ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುಪಾಲನಾ ಅಧಿಕಾರಿಗೆ ಸಭೆಯಿಂದ ಗೇಟ್‌ಪಾಸ್

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಬೀದರ್: ಪಶುಪಾಲನಾ ಇಲಾಖೆಯ ಉಪನಿರ್ದೇಶಕರನ್ನು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಿಂದ ಹೊರಗೆ ಕಳುಹಿಸಿದ ಪ್ರಸಂಗ ನಗರದಲ್ಲಿ ಬುಧವಾರ ನಡೆಯಿತು.

 ಸಭೆ ಆರಂಭವಾಗುತ್ತಿದ್ದಂತೆಯೇ ಸದಸ್ಯರಾದ ಸಂಜು ಕಾಳೇಕರ್, ವಸಂತ ಬಿರಾದಾರ, ವೀರಣ್ಣ ಪಾಟೀಲ್, ಮಹಾಂತಯ್ಯ ತೀರ್ಥಾ ಮತ್ತಿತರರು ಕಳೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಪಾಲನಾ ವರದಿಯಲ್ಲಿ ಸೇರಿಸಿಲ್ಲ. ಅನುಷ್ಠಾನಕ್ಕೂ ತಂದಿಲ್ಲ. ಹೀಗಾಗಿ ಸಭೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಬಗ್ಗೆ ಸದಸ್ಯರಿಗೆ ಮುಂಚಿತವಾಗಿ ಸೂಚನೆ ನೀಡಿಲ್ಲ. 15 ದಿನ ಮುಂಚಿತವಾಗಿ ಅನುಪಾಲನಾ ವರದಿ ಕಳುಹಿಸಿಕೊಡಬೇಕು. ಆದರೆ ಡಿ.30ಕ್ಕೆ ಪೋಸ್ಟ್ ಮಾಡಲಾಗಿದೆ. ಜ.2 ಅಥವಾ 3ರಂದು ಸದಸ್ಯರಿಗೆ ತಲುಪಿದೆ. ಹಾಗಾದರೆ ಸದಸ್ಯರು ಏನನ್ನು ಓದಿಕೊಂಡು ಸಭೆಗೆ ಬರಬೇಕು ಎಂದು ಸದಸ್ಯ ವಸಂತ ಬಿರಾದಾರ ಆಕ್ಷೇಪಿಸಿದರು.

ಕಳೆದ ಸಭೆಯಲ್ಲಿ ಪಶುಪಾಲನಾ ಇಲಾಖೆ ಉಪ ನಿರ್ದೇಶಕರನ್ನು ಸೇವೆಯಿಂದ ಬಿಡುಗಡೆ ಮಾಡಲು ಒಕ್ಕೋರಲ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈವರೆಗೆ ಬಿಡುಗಡೆ ಮಾಡಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಇದಲ್ಲದೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಆಗಮಿಸಿದ್ದು ಕೂಡ ಸದಸ್ಯರನ್ನು ಕೆರಳಿಸಿತ್ತು. ಈ ಅಧಿಕಾರಿಯ ಕಥೆ ಏನು ಹೇಳಬೇಕು. ಮಧ್ಯಾಹ್ನವೇ ಇಂಗ್ಲಿಷ್‌ನಲ್ಲಿ ಮಾತಾಡುತ್ತಾರೆ. ನಾಲ್ಕು ತಿಂಗಳಿಂದ ಸಿಬ್ಬಂದಿ ಸಂಬಳ ನೀಡಿಲ್ಲ. ಇವರನ್ನು ಕೂಡಲೇ ಹೊರಗೆ ಕಳುಹಿಸಿ ಎಂದು ಸದಸ್ಯ ವೀರಣ್ಣ ಪಾಟೀಲ್ ಆಗ್ರಹಿಸಿದರು.

ಅಧಿಕಾರಿಯನ್ನು ಹೊರಗೆ ಕಳುಹಿಸಿದ ನಂತರವೇ ಸಭೆ ನಡೆಸಬೇಕು ಎಂದು ಪಟ್ಟು ಹಿಡಿದರು. ಆಗ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ ಹಾಗೂ ಮುಖ್ಯ ಕಾರ್ಯ ನಿರ್ವಹಕಾಧಿಕಾರಿಗಳು ಅಧಿಕಾರಿಗೆ ಹೊರ ಹೋಗುವಂತೆ ಸೂಚಿಸಿದರು. ನಂತರ ಅವರು ಸಭೆಯಿಂದ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT