ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವನ ವಿದ್ಯುತ್‌ಗೆ ತೆರಿಗೆ ಬೇಡ

Last Updated 14 ಜನವರಿ 2011, 11:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿ ವೃತ್ತದಲ್ಲಿ ಮಾತ್ರ ಪವನ ವಿದ್ಯುತ್ ಕಂಪೆನಿಗಳಿಗೆ ವಿಧಿಸಿದ ತೆರಿಗೆಯನ್ನು ತೆಗೆದು ಹಾಕಬೇಕು; ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣ ಮಾಡಬೇಕು; ನೈಋತ್ಯ ರೈಲ್ವೆ ವಲಯದ ಶೇಕಡಾ 50ರಷ್ಟು ಆದಾಯವನ್ನು ವಲಯದ ವ್ಯಾಪ್ತಿಯಲ್ಲೇ ಖರ್ಚು ಮಾಡಬೇಕು; ಹುಬ್ಬಳ್ಳಿಯಲ್ಲಿ ಪ್ರವಾಸೋದ್ಯಮ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್)ವನ್ನು ರಚಿಸಬೇಕು...’

ಸಂಸದ ಪ್ರಹ್ಲಾದ ಜೋಶಿ ಅವರು ಗುರುವಾರ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಕರೆದಿದ್ದ ಕೇಂದ್ರ ಹಾಗೂ ರೈಲ್ವೆ ಮುಂಗಡಪತ್ರ ಪೂರ್ವಭಾವಿ ಸಭೆಯಲ್ಲಿ ಕೇಳಿಬಂದ ಪ್ರಮುಖ ಸಲಹೆಗಳಿವು.

ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಜನ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ರಚನೆ ಆರಂಭವಾಗಬೇಕು ಎಂಬ ಬೇಡಿಕೆಯನ್ನು ಇಟ್ಟರು. ‘ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ವಿಷಯವಾಗಿ ನಾನು ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಅವರನ್ನು ಒಂಬತ್ತು ಬಾರಿ ಭೇಟಿ ಮಾಡಿದ್ದೇನೆ. ಅವರಿಂದ ಪೂರಕ ವರದಿ ಸಿಗುವ ಭರವಸೆ ಸಿಕ್ಕಿಲ್ಲ’ ಎಂದು ಸಂಸದ ಜೋಶಿ ಸ್ಪಷ್ಟನೆ ನೀಡಿದರು.

‘ಉದ್ದೇಶಿತ ಮಾರ್ಗ ಪರಿಶೀಲಿಸಿದ ಯಾವ ಅಧಿಕಾರಿಗಳೂ ಪೂರಕವಾದ ವರದಿ ನೀಡಿಲ್ಲ. ಎಲ್ಲ ಕಡೆಯಿಂದ ಋಣಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಸುಲಭದಲ್ಲಿ ಆಗದಂತಹ ಕೆಲಸ. ಯಾರಾದರೂ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾದರೆ ಅವರನ್ನು ನಾನು ಬೆಂಬಲಿಸಲು ಸಿದ್ಧ’ ಎಂದು ಅವರು ತಿಳಿಸಿದರು.

‘ಹುಬ್ಬಳ್ಳಿ ಭಾಗದಲ್ಲಿ ನೂರಾರು ಪವನ ವಿದ್ಯುತ್ ಘಟಕಗಳಿವೆ. ಕೇಂದ್ರ ಸರ್ಕಾರ ಅವುಗಳಿಗೆ ತೆರಿಗೆ ರಿಯಾಯ್ತಿ ನೀಡಿತ್ತು. ಆದರೆ, ಹುಬ್ಬಳ್ಳಿ ವೃತ್ತ ಮಾತ್ರ ಹಳೆಯ ವರ್ಷಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡು ದೊಡ್ಡ ಪ್ರಮಾಣದ ತೆರಿಗೆಯನ್ನು ಆಕರಿಸುತ್ತಿದೆ. ಇದರಿಂದ ಒಂದೊಂದು ಪವನ ವಿದ್ಯುತ್ ಕಂಪೆನಿಗೂ ರೂ. 50 ಲಕ್ಷದಷ್ಟು ಹೊರೆ ಬಿದ್ದಿದೆ. ಹಣಕಾಸು ಸಚಿವರ ಮೇಲೆ ಒತ್ತಡ ತಂದು ಈ ಸಂಪ್ರದಾಯಕ್ಕೆ ಕೊನೆ ಹಾಡಿಸಬೇಕು’ ಎಂದು ಲೆಕ್ಕ ಪರಿಶೋಧಕ ಎನ್.ಎ. ಚರಂತಿಮಠ ಆಗ್ರಹಿಸಿದರು.
‘ಬಜೆಟ್ ಮಂಡನೆ ಎಂಬುದು ಕೇವಲ ಕಟ್ ಆ್ಯಂಡ್ ಪೇಸ್ಟ್ ಆಗುತ್ತಿದೆಯೇ ಹೊರತು ಯಾವುದೇ ಮೇಜರ್ ಸರ್ಜರಿ ನಡೆಯುತ್ತಿಲ್ಲ’ ಎಂದು ವಿಷಾದಿಸಿದರು.

‘ಹುಬ್ಬಳ್ಳಿ-ಅಂಕೋಲಾ, ಹುಬ್ಬಳ್ಳಿ-ಬೆಳಗಾವಿ ಸೇರಿದಂತೆ ಹಲವು ಹೊಸ ರೈಲು ಮಾರ್ಗ ನಿರ್ಮಿಸಬೇಕು; ಈಗಾಗಲೇ ಅನುಮೋದನೆಗೊಂಡ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು; ಮುಂಬಯಿ ಮತ್ತು ಪುಣೆ ಕಡೆಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು; ಇನ್ನಷ್ಟು ದೈನಿಕ ರೈಲುಗಳನ್ನು ಬೆಂಗಳೂರು ಮತ್ತು ದೆಹಲಿ ಕಡೆಗೆ ಆರಂಭಿಸಬೇಕು’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಸಿ. ಹಿರೇಮಠ ಒತ್ತಾಯಿಸಿದರು.

‘ಹುಬ್ಬಳ್ಳಿ ರೈಲು ನಿಲ್ದಾಣವನ್ನು ಅಂತರರಾಷ್ಟ್ರೀಯ ದರ್ಜೆಗೆ ಏರಿಸಬೇಕು. ಪ್ರಮುಖ ನಿಲ್ದಾಣಗಳಲ್ಲಿ ವೃದ್ಧರು, ಅಂಗವಿಕಲರು ಮತ್ತು ರೋಗಿಗಳ ಸಹಾಯಕ್ಕೆ ಬ್ಯಾಟರಿಚಾಲಿತ ವಾಹನದ ವ್ಯವಸ್ಥೆ ಮಾಡಬೇಕು’ ಎಂದು ಅವರು ಮನವಿ ಮಾಡಿದರು. ವಲಯ ವ್ಯಾಪ್ತಿಯಲ್ಲಿ ಹೊಸ ರೈಲು ಆರಂಭಿಸಲು ಮತ್ತು ನಿಲುಗಡೆ ಕಲ್ಪಿಸಲು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಆಯಾ ವಲಯಕ್ಕೇ ನೀಡಬೇಕು ಎಂದು ಅವರು ಆಗ್ರಹಿಸಿದರು.

‘ಹಿಂದೆ ಹಳ್ಳಿಗಳಿಗೆ ಹೋದರೆ ಕಟ್ಟೆ ಮೇಲೆ ಹಿರಿಯರು ಕಾಣುತ್ತಿದ್ದರು. ಈಗ ಯುವಕರೇ ಸಿಗುತ್ತಾರೆ. ಉದ್ಯೋಗ ಸಮಸ್ಯೆಯೇ ಇದಕ್ಕೆ ಕಾರಣ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವಂತಹ ಯೋಜನೆಗಳನ್ನು ಬಜೆಟ್ ನೀಡಬೇಕು’ ಎಂದು ಶಿಕ್ಷಣತಜ್ಞ ಡಾ.ಸುಭಾಷ ಅಭಿಪ್ರಾಯಪಟ್ಟರು.‘ಹುಬ್ಬಳ್ಳಿಯಲ್ಲಿ ಐಟಿ ಕ್ಷೇತ್ರ ಯಾವ ಹಂತದಲ್ಲಿದೆ’ ಎಂದು ಪ್ರಶ್ನಿಸಿದ ಅವರು, ‘ಮಾರುಕಟ್ಟೆ, ಸಾರಿಗೆ, ಶೈತ್ಯಾಗಾರದ ವ್ಯವಸ್ಥೆ ಮಾಡಿದರೆ ಕೃಷಿ ವಲಯ ಮೇಲೇಳಲು ಸಾಧ್ಯ’ ಎಂದು ವಿವರಿಸಿದರು.

‘ಕೇಂದ್ರೀಯ ಮಾರಾಟ ತೆರಿಗೆ (ಸಿಎಸ್‌ಟಿ)ಯನ್ನು ತೆಗೆದು ಹಾಕಿದರೆ ಸ್ಥಳೀಯ ಉದ್ಯಮಿಗಳು ಬದುಕಲು ಸಾಧ್ಯ’ ಎಂದು ಉತ್ತರ ಕರ್ನಾಟಕದ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ಪಾಟೀಲ ಹೇಳಿದರು.ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ಮೋಹನ ಟೆಂಗಿನಕಾಯಿ, ಕಾರ್ಯದರ್ಶಿ ಕೆ.ಡಿ.ಕೊಟೇಕರ, ಸಹ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗಾರ, ಮಾಜಿ ಅಧ್ಯಕ್ಷರಾದ ಸಿ.ಬಿ.ಪಾಟೀಲ, ಮದನ ದೇಸಾಯಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದತ್ತಾ ಡೋರ್ಲೆ, ಸಂಸ್ಥೆಯ ಸದಸ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT