ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಸ್ ಪೋಲಿಯೊ: ದ.ಕ. ಸವಾಲು

Last Updated 18 ಫೆಬ್ರುವರಿ 2012, 6:25 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಮತ್ತೆ ಭಾನುವಾರ ನಡೆಯಲಿದೆ. ಅದಕ್ಕಾಗಿ ಜಿಲ್ಲಾಡಳಿತ ಸಜ್ಜಾಗುತ್ತಿದೆ. ಆದರೆ, ಸಾಕಷ್ಟು ತೊಡಕುಗಳು, ಸವಾಲುಗಳು ಸಮಾಜ ಹಿತದ ಮಹತ್ವದ ಈ ಕಾರ್ಯಕ್ರಮದ ಯಶಸ್ಸಿಗೆ ಅಡ್ಡಿಯಾಗಿವೆ.

ಜಿಲ್ಲೆಯಲ್ಲಿ ಕೊನೆಯ ಪೋಲಿಯೊ ಪ್ರಕರಣ ದಾಖಲಾಗಿದ್ದು 1999ರಲ್ಲಿ. ಉತ್ತರ ಭಾರತದಲ್ಲಿ ಸಾಕಷ್ಟು ಪ್ರಕರಣಗಳು ವರದಿಯಾಗಿವೆ.

ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಈ ಬಾರಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಆರೋಗ್ಯ ಇಲಾಖೆಯೇನೋ ಉತ್ಸಾಹದಿಂದಿದೆ. ಶಾಶ್ವತ ಅಂಗವಿಕಲತೆಗೆ ಕಾರಣವಾಗುವ ಈ ಜಾಡ್ಯವನ್ನು ಸಂಪೂರ್ಣವಾಗಿ ನಿವಾರಿಸಬೇಕೆಂಬ ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣೆಯ ಈ ಕಾರ್ಯಕ್ರಮಕ್ಕೆ ದೇಶದಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ವಿವಿಧ ಬಗೆಯ ತೊಡಕುಗಳಿವೆ. ಭಾರಿ ಸಂಖ್ಯೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಸೇರಿ ದೊಡ್ಡ ಮಟ್ಟದಲ್ಲಿ ಪೋಲಿಯೋ ಹನಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡರೂ ಅಲ್ಲೊಂದು, ಇಲ್ಲೊಂದು ಎನ್ನುವಂತೆ ಕೆಲವು ಮಕ್ಕಳು ಪೋಲಿಯೊ ಹನಿ ಪಡೆಯದೆ ಉಳಿದುಬಿಡುತ್ತಿರುವ ಶಂಕೆ ಇದೆ.

ಈ ಬಾರಿ ವಲಸೆ ಕಾರ್ಮಿಕರನ್ನು ದೃಷ್ಟಿಯಲ್ಲಿಟ್ಟುಕೊಂಡೇ ರಾಜ್ಯದ ಆರೋಗ್ಯ ಈ ಸಾಲಿನ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಶೇಷ ರೀತಿಯ ಯೋಜನೆ ರೂಪಿಸಿದೆ.

ತೊಡಕುಗಳೇ ಹೆಚ್ಚು: ಜಿಲ್ಲೆಯಲ್ಲಿ 2011-12ರ ಸಾಲಿನಲ್ಲಿ ಆರೋಗ್ಯ ಇಲಾಖೆ 5 ವರ್ಷದೊಳಗಿನ 1,65,136 ಮಕ್ಕಳಿಗೆ ಪೋಲಿಯೊ ಹನಿ ಹಾಕಬೇಕೆಂಬ ಗುರಿ ಹೊಂದಿದೆ. ಆದರೆ ಪರಿಣಾಮಕಾರಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಅನೇಕ ತೊಡಕುಗಳಿದ್ದು, ಅವನ್ನು ಪರಿಹರಿಸಿಕೊಳ್ಳುವುದೇ ಇಲಾಖೆಗೆ ದೊಡ್ಡ ಸವಾಲು ಎನಿಸಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಪಾರ್ಟ್‌ಮೆಂಟ್ ಹಾಗೂ ಫ್ಲಾಟ್ ನಿವಾಸಿಗಳ ಅಸಹಕಾರ, ಕೆಲವೆಡೆ ಪೋಲಿಯೊ ಹನಿ ಬಗ್ಗೆ ಜನರಲ್ಲಿರುವ ತಪ್ಪು ತಿಳಿವಳಿಕೆ ಹಾಗೂ ಒಂದೇ ನೆಲೆಯಲ್ಲಿ ವಾಸವಿರದ ವಲಸೆ ಕಾರ್ಮಿಕರ ಕುಟುಂಬಗಳು. ಇವಿಷ್ಟೂ ಪಲ್ಸ್ ಪೋಲಿಯೊ ಕಾರ್ಯಕ್ರಮದ ಪರಿಪೂರ್ಣ ಜಾರಿಗೆ ತೊಡಕಾಗಿರುವ ಸಂಗತಿಗಳು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಆರೋಗ್ಯ ಕಾಳಜಿ ಇಲ್ಲ: `ಕರ್ನಾಟಕದಲ್ಲಿ ಪೋಲಿಯೊ ಪ್ರಕರಣಗಳು ಇಲ್ಲವೇ ಇಲ್ಲ~ ಎನ್ನುವಷ್ಟು ಕಡಿಮೆಯಾಗಿದ್ದರೂ, ಉತ್ತರ ಭಾರತದಲ್ಲಿ ಪೋಲಿಯೋ ಪ್ರಕರಣ ಅಲ್ಲಲ್ಲಿ ವರದಿಯಾಗಿವೆ. 2011ರ ಜ. 13ರಂದು ಪಶ್ಚಿಮ ಬಂಗಾಳದಲ್ಲಿ ಒಂದು ಪೋಲಿಯೊ ಪ್ರಕರಣ ಇರುವುದು ಖಚಿತವಾಯಿತು. ಪೋಲಿಯೊವನ್ನು ಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರವೂ ಒಪ್ಪಿಕೊಂಡಿತು. ಆದರೆ ದಕ್ಷಿಣ ಭಾರತದಲ್ಲಿ ಇತ್ತೀಚೆಗೆ ಒಂದು ಪೋಲಿಯೊ ಪ್ರಕರಣವೂ ಕಂಡುಬಂದಿಲ್ಲ.

ಆದರೆ, ಉತ್ತರ ಭಾರತದಿಂದ ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಅರಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ರಾಜ್ಯದ ವಿವಿಧ ನಗರಗಳಿಗೆ ಬಂದಿದ್ದಾರೆ. ಒಂದೇ ಜಾಗದಲ್ಲಿ ಹೆಚ್ಚು ಕಾಲ ಉಳಿಯದ, ಕೆಲಸ ಅರಸುತ್ತಾ ಬೇರೆ ಬೇರೆ ಸ್ಥಳಗಳಿಗೆ ತೆರಳುವ ಈ ವಲಸೆ ಕಾರ್ಮಿಕ ಕುಟುಂಬಗಳೇ ಪಲ್ಸ್ ಪೋಲಿಯೋ ಯಶಸ್ವಿ ಅನುಷ್ಠಾನಕ್ಕೆ ದೊಡ್ಡ ತೊಡಕಾಗಿವೆ. ಹಾಗಾಗಿ ಈ ಬಾರಿಯ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ವಲಸೆ ಕಾರ್ಮಿಕರನ್ನೇ ಮುಖ್ಯ ಗುರಿಯಾಗಿರಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಒ.ಆರ್.ಶ್ರೀರಂಗಪ್ಪ `ಪ್ರಜಾವಾಣಿ~ಗೆ ಶುಕ್ರವಾರ ತಿಳಿಸಿದರು.

ವಲಸೆ ಕಾರ್ಮಿಕರಿಗೆ ಅವರ ಕುಟುಂಬದ, ಮಕ್ಕಳ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ದಿನಗೂಲಿ ನೌಕರರಾದ ಅವರು, ದಿನದ ಆಹಾರಕ್ಕೆ ಸಾಕಾಗುವಷ್ಟು ಮಾತ್ರ ದುಡಿಯುತ್ತಾರೆ. ಆರೋಗ್ಯಕ್ಕೆ ಹಣ ಮೀಸಲಿಡುವಷ್ಟು ಶಕ್ತಿ ಅವರಲ್ಲಿಲ್ಲ. ಅಷ್ಟೇ ಅಲ್ಲ, ಸರ್ಕಾರವೇ ಉಚಿತ ವೈದ್ಯಕೀಯ ಸೌಲಭ್ಯ ನೀಡಿದರೂ ಪಡೆದುಕೊಳ್ಳದಷ್ಟು ಆರೋಗ್ಯದ ಕುರಿತು ನಿರ್ಲಕ್ಷ್ಯ ಅವರಲ್ಲಿದೆ. ಈ ನಿಟ್ಟಿನಲ್ಲಿ ಅವರನ್ನು ಜಿಲ್ಲೆಯಲ್ಲಿ ಸಮಗ್ರವಾಗಿ ಗುರುತಿಸಿ ಅವರ ಮಕ್ಕಳಿಗೂ ಈ ಬಾರಿ ಪೋಲಿಯೊ ಹನಿ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ನಗರದಲ್ಲಿ ಎಲ್ಲೆಲ್ಲಿ ಕಾಮಗಾರಿಗಳು ನಡೆದಿವೆಯೋ ಆ ಕ್ಷೇತ್ರಗಳನ್ನೆಲ್ಲ ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ನೆರವು ಪಡೆದು ಗುರುತಿಸಲಾಗಿದೆ. ಕಾರ್ಮಿಕರ ನೆಲೆಗಳನ್ನು ವಾರ್ಡ್‌ವಾರು ಗುರುತಿಸಿ ಚಿಕಿತ್ಸೆ ನೀಡಲು ಸಿದ್ಧತೆ ನಡೆದಿದೆ. ನಗರ ಹಾಗೂ ಜಿಲ್ಲೆಯಲ್ಲಿ ಒಟ್ಟು 1427 ವಲಸೆ ಕಾರ್ಮಿಕರ ಮಕ್ಕಳನ್ನು ಗುರುತಿಸಿದ್ದು, 6 ಸಂಚಾರಿ ತಂಡಗಳು ಅವರಿರುವ ಸ್ಥಳಕ್ಕೇ ಹೋಗಿ ಪಲ್ಸ್ ಪೋಲಿಯೊ ಹನಿ ಹಾಕಲಿವೆ ಎಂದರು.

ಅಪಾರ್ಟ್‌ಮೆಂಟ್ ಅಸಹಕಾರ: ನಗರದಲ್ಲಿ ಅಪಾರ್ಟ್‌ಮೆಂಟ್, ಫ್ಲಾಟ್‌ಗಳಲ್ಲಿ ವಾಸಿಸುವ ಕುಟುಂಬಗಳ ಸಂಖ್ಯೆಯೂ ಬಹಳ ದೊಡ್ಡದಿದೆ. ಆದರೆ, ಪಲ್ಸ್ ಪೋಲಿಯೋದಂತಹ ಸಮಾಜದ ಆರೋಗ್ಯ ಕಾಪಾಡುವ ಮುಖ್ಯ ಕಾರ್ಯಕ್ರಮದ ಜಾರಿಗೆ ಈ ಅಪಾರ್ಟ್‌ಮೆಂಟ್ ನಿವಾಸಿಗಳ ಅಸಹಕಾರವಿರುವುದೇ ಮತ್ತೊಂದು ದೊಡ್ಡ ತೊಡಕು.
ಕೆಲವೆಡೆ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ತಮ್ಮ ಐದು ವರ್ಷದೊಳಗಿನ ಮಕ್ಕಳನ್ನು ಪೋಲಿಯೊ ಹನಿ ಕೇಂದ್ರಗಳಿಗೆ ಹನಿ ಹಾಕಿಸಲು ಕರೆದುಕೊಂಡು ಬರುವುದೇ ಇಲ್ಲ. ಪೋಲಿಯೊ ಸಿಬ್ಬಂದಿ ಮನೆ ಬಾಗಿಲಿಗೇ ಹೋಗಿ ಹನಿ ಹಾಕುವ ಕಾರ್ಯಕ್ರಮವಿದ್ದರೂ ಅಪಾರ್ಟ್‌ಮೆಂಟ್‌ಗಳ ಒಳಕ್ಕೆ ಅವರಿಗೆ ಪ್ರವೇಶವೇ ಕಷ್ಟ. ಅಲ್ಲಿನ ಭದ್ರತಾ ಸಿಬ್ಬಂದಿ ಒಳಕ್ಕೆ ಬಿಡುವುದೂ ಇಲ್ಲ. ಪಲ್ಸ್ ಪೋಲಿಯೊ ಕಾರ್ಯಕ್ರಮ ಯಶಸ್ಸಿಗೆ ಈ ಅಂಶವೂ ದೊಡ್ಡ ತೊಡಕಾಗಿದೆ ಎಂದು ಶ್ರೀರಂಗಪ್ಪ ಬೇಸರ ವ್ಯಕ್ತಪಡಿಸಿದರು.

ಈ ಬಾರಿ ಇಂಥ ಸಮಸ್ಯೆಗೆ ಪರಿಹಾರವಾಗಿ ಆರೋಗ್ಯ ಇಲಾಖೆ ಪಾಲಿಕೆಯ ಸಹಾಯ ಪಡೆಯಲಿದೆ. ನಗರ ಪಾಲಿಕೆ ಸದಸ್ಯರು ಹಾಗೂ ಮಂಗಳೂರು ಬಿಲ್ಡರ್ಸ್ ಅಸೋಸಿಯೇಷನ್ ಪದಾಧಿಕಾರಿಳೊಂದಿಗೂ ಸಮಾಲೋಚಿಸಲಾಗಿದೆ. ಪೋಲಿಯೊ ಹನಿ ಹಾಕುವ ಸಿಬ್ಬಂದಿಗೆ ಅಪಾರ್ಟ್‌ಮೆಂಟ್ ಒಳಕ್ಕೆ ಬಿಡುವುದು ಹಾಗೂ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಈ ಬಾರಿ ಅಪಾರ್ಟ್‌ಮೆಂಟ್‌ಗಳಲ್ಲಿಯೂ ನಮ್ಮ ಕಾರ್ಯಕ್ರಮ ಯಶಸ್ವಿಯಾಗಿ ಜಾರಿಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT