ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವನ್ ನಗೆಮಾರುತ

Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

ದು `ಅಪಕಾರಿ ಕಥೆ' ಮಕ್ಕಳ ನಾಟಕದ ರಂಗ ತಾಲೀಮು. ಬಿ.ವಿ. ಕಾರಂತರ ಸಂಗೀತ ನಿರ್ದೇಶನ, ಪ್ರೇಮ ಕಾರಂತರ ನಿರ್ದೇಶನ. ನಾಟಕದ ಪ್ರಮುಖ ಪಾತ್ರಧಾರಿ `ಅಪಕಾರಿ' ತಾಲೀಮಿಗೆ ಬರುವುದು 20 ನಿಮಿಷ ತಡವಾಯಿತು. ಕಾರಂತರು ತರಾಟೆಗೆ ತೆಗೆದುಕೊಂಡಿದ್ದರು.

ತಡವಾದುದಕ್ಕೆ ನೀಡಿದ ಕಾರಣಗಳನ್ನು ಒಪ್ಪದ ಕಾರಂತರು- `ಸತ್ತರೆ ಮಾತ್ರ ಎಲ್ಲದ್ದಕ್ಕೂ ಮಾಫಿ, ಬದುಕಿದ್ದರೆ ಏನೇ ಕೆಲಸವಿದ್ದರೂ ಸರಿಯಾದ ಸಮಯಕ್ಕೆ ತಾಲೀಮಿಗೆ ಬರಬೇಕು' ಎಂದಿದ್ದರು.

ಅಂದಿನ `ಅಪಕಾರಿ' ಪಾತ್ರಧಾರಿ, ಇಂದಿನ ಕಿರುತೆರೆಯ ನಟ ಪವನ್. ಗುರುಗಳ ಮಾತು ಅವರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಕಾರಂತರು ಕಲಿಸಿದ ಶಿಸ್ತಿನ ಜೊತೆಗೆ ಅವರು ಕಲಿಸಿದ ನಟನೆಯ ಪಾಠಗಳನ್ನೂ ಬದುಕಿನ ಪಾಠವನ್ನೂ ಪವನ್ ಸ್ಮರಿಸುತ್ತಾರೆ.

ಪವನ್‌ರನ್ನು ಕಿರುತೆರೆ ವೀಕ್ಷಕರು ಗುರುತಿಸುವುದು ಹಲವು ಹೆಸರುಗಳಿಂದ. `ಸಂಕ್ರಾಂತಿ'ಯ ಕಿವುಡ ಪ್ರಾಣೇಶ, `ಮಾಯಾಮೃಗ'ದ ಮುಕುಂದ, `ಪಡುವಾರಳ್ಳಿ ಪಡ್ಡೆಗಳ' ಬೋರ... ಈವರೆಗೆ 20ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ಬಣ್ಣ ಹಚ್ಚುವ ಮೂಲಕ ವಿಭಿನ್ನ ಪಾತ್ರಗಳಲ್ಲಿ ಜನಮನ್ನಣೆಗಳಿಸಿದ್ದಾರೆ.

ಗಂಭೀರ ಪಾತ್ರಗಳಲ್ಲೂ ನಟಿಸಿರುವ ಅವರು, ಈಚೆಗೆ ಹಾಸ್ಯ ಪಾತ್ರಗಳತ್ತ ಹೊರಳಿದ್ದಾರೆ. `ಸಿಲ್ಲಿ ಲಲ್ಲಿ', `ಪಾಂಡುರಂಗ ವಿಠಲ', `ವಾರಗಿತ್ತಿಯರು', `ಪಾರ್ವತಿ ಪರಮೇಶ್ವರ', `ಹೋಗ್ಲಿ ಬಿಡಿ ಸಾರ್', `ಭಲೇ ಭಸವ', `ಜೋಕು ಜೋಕೆ, `ಸ್ವಾಭಿಮಾನಿ' ಅವರು ನಟಿಸಿರುವ ಕೆಲವು ಧಾರಾವಾಹಿಗಳು. ಪವನ್‌ರ ಹೆಸರು ಮತ್ತು ಇಮೇಜನ್ನು ಎತ್ತರಿಸಿದ್ದು `ಸಂಕ್ರಾಂತಿ'ಯ ಕಿವುಡ ಪ್ರಾಣೇಶ, `ಪಡುವಾರಹಳ್ಳಿ ಪಡ್ಡೆಗಳ' ಬೋರ ಮತ್ತು `ಮಾಯಾಮೃಗ'ದ ಮುಕುಂದನ ಪಾತ್ರಗಳು.

ಟಿ.ಎನ್. ನರಸಿಂಹನ್ ಅವರ `ಸಂಕಲನ' ಧಾರವಾಹಿಯಲ್ಲಿ ಬಾಲನಟನಾಗಿ ಕಿರುತೆರೆ ಪ್ರವೇಶಿಸಿದಾಗ ಪವನ್ ಎಂಟು ವರ್ಷದ ಹುಡುಗ. `ಅಪಕಾರಿ ಕಥೆ' ನಾಟಕದ ಮೂಲಕ  ಕಾರಂತರ ನಂಟು ಬೆಳೆಸಿಕೊಂಡ ಪವನ್, `ಬೆನಕ ಮಕ್ಕಳ ನಾಟಕ ಕೇಂದ್ರ'ದಲ್ಲಿ ನಟನೆಯ ರೀತಿ ರಿವಾಜುಗಳನ್ನು ಕಲಿತರು. `ಅಜ್ಜಿಕಥೆ', `ಅಪಕಾರಿ ಕಥೆ', `ಇಸ್ಪೀಟ್ ರಾಜ್ಯ', `ಜೋಕುಮಾರಸ್ವಾಮಿ', `ಹಯವದನ' ನಾಟಕಗಳಲ್ಲಿನ ಅವರ ಪ್ರದರ್ಶನ ಕಿರುತೆರೆಯ ಬಾಗಿಲನ್ನು ತೆರೆಯಿತು.  

`ಒಬ್ಬ ಉತ್ತಮ ನಿರ್ದೇಶಕ ಅತ್ಯುತ್ತಮ ನಟನೂ ಆಗಬೇಕು' ಎನ್ನುವ ನಿಲುವಿನ ಪವನ್ ನಟನೆಯ ಜೊತೆಯಲ್ಲಿಯೇ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. `ಮುಂಬೆಳಕು', `ಎಸ್ಸೆಸ್ಸೆಲ್ಸಿ ನನ್ಮಕ್ಕಳು', ಹೋಗ್ಲಿ ಬಿಡಿಸಾರ್', `ಭಲೇ ಬಸವ' ಧಾರವಾಹಿಗಳನ್ನು ನಿರ್ದೇಶಿಸಿದ್ದಾರೆ.

`ನಗಿಸುವ ಕಾಯಕ ನನ್ನದು. ಜೀವನದ ಕೆಲವು ನೋವುಗಳನ್ನು ಮರೆಯಲು ನಗಿಸುವ ದಾರಿ ಕಂಡುಕೊಂಡಿದ್ದೇನೆ' ಎನ್ನುತ್ತ ಮಂದಸ್ಮಿತರಾಗುತ್ತಾರೆ. `ಹಾಸ್ಯ ಪಾತ್ರಗಳನ್ನು ನಿಭಾಯಿಸಿ ಗೆಲ್ಲುವುದು ಕಷ್ಟ. ಆಂಗಿಕ ಅಭಿನಯ, ಮಾತಿನ ಕಲೆಯಲ್ಲಿ ಕಲಾವಿದನ ಎಲ್ಲ ಚಾಕಚಕ್ಯತೆಯೂ ಬಳಕೆಯಾಗುತ್ತದೆ' ಎನ್ನುವ ಅನುಭವ ಅವರದು.

ಪವನ್ ಬಾಲನಟನಾಗಿ ಸಿನಿಮಾಗಳಲ್ಲೂ ನಟಿಸಿದ್ದಾರೆ. `ಚಿನ್ನಾರಿ ಮುತ್ತ', `ಕೊಟ್ರೇಶಿ ಕನಸು', `ಅಭಿನಂದನೆ' ಅವರ ನಟನೆಯ ಚಿತ್ರಗಳು. ಇತ್ತೀಚಿನ ತಮ್ಮ ಸಿನಿಮಾ ಅನುಭವ ಹೇಳಿಕೊಳ್ಳುವ ಅವರು, `ಎಲ್ಲ ಸಿನಿಮಾಗಳಲ್ಲೂ ನನ್ನ ಕಾಮಿಡಿ ಪಾತ್ರಕ್ಕೆ ಪ್ರಶಂಸೆ ಸಿಕ್ಕಿದೆ.

ಆದರೆ ನಂತರದ ದಿನಗಳಲ್ಲಿ ಏಕಾಏಕಿ ಅವಕಾಶಗಳೇ ಸಿಕ್ಕಲಿಲ್ಲ. ಈ ಪ್ರಶ್ನೆಗೆ ನನಗೆ ಈಗಲೂ ಉತ್ತರ ಸಿಕ್ಕಿಲ್ಲ' ಎನ್ನುತ್ತಾರೆ. `ಒಬ್ಬ ಕಲಾವಿದ ಚಾಲ್ತಿಯಲ್ಲಿರುವವರೆಗೆ ಮಾತ್ರ ಬಣ್ಣ ಮೈಗೆ ಅಂಟುತ್ತದೆ' ಎನ್ನುವ ಅವರ ಮಾತಿನಲ್ಲಿ ಬಣ್ಣದ ಬದುಕಿನ ಸಿಹಿಕಹಿ ಇಣುಕುತ್ತದೆ.
- ಡಿ.ಎಂ.ಕುರ್ಕೆ ಪ್ರಶಾಂತ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT