ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೈದ್ಯ ಕಾಲೇಜು ಕಾಮಗಾರಿ ಮಂದಗತಿ

Last Updated 3 ಜೂನ್ 2013, 11:27 IST
ಅಕ್ಷರ ಗಾತ್ರ

ಗದಗ: ನಗರದ ಹೊರವಲಯದ ಹೊಂಬಳ ರಸ್ತೆಯಲ್ಲಿ 137 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಶುವೈದ್ಯಕೀಯ ಮಹಾವಿದ್ಯಾಲಯದ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.

ಬೀದರ್‌ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಪ್ರಾರಂಭವಾಗಿರುವ ಶಿವಮೊಗ್ಗ, ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯ ಜತೆಗೆ ಗದಗ ಹಾಗೂ ಅಥಣಿ ಪಶು ವೈದ್ಯಕೀಯ ಮಹಾವಿದ್ಯಾಲಯಗಳೂ ಸೇರಿವೆ. 2010ರ ಬಜೆಟ್‌ನಲ್ಲಿ ಮಂಜೂರಾದ ಪಶು ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡ ಕಾಮಗಾರಿಗೆ ಈಗ ಹದಿನೆಂಟು ತಿಂಗಳ ಗಡುವು ನೀಡಲಾಗಿದೆ. 2014ರ ಫೆಬ್ರುವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಮೂರು ವರ್ಷಗಳಿಂದ ಜಿಲ್ಲೆಯ ಜನತೆ ನಿರೀಕ್ಷಿಸುತ್ತಿರುವ ಪಶು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಿಸುವ ಸ್ಥಳ ಕಪ್ಪು ಎರೆ ಮಣ್ಣಿನಿಂದ ಕೂಡಿರುವುದರಿಂದ ಅಡಿಪಾಯ ಹಾಕಲು ವಿಳಂಬವಾಗಿದೆ ಎನ್ನಲಾಗಿದೆ. ರೂ. 5.41 ಕೋಟಿ ಅಂದಾಜು ಮೊತ್ತದ ಕಾಮಗಾರಿಯನ್ನು ಟೆಂಡರ್ ಕರೆದು ರೂ. 5.84 ಕೋಟಿ ರೂಪಾಯಿಗೆ ಗುತ್ತಿಗೆ ನೀಡಲಾಗಿದೆ. ಇದರಲ್ಲಿ ಕಾಂಪೌಂಡ್ ಗೋಡೆ, ಒಳಾಂಗಣ ರಸ್ತೆ, ನೀರು ಪೂರೈಕೆ ಮತ್ತು ಸ್ಯಾನಿಟರಿ ಕಾಮಗಾರಿಗಳನ್ನು ಹನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸಲು ಕಾಲಮಿತಿ ನೀಡಲಾಗಿದೆ. ಈ ಕಾಮಗಾರಿಗಳನ್ನು ಹೈದರಾಬಾದ್ ಮೂಲದ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ.

ಮಹಾವಿದ್ಯಾಲಯ ಕಟ್ಟಡ, ಅತಿಥಿ ಗೃಹ, ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಮೆಸ್ ಬ್ಲಾಕ್ ನಿರ್ಮಿಸುವ ಕಾಮಗಾರಿಯನ್ನು ರೂ. 13.31 ಕೋಟಿಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ಗುತ್ತಿಗೆ ಪಡೆದಿದ್ದಾರೆ.  ಮಹಾವಿದ್ಯಾಲಯದ ಡೀನ್ ವಸತಿ ಗೃಹ ಕಾಮಗಾರಿಯನ್ನು ಸಹ ಗುತ್ತಿಗೆ ನೀಡಲಾಗಿದೆ.

2012-13ನೇ ಸಾಲಿ ಬಜೆಟ್‌ನಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ರೂ. 10 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿಗಳ ಪ್ರಗತಿ ಆಧರಿಸಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಿದೆ. ಈ ಕಾಮಗಾರಿಯ ಮೇಲ್ವಿಚಾರಣೆ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ.

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡರೆ 2014ರಿಂದ ತರಗತಿಗಳು ಆರಂಭಗೊಳ್ಳಲಿವೆ. ಎರಡು ವರ್ಷಗಳ ಹಿಂದೆಯೇ ಗದಗದಲ್ಲಿ ಬಾಡಿಗೆ ಕಟ್ಟಡದಲ್ಲಿ ಪಶು ವೈದ್ಯಕೀಯ ವಿದ್ಯಾಲಯದ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಪೂರ್ಣ ಪ್ರಮಾಣದ ಕಟ್ಟಡ ಹಾಗೂ ಮೂಲಸೌಲಭ್ಯ ಇಲ್ಲದಿರುವುದರಿಂದ ಮಾನ್ಯತೆ ನೀಡುವುದಿಲ್ಲ ಎಂಬ ಕಾರಣಕ್ಕೆ  ಪ್ರಸ್ತಾವ ಕೈ ಬಿಡಲಾಯಿತು. ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಯಿತು.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈಗಲಾದರೂ ಜಿಲ್ಲೆಯಲ್ಲಿ ನೆನಗುದಿಗೆ ಬಿದ್ದಿರುವ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT