನೆ ಮರೆಯಲು ನನಗೆ ಅವಕಾಶ ಕೊಡಿ. ನನ್ನ ಬದುಕಿನ ಹಾದಿಗೆ ಕುತ್ತು ತರಬಹುದಾಗಿದ್ದ ಆ ಕೆಟ್ಟ ಘಟನೆಯನ್ನು ಮತ್ತೆಂದೂ ನೆನಪಿಸಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ನನ್ನ ಜೀವನಕ್ಕೆ ಈಗ ಹೊಸ ತಿರುವು ಲಭಿಸಿದೆ. ನನ್ನ ಗುರಿ ಭಾರತ ತಂಡದಲ್ಲಿ ಆಡುವುದು' ಎಂದು ಎನ್‌ಸಿಎ ಶಿಬಿರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಾಗ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದರು.

23 ವರ್ಷ ವಯಸ್ಸಿನ ಆಫ್ ಸ್ಪಿನ್ನರ್ ರಸೂಲ್ ಈಗ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಸಾಧನೆ ಮಾಡಿದ ಜಮ್ಮು ಕಾಶ್ಮೀರದ ಮೊದಲ ಕ್ರಿಕೆಟಿಗ. ಇವರ ಊರು ಅನಂತನಾಗ್ ಜಿಲ್ಲೆಯ ಬಿಜ್‌ಬೆಹೆರಾ. ತಂದೆ ಗುಲಾಮ್ ರಸೂಲ್. ಅವರು ಸರ್ಕಾರಿ ನೌಕರ. ತಾಯಿ ಶಮೀಮಾ. ತಮ್ಮ ಆಸಿಫ್ ಕೂಡ ರಣಜಿ ತಂಡದಲ್ಲಿದ್ದಾರೆ.

ರಸೂಲ್ ಅವರಿಗೆ ಸ್ಥಾನ ಲಭಿಸಿದ್ದಕ್ಕೆ ಬಿಷನ್ ಸಿಂಗ್ ಬೇಡಿ ಸೇರಿದಂತೆ ಕೆಲ ಹಿರಿಯ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ.
`ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ಇನ್ನಷ್ಟು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕು ಎನ್ನುವುದು ನನ್ನ ಒತ್ತಾಸೆ. ಕಠಿಣ ಪರಿಶ್ರಮಕ್ಕೆ ಲಭಿಸಿದ ಫಲ ಇದು' ಎಂದು ರಸೂಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT