ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವನ ಋತು

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬಿಡುಗಡೆಗೂ ಮುನ್ನವೇ ‘ಲೂಸಿಯಾ’ ಸದ್ದು ಮಾಡಿದೆ. ಅಂಥ ವಿಶೇಷ ಚಿತ್ರದಲ್ಲಿ ಏನಿದೆ?
ನನಗೂ ಈ ಪ್ರಶ್ನೆ ಹಲವು ಬಾರಿ ಕಾಡಿದೆ. ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಉತ್ತರ ನೀಡುತ್ತಿದ್ದೆ. ಆದರೆ ಈಗ ನನಗೆ ಸರಿಯಾದ ಉತ್ತರ ಹೊಳೆದಿದೆ ಎನಿಸಿತು. ನಾವು ಸಿನಿಮಾ ‘ಹಿಟ್’ ಮಾಡುವ ಹಪಾಹಪಿಯಲ್ಲಿ ಸಿನಿಮಾ ಯಾಕೆ ಮಾಡುತ್ತಿದ್ದೇವೆ ಎನ್ನುವುದನ್ನೇ ಮರೆಯುತ್ತಿದ್ದೇವೆ. ಸಿನಿಮಾ ಎಂದರೆ ನಮ್ಮ ಭಾವನೆಗಳನ್ನು ಪ್ರೇಕ್ಷಕನ ಜೊತೆ ಹಂಚಿಕೊಳ್ಳುವುದು.

ಲೂಸಿಯಾದಲ್ಲಿ ಆ ಕೆಲಸ ಮಾಡಿದ್ದೇನೆ ಎನಿಸುತ್ತಿದೆ. ಏಕೆಂದರೆ ನಾನು ಭಾರತದಾದ್ಯಂತ ಚಿತ್ರ ಬಿಡುಗಡೆ ಮಾಡುತ್ತೇನೆ ಎಂದೋ ಅಥವಾ ಇಷ್ಟು ವ್ಯವಹಾರ ಮಾಡಬೇಕೆಂದೋ ಸಿನಿಮಾ ಶುರು ಮಾಡಿರಲಿಲ್ಲ. ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುವುದು ನನಗೊಂದು ಕಥೆ ಹೇಳು ಎಂದು. ನಾವು ಅದನ್ನು ಬಿಟ್ಟು ಬೇರೆಲ್ಲವನ್ನೂ ಹೇಳುತ್ತಿದ್ದೇವೆ. ಆದರೆ ‘ಲೂಸಿಯಾ’ಕ್ಕೆ ಬರುವ ಪ್ರೇಕ್ಷಕನಿಗೆ ಆತ ಬಯಸಿದ ಕಥೆ ಸಿಗುತ್ತದೆ. ನನ್ನೊಳಗೆ ಮೂಡಿದ ಕಥೆಯನ್ನು ಪ್ರಾಮಾಣಿಕವಾಗಿ ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ.

ಪ್ರೇಕ್ಷಕನನ್ನು ಮೆಚ್ಚಿಸುವ ಸಂಗತಿಗಳು ಏನಿವೆ?
ಒಂದು ಕಥೆ. ಎರಡನೆಯದು ಅದನ್ನು ಹೇಳುವ ರೀತಿ. ಈಗ ಹಾಲಿವುಡ್, ವಿದೇಶಿ ಚಿತ್ರಗಳಿರಲಿ, ತಮಿಳು ಚಿತ್ರಗಳಿರಲಿ... ಎಲ್ಲರೂ ಚೆನ್ನಾಗಿ ಮಾಡುತ್ತಿದ್ದಾರೆ. ಪ್ರೇಕ್ಷಕರು ಎಲ್ಲವನ್ನೂ ನೋಡುವುದರಿಂದ ನಮ್ಮ ಭಾಷೆಯಲ್ಲೂ ಇಂಥ ಚಿತ್ರ ಬರಬೇಕು ಎನ್ನುವ ಆಸೆ ಹೊಂದಿರುತ್ತಾರೆ.

ಸಿನಿಮಾ ಎಂದಾಗ ಅದು ಅವರನ್ನು ಒಂದು ಕಡೆ ಯೋಚಿಸುವಂತೆ ಮಾಡಬೇಕು. ಈ ದೃಶ್ಯ ಹೀಗಿತ್ತು, ಹಾಗಿತ್ತು ಎಂದು ಸ್ನೇಹಿತರ ಜೊತೆ ಮಾತನಾಡಬೇಕು. ಆ ರೀತಿಯ ಪ್ರಯತ್ನ ಮಾಡಿದ್ದೇವೆ. ಬರಹಗಾರನಾಗಿ ನನ್ನ ಪ್ರಯತ್ನ ಮಾಡಿದ್ದೇನೆ, ಛಾಯಾಗ್ರಾಹಕ ಅತಿ ಸಣ್ಣ ಕ್ಯಾಮೆರಾದಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ಹಾಗೆಯೇ ನಮ್ಮ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಒಳ್ಳೆ ಹಾಡುಗಳನ್ನು ನೀಡಿದ್ದಾರೆ.

ಇದು ಮನರಂಜನೆಯ ಚಿತ್ರವೇ ಅಥವಾ ಅದರಾಚೆಗಿನ ಚಿತ್ರವೇ?
ಮನರಂಜನೆ ಇದೆ. ನಾನು ಲಂಡನ್‌ನಲ್ಲಿ ಚಿತ್ರ ನೋಡುವಾಗಲೇ ನನಗೆ ಅದು ಅರಿವಾಗಿದ್ದು. ಅಲ್ಲಿವರೆಗೂ ನನ್ನ ಚಿತ್ರ ಗಂಭೀರ ಎಂದುಕೊಂಡಿದ್ದೆ. ಎಮೋಷನಲ್ ಆಗಿಯೂ ಇದೆ ಎಂಬುದೂ ಆಗಲೇ ತಿಳಿದಿದ್ದು. ಲಂಡನ್‌ನಲ್ಲಿ ಪ್ರೇಕ್ಷಕರು ನಗುತ್ತಿದ್ದರು. ಎಂಜಾಯ್ ಮಾಡುತ್ತಿದ್ದರು. ಸಿನಿಮಾ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವವರಿಗೂ, ನನಗೆ ಗಂಭೀರ ಸಿನಿಮಾ ಬೇಡ ಎರಡು ಗಂಟೆ ನಕ್ಕು ಹೋಗುತ್ತೇನೆ ಎನ್ನುವವರಿಗೂ ಬಯಸಿದ್ದು ಸಿಗುತ್ತದೆ.‌

ಅಂದರೆ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗೂ ಸಮಾನವಾಗಿ ತಲುಪುತ್ತದೆಯೇ?
ನಮ್ಮ ನಟ ನೀನಾಸಂ ಸತೀಶ್, ಈ ಚಿತ್ರ ಕ್ಲಾಸ್ ಪ್ರೇಕ್ಷಕರಿಗೆ ಎಂದು ಅಪ್ಪಿತಪ್ಪಿಯೂ ಹೇಳಬೇಡಿ ಎಂದು ಎಚ್ಚರಿಸುತ್ತಿರುತ್ತಾರೆ. ಹಾಡುಗಳು ಹಿಟ್ ಆಗಿದ್ದು ನೋಡಿದರೆ ಈಗಾಗಲೇ ಅದು ಮಾಸ್ ಪ್ರೇಕ್ಷಕರನ್ನು ತಲುಪಿದೆ ಎನಿಸುತ್ತದೆ. ನಾನು ಅವರನ್ನು ಮಾಸ್ ಪ್ರೇಕ್ಷಕರೆಂದು ಕರೆಯವುದಿಲ್ಲ, ಬದಲಿಗೆ ಅಮಾಯಕ ಪ್ರೇಕ್ಷಕರು ಎನ್ನುತ್ತೇನೆ. ಏಕೆಂದರೆ ಅವರು ಸಿನಿಮಾ ಬಗ್ಗೆ ಹೆಚ್ಚು ಯೋಚನೆ ಮಾಡಲು ಹೋಗುವುದಿಲ್ಲ. ಅವರಿಗೆ ಭಾವನೆಗಳು ಬೇಕು. ಅದು ಚಿತ್ರದಲ್ಲಿದೆ.

ಕನ್ನಡದಲ್ಲಿ ಇದು ವಿಭಿನ್ನ ಸಿನಿಮಾ ಎಂದು ಹೇಳಬಹುದೇ?
ವಿಭಿನ್ನವಾಗಿ ಡಿಫರೆಂಟ್ ಚಿತ್ರ! ನಾನೇ ಮಾಡಿದ್ದ ‘ಮನಸಾರೆ’, ‘ಲೈಫು ಇಷ್ಟೇನೆ’ ಕಥೆಗಳಲ್ಲಿ ತುಂಬಾ ಗಟ್ಟಿಯಾದ ಲವ್‌ಸ್ಟೋರಿ ಇದ್ದವು. ಇದರಲ್ಲಿ ಲವ್‌ಸ್ಟೋರಿ, ಹಾಡುಗಳು ಇರಬೇಕು ಎಂಬ ಉದ್ದೇಶ ಇರಲಿಲ್ಲ. ಹಾಡುಗಳಿಲ್ಲದೆ ಭಾರತೀಯ ಚಿತ್ರಗಳನ್ನು ಪ್ರೊಮೋಟ್ ಮಾಡುವುದು ತುಂಬಾ ಕಷ್ಟ. ಹಾಗಾಗಿ ಹಾಡುಗಳನ್ನಿಟ್ಟಾಗ ಅದರಲ್ಲಿ ಲವ್‌ಸ್ಟೋರಿ ಬರುತ್ತದೆ.

ಆದರೆ ಇದರಲ್ಲಿ ಫಿಲಾಸಫಿ ಸೇರಿಕೊಂಡಿದೆ. ಅದನ್ನು ನಾನು ಬರೆದೆ ಎನ್ನಲು ಸಾಧ್ಯವಿಲ್ಲ, ಅದು ಮ್ಯಾಜಿಕಲಿ ಆಗಿದ್ದು. ಏಕೆಂದರೆ ನನ್ನ ವಯಸ್ಸಿಗೆ  ಉದ್ದೇಶಪೂರ್ವಕವಾಗಿ ಚಿಂತಿಸಿ ಫಿಲಾಸಫಿ ಬರೆಯಲು ಸಾಧ್ಯವಿಲ್ಲ. ನೀವು ಸಿನಿಮಾ ನೋಡಿದಾಗ ನಿಮ್ಮ ಜೀವನದ ಬಗ್ಗೆ ಯೋಚಿಸುವಂತೆ ಮಾಡಬೇಕೆಂಬ ಗುರಿಯಿತ್ತು. ಮುಂಚೆ ರಂಗಭೂಮಿಯಲ್ಲಿ ಇದ್ದಾಗಲೂ ಅದನ್ನೇ ಮಾಡುತ್ತಿದ್ದದ್ದು.

ವಿಭಿನ್ನ, ಒಳ್ಳೆಯ ಸಿನಿಮಾ ಎಂದರೂ ಕಮರ್ಷಿಯಲ್ ಗೆಲುವು ಬೇಕಲ್ಲವೇ?
ಗೆಲುವು ಎನ್ನುವುದು ಬಾಕ್ಸ್‌ಆಫೀಸ್‌ನಲ್ಲೇ ಆಗುತ್ತದೆಯೇ ಎಂಬ ಪ್ರಶ್ನೆ ನನ್ನದು. ವಿಶ್ವದ ಸಾರ್ವಕಾಲಿಕ ಯಶಸ್ವಿ ಸಿನಿಮಾ ಪಟ್ಟಿಯಲ್ಲಿ ಇರುವ ಬಹುತೇಕ ಚಿತ್ರಗಳು ಬಾಕ್ಸ್‌ಆಫೀಸ್ ಹಿಟ್ ಚಿತ್ರಗಳಲ್ಲ. ಬದಲಾಗಿ ಬಾಕ್ಸ್‌ಆಫೀಸ್ನಲ್ಲಿ ಫ್ಲಾಪ್ ಆಗಿ ನಂತರ ಎಲ್ಲರ ಮನೆಯಲ್ಲಿಯೂ ಒಂದೊಂದು ಡಿವಿಡಿ ಇರುವ ಹಾಗೆ ಆದ ಚಿತ್ರಗಳು. ನನ್ನ ಸಿನಿಮಾ ನೋಡಿ ಜನರು ಅವರ ಮನೆಯಲ್ಲಿ ಅದರ ಒಂದು ಡಿವಿಡಿ ತಂದಿಟ್ಟುಕೊಳ್ಳು­ವಂತಾಗಬೇಕು.

  ಕಮರ್ಷಿಯಲ್ ಹಿಟ್ ಎಂಬ ದಿಕ್ಕಿನಲ್ಲಿ ನಾನು ಆಲೋಚಿಸಿಲ್ಲ. ಈ ಚಿತ್ರದ ಫಲಿತಾಂಶ ಏನೇ ಬರಲಿ, ಮುಂದಿನ ಇಂಥ ಪ್ರಯತ್ನಕ್ಕೆ ನಾವೇ ಹಣ ಹೂಡುತ್ತೇವೆ ಎಂದು ಈಗಾಗಲೇ ಇ-ಮೇಲ್ ಬರುತ್ತಿವೆ. ಇದರ ಅರ್ಥ ಪ್ರೇಕ್ಷಕರು ಕೇವಲ ಬಿಜಿನೆಸ್‌ಗೆ ಸಿನಿಮಾ ಮೋಹಿಗಳಾಗುತ್ತಿಲ್ಲ. ಸಿನಿಮಾ ಬಗ್ಗೆ ಸಕಾರಾತ್ಮಕ ಚಿಂತನೆಗಳನ್ನು ವೃದ್ಧಿಸುವ ಪ್ರಯತ್ನಗಳಾಗುತ್ತಿವೆ.

ಹೊಸಬರ ಜೊತೆ, ಹೊಸತನ ಸವಾಲು ಅಲ್ಲವೇ?
ನಾನೂ ಒಮ್ಮೆ ಹೊಸಬನಾಗಿದ್ದರಿಂದ ಕಷ್ಟಗಳ ಅರಿವಿತ್ತು. ಹೀಗಾಗಿ ಹೊಸಬರು ಬಂದಾಗ ನನ್ನನ್ನು ಬೇರೆಯವರು ನೋಡಿದಂತೆ ನಾನು ಅವರನ್ನು ನೋಡುವುದಿಲ್ಲ. ಈ ಚಿತ್ರದಲ್ಲಿ ನಮಗೆ ಸಂಭಾವನೆಗೋಸ್ಕರ ಕೆಲಸ ಮಾಡುವವರು ಬೇಕಿರಲಿಲ್ಲ. ಸಂಭಾವನೆ ಇಲ್ಲದೆಯೇ ಸಿನಿಮಾ ಮಾಡುತ್ತೀರಾ ಎಂದೇ ಕೇಳಿದ್ದು. ಅಂಥ ಹುಮ್ಮಸ್ಸು ಉಳ್ಳವರು ಸಾಧನೆಯ ಹಸಿವು ಇರುವವರು.

ಅವರೆಲ್ಲರೂ ನನಗೆ ಬೇಕಾಗಿದ್ದಕ್ಕಿಂತ ಹೆಚ್ಚೇ ಕೊಟ್ಟರು. ಸಂಗೀತ ನಿರ್ದೇಶಕ ಪೂರ್ಣಚಂದ್ರ ಮೊದಲು ಪರಿಚಯವಾದಾಗ ಅವರ ಮೇಲೆ ನಂಬಿಕೆ ಬಂದಿರಲಿಲ್ಲ. ಅವರಿಗೆ ಸಿನಿಮಾ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ನನ್ನದು ಕಡಿಮೆ ವೆಚ್ಚದ ಸಿನಿಮಾ, ನೋಡೋಣ ಎನಿಸಿತು. ಅವರು ಯಾವಾಗ ನಿರೀಕ್ಷೆ ಮೀರಿ ನೀಡಿದರೋ, ಹೊಸಬರಲ್ಲಿ ಎಂಥ ಸಾಮರ್ಥ್ಯ ಇರುತ್ತದೆ ಎನ್ನುವುದು ಆಗ ತಿಳಿಯಿತು.

ಕನ್ನಡದಲ್ಲಿ ಹೊಸ ಪ್ರಯೋಗಗಳು ಸಣ್ಣಗೆ ಶುರುವಾಗಿದೆಯಲ್ಲವೇ?
ಒಂದು ಹೊಸ ಪೀಳಿಗೆ ಬಂದಾಗ ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. ಈಗ ನಾನು, ಸುನಿ ಮುಂತಾದವರು ಬದಲಾವಣೆಗೆ ಪ್ರಯತ್ನಿಸುತ್ತಿದ್ದೇವೆ, ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ, ಸೋಲುತ್ತದೆಯೋ ನಂತರದ್ದು. ನಮ್ಮ ಯೋಚನಾ ಲಹರಿಗೆ ವಿಭಿನ್ನ ಪ್ರಯತ್ನ ಮಾಡುತ್ತಿದ್ದೇವೆ.

ಭಟ್ಟರ ಗರಡಿಯಲ್ಲಿ ಯುವ ನಿರ್ದೇಶಕರ ದಂಡು ಹೊರಬರುತ್ತಿದೆ. ನೀವೆಲ್ಲರೂ ತಂಡವಾಗಿ ಕೆಲಸ ಮಾಡಬಹುದಲ್ಲವೇ?
ನಿಜ. ಗಡ್ಡ ವಿಜಯ್ ಅವರ ‘ದ್ಯಾವ್ರೆ’ ಎಂದಿನ ಸಿನಿಮಾ ಸೂತ್ರಕ್ಕಿಂತ ವಿಭಿನ್ನವಾದದ್ದು. ವೀರೇಂದ್ರ ಹೊಸ ಸಿನಿಮಾ ಮಾಡುತ್ತಿದ್ದಾರೆ. ಪವನ್ ಒಡೆಯರ್ ಕಮರ್ಷಿಯಲಿ ಗೆದ್ದಂಥ ನಿರ್ದೇಶಕ. ಭಟ್ಟರ ಶಿಷ್ಯರೆಂಬ ಮುದ್ರೆ ಕೂಡ ಜೊತೆಗಿರುವುದು ಸಹಾಯ ಆಗುತ್ತಿದೆ.

ಭಟ್ಟರ ತಂಡದಲ್ಲಿ ಒಂದು ಚಿತ್ರವನ್ನು ಅವರವರ ನೆಲೆಗಟ್ಟಿನಲ್ಲಿ ಯೋಚನೆ ಮಾಡುವ ಸ್ವಾತಂತ್ರ್ಯವಿರುತ್ತದೆ. ಹೀಗಾಗಿ ಎಲ್ಲರೂ ಒಂದು ಸಿನಿಮಾಕ್ಕೆ ಒಟ್ಟಿಗೆ ಕೂತಾಗ ಎಲ್ಲರ ಚಿಂತನೆಗಳೂ ಘರ್ಷಣೆ ಆಗುವ ಸಂಭವ ಹೆಚ್ಚು.

ಹೊಸತನ್ನು ಕೊಡುವ ಪ್ರಯತ್ನ ಗೆದ್ದಾಗ ಸರಿ, ಸೋತಾಗ?
ಈ ಚಿತ್ರದಲ್ಲಿ ಗೆಲುವು ಸೋಲು ಗೆರೆ ಅಂದಾಜಿಲ್ಲ. ಇದುವರೆಗೂ ಸಿಕ್ಕಿದ್ದು ಗೆಲುವೇ? ಅಥವಾ ಪ್ರೇಕ್ಷಕ ಚಿತ್ರಮಂದಿರದಲ್ಲಿ ಪ್ರತಿಕ್ರಿಯಿಸುವ ಬಗೆಯೇ? ಯಾವ ಕನ್ನಡ ಚಿತ್ರವೂ ಇದುವರೆಗೆ ಏಕಕಾಲದಲ್ಲಿ ಬಿಡುಗಡೆಯಾದ ಉದಾಹರಣೆ ಇಲ್ಲ. ಬಾಂಬೆಯಲ್ಲಿ ಪತ್ರಿಕಾಗೋಷ್ಠಿ ಮಾಡುತ್ತಿದ್ದೇನೆ. ಅದೆಲ್ಲವೂ ಖುಷಿ ಸಂಗತಿಗಳೇ. ಬಾಕ್ಸ್‌ಆಫೀಸ್ ಮುಖ್ಯವಾಗುವುದಿಲ್ಲ.

ಮುಂದಿನ ಸಿನಿಮಾ?
ಸದ್ಯಕ್ಕೆ ಯಾವುದೂ ಇಲ್ಲ. ಈ ಚಿತ್ರ ಬಿಡುಗಡೆಯಾಗಿ ಮೂರು ವಾರದ ಬಳಿಕ ಒಂದು ಬ್ರೇಕ್ ತೆಗೆದುಕೊಂಡು ಮುಂದೆ ಯೋಚಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT