ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಲಟಗಳ ಪಲ್ಲಕ್ಕಿಯಲಿ ಭಾವನೆಗಳ ಹೊಯ್ದಾಟ

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೋಲಾರ:  ತಮಿಳುನಾಡಿನ ತುಣುಕೊಂದನ್ನು ಕತ್ತರಿಸಿ ತಂದು ಮೆತ್ತಿದಂತೆ ಭಾಸವಾಗುವ ಕೆಜಿಎಫ್ ಜನರ ರಾಜಕೀಯ ಒಲವು-ನಿಲುವುಗಳಲ್ಲಿ ಅಗಾಧ ಬದಲಾವಣೆ ಕಾಣಬಹುದು. ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ಭಿನ್ನವಾಗಿ ಗುರುತಿಸಿಕೊಂಡಿದ್ದ ಈ ಕ್ಷೇತ್ರ ಜಿಲ್ಲೆಯ ಪ್ರಧಾನಧಾರೆ ಜತೆ ಬೆರೆಯಲು ಅಣಿಗೊಂಡಂತೆ ತೋರುತ್ತದೆ.

ಕಳೆದ ಚುನಾವಣೆಯ ಫಲಿತಾಂಶದಲ್ಲಿ ಇದರ ಸೂಚನೆಗಳು ಹೊರಬಿದ್ದಿದ್ದವು. ತಮಿಳುನಾಡು ಶೈಲಿಯ ರಾಜಕೀಯ, ಜನರ ಬೆಂಬಲ ಕಳೆದುಕೊಂಡಿತು. ಅದು ಆಕಸ್ಮಿಕವಲ್ಲ, ಇಚ್ಛಾಪೂರ್ವಕ ಎಂಬುದು ಕ್ಷೇತ್ರದಲ್ಲಿ ಸುತ್ತಾಡಿದರೆ ಮನವರಿಕೆ ಆಗುತ್ತದೆ. 

ಇಲ್ಲಿನ ಜನರು ಎಲ್ಲರಿಗಿಂತ ಮೊದಲು ವಿದ್ಯುತ್, ರೈಲು ಸೌಕರ್ಯ ಪಡೆದರು. ಬ್ರಿಟಿಷರ ಶಿಸ್ತು, ದಕ್ಷತೆಯ ಪರಿಚಯವಾಯಿತು. ಕಾನ್ವೆಂಟ್ ಶಿಕ್ಷಣಕ್ಕೆ ತೆರೆದುಕೊಂಡರು. ಆದರೆ, ಬಂಗಾರದ ಗಣಿಯ ಬಾಗಿಲು, ದಶಕದ ಹಿಂದೆ ಮುಚ್ಚಿಕೊಂಡಾಗ ಕಾರ್ಮಿಕರು ತತ್ತರಿಸಿದರು. ನೆರವಿಗೆ ಬರಬಹುದು ಎಂದು ನಿರೀಕ್ಷಿಸಿದ್ದ ಜನಪ್ರತಿನಿಧಿಗಳು ಅಸಹಾಯಕತೆಯಿಂದ ಕೈಚೆಲ್ಲಿದರು. ನಂತರದ ಪಲ್ಲಟಗಳು ಹೊಸ ಗಾಳಿಗೆ ತಿದಿ ಒತ್ತಿದವು ಅಂತ ಅನಿಸುತ್ತದೆ.

ರಾಬರ್ಟ್‌ಸನ್‌ಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನ ಸಮೀಪಿಸುವಷ್ಟರಲ್ಲಿ ಡ್ರಮ್ಸ ಸದ್ದು ಕೇಳಿಸಿತು. ಬಲಕ್ಕೆ ತಿರುಗಿದರೆ ಅಂಬೇಡ್ಕರ್ ಪುತ್ಥಳಿಗೆ ಬಿಳಿ ಪಂಚೆಧಾರಿ ವ್ಯಕ್ತಿಯೊಬ್ಬರು ಮಾಲೆ ಹಾಕುವ ದೃಶ್ಯ ಗೋಚರಿಸಿತು. ಅವರ ಹೆಸರು ಅನ್ಬು. ಎಐಎಡಿಎಂಕೆ ಉಮೇದುವಾರ. ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಲು ಬೆಂಬಲಿಗರು ಜಮಾಯಿಸಿದ್ದರು. ಜನರ ನಡುವೆ ಎದ್ದುಕಂಡ ಎಂ.ಜಿ.ಆರ್ ವೇಷಧಾರಿ, `ಹ್ಯಾಬಿಟ್ಸ್ ಡೈ ಹಾರ್ಡ್' ಎಂಬ ಗಾದೆ ನೆನಪಿಸಿದರು.

`ಒಳ್ಳೆಯ ದಿನ' ಎಂಬ ಪಂಚಾಂಗ ಪ್ರಭಾವದಿಂದ ಸೋಮವಾರ ವಿವಿಧ ಪಕ್ಷಗಳ ಅಷ್ಟೂ ಮಂದಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ನಗರಸಭೆ ಕಾರ್ಯಾಲಯಕ್ಕೆ ಹೋಗುವ ಬೀದಿಗಳಲ್ಲಿ ಜನರೋ ಜನ. ಉತ್ಸಾಹ ಮುಗಿಲು ಮುಟ್ಟಿತ್ತು. ಎಡಭಾಗದ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು, ಬಲಭಾಗದ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತುಂಬಿಕೊಂಡಿದ್ದರು. ಜೆಡಿಎಸ್ ಉಮೇದುವಾರ ಎಂ. ಭಕ್ತವತ್ಸಲಂ, ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿದ್ದರು. ಕಾಂಗ್ರೆಸ್‌ನ ವಿ.ಶಂಕರ್ ನಾಮಪತ್ರ ಸಲ್ಲಿಸಲೆಂದು ಕಚೇರಿ ಒಳಗೆ ಹೋಗಿದ್ದರು.

ಭಕ್ತವತ್ಸಲಂ ಈ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದಾರೆ. ಎ.ಐ.ಎ.ಡಿ.ಎಂ.ಕೆಯಿಂದ ಆರಿಸಿ ಬಂದಿದ್ದರು. ಅವರ ಪರ ಪ್ರಚಾರಕ್ಕೆ ಎಂ.ಜಿ.ರಾಮಚಂದ್ರನ್ ಬಂದಿದ್ದರು. ಐದು ಸಲ ನಗರಸಭೆ ಅಧ್ಯಕ್ಷರಾಗಿದ್ದಾರೆ. ಈಗ ಕೂಡ ಸದಸ್ಯರು. ಬೆಳಗಾವಿ ಮಹಾನಗರ ಪಾಲಿಕೆಯ ದಶಕಗಳ ಚರಿತ್ರೆಯ ಭಾಗವಾಗಿರುವ ಸಂಭಾಜಿ ಪಾಟೀಲ ಅವರಂತೆ ಭಕ್ತವತ್ಸಲಂ ಇಲ್ಲಿನ ನಗರಸಭೆಯ ಜೀವನಾಡಿಯಲ್ಲಿ ಬೆರೆತಿದ್ದಾರೆ. ಅಂತಹವರೇ ದ್ರಾವಿಡ ಪಕ್ಷದಿಂದ ದೂರ ಸರಿದಿದ್ದಾರೆ. ಜನರ ಮನೋಭಾವದಲ್ಲಿ ಆಗಿರುವ ಬದಲಾವಣೆಯ ಪರಿಣಾಮದ ಫಲ ಈ ಪಲ್ಲಟಗಳು.

ಜನರ ಮಾತಿನಲ್ಲಿ ಆತ್ಮಾವಲೋಕನದ ಸೆಲೆ ಗುರುತಿಸಬಹುದು. ಇದಕ್ಕೆ ಭಾಷೆ, ಹಿನ್ನೆಲೆ, ಸಂಸ್ಕೃತಿಯ ಭೇದ ಇಲ್ಲ. `ತಮಿಳು ಪಕ್ಷ'ಗಳ ಬಗ್ಗೆ ಆ ಭಾಷಿಕರಲ್ಲೇ ಅಸಮಾಧಾನ ಇದೆ. ನಗರದ ಅಭಿವೃದ್ಧಿಗೆ ಆ ಪಕ್ಷಗಳಿಂದ ಏನೂ ಆಗಿಲ್ಲ. ಈಗ ರೌಡಿ ಚಟುವಟಿಕೆ ಕಡಿಮೆಯಾಗಿದೆ ಎಂದು ತಮಿಳು, ತೆಲುಗು ಮಿಶ್ರಿತ ಕನ್ನಡದಲ್ಲಿ ಆಟೊ ಚಾಲಕ ಧನಶೇಖರ್ ಅಭಿಪ್ರಾಯಪಟ್ಟರು.

1968ರ ನಂತರ ಕಾಂಗ್ರೆಸ್‌ಗೆ ಇಲ್ಲಿ ಗೆಲುವು ಎಂಬುದು ಮರೀಚಿಕೆ ಆಗಿದೆ. 2008ರಲ್ಲಿ ಮೊದಲ ಬಾರಿ ಬಿಜೆಪಿ ತೆಕ್ಕೆಗೆ ಒಳಪಟ್ಟಿತು. ಆದರೆ `ರಾಜ್ಯ ಸರ್ಕಾರ ಆಗಲೀ ಕೇಂದ್ರ ಸರ್ಕಾರ ಆಗಲೀ ಕೆಜಿಎಫ್ ಏಳಿಗೆಗೆ ತೋರಬೇಕಿದ್ದ ಕಾಳಜಿಯನ್ನು ತೋರಿಸಿಲ್ಲ' ಎಂದು ಮುನಿಸ್ವಾಮಿ ಕೊರಗು ತೋಡಿಕೊಂಡರು. ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿಜಿಎಂಎಲ್) ಪುನಶ್ಚೇತನದ ಕನಸು ಜನರ ಕಣ್ಣಲ್ಲಿ ಇನ್ನೂ ಜೀವಂತವಾಗಿದೆ. ರಾಶಿ ಬಿದ್ದಿರುವ ಅದಿರಿನ ಉಳಿಕೆಯಲ್ಲೂ ಬಂಗಾರ ಇದೆ. ಚಿನ್ನದ ಗಣಿ ಪ್ರದೇಶದಲ್ಲಿ ಇಂತಹ 13 ದಿಬ್ಬಗಳಿವೆ.

ಬಿಜಿಎಂಎಲ್ ಅಪಾರ ಆಸ್ತಿಯನ್ನೂ ಹೊಂದಿದೆ. 12,500 ಎಕರೆ ಜಮೀನು, ಯಂತ್ರೋಪಕರಣಗಳು, ಐದು ಸ್ಟೇಷನ್‌ಗಳನ್ನು ಒಳಗೊಂಡ ರೈಲ್ವೆ ಸಂಪರ್ಕ ಜಾಲ, 12 ಸಾವಿರದಷ್ಟು ಸಿಬ್ಬಂದಿ ವಸತಿಗೃಹ, ನಾಲ್ಕು ಮೆ.ವಾ. ಉತ್ಪಾದನಾ ಸಾಮರ್ಥದ ವಿದ್ಯುತ್ ಘಟಕ ಎಲ್ಲವೂ ಇದೆ. ಜತೆಗೆ 3,000ಕ್ಕೂ ಹೆಚ್ಚು ನುರಿತ ಸಿಬ್ಬಂದಿ ಇದೆ. `ಯಂತ್ರಗಳಿಗೆ ತುಕ್ಕು ಹಿಡಿದಿದೆ. ಆರಿಸಿ ಬಂದ ರಾಜಕಾರಣಿಗಳ ಮೆದುಳಿಗೂ ತುಕ್ಕು ಹತ್ತಿದೆ' ಎಂದು ತಂಬಿದೊರೆ ಆಕ್ರೋಶ ವ್ಯಕ್ತಪಡಿಸಿದರು.

ಗಣಿ ಬಾಗಿಲು ಮುಚ್ಚಿಕೊಂಡಾಗ ತಬ್ಬಿಬ್ಬಾದ ಕಾರ್ಮಿಕ ಕುಟುಂಬಗಳ ನೆರವಿಗೆ ಬಂದದ್ದೇ ಬ್ರಿಟಿಷರಿಂದ ಬಳುವಳಿಯಾಗಿ ಬಂದ ಇಂಗ್ಲಿಷ್. ಇದು ಕಾರ್ಮಿಕರ ಮಕ್ಕಳ ಕೈ ಹಿಡಿಯಿತು. ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ನೆರವಾಯಿತು ಎಂದು ಇಲ್ಲಿನ ನೌಕರರು ನೆನೆಯುತ್ತಾರೆ. ಆಸರೆಗೆ ಬಂದ ಬೆಂಗಳೂರು ಈ ಕ್ಷೇತ್ರದ ಮೇಲೆ ಆಧಿಪತ್ಯ ಸಾಧಿಸಲೂ ದಾರಿಯಾಗಿದೆ. ಹಾಲಿ ಶಾಸಕ ವೈ.ಸಂಪಂಗಿ (ಆನೇಕಲ್ ತಾಲ್ಲೂಕಿನವರು) ಒಳಗೊಂಡಂತೆ ಕ್ಷೇತ್ರದ ಮೇಲೆ ಕಣ್ಣು ಹಾಕಿರುವ ಬಹುಪಾಲು ರಾಜಕಾರಣಿಗಳು ರಾಜಧಾನಿ ಮೂಲದವರು. ಈ ಕುರಿತು ಮತದಾರರಲ್ಲಿ ಸಣ್ಣಗೆ ಚರ್ಚೆ ಆರಂಭವಾಗಿದೆ. 

ಲಂಚ ಪ್ರಕರಣದಲ್ಲಿ ಸಿಲುಕಿದ ಸಂಪಂಗಿ ಬದಲು ಅವರ ತಾಯಿ ರಾಮಕ್ಕ ಪಕ್ಷದಿಂದ ಟಿಕೆಟ್ ಘೋಷಣೆಯಾಗುವ ಮೊದಲೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. `ರಾಜಕಾರಣಿಗಳು ಎಲ್ಲರೂ ಜೈಲಿಗೆ ಹೋಗುವಂತವರೇ. ಇವರೊಬ್ಬರು ಸಿಕ್ಕಿಬಿದ್ದಿದ್ದಾರೆ, ಅಷ್ಟೇ' ಎಂದು ಪಳನಿಸ್ವಾಮಿ ಲಂಚ ಪ್ರಕರಣವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು. ಕೆಜಿಎಫ್ ಹೆಸರಿಗೆ ಮಸಿ ಬಳಿದರು ಎಂದು ನಾರಾಯಣ ರೆಡ್ಡಿ ಸಿಟ್ಟಾದರು. ಜನರ ಪ್ರತಿಕ್ರಿಯ ಹೀಗೆ ಎರಡು ತುದಿಗಳಿಗೆ ಚಾಚಿದೆ.

ಭಾಷೆ ಕುರಿತು ಇದ್ದ ಜಿಗುಟು ಕಡಿಮೆ ಆಗಿದೆ ಎಂದು ದೊರೈ ವಿಶ್ಲೇಷಿಸಿದರು. ವೇದಿಕೆ ಏರಿದರೆ ರಾಜಕಾರಣಿಗಳು ಅದೇ ಅರಚಾಟ ಮಾಡುತ್ತಾರೆ. ಆದರೆ ಜನಸಾಮಾನ್ಯರ ಮನೋಭಾವ, ಮಾತಿನ ಶೈಲಿ ಬದಲಾಗಿದೆ. ಹಾವಭಾವಗಳಲ್ಲಿ ಬೆಂಗಳೂರಿನ ಪ್ರಭಾವ ಕಾಣಿಸುತ್ತದೆ ಎಂದರು. ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಇಲ್ಲ ಎಂದು ಯರನಾಗನಹಳ್ಳಿಯ ಸಂಪತ್ ಆಕ್ಷೇಪಿಸಿದರು.

ಸಂಜೆ 5.30ರ ಸುಮಾರಿಗೆ ಉರಿಗಾಂಪೇಟೆಯಲ್ಲಿ ಹಾದು ಹೋಗುತ್ತಿರುವಾಗ ಜೋರು ಗಾಳಿ ಬೀಸಿತು. ಗಾಳಿಯಲ್ಲಿ ಅದಿರು ಉಳಿಕೆಯ ದಿಬ್ಬಗಳಿಂದ  ದೂಳು ತೂರಿ ಬಂದು ಮುಂದಿನ ಹಾದಿ ಕಾಣದಾಯಿತು. ಕೆಜಿಎಫ್ ಕೂಡ ಬದಲಾವಣೆಗೆ ತೀವ್ರತರದಲ್ಲಿ ತೆರೆದುಕೊಳ್ಳುತ್ತಿದೆ. ದೂಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಬದಲಾವಣೆ ಗಾಳಿಯ ಫಲ ಉಣ್ಣುವ ರಾಜಕಾರಣಿಗಳು ಅದಿರು ದಿಬ್ಬಗಳ ದೂಳಿನ ಜತೆ ಸೇರದಿದ್ದರೆ ಸಾಕು ಎಂಬುದು ಇಲ್ಲಿನ ಜನರ ಹಾರೈಕೆ.

ಅಮ್ಮನ ರಂಗ ಪ್ರವೇಶ

ಸುತ್ತಲೂ ಜನರು ಮುಗಿಬಿದ್ದಿದ್ದರು. ಶಾಸಕ ಪುತ್ರ ವೈ. ಸಂಪಂಗಿ ಜತೆ ಇದ್ದ ರಾಮಕ್ಕ ಅವರನ್ನು ಅಡುಗೆ ಮನೆಯಿಂದ ದಿಢೀರನೆ ರಾಜಕೀಯ ರಂಗಪ್ರವೇಶ ಮಾಡಿದ್ದೀರಿ. ಹೇಗನಿಸುತ್ತದೆ ಎಂದು ಕೇಳಿದಾಗ, `ಕ್ಷೇತ್ರದ ಜನರು ಬಯಸಿದ್ದಾರೆ. ಬಂದಿದ್ದೇನೆ. ಮಗ ಒಳ್ಳೇದು ಮಾಡಿದ್ದರೆ ಜನ ನನಗೆ ವೋಟ್ ಹಾಕ್ತಾರೆ' ಎಂದರು.

`ಅಲ್ಲಿಂದ (ಆನೇಕಲ್‌ನಿಂದ) ಬಂದ ಮಗನನ್ನು ಇಲ್ಲಿನ ಜನ ಆಶೀರ್ವದಿಸಿದ್ದಾರೆ. ಮಗನಿಗಿಂತ ಎರಡು ಪಟ್ಟು ಹೆಚ್ಚು ಕೆಲಸ ಮಾಡುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಗನಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದ ಮೇಲೆ ಅವರು (ಲಂಚ ಪ್ರಕರಣದಲ್ಲಿ) ತಪ್ಪು ಎಸಗಿದ್ದಾರೆ ಎಂದು ಪಕ್ಷ ಭಾವಿಸಿದೆ ಎಂದು ಅರ್ಥವಲ್ಲವೇ ಎಂದು ಕೆದಕಿದಾಗ ತಾಯಿ ತಬ್ಬಿಬ್ಬಾದರು. ಅಷ್ಟರಲ್ಲಿ ಮಗನೇ ಮುಂದಾಗಿ, `ಅದ್ಹೇಗೆ? ಹಾಗೇನೂ ಇಲ್ಲ' ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT