ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುವೈದ್ಯಾಧಿಕಾರಿಗಳಿಗೆ ಕಾರ್ಯನಿರ್ವಹಣಾಧಿಕಾರಿ ಪ್ರ‘ಭಾರ’

ಲಸಿಕೆ ಪ್ರಗತಿ ಕುಸಿತ: ಹೆಚ್ಚುತ್ತಿರುವ ಕಾಲು ಬಾಯಿ ಜ್ವರ
Last Updated 26 ಸೆಪ್ಟೆಂಬರ್ 2013, 6:07 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂರಾರು ಜಾನುವಾರುಗಳು ಕಾಲು­ಬಾಯಿ ಜ್ವರದಿಂದ ಸಾವಿಗೀಡಾಗು­ತ್ತಿದ್ದರೂ ಅದನ್ನು ನಿಯಂತ್ರಿಸಲು ಸಾಧ್ಯ­ವಾಗದ ಸನ್ನಿವೇಶ ಪಶುಪಾಲನೆ ಇಲಾಖೆ­ಯಲ್ಲಿ ನಿರ್ಮಾಣವಾಗಿದೆ. 

ಜ್ವರವನ್ನು ನಿಯಂತ್ರಿಸುವ ಸಲುವಾಗಿ ವರ್ಷಕ್ಕೆ ಎರಡು ಬಾರಿ ಉಚಿತವಾಗಿ ಲಸಿಕೆ ಹಾಕುವ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ. ಇದಕ್ಕೆ ಲಸಿಕೆ ಹಾಕಿಸುವಲ್ಲಿ ರೈತರ ನಿರಾಸಕ್ತಿ ಒಂದು ಕಾರಣವಾದರೆ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಮತ್ತೊಂದು ಕಾರಣ.

ಇಲಾಖೆಯಲ್ಲಿ ಪ್ರಸ್ತುತ ಸುಮಾರು 800 ಪಶುವೈದ್ಯರ ಕೊರತೆ ಇರುವ ವೇಳೆಯಲ್ಲೇ ಹಲವು ಜಿಲ್ಲೆಗಳಲ್ಲಿ ಪಶುವೈದ್ಯಾಧಿಕಾರಿಗಳನ್ನು ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವ-­ಹಣಾ­-ಧಿ­ಕಾರಿ ಪ್ರಭಾರ ಹುದ್ದೆಯೂ ಸೇರಿದಂತೆ ಹೆಚ್ಚುವರಿ ಪ್ರಭಾರ ಹುದ್ದೆಗಳಿಗೆ ನಿಯೋ­ಜಿಸಲಾಗಿದೆ.

ಪಶುಪಾಲನೆ ಇಲಾಖೆ ಅಧಿಕಾರಿ­ಗಳು ಕಾರ್ಯನಿರ್ವ­ಹಣಾಧಿ­ಕಾರಿ­ಯಾಗಿ ಕಾರ್ಯ ನಿರ್ವಹಿಸುವಲ್ಲಿ ಹೆಚ್ಚು ಆಸಕ್ತಿ ವಹಿಸಿ, ಪಶುಪಾಲನಾ ಇಲಾಖೆ ಕಾರ್ಯಕ್ರಮಗಳನ್ನು ನಿರ್ಲಕ್ಷಿಸುತ್ತಿ­ದ್ದಾರೆ. ಹೀಗಾಗಿ ಅಂಥ ಜಿಲ್ಲೆಗಳಲ್ಲಿ 2012–-­-- 13ನೇ ಸಾಲಿನಲ್ಲಿ ಇಲಾಖೆ ವತಿಯಿಂದ ಕೈಗೊಂಡ ಲಸಿಕೆ ಕಾರ್ಯ­ಕ್ರಮಗಳ ಶೇಕಡಾವಾರು ಪ್ರಗತಿ ಸಂಪೂರ್ಣ ಕಡಿಮೆ ಆಗಿದೆ.

ಪ್ರಸಕ್ತ ಸಾಲಿನಲ್ಲೂ ಲಸಿಕೆ ಕಾರ್ಯ­ಕ್ರಮವನ್ನು ಹಮ್ಮಿಕೊಂಡಿರುವುದರಿಂದ ಅಧಿಕಾರಿಗಳ ಸೇವೆ ಇಲಾಖೆಗೆ ಅತೀ ಅವಶ್ಯವಾಗಿದೆ. ಹೀಗಾಗಿ ಅಧಿಕಾರಿ­ಗಳನ್ನು ಪ್ರಭಾರದಿಂದ ಕೂಡಲೇ ಮುಕ್ತ­ಗೊಳಿಸಬೇಕು ಎಂದು ಪಶುಸಂಗೋ­ಪನಾ ಮತ್ತು ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ರಾಜ್ಯದ ಆರು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿ­ಕಾರಿ­ಗಳಿಗೆ ಪತ್ರ ಬರೆದಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಲು, ಚಾಮ­­­ರಾಜನಗರದ ಕೊಳ್ಳೇಗಾಲ,   ಬಿಜಾ­ಪುರದ ಸಿಂಧಗಿ, ಹಾವೇರಿ, ರಾಯಚೂರಿನ ದೇವದುರ್ಗ, ಕೊಪ್ಪಳ ಜಿಲ್ಲೆಯ ಕುಷ್ಟಗಿ ಸೇರಿ 8 ತಾಲ್ಲೂಕು­ಗಳಲ್ಲಿ ಪಶುಪಾಲನೆ ಇಲಾಖೆ ಅಧಿ­ಕಾರಿ­ಗಳೇ ತಾಲ್ಲೂಕು ಪಂಚಾಯಿತಿ ಕಾರ್ಯ­ನಿರ್ವಹಣಾ­ಧಿಕಾ­ರಿಗಳಾಗಿದ್ದಾರೆ.

ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಜಗದೀಶ್, ಡಾ.ಸತೀಶಕುಮಾರ್, ಡಾ.ರಮಾನಂದ ಅವರನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ ಮತ್ತು ಮುಳಬಾಗಲು ತಾಲ್ಲೂಕು ಪಂಚಾ­ಯಿತಿ ಕಾರ್ಯನಿರ್ವಹಣಾಧಿ­ಕಾರಿ ಪ್ರಭಾರ ಹುದ್ದೆಗೆ ನಿಯೋಜಿಸ­ಲಾಗಿದೆ. ಬಿಜಾಪುರದ ಪಶುವೈದ್ಯಾ­ಧಿಕಾರಿ ಡಾ.ಎಸ್.ಗಂಗನಹಹಳ್ಳಿ (ಸಿಂಧಗಿ ಕಾರ್ಯನಿರ್ವಹಣಾಧಿಕಾರಿ), ಹಾವೇರಿಯ ಪಶು ಆಸ್ಪತ್ರೆ ವಿಸ್ತರಣಾಧಿ­ಕಾರಿ ಡಾ.ಚಂದ್ರಪ್ಪ ನರಸಗೊಂಡ (ಸಮಾಜ ಕಲ್ಯಾಣಾಧಿಕಾರಿ), ರಾಯ­ಚೂರು ವಿಸ್ತರಣಾಧಿಕಾರಿ ಡಾ.-ಪೋಮ್ ಸಿಂಗ್ ಲಮಾಣಿ (ರಾಯಚೂರು ಕಾರ್ಯ­ನಿರ್ವಹಣಾ-­ಧಿಕಾರಿ), ದೇವದುರ್ಗದ ಸಹಾಯಕ ಡಾ.ರಾಮದೇವ ರಾಥೋಡ್ (ದೇವ­ದುರ್ಗ ಕಾರ್ಯನಿರ್ವಹಣಾಧಿಕಾರಿ), ಕುಷ್ಟಗಿಯ ಸಹಾಯಕ ನಿರ್ದೇಶಕ ಡಾ.ಚಂದ್ರಕಾಂತ ಬಿ.ಮಾಗೇರಿ (ಕುಷ್ಟಗಿ ಕಾರ್ಯನಿರ್ವಹಣಾಧಿಕಾರಿ)ಯಾಗಿ ನಿಯೋಜಿಸಲಾಗಿದೆ. ಚಾಮರಾಜ­ನಗರದ ಸಹಾಯಕ ನಿರ್ದೇಶಕ ಡಾ.­ಪ್ರಕಾಶ್ ಅವರನ್ನು ಚಾಮರಾಜ­ನಗರದ ಹಿಂದುಳಿದ ವರ್ಗಗಳ ಅಭಿ­ವೃದ್ಧಿ ನಿಗಮದ ಪ್ರಭಾರ ಜಿಲ್ಲಾ ಅಧಿಕಾರಿಯಾಗಿ ನಿಯೋಜಿಸಲಾಗಿದೆ.
ಅಭಿಪ್ರಾಯ ಪಡೆದಿಲ್ಲ: ಪಶುಪಾಲನೆ ಇಲಾಖೆ ಅಧಿಕಾರಿಗಳನ್ನು ಹೆಚ್ಚುವರಿ ಹುದ್ದೆ ಪ್ರಭಾರದಲ್ಲಿ ಇರಿಸುವ ಮುನ್ನ ಮುಖ್ಯ ಕಾರ್ಯನಿರ್ವಹಣಾಧಿ­ಕಾರಿ-ಗಳು ಇಲಾಖೆ ಅಥವಾ ಸರ್ಕಾರದ ಅಭಿಪ್ರಾಯವನ್ನೂ ಪಡೆಯದಿರುವುದು ವಿಷಾದನೀಯ ಎಂದು ಪ್ರಧಾನ ಕಾರ್ಯ­ದರ್ಶಿಗಳು ಸೆ.3ರಂದು ಬರೆದ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 800 ಪಶುವೈದ್ಯರ ಕೊರತೆ ಇರುವ ಹಿನ್ನೆಲೆಯಲ್ಲಿ ಈಗಾ­ಗಲೇ ಇತರೆ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಅಧಿ­ಕಾರಿ ಸಿಬ್ಬಂದಿಯನ್ನು ಹಿಂಪಡೆ­ಯಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹೀಗಾಗಿ ಇಲಾಖೆಯ ಅಧಿಕಾರಿ–ಸಿಬ್ಬಂದಿಯನ್ನು ಹೆಚ್ಚುವರಿ ಪ್ರಭಾರದಲ್ಲಿ ಇರಿಸಬಾರದು. ಹೆಚ್ಚುವರಿ ಪ್ರಭಾರ­ದಲ್ಲಿರುವ 6 ಜಿಲ್ಲೆಗಳ ಅಧಿಕಾರಿಗಳನ್ನು ಮತ್ತು ಇಲಾಖೆ ಗಮನಕ್ಕೆ ಬಾರದೆ ಇರುವ ಇನ್ನಿತರ ಅಧಿಕಾರಿಗಳನ್ನು ಪ್ರಭಾರ­ದಿಂದ ಕೂಡಲೇ ಮುಕ್ತಗೊಳಿ-­ಸಬೇಕು. ಇಲಾಖೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಅವರು ಕೋರಿದ್ದಾರೆ.

ಕ್ರಮವಿಲ್ಲ: ಪ್ರಧಾನ ಕಾರ್ಯದರ್ಶಿ ಸೆ.3ರಂದೇ ಈ ಪತ್ರವನ್ನು ಬರೆದಿದ್ದರೂ ಜಿಲ್ಲೆಯ ಮೂವರು ಅಧಿಕಾರಿಗಳನ್ನು ಪ್ರಭಾರ­ದಿಂದ ಮುಕ್ತಗೊಳಿಸದೆ ಮುಂದುವರಿಸ­ಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದು­ವರಿದರೆ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ಸಾವಿಗೀಡಾ­ಗುವ ಜಾನು­ವಾರುಗಳ ಸಂಖ್ಯೆ ಹೆಚ್ಚಾ­ಗಲಿದೆ ಎಂದು ಇಲಾಖೆ ಅಧಿಕಾರಿ­ಯೊಬ್ಬರು ಅಭಿ­ಪ್ರಾಯಪಡುತ್ತಾರೆ.

ಪ್ರಭಾರ ಹುದ್ದೆಯಿಂದ ಬಿಡುಗಡೆ ಮಾಡುವ ಕುರಿತು ಇಲಾಖೆ ಆಯುಕ್ತರು ಈ ಕುರಿತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಬಂಗಾರಪೇಟೆ ಮತ್ತು ಶ್ರೀನಿವಾಸಪುರದ ಸಹಾಯಕ ನಿರ್ದೇ­ಶಕರು ಪ್ರಭಾರದಿಂದ ಮುಕ್ತಗೊಳಿಸು­ವಂತೆ ಮನವಿಯನ್ನೂ ಮಾಡಿದ್ದಾರೆ.

ಮುಖ್ಯಮಂತ್ರಿಯವರ ಭೇಟಿ ಕಾರ್ಯ­ಕ್ರಮದ ಬಳಿಕ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಪಶು­ಪಾಲನಾ ಇಲಾಖೆ ಉಪನಿರ್ದೇಶಕ ಡಾ.ಬಿ.ಎನ್.ಶಿವರಾಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT