ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೈದ್ಯರ ಕೈಕಟ್ಟಿ ಹಾಕಿದ ಸೌಲಭ್ಯ ಕೊರತೆ

Last Updated 19 ಡಿಸೆಂಬರ್ 2013, 10:34 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಪಶು ಪಾಲನೆಗೆ ಹೆಸರುವಾಸಿ. ಬರದಿಂದ ಕೃಷಿ ಚಟುವಟಿಕೆಗೆ ಹೊಡೆತ ಬಿದ್ದಿರುವುದರಿಂದ ರೈತರು ಹೈನುಗಾರಿಕೆಯತ್ತ ಹೋಗುತ್ತಿದ್ದಾರೆ. ಆದರೆ ಇಲ್ಲಿನ ಪಶು ಆಸ್ಪತ್ರೆಗಳಲ್ಲಿ ಹೈನುಗಾರಿಕೆ ಮತ್ತು ಪಶು ಪಾಲನೆಯನ್ನು ಪ್ರೋತ್ಸಾಹಿಸುವುದಕ್ಕೆ ಅಗತ್ಯವಾದ ಮೂಲಸೌಲಭ್ಯ ಮತ್ತು ಸಿಬ್ಬಂದಿಯೇ ಇಲ್ಲ.

ತಾಲ್ಲೂಕಿನಲ್ಲಿ 20 ಪಶು ಚಿಕಿತ್ಸಾ ಸಂಸ್ಥೆಗಳಿವೆ. 2 ಪಶು ಆಸ್ಪತ್ರೆ, 8 ಪಶು ಚಿಕಿತ್ಸಾಲಯ, 10 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿವೆ. ಇವುಗಳಲ್ಲಿ 6 ವೈದ್ಯಾಧಿಕಾರಿ, 1 ಹಿರಿಯ ಪಶು ಚಿಕಿತ್ಸಕ, 9 ಸಹಾಯಕರು ಮತ್ತು 17 ಡಿ ದರ್ಜೆ ನೌಕರರ ಹುದ್ದೆಗಳು ಖಾಲಿ ಇವೆ.

ಹಂದನಕೆರೆ, ಶೆಟ್ಟಿಕೆರೆ, ಮತಿಘಟ್ಟ, ಯಳನಡು, ಗಾಣದಾಳ್ ಮತ್ತು ಕಂದಿಕೆರೆಯಲ್ಲಿ ಪಶು ವೈದ್ಯಾಧಿಕಾರಿಗಳು ಇಲ್ಲ. ಪಶು ಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಅವರ ಸ್ವಂತ ಊರು ತಿಮ್ಮನಹಳ್ಳಿ ಮತ್ತು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರ ಜೆ.ಸಿ.ಪುರದ ಆಸ್ಪತ್ರೆಗೆ ಸ್ವಂತ ಕಟ್ಟಡಗಳೇ ಇಲ್ಲ. ಕ್ಷೇತ್ರ ವಿಂಗಡಣೆಗೂ ಮುನ್ನ ಪಶು ಸಂಗೋಪನಾ ಸಚಿವರು 3 ಬಾರಿ ಪ್ರತಿನಿಧಿಸಿದ್ದ ಹುಳಿಯಾರು ಪಶು ಆಸ್ಪತ್ರೆಯಲ್ಲಿ ಮೂಲ ಸೌಕರ್ಯದ ಕೊರತೆ ಇದೆ.

ದಸೂಡಿ, ದಬ್ಬಕುಂಟೆ, ಪಿಲಾಲಿ ದಿಂಡಾವರ, ತಮ್ಮಡಿಹಳ್ಳಿ ಗೊಲ್ಲರಹಟ್ಟಿ, ಕೆಂಪರಾಯನಹಟ್ಟಿ ಮುಂತಾದ ಗ್ರಾಮಗಳಲ್ಲಿ ಕುರಿ ಸಾಕಣೆಯೇ ಪ್ರಧಾನ ಕಸುಬು. ಈ ಭಾಗದಲ್ಲಿ ಸಾವಿರಗಟ್ಟಲೆ ಕುರಿ ಒಡೆತನ ಹೊಂದಿರುವ ಕುಟುಂಬಗಳಿವೆ. ಕುರಿ ಮೇಕೆಗಳಿಗೆ ಲಸಿಕೆ ಹಾಕಿಸಲು ಲಕ್ಷಾಂತರ ರೂಪಾಯಿ ಬೇಕಾಗುತ್ತದೆ.

2012ರ ಜಾನುವಾರು ಗಣತಿ ಪ್ರಕಾರ 58717 ದನಗಳು, 13190 ಎಮ್ಮೆ, 1.3 ಲಕ್ಷಕ್ಕೂ ಹೆಚ್ಚು ಕುರಿ, 30 ಸಾವಿರಕ್ಕೂ ಹೆಚ್ಚು ಮೇಕೆಗಳಿವೆ. 2007ರ ಗಣತಿಗೆ ಹೋಲಿಸಿದರೆ ಸುಮಾರು 28 ಸಾವಿರ ಜಾನುವಾರು ಕಡಿಮೆಯಾಗಿವೆ. ಆದರೆ 87 ಸಾವಿರ ಕುರಿ ಮತ್ತು 19 ಸಾವಿರ ಮೇಕೆಗಳು ಹೆಚ್ಚಳವಾಗಿವೆ. ಹಸುಗಳ ಸಂಖ್ಯೆಯಲ್ಲಿ ಸ್ಥಿರತೆ ಇದೆ. ಮುದ್ದೇನಹಳ್ಳಿ, ಬೆಳಗುಲಿ, ತೊರೆಸೂರ ಗೊಂಡನಹಳ್ಳಿ ಮತ್ತು ಜೆ.ಸಿ.ಪುರಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕುರಿ ಮೇಕೆ ಸಾಕಲಾಗುತ್ತಿದೆ.

ಇಲಾಖೆ ದಾಖಲೆಯಂತೆ ಇಲ್ಲಿಯವರೆಗೆ 35 ರಾಸುಗಳು ಕಾಲುಬಾಯಿ ರೋಗದಿಂದ ಸತ್ತಿವೆ.

ತಾಲ್ಲೂಕಿನಲ್ಲಿ ಕಳೆದ 6 ತಿಂಗಳಿಂದ ಹಳ್ಳಿಕಾರ್ ತಳಿಯ ಕೃತಕ ಗರ್ಭಧಾರಣಾ ನಳಿಕೆಗಳನ್ನು ವಿತರಿಸಿಲ್ಲ. ತಾಲ್ಲೂಕಿಗೆ ತಿಂಗಳಿಗೆ ಸುಮಾರು 900 ಹಳ್ಳಿಕಾರ್ ಗರ್ಭಧಾರಣಾ ನಳಿಕೆಗಳ ಅಗತ್ಯವಿದೆ. ಆದರೆ ಕೇವಲ 50 ನಳಿಕೆಗಳು ಸರಬರಾಜು ಆಗಿವೆ ಎಂದು ಪಶು ವೈದ್ಯಾಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಹಲ್ಲುಗಡುಕ, ಹುಚ್ಚು ಮತ್ತು ಬಾಯಿಹುಣ್ಣು ರೋಗಗಳಿಗೆ ಬೇಕಾದ ಇಟಿ ಮತ್ತು ಪಿಪಿಆರ್ ಮದ್ದುಗಳು ಮಾತ್ರ ಪಶು ಆಸ್ಪತ್ರೆಯಲ್ಲಿ ಸಿಗುತ್ತವೆ. 3 ತಿಂಗಳಿಗೊಮ್ಮೆ ನಿಯಮಿತವಾಗಿ ಕೊಡಬೇಕಿರುವ ಜಂತು ನಾಶಕ ಔಷಧಿಯನ್ನು ಕುರಿಯೊಂದಕ್ಕೆ ₨ 25 ತೆತ್ತು ಖಾಸಗಿ ಅಂಗಡಿಗಲ್ಲಿ ಖರೀದಿಸಬೇಕು ಎನ್ನುತ್ತಾರೆ ಕುರಿ ಸಾಕಾಣಿಕೆದಾರ ಹಂದನಕೆರೆ ಸಿದ್ದಣ್ಣ.

ತಾಲ್ಲೂಕಿನ ಪಶು ಆಸ್ಪತ್ರೆಗಳಲ್ಲಿ ಶೇ. 60ರಷ್ಟು ಔಷಧಿ ಕೊರತೆಯಿದೆ. ಪಶು ವೈದ್ಯಕೀಯ ಸಿಬ್ಬಂದಿಯನ್ನು ಅನ್ಯಕಾರ್ಯಕ್ಕೆ ನಿಯೋಜಿಸುವುದರಿಂದ ಲಭ್ಯವಿರುವ ಕನಿಷ್ಟ ಸವಲತ್ತುಗಳನ್ನೂ ಸಕಾಲದಲ್ಲಿ ತಲುಪಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪಶು ವೈದ್ಯಾಧಿಕಾರಿ ಜೆ.ಸಿ.ಮಂಜುನಾಥ್‌.

ಹೇಳುವಂತೆ ರೋಗ ಪತ್ತೆ ಹಚ್ಚಲು ಜಿಲ್ಲಾ ಪಶು ಆಸ್ಪತ್ರೆಗಳಲ್ಲೂ ಪ್ರಯೋಗ ಶಾಲೆಗಳಿಲ್ಲ. ಇಡೀ ರಾಜ್ಯಕ್ಕೆ ಇರುವುದು ಒಂದೇ ಪ್ರಯೋಗಶಾಲೆ. ಅಲ್ಲಿಗೆ ರೋಗದ ಮಾದರಿ ಕಳುಹಿಸಲು ಕನಿಷ್ಠ ಫಾರ್ಮಾಲಿನ್ ಕೂಡ ಇಲ್ಲ ಎನ್ನುತ್ತಾರೆ ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಎಂ.ಪಿ.ಶಶಿಕುಮಾರ್.

ರೋಗ ಪತ್ತೆ ಹಚ್ಚಲು ತರಬೇತಿ ಸಮಯದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಹೇಳಿಕೊಡಲಾಗುತ್ತದೆ. ಸೇವೆ ನಿರ್ವಹಿಸುವ ಸ್ಥಳಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇರುವುದಿಲ್ಲ. ಅಳಲೇಕಾಯಿ ಪಂಡಿತರಂತೆ ಅಂದಾಜಿನ ಮೇಲೆ ಔಷಧಿ ಕೊಡುವ ದುಃಸ್ಥಿತಿ ಇದೆ ಎಂದು ಮುದ್ದೇನಹಳ್ಳಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ವೈದ್ಯ ಡಾ.ಬಿ.ಎಚ್.ನಿರಂಜನ್ ವಿಷಾದಿಸಿದರು.

ಮಧುಗಿರಿ: ಕಾಲುಬಾಯಿ ಜ್ವರಕ್ಕೆ 34 ರಾಸು ಬಲಿ

ಮಧುಗಿರಿ: ತಾಲ್ಲೂಕಿನಲ್ಲಿ ಇಲ್ಲಿಯವರೆಗೆ 343 ರಾಸುಗಳಿಗೆ ಕಾಲು ಬಾಯಿ ಜ್ವರ ಕಾಣಿಸಿಕೊಂಡಿದ್ದು, 34 ರಾಸುಗಳು ಸಾವನ್ನಪ್ಪಿವೆ.
2012ರ ಜಾನುವಾರು ಗಣತಿ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ 53200 ದನ, 12902 ಎಮ್ಮೆ, 95962 ಕುರಿ, 22668 ಮೇಕೆ, 1465 ಹಂದಿ, 52324 ಕೋಳಿಗಳಿವೆ. ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದರೂ ತೀವ್ರತೆ ಕಡಿಮೆಯಾಗಿರುವುದರಿಂದ ಹೆಚ್ಚಿನ ಸಾವು ಸಂಬವಿಸಿಲ್ಲ ಎಂದು ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ದೇವರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ 24 ಪಶುಪಾಲನಾ ಉಪ ಕೇಂದ್ರಗಳಿವೆ. 14 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯರ 4 ಹುದ್ದೆಗಳು ಖಾಲಿ ಇವೆ. 5 ಮೇಲ್ವಿಚಾರಕರ ಹುದ್ದೆಗಳೂ ಸೇರಿ ಒಟ್ಟು 42 ಹುದ್ದೆಗಳು ಖಾಲಿ ಇವೆ.

ಕುರಿ ಮೇಕೆಗಳಿಗೆ ಅಲ್ಲಲ್ಲಿ ನೀಲಿ ನಾಲಿಗೆ ರೋಗ ಕಾಣಿಸಿಕೊಂಡಿದೆ. 6 ತಿಂಗಳಿಂದ 1 ವರ್ಷದೊಳಗಿನ ಎಲ್ಲ ಕುರಿ– ಮೇಕೆಗಳಿಗೆ ಪಿ.ಪಿ.ಆರ್ ಲಸಿಕೆ ಹಾಕಲಾಗುತ್ತಿದೆ. ಈವರೆಗೆ ಶೇ.25ರಷ್ಟು ಕುರಿ–ಮೇಕೆಗಳಿಗೆ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT