ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಸ್ ಪೋಲಿಯೊ: ಶೇ. 91ರಷ್ಟು ಸಾಧನೆ

Last Updated 20 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಭಾನುವಾರ ಆಯೋಜಿಸಿದ್ದ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ ಶೇ. 91.88 ಗುರಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ 1,88,906 ಮಕ್ಕಳು ಇದ್ದು, ಅದರಲ್ಲಿ 1,73,569 ಮಕ್ಕಳಿಗೆ  ಲಸಿಕೆ ಹಾಕಲಾಗಿದೆ. ಶೇ. 91.88 ರಷ್ಟು ಗುರಿ ಸಾಧಿಸಲಾಗಿದೆ ಎಂದು ಮಕ್ಕಳ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಶಾಸಕ ಎಚ್.ಎಸ್.ಪ್ರಕಾಶ್ ಅವರು ಪೋಲಿಯೊ ಲಸಿಕೆ ಹಾಕುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿದರು. ಜಿಲ್ಲೆಯಾದ್ಯಂತ  ಸ್ಥಾಪಿಸಲಾಗಿದ್ದ 872 ಬೂತ್‌ಗಳಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಹೊರ ವರ್ತುಲ ರಸ್ತೆಗಳಲ್ಲೂ ಬೂತ್ ಸ್ಥಾಪಿಸಲಾಗಿತ್ತು.

ಆಲೂರು ವರದಿ; ಮಕ್ಕಳ ಉತ್ತಮ ಬೆಳವಣಿಗೆಗೆ ಅನುಕೂಲ ವಾಗುವ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಪೋಷಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಭಾರ ತಹಶೀಲ್ದಾರ್ ಶಿವಪ್ಪ ಭಾನುವಾರ ತಿಳಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,  ಪೋಷಕರು ತಮ್ಮ ಮಕ್ಕಳನ್ನು ಮಾರಕ ರೋಗದಿಂದ ರಕ್ಷಿಸುವಂತೆ ಮನವಿ ಮಾಡಿದರು.

ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮನೋಹರ್ ಮಾತನಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಡಾ.ಯದುರಾಜ್, ಡಾ. ರಾಮ್ ಪ್ರವೀಣ್, ಡಾ.ಶ್ರೀಕುಮಾರ್, ಡಾ.ವಿಕ್ರಮ್, ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕ ಎಚ್.ಎಸ್.ವೆಂಕಟೇಶ್, ಸುಬ್ರಮಣ್ಯ ಮತ್ತು ರಾಜೇಗೌಡರು ಉಪಸ್ಥಿತರಿದ್ದರು.

ಶೇ 95ರಷ್ಟು ಸಾಧನೆ; 7155 ಗ್ರಾಮೀಣ ಪ್ರದೇಶದ ಮಕ್ಕಳಿಗೆ ಲಸಿಕೆ ಹಾಕಿ ಶೇ. 94ರಷ್ಟು ಸಾಧನೆ ಮಾಡ ಲಾಗಿದೆ ಎಂದು ತಾಲ್ಲೂಕು ವೈದ್ಯಾಧಿ ಕಾರಿ ಡಾ.ತಿಮ್ಮಯ್ಯ ತಿಳಿಸಿದರು.

ಅರಸೀಕೆರೆ ವರದಿ:   ಪೋಲಿಯೊ ನಿಯಂತ್ರಿಸಲು ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದು ಪುರಸಭಾ ಅಧ್ಯಕ್ಷ ಎಂ. ಶಮೀವುಲ್ಲಾ ಭಾನುವಾರ ತಿಳಿಸಿದರು.

ಪಟ್ಟಣದ ಸರ್ಕಾರಿ ಜಯಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಹಾಗೂ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯವಂತ ಮಗು ಇದ್ದರೆ ಆ ಕುಟುಂಬ ಸದಾ ಹಸನ್ಮುಖಿಯಾಗಿರುತ್ತದೆ ಎಂದರು.

ನಗರ ಬಿಜೆಪಿ ಅಧ್ಯಕ್ಷ ವೈ.ಕೆ. ದೇವರಾಜ್, ಪುರಸಭಾ ಸದಸ್ಯೆ ಕೆ.ಎಸ್. ಸಿದ್ದಮ್ಮ, ರೋಟರಿ ಕ್ಲಬ್ ಅಧ್ಯಕ್ಷ ಎನ್.ಜಿ. ಮಧು, ಸದಸ್ಯರಾದ ಕೆ.ಪಿ ಎಸ್. ವಿಶ್ವ ನಾಥ್, ಲಕ್ಷ್ಮಣರಾವ್, ಪುರಸಭಾ ಮುಖ್ಯಾಧಿಕಾರಿ ರಂಗೇಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶಂಕರಪ್ಪ ಉಪಸ್ಥಿತರಿದ್ದರು.


ಶೇ 92ರಷ್ಟು ಗುರಿ; ತಾಲ್ಲೂಕಿನಲ್ಲಿ ಶೇಕಡ 92ರಷ್ಟು ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಲಾಗಿದೆ ಎಂದು ತಾಲ್ಲೂಕು ಆರೋಗ್ಯಾದಿಕಾರಿ ಡಾ. ಶಂಕರಪ್ಪ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ 31952 ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಈ ಪೈಕಿ 29395 ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ಹೇಳಿದರು.

ಚನ್ನರಾಯಪಟ್ಟಣ ವರದಿ:
 ದೇಶದಲ್ಲಿ ಒಂದು ವರ್ಷದಿಂದ ಪೋಲಿಯೊ ಪ್ರಕರಣ ದಾಖಲಾಗಿಲ್ಲ. ಇನ್ನೂ ಎರಡು ವರ್ಷ ಇದೇ ರೀತಿ ಮುಂದುವರೆದರೆ ವಿಶ್ವ ಆರೋಗ್ಯ ಸಂಸ್ಥೆ `ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರ~  ಎಂದು ಘೋಷಿಸಲಿದೆ ಎಂದು ರಾಜ್ಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ನೋಡೆಲ್ ಅಧಿಕಾರಿ ಡಾ. ನಾಗರಾಜು ತಿಳಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದ ಉದ್ಘಾಟನೆ ನಂತರ ಮಾತನಾಡಿದ ಅವರು, ಜನವರಿ 2011 ರಲ್ಲಿ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿತ್ತು. ಅದನ್ನು ಬಿಟ್ಟರೆ ಇದುವರೆಗೆ ಯಾವುದೇ ಪ್ರಕರಣ ದಾಖಲೆಯಾಗಿಲ್ಲ ಎಂದರು.

ಪುರಸಭಾಧ್ಯಕ್ಷೆ ಗೀತ ಅವಿನಾಶ್, ಲಸಿಕಾ ಕಾರ್ಯಕ್ರಮ ಉದ್ಘಾಟಿಸಿದರು. ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ತಾ.ಪಂ. ಅಧ್ಯಕ್ಷೆ ರಂಗಮ್ಮ ಮಾತನಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಆರ್. ಹಿರಿಯಣ್ಣಯ್ಯ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎ.ಆರ್. ಧನಶೇಖರ್, ಆರೋಗ್ಯ ಇಲಾಖೆ ಪ್ರಕಾಶ್ ಹಾಜರಿದ್ದರು.


ಹಳೇಬೀಡು ವರದಿ: ಪೋಲಿಯೊ ಮರುಕಳಿಸದಂತೆ ಪೋಷಕರು ತಪ್ಪದೆ ತಮ್ಮ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಅಕ್ಷತ್ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಪಲ್ಸ್ ಪೋಲಿಯೊ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕದಲ್ಲಿ ಸಂಪೂರ್ಣವಾಗಿ ಪೋಲಿಯೊ ನಿರ್ಮೂಲನೆಯಾಗಿದೆ. 1998ರಲ್ಲಿ ವಿಶ್ವದಲ್ಲಿ 3.55 ಲಕ್ಷ ಪೋಲಿಯೊದಿಂದ ಬಳಲುತ್ತಿದ್ದರು. ಲಸಿಕೆ ಆಂದೋಲನಾ ಆರಂಭವಾದ ನಂತರ 503ಕ್ಕೆ ಇಳಿಕೆಯಾಗಿದೆ  ಎಂದು ಡಾ.ಅಕ್ಷತ್ ಹೇಳಿದರು.

ತಾ.ಪಂ. ಸದಸ್ಯ ಬಿ.ಎಸ್.ಸೋಮ ಶೇಖರ್, ಗ್ರಾ.ಪಂ. ಅಧ್ಯಕ್ಷ ಸಿ.ಆರ್.ಲಿಂಗಪ್ಪ ಪ್ರೇಮಣ್ಣ ವೈದ್ಯಾಧಿಕಾರಿ ಗಳಾದ ಡಾ.ಪ್ರೀತಿ, ಡಾ.ಅದಿಬುಲ್ಲಾ, ಡಾ.ರವಿರಾಜ್ ಮಾತನಾಡಿದರು.

ಆರೋಗ್ಯವಂತ ಸಮಾಜ: ಮಕ್ಕಳಿಗೆ ತಪ್ಪದೆ ಪೋಲಿಯೊ ಹಾಕಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಶಾಂತರಾಜು ಹೇಳಿದರು.ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಪೋಲಿಯೊ ಲಸಿಕಾ ಆಂದೋಲನದ ಉದ್ಘಾಟನೆ ನೆರವೆರಿಸಿ ಅವರು ಮಾತನಾಡಿದರು. ಶಾಂತರಾಜು ಹೇಳಿದರು. ವೈದ್ಯಾಧಿಕಾರಿ ಸತೀಶ್ ಇದ್ದರು.

ಹೊಳೆನರಸೀಪುರ ವರದಿ: ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿಸಲು ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಹಶೀಲ್ದಾರ್ ವಿ. ಮಂಜುನಾಥ್ ತಿಳಿಸಿದರು.
ಭಾನುವಾರ ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜೇಶ್ ಮಾತನಾಡಿ, ಕಳೆದ ವರ್ಷ ಭಾರತದಲ್ಲಿ ಪೋಲಿಯೊ ಪ್ರಕರಣ ದಾಖಲಾಗಿಲ್ಲ. ಇನ್ನರೆಡು ವರ್ಷ ಸಾಧನೆ ಮಾಡಿದರೆ ಪೋಲಿಯೊ ಮುಕ್ತ ರಾಷ್ಟ್ರ ಎನಿಸಿಕೊಳ್ಳುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ವೆಂಕಟೇಶ್ವರ ವಿದ್ಯಾಸಂಸ್ಥೆಯ ಸಾಧನಾ, ಗೈಡ್ ಸಂಸ್ಥೆಯ ಕುಮುದಾ,  ಡಾ. ಲಕ್ಷ್ಮೀಕಾಂತ್, ರೋಟರಿ ಸಂಸ್ಥೆ ಅಧ್ಯಕ್ಷ ಯೋಗೇಶ್, ಕಾರ್ಯದರ್ಶಿ ರಾಮ್‌ದಾಸ್, ಡಾ. ಕೆ,ಸಿ. ಮರಿಯಪ್ಪ, ಇತರರು ಹಾಜರಿದ್ದರು.

ಜಾವಗಲ್ ವರದಿ: ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಗ್ರಾ.ಪಂ. ಅಧ್ಯಕ್ಷ ಧನಂಜಯ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಮಗು ವಿಗೆ ಹನಿ ಹಾಕಿ ಮಾತನಾಡಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತಾ.ಪಂ. ಸದಸ್ಯೆ ಲಕ್ಷ್ಮೆರವಿಶಂಕರ್ ಮಗುವಿಗೆ ಪೋಲಿಯೋ ಹನಿ ಹಾಕಿ ದರು. ಡಾ.ಗೀತಾ, ಡಾ.ಪ್ರೇಮಾನಂದ್, ಡಾ.ಜ್ಞಾನೇಶ್, ಕೆ.ಎಸ್.ಆರ್.ಟಿ.ಸಿ. ರಾಜಶೇಖರ್, ನರಸಿಂಹಸ್ವಾಮಿ, ಇದ್ದರು. 

ಸಕಲೇಶಪುರ ವರದಿ: ಪ್ರಸಕ್ತ ಸಾಲಿನಲ್ಲಿ ಪೋಲಿಯೊ ಪ್ರಕರಣ ದಾಖಲಾಗಿಲ್ಲ ಎಂದು ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಇಂದುಶೇಖರ್ ಹೇಳಿದರು.

ಪೋಲಿಯೊ ಲಸಿಕೆ ಕಾರ್ಯಕ್ರ ಮದಲ್ಲಿ ಮಾತನಾಡಿದ ಅವರು,  ಏಪ್ರಿಲ್ 15ರಂದು ಪಲ್ಸ್ ಪೋಲಿಯೊ  ಲಸಿಕೆಯನ್ನು ವಲಸೆ ಕುಟುಂಬಗಳ ಮಕ್ಕಳಿಗೆ ಹಾಕಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಪಲ್ಲವಿ ಆಕುರಾತಿ ಲಸಿಕೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುರಸಭಾ ಅಧ್ಯಕ್ಷ ಎಚ್.ಎ.ಭಾಸ್ಕರ್, ಡಾ.ಮೋಹನ್‌ದಾಸ್ ಶೆಟ್ಟಿ, ಚನ್ನವೇಣಿ.ಎಂ.ಶೆಟ್ಟಿ, ಡಾ.ಲೀಲಾವತಿ, ಎಚ್.ಆರ್.ಸುರೇಶ್, ಡಾ.ವೆಂಕಟೇಶ್, ಡಾ.ನಾಗರಾಜ್, ಡಾ.ಸಹನ್‌ಶೆಟ್ಟಿ, ಡಾ.ಉಮೇಶ್, ಡಾ.ಚಂದ್ರಿಕಾ, ಡಾ.ಹೇಮಂತ್. ಡಾ.ಗಣೇಶ್, ಡಾ.ಹೇಮಂತ್, ಶೂಶ್ರೂಷಕ ಅಧೀಕ್ಷಕಿ ಲೀಲಾವತಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT