ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ಸಂಪತ್ತಿನ ಪ್ರಯೋಗ ಶಾಲೆ

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿಯಲ್ಲಿ ಒಂದು ಪಶು ವೈದ್ಯಕೀಯ ಆಸ್ಪತ್ರೆ ಇದೆ. ಅದು ಎರಡು ಕೊಠಡಿಗಳ ಅಸ್ಪತ್ರೆ. ಅಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಜತೆಗೆ ಪಶು ಸಂಪತ್ತಿನ ಮಹತ್ವ ಸಾರುವ ಕೆಲಸ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಈ ಕೆಲಸ ಮಾಡುತ್ತಿರುವವರು ಈ ಆಸ್ಪತ್ರೆಯ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಡಾ.ಕ.ದಾ. ಕೃಷ್ಣರಾಜು ಅವರು.

ಈ ಆಸ್ಪತ್ರೆಯ ನೋಡಲು ವಸ್ತು ಸಂಗ್ರಹಾಲಯ ಹಾಗೂ ಪ್ರಯೋಗ ಶಾಲೆಯಂತೆ ಕಾಣುತ್ತದೆ. ಅಲ್ಲಿ ನಮ್ಮ ಹಿಂದಿನ ತಲೆಮಾರಿನ ಗ್ರಾಮೀಣ ಜನರು ಬಳಸುತ್ತಿದ್ದ ಅನೇಕ ಪರಿಕರಗಳು, ಹಸುಗಳ ಕೊಂಬಿನ ಮಾದರಿಗಳು, ಕೊಳಲುಗಳು, ತುಪ್ಪದ ಮಡಿಕೆಗಳು, ಮರದ ಗಂಟೆಗಳು, 250 ವರ್ಷಕ್ಕೂ ಹಳೆಯ ನೊಗ, ಚರ್ಮದ ವಸ್ತುಗಳು ಮತ್ತು ಗೋ ಮೂತ್ರದ ಔಷಧಿಗಳ ಸಂಗ್ರಹ ಇದೆ. 

ಒಣ ಸಗಣಿಯಿಂದ ತಯಾರಿಸಿದ ಸೊಳ್ಳೆ ಬತ್ತಿ, ದೀಪದ ಬತ್ತಿ ಮತ್ತು ನೋವು ನಿವಾರಕ ಔಷಧಿಗಳು, ಪಶು ಆಹಾರಗಳು, ಹೊಟ್ಟು, ಹೇನು ನಿವಾರಿಸುವ ಔಷಧ, ಶಾಲಾ ಮಕ್ಕಳ ಕುತೂಹಲ ತಣಿಸಲು ದೊಡ್ಡ ಬಾಟಲಿಗಳಲ್ಲಿ ಸಂಗ್ರಹಿಸಿ ಇಡಲಾದ ಎಮ್ಮೆ, ಹಸುಗಳ ಭ್ರೂಣಗಳಿವೆ. ಸಗಣಿ, ಗೋಮೂತ್ರ ಮತ್ತು ಮಜ್ಜಿಗೆಯಿಂದ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ತಯಾರಿಸಿ ಅದರಿಂದ ಗಡಿಯಾರ ನಡೆಸಲು ಸಾಧ್ಯ ಎನ್ನುವುದನ್ನು ತೋರಿಸಲಾಗಿದೆ.

ಸಗಣಿ ಕದಡುವ ಯಂತ್ರ ಮತ್ತು 100ರೂಗಳಲ್ಲಿ ತಯಾರಿಸಬಹುದಾದ  ಗೋಬರ್ ಅನಿಲದ ಒಲೆ ಇತ್ಯಾದಿಗಳಿವೆ. ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ರೈತರೇ ತಯಾರಿಸಿಕೊಳ್ಳಬಹುದು. ಈ ಕುರಿತು ಅಲ್ಲಿ ಮಾಹಿತಿ ಮತ್ತು ತರಬೇತಿಯನ್ನೂ ನೀಡುವ ವ್ಯವಸ್ಥೆ ಇದೆ.

ಡಾ. ಕೃಷ್ಣರಾಜು ಅವರಿಗೆ ಸಾವಯವ ಬೇಸಾಯದ ಬಗ್ಗೆ ವಿಶೇಷ ಒಲವಿದೆ.ಆಸ್ಪತ್ರೆಯ ಹಿಂಭಾಗದ ಭೂಮಿಯಲ್ಲಿ  ತರಕಾರಿ ಬೆಳೆದಿದ್ದಾರೆ. ರೈತರ ಅನುಕೂಲಕ್ಕಾಗಿ ಜೈವಿಕ ಬಯೋಡೈಜೆಸ್ಟರ್, ಮಡಿಕೆ ಗೊಬ್ಬರ, ಕೊಂಬಿನ ಗೊಬ್ಬರ, ಗೋ ಮೂತ್ರದಿಂದ ಕೀಟ ನಾಶಕ, ಪಂಚಗವ್ಯ ಜೀವಾಮೃತ ತಯಾರಿಕೆ ಹಾಗೂ ವಿವಿಧ ಮಾದರಿಯ ಕಾಂಪೋಸ್ಟ್ ಗೊಬ್ಬರ,
 
ಟ್ರೈಕೋಡರ್ಮ ತಯಾರಿಸುವ ಹಾಗೂ ವಿವಿಧ ಜಾತಿಯ ಮೇವಿನ ಹುಲ್ಲುಗಳನ್ನು ಬೆಳೆಸುವ ವಿಧಾನ ಕುರಿತು ಅವರು ರೈತರಿಗೆ ತರಬೇತಿ ನೀಡುತ್ತಾರೆ. ಅಗತ್ಯವಾದರೆ ರೈತರ ಹೊಲ ಹಾಗೂ ಮನೆಗಳಿಗೆ ಹೋಗಿ ಮಾಹಿತಿ ನೀಡುತ್ತಾರೆ. ಆಸ್ಪತ್ರೆ ಆವರಣದಲ್ಲಿ ಪ್ರಾತ್ಯಕ್ಷಿಕೆಗಳನ್ನು ಸಂಘಟಿಸುತ್ತಾರೆ.

 ಕೇವಲ 3,500ರೂ. ವೆಚ್ಚದಲ್ಲಿ ರೈತರೇ ತಯಾರಿಸಿಕೊಳ್ಳಬಹುದಾದ ಗೋಬರ್ ಗ್ಯಾಸ್ ಘಟಕವನ್ನು ಅವರು ರೂಪಿಸಿದ್ದಾರೆ. ಅದಕ್ಕೆ ಎರಡು ಹಸುಗಳ ಸಗಣಿ ಸಾಕು, ನಾಲ್ಕು ಗಂಟೆಗಳ ಕಾಲ ಅಡಿಗೆ ಮಾಡಲು ಬೇಕಾಗುವಷ್ಟು ಅನಿಲ ಉತ್ಪಾದನೆ ಮಾಡಿಕೊಳ್ಳಬಹುದು.

ಅಪರೂಪವಾಗುತ್ತಿರುವ `ಮಲೆನಾಡು ಗಿಡ್ಡ~ ಗೋ ತಳಿಯ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಕೃಷ್ಣರಾಜು ಮಾಡುತ್ತಿದ್ದಾರೆ. ರೈತರು ಕಸಾಯಿಖಾನೆಗೆ ಮಾರಾಟ ಮಾಡಲು ಉದ್ದೇಶಿಸಿದ್ದ ನೂರಾರು ಹಸುಗಳನ್ನು ಅವರು ಪಡೆದು ಅವನ್ನು ರಾಮಚಂದ್ರಾಪುರ ಮಠದ ಗೋ ಶಾಲೆಗೆ ನೀಡಿದ್ದಾರೆ! ಮೂಡಿಗೆರೆ ತಾಲ್ಲೂಕಿನ ಸುಮಾರು ಮೂರು ಸಾವಿರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಿ ತಳಿಯ ಹಸುಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಿದ್ದಾರೆ.

 ಪಶು ಆಸ್ಪತ್ರೆಯಲ್ಲಿ ಬೇಸಾಯಕ್ಕೆ ಸಂಬಂಧಿಸಿದ ಪುಸ್ತಕಗಳು ಮತ್ತು ಪ್ರಜಾವಾಣಿಯ ಕೃಷಿ ಪುರವಣಿಯಲ್ಲಿ ಪ್ರಕಟವಾಗುವ ಲೇಖನಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿಟ್ಟಿದ್ದಾರೆ.

ಪಶು ಸಂಪತ್ತು ದೇಶದ ಸಾಂಸ್ಕೃತಿಕ ಮತ್ತು ಆರ್ಥಿಕ ವ್ಯವಸ್ಥೆಯ ಅವಿಭಾಜ್ಯ ಅಂಗ. ಕೇವಲ ಹಾಲಿಗಾಗಿ ಹಸುಗಳನ್ನು ಸಾಕಬೇಕು ಎಂಬ ಧೋರಣೆ ತಪ್ಪು. ಬೇಸಾಯ ಪ್ರಧಾನ ಗ್ರಾಮೀಣ ವ್ಯವಸ್ಥೆಗೆ ಪಶು ಸಂಪತ್ತು ಭದ್ರ ಅಡಿಪಾಯ. ಮುಂದಿನ ಜನಾಂಗಕ್ಕಾಗಿ ಪಶು ಸಂಪತ್ತು ಉಳಿಯಬೇಕು ಎಂಬುದು ಕೃಷ್ಣರಾಜು ಅವರ ಆಶಯ.ಡಾ. ಕೃಷ್ಣರಾಜು ಅವರ ಮೊಬೈಲ್ ನಂಬರ್: 9448073711

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT